ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು

Upayuktha
0


ಜಾನಪದ ಹೆಸರೇ ಹೇಳುತ್ತೆ ಜನ ಸಾಮನ್ಯರ ಪದಗಳು ಎಂದು... ನಮ್ಮ ಹಿಂದಿನ ಹಿರಿಕರು ಜಾನಪದವನ್ನ ತಮ್ಮ ಜೀವನದ ಒಂದು ಮುಖ್ಯ ಅಂಗವೆಂದೆ ಭವಿಸಿದ್ದರು ಅದಕ್ಕಾಗಿಯೇ ತಮ್ಮ ಬದುಕಿನ ಪ್ರತಿ ಮಜಲುಗಳನ್ನು ಜಾನಪದ ಸಾಹಿತ್ಯದ ರೂಪದಲ್ಲಿ ತೆರೆದಿಟ್ಟರು, ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರೋ ಈ ನಮ್ಮ ಜಾನಪದ ಸಾಹಿತ್ಯವೂ ಜನರಿಂದ ಜನರ ಬಾಯಿಗೆ ಹರಡಿ ಎಲ್ಲೆಡೆ ಬೆಳೆದುಬಂದಿದೆ ಹಳ್ಳಿಯ ಜನರು, ರೈತರು, ಹಿರಿಯರು ತಮ್ಮ ಕೆಲಸದ ಉತ್ಸಾಹ ಕುಂದದಿರಲಿ,ಆಯಾಸ ಅರಿವಿಗೆ ಬಾರದಿರಲಿ ಎಂಬ ದೃಷ್ಟಿಕೋನದಿಂದ  ಈ ಜಾನಪದವನ್ನು ರೂಢಿಸಿಕೊಂಡರು ಎಂದೆನಿಸುತ್ತದೆ, ಉದಾಹರಣೆಗೆ ಗದ್ದೆಯಲ್ಲಿ ಕೆಲಸ ಮಾಡುವ ಹೆಂಗಸರು ಸಮಯ ಮುಂದೆ ದೂಡಲು ತಮ್ಮ ಮನೋರಂಜನೆಗಾಗಿ ಮತ್ತು ಈ ಭೂ ತಾಯಿಯ ಮಹತ್ವವನ್ನ ಎಲ್ಲರಿಗೂ ತಿಳಿಸಲು


"ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ

ಎಳ್ಳು ಜೀರಿಗೆ ಬೆಳೆಯೋಳ | ಭೂಮ್ತಾಯ

ಎದ್ದೊಂದು ಘಳಿಗೆ ನೆನೆದೇನೋ ||"

ಎಂದು ಹಾಡುತ್ತ ತಮ್ಮ ಕೆಲಸವನ್ನ ಮುಂದುವರೆಸುತ್ತಿದ್ದರು ಹಾಗೆಯೇ ಮಳೆಯೇ ನಮ್ಮೆಲ್ಲರ ಜೀವಾಳ ಎಂದು ನಂಬಿದ ಜನರು ಮಳೆರಾಯನ ಬರುವಿಕೆಯನ್ನು " ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ " ಎಂದು ಹಾಡಿ ಕುಣಿದು ಸಂಭ್ರಮಿಸುತ್ತಿದ್ದರು 


ಸುಗ್ಗಿಯ ಕಾಲದಲ್ಲಿ ರೈತಾಪಿ ವರ್ಗದವರು ಬೆಳೆದ ಧನ್ಯಗಳನ್ನು ರಾಶಿ ಹಾಕಿ " ಸುಗ್ಗಿ ಕಾಲ ಹಿಗ್ಗಿ ಬಂದಿತು ಬಾಳಿನಲ್ಲಿ ಭಾಗ್ಯ ತದಿತು " ಎಂದು ಹಾಡುತ್ತ ಸುಗ್ಗಿಯ ಕಾಲವನ್ನು ಸಂಭ್ರಮಿಸುವುದನ್ನು ಹಾಗೂ ಬೆಳೆದ ಧನ್ಯಗಳಿಗೆ ಲಕ್ಷ್ಮಿ ಎಂದು ಭಾವಿಸಿ ಪೂಜೆ ಪುನಸ್ಕಾರ ಮಾಡುವ ಬಗೆಯನ್ನು ನಮ್ಮ ಜಾನಪದರೂ ಅತಿ ಸೊಗಸಾದ ಪದಗಳಲ್ಲಿ ಹಾಡುತ್ತಾರೆ ಅಲ್ಲದೆ ಒಬ್ಬ ತಾಯಿ ಆಡಿ ಮನೆಗೆ ಬಂದ ತನ್ನ ಕಂದನಿಗಾಗಿ


"ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ

ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು

ಬಂಗಾರದ ಮೊರೆ ತೊಳೆದೇನ|| " ಎಂದು ಲಾಲಿ ಹಾಡುವಲ್ಲಿ ತಾಯಿಯ ಮಮತೆ ಎಲ್ಲರ ಕಣ್ಮನ ಸೆಳೆಯುವುತ್ತದೆ 


ಹೀಗೆಯೇ ಹತ್ತು ಹಲವಾರು ರೀತಿಯಲ್ಲಿ ನಮ್ಮ ಹಿರಿಯರು ಜಾನಪದವನ್ನು ವಿಸ್ತರಿಸಿದ್ದಾರೆ.


