ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು

Upayuktha
0




ಜಾನಪದವು ಮನುಷ್ಯನ ಹುಟ್ಟು, ಸಾವು, ಜೀವ, ಜೀವನ, ನಡೆದು ಬಂದ ಹಾದಿ, ಅನುಭವ, ಸಂಕಷ್ಟಗಳ ಸಂಕೋಲೆ, ಪ್ರೀತಿ , ಭಕ್ತಿ, ಬದುಕಿನ ಸಂಕೀರ್ಣತೆಯನ್ನು, ಬೆಳವಣಿಗೆಯನ್ನು ಸರಳವಾಗಿ ಸೂಕ್ಷ್ಮವಾಗಿ ಹೇಳುವ ಒಂದು ಅದ್ಬುತ ಕಲೆ. ಸಮುದ್ರದಷ್ಟು ಆಳ, ಆಕಾಶದಷ್ಟು ವಿಸ್ತಾರ ಇದರ ವಿಸ್ತೀರ್ಣ. ಜಾನಪದವನ್ನು ತಿಳಿದಷ್ಟು, ಆಳಕ್ಕೆ ಹೋದಷ್ಟು  ಇದರ ಅರ್ಥ ಒಳಾರ್ಥಗಳು ಬಹುಮುಖವನ್ನು ಹೊಂದಿದೆ. ಜಾನಪದವು ಕಾಲದಿಂದ ಕಾಲಕ್ಕೆ ಒಬ್ಬರಿಂದ ಒಬ್ಬರಿಗೆ ಸಾಗಿ ಬಂದರು ಅದರೊಳಗೆ ಅಡಗಿರುವ ಜೀವನದ ಅರ್ಥಗಳು ವರ್ಧಿಸುತ್ತ ಕಾಲಕ್ಕೆ ತಕ್ಕಂತೆ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ.



ಸರಳವಾಗಿ ಸ್ಪಷ್ಟವಾಗಿ ಜೀವನದ ಪಾಠವನ್ನು ಹೇಳುವ ಕಲೆಗಾರಿಕೆ ಜಾನಪದದಲ್ಲಿ ನಿಗೂಢತೆಯಿಂದ ಅಡಗಿದೆ. ಮನುಷ್ಯ ಅದೆಷ್ಟೇ ಮುಂದುವರೆದರು ಜಾನಪದದ ಪ್ರಭಾವ ನಿತ್ಯ ಜೀವನದಲ್ಲಿ ಸಾಕಷ್ಟಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಇತಿಹಾಸದ ಮೂಲ, ವಿಜ್ಞಾನದ ಆವಿಷ್ಕಾರದ ಸೆಲೆ ಎಲ್ಲದಕ್ಕೂ ಜಾನಪದವೇ ತಳಹದಿ. ಜಾನಪದ ನಮ್ಮ ನೋವು, ನಲಿವು, ಸುಖ, ದುಃಖ, ಪ್ರೇಮ, ವಾತ್ಸಲ್ಯ, ಕರುಣೆ, ಕೃತಜ್ಞತೆ ಹೀಗೆ ಎಲ್ಲಾ ಭಾವವನ್ನು ವ್ಯಕ್ತಪಡಿಸುವ ಅನುಭವ ಹಾಗೂ ಜೀವನದ ಸೂಕ್ಷ್ಮ ಸಂಗತಿಗಳ ಅನುಭಾವವನ್ನು ಹೊಂದಿದೆ. ಒಂದು ಕಾಲಘಟ್ಟದ ಸಾರವನ್ನು ಇಂದಿನ ಬದುಕಿಗೂ ಹೊಂದುವ ಕಲೆಯನ್ನು , ಸಮಸ್ಯೆಗಳಿಗೊಂದು ಪರಿಹಾರವನ್ನು, ಪ್ರೀತಿಗೆ ಭಾವವನ್ನು, ಭಕ್ತಿಗೆ ರೂಪವನ್ನು ಕೊಡುತ್ತಾ ಯಾವುದೇ ಪ್ರಭಾವಕ್ಕೆ ಒಳಗಾಗದೆ ಹರಿದು ಬಂದ ಗುಪ್ತಗಾಮಿನಿ ಈ ಜಾನಪದ. 



ಒಂದು ಪ್ರದೇಶದ ದಿನಚರಿ, ಆಚರಣೆ, ಸಂಬಂಧ, ಸಂಸ್ಕೃತಿ, ಹಬ್ಬ, ಜನಜೀವನ ಹೀಗೆ ಬದುಕಿನ ಎಲ್ಲಾ ಮಜಲುಗಳನ್ನು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಕೊಂಡೊಯ್ಯುವ ಕೊಂಡಿಯಾಗಿದೆ ನಮ್ಮ ಜಾನಪದ.ನಮ್ಮ ದೈನಂದಿನ ಜೀವನದಲ್ಲಿ ನಾವು ನಮಗೆ ಅರಿವಿಲ್ಲದೆಯೇ ಇದರ ಉಪಯೋಗ ಪಡೆಯುತ್ತಾ ಪ್ರಬುದ್ಧತೆಯ ಬೆಳೆಸಿಕೊಂಡು ಬದುಕು ಕಟ್ಟಿಕೊಂಡಿದ್ದೆವೆ. ಜಾನಪದವೂ ಕಥೆ, ಗೀತೆ, ಹಾಡು, ಪುರಾಣದ ಕಥೆ, ನಾಟಕ, ಆಚರಣೆ, ಗಾದೆಗಳು, ಒಗಟುಗಳು, ನೃತ್ಯ ಹೀಗೆ ಅದ್ಯಾವುದೇ ರೂಪದಲ್ಲಿ ಇದ್ದರೂ ಅದು ನಮ್ಮ ಪೂರ್ವಜರ ಜೀವನ ಶೈಲಿ, ಆಚಾರ ವಿಚಾರಗಳನ್ನು, ಸಂಸ್ಕೃತಿಯ ವೈಭವವನ್ನು ನಮಗೆ ತಿಳಿಸುತ್ತ ಸಮಯ ಬಂದಾಗ ಎಚ್ಚರಿಕೆಯ ಗಂಟೆಯನ್ನು ನೀಡುತ್ತದೆ. ಹೀಗೆ ಜಾನಪದವು ನಮ್ಮ ನಿತ್ಯ ಜೀವನದಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಸೂಕ್ಷ್ಮವಾಗಿ ಸುಪ್ತ ಪ್ರಜ್ಞೆಯಿಂದ ಮಾಡುತ್ತ ನಮ್ಮ ಜೊತೆ ಮುಂದಿನ ಪೀಳಿಗೆಗೆ ಸಾಗುತ್ತಿದೆ.





- ನವೀನ್ ಚಂದ್ರ. 

ಅಡ್ಮಿನಿಸ್ಟ್ರೇಷನ್ ಹೆಡ್. 

ಜೆಎಸ್ ನೆಟ್ವರ್ಕ್ ಕಮ್ಯುನಿಕೇಷನ್. ಬೆಂಗಳೂರು


(ಅಪೂರ್ವ ಸಂಗಮ ತಂಡದಿಂದ ಏರ್ಪಡಿಸಲಾದ  ಲೇಖನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ಲೇಖನ)


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top