ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ರಾಘವೇಶ್ವರ ಶ್ರೀ ಕರೆ

Upayuktha
0


ಗೋಕರ್ಣ: ಬೀದರ್  ನಲ್ಲಿ ಜನಿವಾರದ ಕಾರಣಕ್ಕಾಗಿ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡದ ಘಟನೆ ಮತ್ತು ಶಿವಮೊಗ್ಗದಲ್ಲಿ ಜನಿವಾರ ತುಂಡರಿಸಿದ ಘಟನೆ ತೀರಾ ವಿಷಾದನೀಯ; ಈ ದುರ್ವರ್ತನೆಯನ್ನು ಸಮಸ್ತ ಸಮಾಜ ಪ್ರತಿಭಟಿಸಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.


ಅಧಿಕಾರಿಗಳ ಈ ವರ್ತನೆಯ ಹಿಂದ ದ್ವೇಷ, ಜಾತಿದ್ವೇಷ, ಒಂದು ಜಾತಿಯನ್ನು ಸಂಪೂರ್ಣ ತುಳಿದು ಬಿಡಬೇಕು ಎನ್ನುವ ಭಾವ ಕಾಣಿಸುತ್ತಿದೆ. ಪರೀಕ್ಷೆಗಳು ಮಕ್ಕಳ ಹಣೆಬರಹವನ್ನು ನಿರ್ಧರಿಸುವಂಥದ್ದು; ವಿದ್ಯಾರ್ಥಿಗಳು ಪರೀಕ್ಷೆಯ ಮಾನಸಿಕ ಒತ್ತಡದಲ್ಲಿರುವಾಗ ಅಧಿಕಾರಿಗಳು ಕ್ರೌರ್ಯ ಮೆರೆದಿರುವುದು ದಬ್ಬಾಳಿಕೆ ನಡೆಸಿರುವುದು ಖಂಡನೀಯ ಎಂದು ಅವರು  ಹೇಳಿದ್ದಾರೆ.


ಜನಿವಾರ ಕೀಳುವಾಗ ಮನಸ್ಸಿಗೆ ಎಂಥ ನೋವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣರು ಇದನ್ನು ಸಹಿಸಬಾರದು; ಇದನ್ನು ಇಲ್ಲಿಗೇ ಬಿಟ್ಟರೆ ದೇಶದಲ್ಲಿ ಬದುಕಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದ್ದಾರೆ. 


ಈ ಕೃತ್ಯವನ್ನು ಬ್ರಾಹ್ಮಣರು ಸಂಘಟಿತರಾಗಿ ಪ್ರತಿಭಟಸುವುದು ಅಗತ್ಯ ಮಾತ್ರವಲ್ಲ; ಅನಿವಾರ್ಯವೂ ಹೌದು. ಇದು ಬ್ರಾಹ್ಮಣರಿಗಷ್ಟೇ ಸೀಮಿತವಲ್ಲ; ಬೇರೆಯವರೂ ಜನಿವಾರವನ್ನು ಗೌರವದಿಂದ ಧಾರಣೆ ಮಾಡುತ್ತಾರೆ. ಲಿಂಗಾಯಿತರು ಕೂಡಾ ಲಿಂಗವನ್ನು ಧರಿಸುತ್ತಾರೆ. ಅದನ್ನೂ ಇಂಥದ್ದೇ ಸೂತ್ರದಿಂದ ಧರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ಸಮಾಜಕ್ಕೆ ಅಪಾಯ ಕಾದಿದೆ ಎಂದು ಹೇಳಿದ್ದಾರೆ.


ಧಾರ್ಮಿಕ ಚಿಹ್ನೆಯನ್ನು ತೆಗೆದುಹಾಕಿದರೆ ಪರೀಕ್ಷೆ ಬರೆಯುವುದಿಲ್ಲ ಎಂದು ದೃಢ ನಿರ್ಧಾರ ಕೈಗೊಂಡ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸುತ್ತೇವೆ. ಧಾರ್ಮಿಕತೆಯಲ್ಲಿ ರಾಜಿ ಮಾಡಿಕೊಳ್ಳದ ವಿದ್ಯಾರ್ಥಿಯನ್ನು ಮೆಚ್ಚಬೇಕು. ಜನಿವಾರದ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ಎಲ್ಲರಿಗೂ ಸಹಾಯಹಸ್ತ ಚಾಚಲು ಶ್ರೀಮಠ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇಡೀ ಬ್ರಾಹ್ಮಣ ಸಮಾಜ ಮಾತ್ರವಲ್ಲ; ಭಾರತೀಯರೆಲ್ಲರೂ ಒಗ್ಗೂಡಿ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಆಶಿಸಿದ್ದಾರೆ. ಹವ್ಯಕ ಮಹಾಮಂಡಲ ಕೂಡಾ ಘಟನೆಯನ್ನು ಖಂಡಿಸಿದ್ದು, ಸಮಗ್ರ ಹವ್ಯಕ ಮಹಾಮಂಡಲ ಸಭೆಯಲ್ಲಿ ಈ ಬಗ್ಗೆ ಖಂಡನಾ ನಿರ್ಣಯ ಆಂಗೀಕರಿಸಿದೆ. ಅಕ್ಷಮ್ಯ ಅಪರಾಧ ಎಸಗಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ, ವಿದ್ಯಾರ್ಥಿಯ ಭವಿಷ್ಯ ಹಾಗೂ ಆತ್ಮಗೌರವ ರಕ್ಷಿಸಬೇಕು ಎಂದು ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಆಗ್ರಹಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top