ಬಯಲಾಟ, ಕೋಲಾಟ, ಕಂಸಾಳೆ, ವೀರಗಾಸೆ ಮುಂತಾದವುಗಳ ಮೂಲಕ ಬದುಕಿನ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ ಬಣ್ಣ ಹಚ್ಚಿ ಇಡಿ ರಾತ್ರಿಯಲ್ಲ ಹಾಡಿ ಕುಣಿವುವ ಗಂಡು ಕಲೆಯ ಮೂಲಕ ಜನರನ್ನು ರಂಜಿಸುವ ಜೊತೆಗೆ  ಪೌರಾಣಿಕ ಪ್ರಸಂಗಗಳನ್ನು ಪರಿಚಯಿಸುತ್ತಾರೆ.


ಶೈವರ ವೀರ ನೃತ್ಯವಾದಂತ ವೀರಗಾಸೆಯ ಮೂಲಕ ವಿಭಿನ್ನವಾದ ವೇಷ ಭೂಷಣ ಹಾಗೂ ಒಡಪುಗಳ ಜೊತೆಗೆ ಶಿವನು ಹೇಗೆ ಪಾರ್ವತಿಯನ್ನು ವರಿಸಿದನು ಎಂಬ  ಶಿವ ಪಾರ್ವತೀಯರ ಕಥೆಯನ್ನು ಜನರ ಮನಸ್ಸಿಗೆ ತಾಗುವಂತೆ ತಿಳಿಸುತ್ತಾರೆ.

ಅಷ್ಟೇ ಅಲ್ಲದೆ ಈ ನಮ್ಮ ಜಾನಪದ ಸಾಹಿತ್ಯವೂ ಈಗಿನ ಯಾವುದೇ ನವ್ಯ ಸಾಹಿತ್ಯಕ್ಕೆ ಕಮ್ಮಿ ಇಲ್ಲ ಎನ್ನುವಂತೆ ತಲೆ

 ತಲೆ-ಮಾರುಗಳಿಂದ ಮೌಖಿಕ ರೂಪದಲ್ಲೇ ಜನಮನಗಳೊಂದಿಗೆ  ತನ್ನ ಸಂಬಂಧವನ್ನ ಗಟ್ಟಿಗೊಳಿಸಿಕೊಂಡಿದೆ.

ಮನಸ್ಸಿನ ಭಾವನೆಗಳಿಗೆ ಕನ್ನಡಿಯಂತಿರುವ ಈ ಜಾನಪದದಲ್ಲಿ ಬಳೆಗಾರನ ಬರುವಿಕೆಯನ್ನು  "ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ" ಎಂದು ಹಾಡುವ ಮೂಲಕ ಮುತ್ತೈದೆ ಒಬ್ಬಳ ತಾಯಿ ತವರನ್ನು ಕಾಣುವ ಬಯಕೆಯನ್ನು ಬಹಳ ಅರ್ಥ ಗರ್ಭಿತವಾಗಿ ವಿವರಿಸಲಾಗುತ್ತದೆ

ಅಷ್ಟೇ ಅಲ್ಲದೆ ನಮ್ಮ ಜಾನಪದರು ವಿಶೇಷ ಒಡಪುಗಳನ್ನು ನಮಗೆ ಪರಿಚಯಿಸಿದ್ದು ಅವುಗಳು ಅತಿ ಸೋಗಸಾಗಿ ನಮ್ಮ ಬದುಕಲ್ಲಿ ಹಾಸುಹೋಕ್ಕಾಗಿವೆ.. ಹೊಸದಾಗಿ ಮದುವೆ ಅದ ವಧು ವರರನ್ನು ಕಾಡಿಸಲು ನಮ್ಮ ಹಿರಿಯರು ಚುಟುಕು ಒಡಪುಗಳನ್ನ ಹೇಳುತ್ತಿದ್ದರು ಉದಾಹರಣೆಗೆ 


“ಕಟಗಲ ರೊಟ್ಟಿ ಕಾರದ ಚಟ್ನಿ

ಕಟಗೊಂಡ ಹೋಗಂದ್ರ ಸೆಟಗೊಂಡ ಹೊಗ್ತಾರ

ನಮ್ ರಾಯರು " ಎನ್ನುವ ಜೊತೆಗೆ ಗಂಡನ ಹೆಸರು ಸೇರಿಸಿ ಹೇಳುವ ವಧುಗಳು ಹೆಂಡತಿಗಿಂತ ನಾನ್ ಏನ್ ಕಮ್ಮಿ ಇಲ್ಲ ಎನ್ನುವಂತೆ


