ಜೀವನದಿ, ಕಾವ್ಯ, ನೀ ಮುಡಿದ ಮಲ್ಲಿಗೆ ಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿರುವ ಜಿ.ಎನ್. ವೆಂಕಟರಾಮನ್ ಕಾವ್ಯ ನೀ ಮುಡಿದ ಮಲ್ಲಿಗೆ ಚಿತ್ರಗಳ ನಿರ್ಮಾಪಕರೂ ಹೌದು. ಓದಿನ ದಿನಗಳಲ್ಲಿ ಹವ್ಯಾಸಿ ನಟರಾಗಿ ಟಿ.ಪಿ. ಕೈಲಾಸಂರವರ ನಾಟಕಗಳಲ್ಲಿ ನಟಿಸುತ್ತಿದ್ದ ಇವರು ಕಲೆಯ ವ್ಯಾಮೋಹದಿಂದಲೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ ಕಾವ್ಯ ಚಿತ್ರದಲ್ಲಿ ನಟ ರಾಮಕುಮಾರ್‍ರ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ವರನಟ ಡಾ|| ರಾಜ್‍ಕುಮಾರ್‍ರವರಿಂದ ಒಂದು ಹಾಡನ್ನು ಹಾಡಿಸಿದ್ದಲ್ಲದೆ ಚಿತ್ರಕ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಗೊರೂರು ಶ್ರೀ ಯೋಗನರಸಿಂಹಸ್ವಾಮಿ ದೇವರ ರಥೋತ್ಸವ ಮೊನ್ನೆ ರಥ ಸಪ್ತಮಿ ದಿನದಂದು ಜರುಗಿತು. ಊರ ಜಾತ್ರೆ ಎಂದರೆ ಹೋಗಿಬರಲೇಬೇಕು. ಹಾಸನದಲ್ಲಿ ವತ್ಸಲ ಅವರ ಮನೆ ಗೃಹಪ್ರವೇಶ ಅಂದೇ ಇತ್ತು. ಗೊರೂರಿನಲ್ಲಿ ನಮ್ಮ ಪಕ್ಕದಲ್ಲಿರುವ ಕೃಷ್ಣಶೆಟ್ಟರ ಮಗಳು ವತ್ಸಲ. ಗೃಹ ಪ್ರವೇಶದ ಊಟ ಮುಗಿಸಿ ಬಸ್ಸಿನಲ್ಲಿ ಗೊರೂರಿಗೆ ಹೊರಟು ರಥದ ಸ್ಥಳ ತಲುಪುವಷ್ಟರಲ್ಲಿ ತೇರು ತನ್ನ ಸ್ವಸ್ಥಾನದಿಂದ ಚಲಿಸಿ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮನೆಯ ಪೂರ್ವ ದಿಕ್ಕಿನ ತಿರುವಿನ ಅಂಚಿನಲ್ಲಿತ್ತು. ಮಡದಿ ಶಕುಂತಲೆ ಅವರ ಅಕ್ಕ ಕಾಂತಾಮಣಿಗೆ (ಇವರು ಗೊರೂರಿನ ಸೊಸೆಯೇ) ಪೋನಾಯಿಸಿ ಎಲ್ಲಿದ್ದಿ? ಎಂದು ಕೇಳಲು ಪರವಾಸು ದೇವಸ್ಥಾನದಲ್ಲಿ ಊಟಕ್ಕೆ ಕುಳಿತ್ತಿದ್ದೇನೆ ಬಾ ಎಂದರು. ಇಬ್ಬರೂ ದೇವಸ್ಥಾನದ ಒಳಗೆ ಹೋದೆವು.
ಡಾ.ಗೊರೂರರ ಮನೆಯ ಪಕ್ಕ ಪಾರ್ಶ್ವಕ್ಕೆ ಇರುವ ಶ್ರೀ ಪರವಾಸು ದೇವಸ್ಥಾನವು ತಕ್ಕಮಟ್ಟಿಗೆ ಪುರಾತನವಾದುದು. 1575ನೇ ಇಸವಿಯ ಒಂದು ಶಾಸನದಲ್ಲಿ ಈ ದೇವಸ್ಥಾನಕ್ಕೆ ಸೇರಿದ ಕೆಲವು ಜಮೀನುಗಳ ಆದಾಯವನ್ನು ರಿಯಾಯ್ತಿ ಮಾಡಿದೆ ಎಂದು ಉಲ್ಲೇಖವಿದೆ. ದೇವಸ್ಥಾನ ಪ್ರವೇಶಧ್ವಾರದ ಎಡಬದಿಯಲ್ಲಿ ಶಿಲಾಶಾಸನ ಕಲ್ಲು ಹಾಗೆಯೇ ನಿಲ್ಲಿಸಿದೆ. ದೇವಸ್ಥಾನದ ಒಳಗೆ ಹೋದೆ ಲೈಟ್ ಇರಲಿಲ್ಲ. ತೇರು ಹರಿಯುವ ಕಾರಣ ಕನೆಕ್ಷನ್ ತೆಗೆದಿದ್ದರು. ಗರ್ಭಗುಡಿಯ ಬಾಗಿಲು ಹಾಕಿತ್ತು. ಗರ್ಭಗುಡಿಯಲ್ಲಿ 2 ಅಡಿ ಎತ್ತರದ ಪೀಠದ ಮೇಲೆ 5 ಅಡಿ ಎತ್ತರದ ವಾಸುದೇವಮೂರ್ತಿ ನಿಂತ ಭಂಗಿಯಲ್ಲಿದೆ. ಯಾರೋ ದೇವರ ಪೋಟೋ ತೆಗೆಯುತ್ತಿದ್ದರು. ನಾನು ಅದೇ ಮಾಡಿದೆ. ದೇವಸ್ಥಾನದ ಹಿಂಭಾಗ ವಿಶಾಲವಾದ ಹೊರಂಗಣದಲ್ಲಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಅಕ್ಕನ ಪಕ್ಕ ತಂಗಿಗೂ ಎಲೆ ಹಾಕಿಸಿ ನನ್ನನ್ನು ಕರೆದರು. ನಾನು ಯಾವತ್ತು ದೇವಸ್ಥಾನದಲ್ಲಿ ಊಟ ಮಾಡಿದ್ದಿಲ್ಲಾ. ಗೃಹಪ್ರವೇಶದ ಊಟವೇ ಅರಗಿರಲಿಲ್ಲ.
