ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ತನ್ನ 8 ವರ್ಷದ ಮಗ ದಾಮೋದರ್ ರಾವ್ ನನ್ನು ತನ್ನ ಬೆನ್ನಿನ ಮೇಲೆ ಬಟ್ಟೆಯಲ್ಲಿ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡುತ್ತಿರುವ, ಕುದುರೆ ಸವಾರಿ ಮಾಡುತ್ತಿರುವ ಚಿತ್ರವು ಇತಿಹಾಸವನ್ನು ಓದಿದ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ.
ಆದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹುತಾತ್ಮರಾದ ನಂತರ ಆ ರಾಜಕುಮಾರನ ಗತಿ ಏನಾಯಿತು ಎಂಬುದು ಯಾರಿಗೂ ತಿಳಿಯಲಿಲ್ಲ. ದುಃಖದ ಸಂಗತಿಯೆಂದರೆ, ಸ್ವಾತಂತ್ರ್ಯದ ನಂತರ ಯಾವುದೇ ಸರ್ಕಾರವೂ ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಲಿಲ್ಲ. ಲಕ್ಷ್ಮೀಬಾಯಿ ಹುತಾತ್ಮರಾದ ನಂತರ ಝಾನ್ಸಿಯ ಅಪ್ರಾಪ್ತ ರಾಜಕುಮಾರನ ಗತಿ ಏನಾಯಿತು?
ಝಾನ್ಸಿಯ ಮಹಾರಾಜ ಗಂಗಾಧರ ರಾವ್ ಈ ಮಗುವನ್ನು ಮೂರು ವರ್ಷದ ಪ್ರಾಯದಲ್ಲಿ ದತ್ತು ತೆಗೆದುಕೊಂಡಿದ್ದರು. ಈ ದತ್ತು ಸ್ವೀಕಾರಕ್ಕೆ ಮಾನ್ಯತೆ ನೀಡುವಂತೆ ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿಗೆ ಪತ್ರವನ್ನೂ ಬರೆದಿದ್ದರು. ಆದರೆ ಮಹಾರಾಜ ಗಂಗಾಧರ ರಾವ್ ಕೆಲವೇ ಸಮಯದಲ್ಲಿ ನಿಧನರಾದರು. ಬಳಿಕ ರಾಣಿ ಲಕ್ಷ್ಮೀಬಾಯಿ ಕೂಡ ಈ ಮಗುವಿನ ದತ್ತು ಸ್ವೀಕರಿಸಿರುವುದಾಗಿ ಕಲ್ಕತ್ತಾದ ಲಾರ್ಡ್ ಡಾಲ್ ಹೌಸಿಗೆ ಪ್ರತಿನಿಧಿಯನ್ನು ಕಳುಹಿಸಿ ಮಾಹಿತಿ ನೀಡಿದರು. ಆದರೆ ಝಾನ್ಸಿ ರಾಣಿಯ ಕೋರಿಕೆ ತಿರಸ್ಕೃತವಾಯಿತು.
ರಾಣಿಯ ಮಗ ದಾಮೋದರ್ ರಾವ್ ಮತ್ತು ಅವರ ಮುಂದಿನ 5 ತಲೆಮಾರಿನವರು ಇಂದೋರ್‌ನ ಅಹಲ್ಯಾ ನಗರಿಯಲ್ಲಿ ಅನಾಮಿಕರಾಗಿ ಜೀವನವನ್ನು ನಡೆಸುತ್ತಿದ್ದರು ಎಂಬುದು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿತ್ತು.
ಯಾವುದೇ ಸರ್ಕಾರ ಅಥವಾ ಸಾರ್ವಜನಿಕ ಸಹಾಯವಿಲ್ಲದೆ, ರಾಣಿಯ ವಂಶಸ್ಥರ ಮೊದಲ ಎರಡು ತಲೆಮಾರುಗಳು ಕಡು ಬಡತನದಲ್ಲಿ ಬಾಡಿಗೆ ಮನೆಯಲ್ಲಿ ತಮ್ಮ ಜೀವನವನ್ನು ಕಳೆದರು. ಅವರ ಪತ್ತೆಗೆ ಸರಕಾರದಿಂದ ಯಾವುದೇ ಪ್ರಯತ್ನ ನಡೆಯಲಿಲ್ಲ.
ವಾಸ್ತವವಾಗಿ, ರಾಣಿಯ ವಂಶಸ್ಥರು 2021 ರವರೆಗೆ ಅಹಲ್ಯಾ ನಗರದಲ್ಲಿಯೇ ಇದ್ದರು. ನಂತರ, ಅವರು ನಾಗ್ಪುರಕ್ಕೆ ಸ್ಥಳಾಂತರಗೊಂಡರು, ಆರನೇ ತಲೆಮಾರಿನ ವಂಶಸ್ಥರು ಈಗ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹೊರಜಗತ್ತಿಗೆ ಅಪರಿಚಿತರಾಗಿಯೇ ಜೀವನ ನಡೆಸಲು ಬಯಸುತ್ತಾರೆ. ಅವರು ತಮ್ಮ ಹೆಸರಿನಲ್ಲಿ ಝಾನ್ಸಿವಾಲೆ ಎಂಬ ವಿಶೇಷಣವನ್ನು ಲಗತ್ತಿಸುವ ಮೂಲಕ ಝಾನ್ಸಿಯೊಂದಿಗೆ ತಮ್ಮ ಒಡನಾಟವನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಯೋಗೇಶ್ ಅರುಣ್ ರಾವ್ ಝಾನ್ಸಿವಾಲೆ (44) ಅವರು ರಾಣಿ ಲಕ್ಷ್ಮೀಬಾಯಿ ಕುಟುಂಬದ ಆರನೇ ತಲೆಮಾರಿನ ಸದಸ್ಯರಾಗಿದ್ದಾರೆ. ಅವರು ಪ್ರಸ್ತುತ ತಮ್ಮ ಪತ್ನಿ ಪ್ರೀತ್ ಮತ್ತು ಇಬ್ಬರು ಮಕ್ಕಳಾದ ಪ್ರಿಯೇಶ್ ಮತ್ತು ಧನಿಕಾ ಅವರೊಂದಿಗೆ ನಾಗ್ಪುರದಲ್ಲಿ ವಾಸಿಸುತ್ತಿದ್ದಾರೆ.