“ಹಾಗಲ ಬಳ್ಳಿಗೆ ಹಂದರ ಚಂದ

ದ್ರಾಕ್ಷಿ ಬಳ್ಳಿಗೆ ಗೊಂಚಲು ಚಂದ

ಭೂಮಿಗೆ ಹಸಿರು ಚಂದ

ನನ್ನಾಕಿ ಇನ್ನೂ ಚಂದ ಎಂದು ಹೆಂಡತಿಯ ಹೆಸರು ಹೇಳಿ ಮಡದಿಯ ಮುಖದಲ್ಲಿ ನಾಚಿಕೆಯನ್ನು ಮೂಡಿಸುವ ವರರು.


ಹೀಗೆ ನಮ್ಮ ಜಾನಪದರೂ ಬದುಕಿನ ಪುಟ್ಟ ಪುಟ್ಟ ಅದ್ಭುತ ಕ್ಷಣಗಳನ್ನು ಮುಂದಿನ ಪೀಳಿಗೆಗೆ ಬುತ್ತಿ ಎಂಬತ್ತೆ ಪದಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಟಕ, ನೃತ್ಯ,ಹಾಸ್ಯ ಶೃಂಗಾರ ವ್ಯಂಗ್ಯ ವೀರತೆ ಹೀಗೆ ನವರಸಗಳ ಸಮ್ಮಿಲದೊಂದಿಗೆ ನಮ್ಮ ಹಿರಿಯರು ಈ ಜಾನಪದ ಸಾಹಿತ್ಯದ ಬಳ್ಳಿಯನ್ನು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಬ್ಬಿಸಿದ್ದಾರೆ


ನಮ್ಮ ಜಾನಪದ ಸಾಹಿತ್ಯ ಒಂದು ದೊಡ್ಡ ಆಲದ ಮರವಾದರೆ ಇನ್ನುಳಿದ ನವ್ಯ ಸಾಹಿತ್ಯಗಳು ಆ ಮರದಿಂದ ಹುಟ್ಟಿ ಬೆಳೆಯುತ್ತಿರುವ ಬೇರುಗಳಿದಂತೆ, ಈಗಲೂ ನಮ್ಮ ಈ ಜಾನಪದ ಸಾಹಿತ್ಯವೂ ತನ್ನ ಹಿರಿಮೆಯನ್ನು ಎಲ್ಲೂ ಕುಗ್ಗಿಸಿಕೊಳ್ಳದೆ ತನ್ನಷ್ಟಕ್ಕೆ ತಾನೇ ಇನ್ನು ಅತಿ ಹೆಚ್ಚಾಗಿ ಬೆಳೆಯುತ್ತ ಈಗಿನ ನವೀನ ಪೀಳಿಗೆಗೂ ಬದುಕಿನ ಅದ್ಭುತ ಮೌಲ್ಯಗಳನ್ನು ತಿಳಿಸಿಕೊಡುತ್ತಿದ್ದೆ ಎಂಬುದು ಸಂತಸದ ಸಂಗತಿಯಾದರೆ ಅದೇ ಜಾನಪದ ಸಾಹಿತ್ಯಕ್ಕೆ ಕೆಲವೆಡೆ ಈಗ ಮನ್ನಣೆ ದೊರಕದೆ ಇರುವುದು ಬಹಳ ನೋವಿನ ಸಂಗತಿಯಾಗಿದೆ, ನಮ್ಮದೆ ಮಣ್ಣಿನ ಪಾರಂಪರಿಕ ಸೊಗಡಾದ ಹಾಗೂ ಪ್ರತಿ ಪದಗಳಲ್ಲೂ ಜೀವನದ ಮೌಲ್ಯಗಳನ್ನು ಅಡಗಿಸಿಟ್ಟಿರುವ ನಮ್ಮ ಈ ಜಾನಪದ ಸಾಹಿತ್ಯವನ್ನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆಧ್ಯಾ ಕರ್ತವ್ಯವಾಗಿದ್ದು ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಜಾನಪದ ಸಾಹಿತ್ಯದ ಹಿರಿಮೆಯನ್ನು ಎಲ್ಲೆಡೆ ಹರಡುವಂತೆ ಮಾಡಬೇಕಿದೆ....



-ಅಕ್ಷತಾ.ಸಿ.ಕೆ. ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ. 

ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪಥಮ ದರ್ಜೆ ಮಹಿಳಾ ಕಾಲೇಜು. ಸಾಗರ

(ಅಪೂರ್ವ ಸಂಗಮ ತಂಡದಿಂದ ಏರ್ಪಡಿಸಲಾದ '' ಎಂಬ ವಿಷಯದ ಕುರಿತ ಲೇಖನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿದ ಲೇಖನ)


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top