ಇಲ್ಲಾ ನೀವು ಮಾಡಿ ನಾನು ಅಷ್ಟರಲ್ಲಿ ವೆಂಕಟರಾಮನ್ ಅವರನ್ನು ಮಾತನಾಡಿಸಿ ಬರುವೆ ಎಂದು ಅವರ ಮನೆಯ ಕಡೆ ಹೊರಟೆ. ಬ್ರಾಹ್ಮಣರ ಬೀದಿಯಲ್ಲಿ ನಾಗಪ್ಪ ಜೋಯಿಸ್‍ರು ಸಿಕ್ಕರು. ಅವರು ಈ ಹಿಂದೆ ಪೋಸ್ಟ್ ಆಫೀಸ್ ಆಗಿದ್ದ ಮನೆಯನ್ನು ಖರೀದಿಸಿದ್ದರು. ನನ್ನ ಬರವಣಿಗೆಯ ಆರಂಭದ ದಿನಗಳಲ್ಲಿ ಈ ಪೋಸ್ಟ್ ಆಫೀಸಿಗೆ ಪ್ರತಿನಿತ್ಯ ಹೋಗುತ್ತಿದ್ದೆ. ಈಗಿನಂತೆ ಆಗ ಈ ಮೇಲ್ ವ್ಯಾಟ್ಸಪ್‍ನಲ್ಲಿ ಪತ್ರಿಕೆಗಳಿಗೆ ಬರಹ ಕಳಿಸುತ್ತಿರಲಿಲ್ಲ. ಬರೆದಿದ್ದನ್ನು ರಿಪ್ಲೇ ಕವರ್ ಇಟ್ಟು ಪತ್ರಿಕೆಗಳಿಗೆ ಕಳಿಸುತ್ತಿದ್ದೆನು. ನಾಗಪ್ಪ ಜೋಯಿಸರು ಗೊರೂರಿನ ಹೊಯ್ಸಳರ ಕಾಲದ ತ್ರಿಕೂಟಲಿಂಗೇಶ್ವರ ಮತ್ತು ಕೈಲಾಸೇಶ್ವರ ದೇವಸ್ಥಾನದ ಅರ್ಚಕರು. ಈ ದೇವಸ್ಥಾನದ ಪ್ರತಿಷ್ಠಾಪನೆ ದಿನಾಂಕ 2-3-1167 ಎಂದು ಶಾಸನಕಲ್ಲಿನಲ್ಲಿದೆ. ಇತರೆ ಶಾಸನಗಳಂತೆ ಹೊಯ್ಸಳರ 1ನೇ ನರಸಿಂಹನ ಕಾಲದಲ್ಲಿ ದ್ವಾರಾವತಿಯಲ್ಲಿ (ಈಗಿನ ಹಳೇಬೀಡು) ದುಷ್ಟನಿಗ್ರಹ ಶಿಷ್ಟ ಪರಿಪಾಲನೆ ಮಾಡುತ್ತಿರುವಾಗ್ಗೆ ಇವರ ಆಶ್ರಿತನಾದ ವಿಜಯಾದಿತ್ಯ ಹೆಗ್ಗಡೆ ಶತರುದ್ರಯಾಗಪುರಿ ಗೊರವೂರಿನಲ್ಲಿ ತ್ರಿಕೂಟಲಿಂಗವನ್ನು ಸ್ಥಾಪಿಸಿದನೆಂದು ದೇವರ ಪೂಜೆಗೆ ಮಾವಿನಕೆರೆಯಲ್ಲಿ ಭೂಮಿಯನ್ನು ಬಿಟ್ಟನೆಂದು ಉಲ್ಲೇಖವಿದೆ.
