ಸಾಧನೆ ಎಂಬುವುದು ಯಾರೊಬ್ಬರ ಸ್ವತ್ತಲ್ಲ. ಸಾಧಿಸುವ ಛಲ ಇದ್ದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಉದಾಹರಣೆಯೇ ನಮ್ಮ ಸಂದೀಪ್ ಎಸ್. ಮಂಚಿ ಕಟ್ಟೆ.
ಸಂದೀಪ್ ಎಸ್. ಮಂಚಿಕಟ್ಟೆ ಅವರು ಮೂಲತಃ ಕೇರಳದವರಾಗಿದ್ದು ಪುತ್ತೂರಿನಲ್ಲಿ ಬೆಳೆದವರು. ಇವರು ಏನಡ್ಕ, ದೊಡ್ಡಡ್ಕ ಹಾಗೂ ಬಾಳಿಲದಲ್ಲಿ ಶಾಲಾ ಶಿಕ್ಷಣವನ್ನು ಹಾಗೂ ಪಂಜದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದ ನಂತರ ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯವನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಬಾಲ್ಯದಲ್ಲಿ ತುಂಬಾ ಕಷ್ಟದ ಜೀವನ ಇವರದಾಗಿದ್ದರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿದ್ದ ಇವರು ಪದವಿ ಶಿಕ್ಷಣವನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುತ್ತಾರೆ.
ಅನಿರೀಕ್ಷಿತವಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದ ಇವರು ವಿದ್ಯಾರ್ಥಿ ಹಂತದಲ್ಲಿಯೇ ರಾಜ್ಯ ಮಟ್ಡದ ಪತ್ರಿಕೆಗಳಿಗೆ ನಿರಂತರವಾಗಿ ಲೇಖನವನ್ನು ಬರೆದು ಪ್ರಕಟಿಸಿಕೊಳ್ಳುತ್ತಿದ್ದರು. ಕಾಲೇಜಿನಲ್ಲಿ ಇರುವಾಗ ತುಂಬಾ ಪ್ರತಿಭಾವಂತ, ಉತ್ತಮ ವಿದ್ಯಾರ್ಥಿಯಾಗಿದ್ದ ಇವರು ಶಿಕ್ಷಕರಿಗೆಲ್ಲ ಅಚ್ಚುಮೆಚ್ಚಾಗಿದ್ದರು. ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಇವರು ಒಬ್ಬ ಉತ್ತಮ ಕ್ರೀಡಾಪಟು ಕೂಡಾ ಆಗಿದ್ದವರು. ಪತ್ರಿಕೋದ್ಯಮವನ್ನು ಕಲಿಯುವ ಹಂತದಲ್ಲಿಯೇ ಪ್ರೋ ಕಬಡ್ಡಿಯಲ್ಲಿ ಭಾಗವಹಿಸಿದ ಎಲ್ಲರನ್ನೂ ಸಂದರ್ಶನ ಮಾಡಿದ ಕೀರ್ತಿ ಇವರದು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನಿರಂತರವಾಗಿ ಸಂದರ್ಶಿಸಿ ಜನರಿಗೆ ಪರಿಚತ ಮಾಡಿಕೊಟ್ಟವರು ಸಂದೀಪ್ ಎಸ್ ಮಂಚಿಕಟ್ಟೆ.
ವಿದ್ಯಾರ್ಥಿ ಹಂತದಲ್ಲಿಯೇ ಸುಳ್ಯದ ಅಮರ ಸುದ್ದಿ ಪತ್ರಿಕೆಯಲ್ಲಿ ವರದಿಗಾರರಾಗಿಯೂ ಇವರು ಕಾರ್ಯ ನಿರ್ವಹಿಸಿರುವ ಇವರು ಸುಳ್ಯ ತಾಲೂಕಿನ ಬಳ್ಪ ಗ್ರಾಮದ ರಸ್ತೆಯ ಸಮಸ್ಯೆ ಬಗ್ಗೆ ವರದಿ ಮಾಡಿ ಆ ಸಮಸ್ಯೆಗೆ ಪರಿಹಾರ ದೊರಕುವಂತೆ ಮಾಡಿದ್ದರು. ಈ ಮೂಲಕ ಇವರು ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಇದಲ್ಲದೆ ಇತರೆ ಹಲವಾರು ವಿಷಯಗಳ ಬಗ್ಗೆ ಉತ್ತಮವಾಗಿ ಲೇಖನಗಳನ್ನು ಬರೆಯುತ್ತಿದ್ದರು.
ಪದವಿ ವಿದ್ಯಾಭ್ಯಾಸದ ನಂತರ ಮುಂಬಯಿಯ ಜಿಯೋ ಕಂಪನಿಯಲ್ಲಿ ಇವರಿಗೆ ಪ್ರಾಯೋಗಿಕ ತರಬೇತಿಯ ಅವಕಾಶ ಸಿಗುತ್ತದೆ. ನಂತರ ಇವರ ಕಾರ್ಯ ವೈಖರಿಗೆ ಅಲ್ಲಿಯೇ ಉದ್ಯೋಗ ಗಳಿಸಿ ನಂತರ ಖ್ಯಾತ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ವರ್ಗಾವಣೆಗೊಂಡು ಪ್ರಸ್ತುತ ಲೈವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳಿವೆ. ಪ್ರೊಡ್ಯೂಸರ್, ಡೈರೆಕ್ಟರ್, ಗ್ರಾಫಿಕ್ಸ್, ಸ್ಟ್ಯಾಟೋ, ಎಸ್.ಎಂ.ಪಿ, ಕ್ಯೂಸಿ, ಮ್ಯಾಪ್ ಅನಿಮೇಶನ್, ಕ್ಯಾಮರಮನ್, ವಿಡಿಯೋಗ್ರಾಫರ್, ವೀಕ್ಷಕ ವಿವರಣೆಕಾರ ಇತ್ಯಾದಿ ಸಾಕಷ್ಟು ಉದ್ಯೋಗಗಳಿವೆ. ಹಾಗೂ ಈ ಕ್ಷೇತ್ರದಲ್ಲಿ ಕಲಿಯುವುದಕ್ಕೆ ಬಹಳಷ್ಟು ಇದೆ. ಇದಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಬರಬೇಕಾಗಿದೆ.
ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರ ಒಂದು ಸಮುದ್ರವಿದ್ದಂತೆ, ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಕ್ರೀಡೆ ಬಗ್ಗೆ ಆಸಕ್ತಿ, ಜ್ಞಾನ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿದೆ. ಇದರಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳುತ್ತಾರೆ. ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡಿರುವ ಇವರು ಈಗ ಅದಕ್ಕಾಗಿ ಕಠಿಣ ಶ್ರಮ ವಹಿಸುತ್ತಿದ್ದಾರೆ. ಅವರ ಈ ಕಾರ್ಯ ಹಾಗೂ ಮುಂದಿನ ಜೀವನಕ್ಕೆ ನಾವು ಶುಭ ಹಾರೈಸೋಣ.
- ವರುಣ ಕೃಷ್ಣ.ಬಿ.
ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