ನಾಗಪ್ಪ ಜೋಯಿಸರು ಜಾತಕ ನೋಡಿ ಲಗ್ನ ನಿಶ್ಚಯಿಸುವುದು, ಮದುವೆ ಮಾಡುವ ಕಾರ್ಯದಲ್ಲಿ ಹೆಸರುವಾಸಿ. ನನ್ನ ಹೆಸರಿಗೆ ಶಕುಂತಲೆ ಹೆಸರು ಹೊಂದಿಸಿ ಮದುವೆ ಕಾರ್ಯ ನೆರವೇರಿಸಿದವರು ಇವರೇ, “ಸಾರ್, ಈಗಲೂ ಮದುವೆ ಕಾರ್ಯ ಮಾಡುತ್ತಿದ್ದೀರಾ..? ಕೇಳಿದೆ. ಇಲ್ಲಾ ಈಗೆಲ್ಲೂ ಮದುವೆ ಮುಂಜಿಗೆ ಹೋಗುತ್ತಿಲ್ಲ. ಮನೆಗೆ ಬಂದವರಿಗೆ ಲಗ್ನ ನಿಶ್ಚಯ ಮಾಡಿಕೊಡುತ್ತಿದ್ದೇನೆ ಎಂದರು. ಅಷ್ಟರಲ್ಲಿ ಯಾರೋ ಒಬ್ಬರು ಇದೇ ವಿಷಯ ಕೇಳಲು ಬಂದಿದ್ದರು. ನಾಳೆ ಬೆಳಿಗ್ಗೆ ಬನ್ನಿ ಎಂದು ಅವರಿಗೆ ಹೇಳಿ ಕಳಿಸಿದರು. ನಾಗಪ್ಪ ಜೋಯಿಸರು ಊರಿನ ಗ್ರಾಮ ಪಂಚಾಯ್ತಿ ಕಟ್ಟಡದಲ್ಲಿ ಕೂರಿಸುತ್ತಿದ್ದ ಸಾರ್ವಜನಿಕ ಗಣಪತಿಗೆ ಅರ್ಚಕರಾಗಿ ವಿಸರ್ಜನೆಯವರೆಗೂ ಮುಂಚೂಣಿಯಲ್ಲಿ ಇರುತ್ತಿದ್ದರು. ಅವರಿಂದ ಬೀಳ್ಕೊಂಡು ವೆಂಕಟರಾಮನ್ ಮನೆಗೆ ಹೋದೆ. ಅವರು ದೇವಸ್ಥಾನದಲ್ಲಿ ಊಟಕ್ಕೆ ಹೋಗಿದ್ದಾರೆ ಎಂದರು. ಅಷ್ಟರಲ್ಲಿ ಮಡದಿಯೂ ಊಟ ಮುಗಿಸಿ ಪರವಾಸು ದೇವಸ್ಥಾನದಿಂದ ಹೊರಬಂದು ಎಲ್ಲಿದ್ದೀರಿ..?ಎಂದಳು. “ನೀನೆಲ್ಲಿದ್ದಿಯಾ ನಾನು ತೇರು ಹರಿಯುತ್ತಿರುವ ಜಾಗದಲ್ಲಿದ್ದೇನೆ ಎಂದೆ.
“ವಾದ್ಯ ಶಬ್ಧ ಏನೂ ಕೇಳುತ್ತಿಲ್ಲಾ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಯಾಕೂಬ್ ಮನೆ ಹತ್ತಿರ ಇದ್ದೇನೆ ಬನ್ನಿ..ಎಂದಳು. ಜಿ.ಎನ್.ಕೃಷ್ಣಯ್ಯಂಗಾರ್ ಮನೆ ಬಳಿ ಯಾಕೂಬ ಸಿಕ್ಕನು. ಅಣ್ಣ, ರಥದ ಮುಂದೆ ನನ್ನದೊಂದು ಪೋಟೋ ತೆಗಿ ಎಂದನು. ತೆಗೆದೆ. ಜಿ.ಎನ್.ಕೆ. ನನ್ನ ಹೈಸ್ಕೂಲ್ ಮೇಷ್ಟ್ರು. ಇವರ ಪಕ್ಕದ ಮನೆಯ ಶ್ರೀನಿವಾಸ ನನ್ನ ಕ್ಲಾಸ್‍ಮೇಟ್. ಓದಿನಲ್ಲಿ ಬುದ್ಧಿವಂತ. ಇಂಟಿಲಿಜೆನ್ಸ್ ಕ್ಲಾಸ್‍ಮೇಟ್ಸ್ ಎಲ್ಲಾ ಅಮೇರಿಕಾದಲ್ಲಿ ಸೆಟಲ್ ಆಗಿರುವಲ್ಲಿ ಈತನೂ ಒಬ್ಬ. ಯಾಕೂಬ್ ಮನೆ ಹತ್ತಿರ ಶಕುಂತಲೆ ಕಾಯುತ್ತಿದ್ದಳು. ಇಬ್ಬರೂ ದೇವಸ್ಥಾನಕ್ಕೆ ಹೋದೆವು. ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಹೊರಭಾಗದ ಸುತ್ತಾ ಎತ್ತರದ ಗೋಡೆ ಕೈಸಾಲೆ ಮನೆಗಳನ್ನು ಒಡೆದು ಕೆಡವಿದ್ದರು. ಮುಂಭಾಗದ ಗೋಪುರ ದೇವಸ್ಥಾನ ಹಾಗೆಯೇ ಉಳಿಸಿದ್ದರು. ದೇವರ ದರ್ಶನಕ್ಕೆ ಕ್ಯೂ ಅಷ್ಟು ಉದ್ದವಿರಲಿಲ್ಲ. ಕ್ಯೂನಲ್ಲಿ ಕ್ಲಾಸ್‍ಮೆಟ್ ಪ್ರಸನ್ನ ಸಿಕ್ಕನು. ದೇವಾಲಯದ ಒಳಗೆ ಲೈಟ್ ಇರಲಿಲ್ಲ. ಡಿ.ಸಿ.ಮೇಡಂ ಬರುತ್ತಿರುವಾಗಿ ತಿಳಿದು ತರಾತುರಿಯಲ್ಲಿ ಹೊರಗೆ ಡೀಸೆಲ್ ಡೈನಮೋ ಸರಿಪಡಿಸುತ್ತಿದ್ದರು. ದೇವರ ದರ್ಶನ ಮಾಡಿ ಹೊರಬಂದೆವು.
“ಅನಂತು, ಈ ವರ್ಷ ಜನರು ತುಂಬಾ ಕಡಿಮೆ, ಇನ್ನೂ ಮೂರು ವರ್ಷ ತೇರು ರಥೋತ್ಸವ ಹರಿಯುವುದಿಲ್ಲವಂತೆ.. ಎಂದನು ಪ್ರಸನ್ನ..“ ಈಗ ನಿನ್ನ ವಾಸ ಎಲ್ಲಿ ಪ್ರಸನ್ನ..? ಎಂದೆ. “ಚಿಕ್ಕಮಗಳೂರಿನಲ್ಲಿ ಕೆಇಬಿ ಇಂಜಿನಿಯರ್ ಆಗಿ ಈಗ ನಿವೃತ್ತಿ ಜೀವನ ತಿಪಟೂರಿನಲ್ಲಿ.. ಎಂದನು. ನನ್ನ ಎಸ್‍ಎಸ್‍ಎಲ್‍ಸಿ ಕ್ಲಾಸಮೆಟ್..ಎಂದೆ ಮಡದಿಗೆ. “ಇಲ್ಲಾ ಪ್ರೈಮರಿಯಿಂದ 8ನೇ ತರಗತಿಯವರೆಗೆ ಅಷ್ಟೇ. ನಾನು ಎಸ್‍ಎಸ್‍ಎಲ್‍ಸಿ ಓದಿದ್ದು ಶಾಂತಿಗ್ರಾಮದಲ್ಲಿ,, ಎನ್ನಲು ಆ ವೇಳೆಗೆ ದೇವಸ್ಥಾನಕ್ಕೆ ಜಿ.ಟಿ.ವೆಂಕಟೇಶ್ ಬರುತ್ತಿರುವುದು ಕಾಣಿಸಿತು. ವೆಂಕಟೇಶ್ ಅವರು ಗೊರೂರಿನಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿದ್ದರು. ಅವರಿಗೆ ವಿಶ ಮಾಡಿ ನಾವು ಎಸ್‍ಎಸ್‍ಎಲ್‍ಸಿ ಕ್ಲಾಸ್‍ಮೆಟ್, ನಾನು ಎ ಸೆಕ್ಷನ್ ನೀವು ಸಿ ಸೆಕ್ಷನ್ ಎಂದು ಜ್ಞಾಪಿಸಿದೆ. “ಇಲ್ಲಾ ನಾನು ನಿಮಗಿಂತ ಒಂದು ವರ್ಷ ಜೂನಿಯರ್.. ಎಂದರು. ಇಲ್ಲೂ ನನ್ನ ಎಣಿಕೆ ತಪ್ಪಾಗಿತ್ತು. ತೆಪ್ಪಗಾದೆ. ಗೋಪುರದ ಮುಂದೆ ನನ್ನ ಪ್ರಸನ್ನನ ಪೋಟೋ ತೆಗೆದಳು ಮಡದಿ.
ಗೆಳೆಯನಿಗೆ ವಿದಾಯ ಹೇಳಿ ಹೇಮಾವತಿ ನದಿಯತ್ತ ಹೋದೆವು. ನದಿಯ ಮಧ್ಯೆ ಮಿನಿ ದೇಗುಲು ನಿರ್ಮಿಸಿ ಒಳಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ನಾನು ಈಜು ಕಲಿತ್ತಿದ್ದು ಈ ಎಮ್ಮೆಗುಂಡಿಯಲ್ಲೇ. ಇದರಿಂದಾಚೆ ದೊಡ್ಡಿನಕಲ್ಲು ಆನೆಕಲ್ಲು ಇದೆ. ಅದು ಪಳಗಿದ ಈಜಗಾರರ ಜಾಗ. ಎಮ್ಮೆ ಗುಂಡಿಯಲ್ಲಿ ಒಬ್ಬ ಬಾಲಕ ಮೀಯುತ್ತಿದ್ದ. ನೀರು ಆಷ್ಟೇನೂ ಆಳವಿರಲಿಲ್ಲ. ಅಷ್ಟರಲ್ಲಿ ಎಲ್ಲಿಯೋ ಇದ್ದ ಯಾಕೂಬ ಓಡಿ ಬಂದ. ಅವತ್ತಿನ ರಾತ್ರಿ ಶಾಲಾ ಮೈದಾನದಲ್ಲಿ ಡೇರೆ ಹಾಕಿ ಪ್ರಚಂಡ ರಾವಣ ನಾಟಕ ಕಲಿಸಿ ಪ್ರದರ್ಶನಕ್ಕೆ ಹಾಸನದಿಂದ ಬಂದಿದ್ದ ನಿರ್ದೇಶಕರು ಗಾಡೇನಹಳ್ಳಿ ವೀರಭದ್ರಾಚಾರ್ ಜೊತೆಗಿದ್ದರು. “ಅನಂತಣ್ಣ, ನಾಟಕದ ಮೆಷ್ಟು ಜೊತೆಗೆ ನಿಂತ್ಕೊಳ್ಳಣ್ಣ, ಒಂದು ಪೋಟೋ ತಕ್ಕೋಳ್ತಿನಿ ಎಂದ ಯಾಕೂಬ. ನಿಂತುಕೊಂಡೆವು ಕ್ಲಿಕ್ಕಿಸಿದ. “ಮಾಷ್ಟ್ರೇ, ಈ ಹಿಂದೆ ನಮ್ಮೂರಿನ ಸಲೀಂ ಖಾನ್ ಇದೇ ಜಾತ್ರೆ ದಿನ ಈ ಹೇಮಾವತಿ ನದಿ ಮಧ್ಯೆ ಸೀನರಿ ಹಾಕಿ ಪೌರಾಣಿಕ ನಾಟಕ ಪ್ರದರ್ಶಿಸಿದ್ದನು. ಅದನ್ನು ಗಿನ್ನಿಸ್ ದಾಖಲೆಗೆ ಸೇರಿಸಬೇಕೆಂಬ ಅವನ ಆಸೆ ಈಡೇರಿತೆ ತಿಳಿಯಲಿಲ್ಲ ಎಂದೆನು. ಈಗ ಸಲೀಂ ಇಲ್ಲ. ಆತ ಕುರುಕ್ಷೇತ್ರ ನಾಟಕದಲ್ಲಿ ಶಕುನಿ ಪಾತ್ರ ಮಾಡಿದ್ದನು. “ನಾಟಕ ನೋಡಲು ಬನ್ನಿ ಅನಂತರಾಜು..ಕರೆದರು ಮೇಷ್ಟ್ರು. ಆಯ್ತು ಸಾರ್ ನೋಡ್ತಿನಿ ಎಂದೆ. ಆದರೆ ನೋಡಲಿಲ್ಲ. ನಾವು ಅಲ್ಲಿಂದ ವೆಂಕಟರಾಮನ್ ಮನೆ ಹತ್ತಿರ ಬರುವಷ್ಟರಲ್ಲಿ ತೇರು ಇವರ ಮನೆಯನ್ನು ದಾಟಿ ಮುಂದೆ ಹೋಗಿತ್ತು. ಆಗ ಐದು ಗಂಟೆ ಸಮಯ, ಮನೆಯ ಹೊರಗೆ ವೆಂಕಟರಾಮನ್ ಚೇರ್‍ನಲ್ಲಿ ಕುಳಿತ್ತಿದ್ದರು.
ವೆಂಕಟರಾಮನ್ ಅವರು ಮೈಸೂರು ಪೇಪರ್ ಮಿಲ್‍ನಲ್ಲಿ ಫೈನಾನ್ಸ್ ಡೈರೆಕ್ಟರ್ ಆಗಿ ಮತ್ತು ಬಿ.ಇ.ಎಂ.ಎಲ್.ನಲ್ಲಿ 20 ವರ್ಷ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ವಾಣಿಜ್ಯ ಕಾನೂನು ಪದವಿಯೊಂದಿಗೆ ಐ.ಸಿ.ಡಬ್ಲ್ಯೂ.ಎ. ಮಾಡಿರುವ ಇವರು ಕೆಲವು ಕೈಗಾರಿಕೆಗಳಿಗೆ ವಾಣಿಜ್ಯ ಸಲಹೆಗಾರರಾಗಿದ್ದಾರೆ. ಭಾರತದ ಐ.ಸಿ.ಡಬ್ಲ್ಯೂ.ಎ.ನಲ್ಲಿ ಕಾರ್ಯದರ್ಶಿಯಾಗಿ ಆಂಧ್ರ ಯೂನಿವರ್ಸಿಟಿಯ ಕೃಷ್ಣದೇವರಾಯ ಇನ್‍ಸ್ಟಿಟ್ಯೂಟ್ ಆಫ್ ಮೇನೇಜ್‍ಮೆಂಟ್ ಬೋರ್ಡ್‍ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ವೆಂಕಟರಾಮನ್ ಹಲವಾರು ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ. ಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರೂ ಪ್ರತಿವರ್ಷ ರಥಸಪ್ತಮಿ ದಿನದಂದು ಜರುಗುವ ರಥೋತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ.
ಎರಡು ಶತಮಾನಗಳಷ್ಟು ಹಳೆಯದಾದ ಶ್ರೀ ಯೊಗಾನರಸಿಂಹಸ್ವಾಮಿಯ ಹಳೆಯ ಬ್ರಹ್ಮರಥವು ಎಳೆಯಲಾರದಷ್ಟು ಶಿಥಿಲಗೊಂಡಾಗ ವಿಧಿಯಿಲ್ಲದೆ ಎರಡು ವರ್ಷ ಸಣ್ಣ ಕೈತೇರಿನಲ್ಲಿ ಎಳೆಯಲಾಯಿತು. ಬೃಹತ್ ಜನಸ್ತೋಮದೆದುರು ಬ್ರಹ್ಮತೇರನ್ನು ಬಹುಸಂಖ್ಯಾತ ಜನರು ಸಾಮೂಹಿಕವಾಗಿ ಎಳೆಯುವ ಉತ್ಸಾಹ ಕಳೆಗುಂದಿದ್ದರಿಂದ ವೆಂಕಟರಾಮನ್ ಅಧ್ಯಕ್ಷರಾಗಿ ಶ್ರೀ ಯೋಗಾನರಸಿಂಹಸ್ವಾಮಿ ನವರಥ ನಿರ್ಮಾಣ ಸಮಿತಿ ರಚನೆಗೊಂಡು ಕೇವಲ ಒಂದೇ ವರ್ಷದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ನವ ಬ್ರಹ್ಮರಥವನ್ನು ಹರಿಯುವಂತೆ ಮಾಡಿ ಈ ವರ್ಷಕ್ಕೆ ಇಪ್ಪತ್ತೈದು ತುಂಬಿತ್ತು. ಕಲಾತ್ಮಕ ಕೆತ್ತನೆಯ 50ಕ್ಕೂ ಹೆಚ್ಚು ಶಿಲ್ಪಗಳನ್ನು ಒಳಗೊಂಡ ಈ ಬ್ರಹ್ಮರಥವನ್ನು ಬಹು ವರ್ಷಕಾಲ ಗಾಳಿ ಮಳೆಯಿಂದ ಸಂರಕ್ಷಿಸಲು ರಥದ ಎತ್ತರಕ್ಕೆ ಸಮನಾಗಿ ಕಲ್ಲು ಕಟ್ಟಡ ನಿರ್ಮಿಸಲಾಗಿದೆ. ಮೇಲ್ಛಾವಣಿ ಮತ್ತು ಎತ್ತರದ ಬೃಹತ್ ಬಾಗಿಲುಗಳನ್ನು ಯಂತ್ರದ ಸಹಾಯದಿಂದ ಸುಲಭವಾಗಿ ತೆರೆಯುವ ಮತ್ತು ಮುಚ್ಚುವ ವ್ಯವಸ್ಥೆ ಮಾಡಲಾಗಿದೆ.
ನವರಥಕ್ಕೆ 25 ವರ್ಷ ತುಂಬಿದ ಹರ್ಷವನ್ನು ವೆಂಕಟರಾಮನ್ ಹಂಚಿಕೊಂಡರು. ನನಗೆ ಇನ್ನೊಂದು ವಿಶೇಷ ಎನಿಸಿದ್ದು ಪಟೇಲರ ಮನೆ ಎಂಬ ಇವರ ಭವ್ಯ ಮನೆ. ಸಾಕಷ್ಟು ಪ್ರಾಚೀನತೆ ಇತಿಹಾಸ ಹೊಂದಿರುವ ಗೊರೂರಿನಲ್ಲಿ ಬಹುತೇಕ ಹಳೆಯ ಮನೆಗಳು ಕುಸಿಯುವ ಹಂತದಲ್ಲಿವೆ. ಕೆಲವು ಧಾರಾಶಾಯಿಯಾಗಿವೆ. ಧಾರಾಶಾಯಿ ಮನೆಗಳ ಪಟ್ಟಿಯಲ್ಲಿ ನಮ್ಮ ಅಜ್ಜ ಅಪ್ಪಯ್ಯಶೆಟ್ಟರ ಮನೆಯೂ ಒಂದು. ಅಜ್ಜ ದೇವಾಂಗ ಜನಾಂಗದ ಶೆಟ್ಟಿ ಯಜಮಾನರಾಗಿದ್ದು ತಮ್ಮ ಮನೆಯ ಜಗುಲಿ ಕಟ್ಟೆಯಲ್ಲಿ ಊರ ಜನರ ಕಷ್ಟ ಸುಖ ವಿಚಾರಿಸುತ್ತಾ ಎಷ್ಟೋ ರಾಜಿ ಪಂಚಾಯ್ತಿ ಮಾಡಿಸಿದ್ದಾಗಿ ನಮ್ಮ ಚಿಕ್ಕಪ್ಪನವರು ಗೊರೂರು ಸೋಮಶೇಖರ್ ತಮ್ಮ ಗೊರೂರು ನೆನಪುಗಳು ಕೃತಿಯಲ್ಲಿ ಬರೆದಿದ್ದಾರೆ.
“ಸಾರ್, ನೀವು ಈ ಮನೆಯಲ್ಲಿ ವಾಸವಿಲ್ಲ. ಆದರೂ ಇಷ್ಟೊಂದು ವಿಶಾಲವಾಗಿ ಮನೆ ಕಟ್ಟಿಸಿ ಬೆಂಗಳೂರಿನಲ್ಲಿದ್ದಿರಿ, ಈ ಮನೆ ನಿರ್ವಹಣೆ ಹೇಗೆ..? ಎಂದೆ. ಏಕೆಂದರೆ ಗೊರೂರಿನಲ್ಲಿ ಮನೆ ಕಟ್ಟಿ ಬಾಡಿಗೆ ಕೊಟ್ಟವರು ವಸೂಲಿಗೆ ಕೋರ್ಟು ಕಛೇರಿ ತಿರುಗಿದ್ದ ನಮ್ಮ ರುದ್ರಶೆಟ್ಟಿ ದೊಡ್ಡಪ್ಪನವರ ಸಂಕಷ್ಟ ನಾನು ಬಲ್ಲವನಾಗಿದ್ದೆ. ಹೀಗಾಗಿಯೇ ನಮ್ಮ ತಂದೆಯೂ ಹೆದರಿ ಮನೆಯನ್ನು ಯಾರಿಗೂ ಬಾಡಿಗೆಗೆ ಕೊಡದೆ ಮಾರಿದ್ದರು.
“ನಮ್ಮ ತಾತ ಪಟೇಲ್ ವೆಂಕಟಾಚಾರ್ ಊರಿನ ಪಟೇಲರಾಗಿದ್ದರು. ಅವರು ಊರಿನ ದೇವರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ತಾತನ ಮನೆಯನ್ನು ಊರಿನಲ್ಲಿ ಹಾಗೆಯೇ ಉಳಿಸಿಕೊಳ್ಳಬೇಕೆಂಬ ಮನೋಸಂಕಲ್ಪದಿಂದ ರಿನೋವೇಟ್ ಮಾಡಿದ್ದೇವೆ. ಬನ್ನಿ ಮನೆಯನ್ನು ತೋರಿಸುತ್ತೇನೆ ಎಂದು ಒಳಗೆ ಕರೆದೊಯ್ದರು. ವಿಶಾಲವಾದ ಹಾಲ್‍ನಲ್ಲಿ ಪೂರ್ವ ದಿಕ್ಕಿನ ದೇವರ ಕೋಣೆಯಲ್ಲಿ ತಾತನ ಪೋಟೋ ಇಟ್ಟಿದ್ದರು. ತಂದೆ ತಾಯಿ ಪೋಟೋ ಹಾಲ್‍ನಲ್ಲಿತ್ತು. ಹಾಗೇ ಹಿತ್ತಲಿಗೆ ಹೋದೆವು. ಇವರ ಮನೆಯ ಹಿಂಭಾಗವೇ ಚಂಗರವಳ್ಳಿ ನಾಲೆ ಹರಿದಿದೆ. ಈ ನಾಲೆಯ ಕೆಳಭಾಗವೇ ಪೇಟೆ. ಇದು ಹೇಮಾವತಿ ಅಣೆಕಟ್ಟೆಯ ಶೀತಪೀಡಿತ ಪ್ರದೇಶವಾಗಿ ಮುಳುಗಡೆ ವ್ಯಾಪ್ತಿಗೆ ಸೇರಿತ್ತು. ಬ್ರಾಹ್ಮಣರ ಬೀದಿಯನ್ನು ಸೇರಿಸಲು ಜಿ.ಎನ್.ನಾರಾಯಣ ಪ್ರಯತ್ನಿಸಿ ವಿಫಲರಾಗಿದ್ದರು. ಪೇಟೆಯ ಕೆಲವರು ಯಾರೋ ವಕೀಲರ ಮೂಲಕ ತಮ್ಮ ಮನೆಗಳಿಗೆ ಸರ್ಕಾರದ ಪರಿಹಾರ ಧನ ಪಡೆದಿದ್ದರು. ನಮ್ಮ ಅಜ್ಜನ ಮನೆ ಪಾಲು ನಮ್ಮ ತಂದೆಗೆ ಆಗಲಿ ಅವರ ಇತರ ಸಹೋದರರಿಗೆ ಆಗಲಿ ಸಿಕ್ಕಿರಲಿಲ್ಲ. ಅಜ್ಜನವರ 2ನೇ ಮಗ ರಾಮಶೆಟ್ಟರಿಗೆ ಖಾತೆಯಾಗಿ ಅದು ಅವರ ಇಬ್ಬರು ಗಂಡು ಮಕ್ಕಳಿಗೆ ವರ್ಗಾವಣೆ ಆಗಿತ್ತು.
ವೆಂಕಟರಾಮನ್ ಅವರು ಹಿತ್ತಲಿಗೆ ಎತ್ತರವಾಗಿ ಚಪ್ಪಡಿ ಕಲ್ಲಿನ ಬೇಲಿ ನೆಟ್ಟು ಒಳಗಡೆ ಒಂದಿಷ್ಟು ತೆಂಗಿನ ಸೊಸಿ ಮರಗಿಡ ಬೆಳೆಸಿದ್ದರು. ಬನ್ನಿ ಮೇಲಕ್ಕೆ ಹೋಗೋಣ ಎಂದು ಆರ್‍ಸಿಸಿಗೆ ಕರೆದೊಯ್ದರು. ವಿಶಾಲ ಆವರಣದಲ್ಲಿ ನಿಂತು ಒಮ್ಮೆ ಊರನ್ನು ವೀಕ್ಷಿಸಿದೆ. ಕೈಲಾಸೇಶ್ವರ ದೇವಸ್ಥಾನ ಕಾಣಿಸಿತು. ಕೈ ಮುಗಿದೆ. “ಸಾರ್, ನಿಮ್ಮ ಮನೆಯಲ್ಲಿ ಒಂದು ದಿನ ಡಾ. ಗೊರೂರು ಅವರ ಸಾಹಿತ್ಯ ಕುರಿತ್ತಾಗಿ ಉಪನ್ಯಾಸ ಕಾರ್ಯಕ್ರಮ ಮಾಡೋಣವೇ..?ಎಂದೆ. “ಮಾಡಬಹುದು ನೋಡೋಣ ನಾನೇ ಅವರ ಕುರಿತ್ತಾಗಿ ಮಾತನಾಡುವೆ ಎಂದರು. ಈ ಹಿಂದೆ ಎ.ಎನ್.ವಿ. ಕಾಲೇಜಿನಲ್ಲಿ ಡಾ. ಗೊರೂರು ಮತ್ತು ಜಿ.ಎಸ್.ಸಂಪತ್ತಯ್ಯಂಗಾರ್ ಅವರ ಬದುಕು ಬರಹ ಕುರಿತ್ತಾಗಿ ಎರಡು ದಿನ ಸೆಮಿನಾರ್ ಮಾಡಿದ್ದೆವು. ಆಗ ವೆಂಕಟರಾಮನ್ ಗೊರೂರು ಕುರಿತು ಮಾತನಾಡಿದ್ದರು.
ವೆಂಕಟರಾಮನ್ ಅವರ ಮನೆಯ ಎದುರುಗಿರುವುದೇ ಸ್ವಾತಂತ್ರ್ಯ ಹೋರಾಟಗಾರರು ಜಿ.ಎಸ್.ಸಂಪತ್ತಯ್ಯಂಗಾರ್ ಮನೆ. ಈಗ ಮನೆಯನ್ನು ಕ್ಯಾಪ್ಟನ್ ಗೋಪಿನಾಥ್ ಖರೀದಿಸಿದ್ದಾರೆ. ನಾನು ವೆಂಕಟರಾಮನ್ ಅವರ ಮನೆಯಿಂದ ಹೊರ ಬರುವಾಗ ಕ್ಯಾಪ್ಟನ್ ಜಗುಲಿಯ ಮೇಲೆ ಕುಳಿತ್ತಿದ್ದರು. ನಾನು ಇವರ ಆತ್ಮ ಕಥನ ಸಿಂಪ್ಲಿ ಎ ಡಕ್ಕನ್ ಒಡಿಸ್ಸಿ (ಕನ್ನಡಕ್ಕೆ ವಿಶ್ವೇಶ್ವರ ಭಟ್) ಪುಸ್ತಕ ಓದಿ ಬರೆದ ವಿಮರ್ಶೆ ನನ್ನ ತಾರುಣ್ಯದ ತಂತಿ ಮೀಟಿ ಕೃತಿಯಲ್ಲಿದೆ.
ನಾವು ಗೋಪಿನಾಥ್ ಮನೆಗೆ ಹೋದೆವು. ಸಿನಿಮಾ ವಿಷಯ ಕುರಿತು ಕೆಲಹೊತ್ತು ಮಾತನಾಡಿದೆವು. ಗೋಪಿನಾಥ್ ಅವರ ಆತ್ಮಕಥೆ ತಮಿಳು ಭಾಷೆಯಲ್ಲಿ ಸಿನಿಮಾವಾಗಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದೆ. ನಮ್ಮ ಒಂದು ಗ್ರೂಪ್ ಪೋಟೋವನ್ನು ವೆಂಕಟರಾಮನ್ ಅಳಿಯ ತೆಗೆದರು. ಸದ್ಯ ಇವರು ಅಮೇರಿಕಾದಲ್ಲಿದ್ದಾರೆ. ಗೋಪಿನಾಥ್‍ರ ಮಡದಿ ಪೋಟೋಗೆ ಮಿಸ್ ಆದರು. ಅವರು ಆಗ ತಾನೇ ಶಾಂತಿಗ್ರಾಮದಿಂದ ಬಂದಿದ್ದರು. ಅವರ ತವರು ಮನೆ ಶಾಂತಿಗ್ರಾಮ. “ಜಿ.ಆರ್. ಮಂಜೇಶ್ ಅವರಿಗೆ ನಮ್ಮ ತಂದೆ ಮೇಷ್ಟ್ರಾಗಿದ್ದರು..ಎಂದು ಮೇಡಂ ಹೇಳಿದರು. “ಮಂಜೇಶ್ ಮಾಮ ನಮ್ಮ ತಂದೆಯ ತಂಗಿಯ ಮಗ..ಎಂದೆ. ಕಾಫಿ ಕೊಟ್ಟರು. ಕುಡಿಯುವಾಗ ಮನೆಯನ್ನು ಒಮ್ಮೆ ಕಣ್ಣಾಯಿಸಿದೆ. ಡಾ.ಎಸ್.ಎಲ್. ಬೈರಪ್ಪನವರ ಭಿತ್ತಿ ಕಾದಂಬರಿಯಲ್ಲಿ ಈ ಮನೆಯಲ್ಲಿ ವಾರಾನ್ನ ಊಟ ಮಾಡಿದ ಸನ್ನಿವೇಶವಿದೆ. ಮನೆಯನ್ನು ಸ್ಮಾರಕವಾಗಿ ಉಳಿಸುವ ಆಶಯದಲ್ಲಿ ಏನೋ ಅಟ್ಟವನ್ನು ಒಂದಿಷ್ಟು ದುರಸ್ತಿ ಮಾಡಿ ಕಿಟಕಿ ಬಾಗಿಲು ಹಾಗೇ ಉಳಿಸಿದ್ದರು.
ನಾವು ಬಸ್ಸು ಹತ್ತಲು ಸ್ಟ್ಯಾಂಡಿಗೆ ಬಂದರೆ ತುಂಬಾ ರಷ್. ಹೇಗೋ ನೂಕಾಡಿ ತಳ್ಳಾಡಿ ಅಂತೂ ಬಸ್ ಹತ್ತಿ ಹಾಸನಕ್ಕೆ ವಾಪಸ್ಸಾದೆವು. ಮನೆಯಲ್ಲಿ ಮಡದಿ ಹೇಳಿದಳು. “ ನೋಡಿ ಅವರು ಹಿರಿಯರು ಕಟ್ಟಿದ ಮನೆಯನ್ನು ಹೇಗೆ ಕಾಪಾಡಿಕೊಂಡು ಬಂದಿದ್ದಾರೆ. ನಿಮ್ಮ ಅಪ್ಪ ಮನೆಯನ್ನು ಮಾರಿರದಿದ್ದರೇ ನಾವು ಒಂದು ದಿನ ಅಲ್ಲಿ ಉಳಿದು ಬರಬಹುದಿತ್ತಲ್ಲವೇ..? ಪ್ರಶ್ನೆಗೆ ಉತ್ತರವೆಲ್ಲಿ..? ಕಾಲ ಮಿಂಚಿ ಹೋಗಿದೆ. ಈಗ ಉಳಿದಿರುವುದು ಒಂದೇ.! ಅದು ಬಿದ್ದು ಹೋಗಿರುವ ಶೆಟ್ಟಿ ಯಜಮಾನರು ಅಪ್ಪಯ್ಯಶೆಟ್ಟರ ಮನೆಯ ಖಾಲಿ ನಿವೇಶನ.
-ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