ಅವರ ತಂದೆ ಅರುಣ್ ರಾವ್ ಝಾನ್ಸಿವಾಲೆ ಕೂಡ ಅವರೊಂದಿಗೆ ವಾಸಿಸುತ್ತಿದ್ದಾರೆ. ಆಗಿನ ಮಧ್ಯಪ್ರದೇಶ ಎಲೆಕ್ಟ್ರಿಸಿಟಿ ಬೋರ್ಡ್‌ನಲ್ಲಿ (ಎಂಪಿಇಬಿ) ಸಹಾಯಕ ಎಂಜಿನಿಯರ್ ಆಗಿ ನಿವೃತ್ತರಾದ ಅರುಣ್ ರಾವ್ ಅವರು ಇಂದೋರ್‌ನ ಧನ್ವಂತರಿ ನಗರದಲ್ಲಿ ಮನೆ ಹೊಂದಿದ್ದಾರೆ.
ದಾಮೋದರ್ ರಾವ್ ಮೇ 20, 1906 ರಂದು ತಮ್ಮ 57 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರಿಗೆ ಬ್ರಿಟಿಷರು ತಿಂಗಳಿಗೆ 200 ರೂಪಾಯಿ ಪಿಂಚಣಿ ನೀಡಿದ್ದರು. ಅವರ ಮಗ ಲಕ್ಷ್ಮಣ್ ರಾವ್ ಝಾನ್ಸಿವಾಲೆ.
ಆಗಸ್ಟ್ 15, 1947 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ರೆಸಿಡೆನ್ಸಿ ಪ್ರದೇಶದಲ್ಲಿನ ಮನೆಯನ್ನು ಖಾಲಿ ಮಾಡುವಂತೆ ಅಂದಿನ ಸರ್ಕಾರ ಲಕ್ಷ್ಮಣ್ ರಾವ್ ಅವರನ್ನು ಕೇಳಿತು. ರಾಣಿ ಲಕ್ಷ್ಮೀಬಾಯಿಯ ವಂಶಸ್ಥರಿಗೆ ಇಂದೋರ್‌ನ ರಾಜವಾಡದ ಪೀರ್‌ಗಾಲಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದಕ್ಕೆ ತೆರಳುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ.
ಝಾನ್ಸಿ ರಾಣಿಯ ಮೊಮ್ಮಗ ಜಿಲ್ಲಾ ನ್ಯಾಯಾಲಯದಲ್ಲಿ ಫ್ರೀಲಾನ್ಸ್ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಬಡತನದ ಕಾರಣ, ಕುಟುಂಬವು ಆಗಾಗ್ಗೆ ಉಪವಾಸ ಮಲಗುವಂತಾಗಿತ್ತು. ತೀವ್ರ ಬಡತನದಲ್ಲಿ ಬೆಂದ ಅವರು 1959 ರಲ್ಲಿ ಇಹಲೋಕ ತ್ಯಜಿಸಿದರು. ಮಗ ಕೃಷ್ಣರಾವ್ ಝಾನ್ಸಿವಾಲೆ ಮತ್ತು ಮಗಳು ಚಂದ್ರಕಾಂತ ಬಾಯಿಯನ್ನು ಅಗಲಿದರು.
ರಾಣಿಯ ಮೊಮ್ಮಗ ಕೃಷ್ಣರಾವ್ ಇಂದೋರ್‌ನ ಹುಕುಮ್‌ಚಂದ್ ಮಿಲ್‌ನಲ್ಲಿ ಸ್ಟೆನೋ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ತಿಂಗಳಿಗೆ 100 ರೂಪಾಯಿ ಪಿಂಚಣಿ ಪಡೆಯುತ್ತಿದ್ದರು. ಇಡೀ ಜೀವನವನ್ನು ಅದೇ ಬಾಡಿಗೆ ಮನೆಯಲ್ಲಿ ಕಳೆದ ಕೃಷ್ಣರಾವ್ 1967 ರಲ್ಲಿ ನಿಧನರಾದರು.
ಅವರ ನಿಧನದ ನಂತರ, ಕೇಂದ್ರ ಮತ್ತು ಯುಪಿ ಸರ್ಕಾರವು ರಾಣಿಯ ವಂಶಸ್ಥರ ಪಿಂಚಣಿಯನ್ನು ಸ್ಥಗಿತಗೊಳಿಸಿತು.
ಅವರ ಮಗ ಅರುಣ್ ರಾವ್ ಝಾನ್ಸಿವಾಲೆ ಇಂಜಿನಿಯರ್ ಆಗಿದ್ದು ಎಂಪಿಇಬಿ ಸೇರಿದರು. 1994 ರಲ್ಲಿ ಅವರು ಇಂದೋರ್‌ನ ಧನ್ವಂತರಿ ನಗರದಲ್ಲಿ ಮನೆಯೊಂದನ್ನು ಖರೀದಿಸಿದರು. ವಾಸ್ತವವಾಗಿ, ರಾಣಿ ಝಾನ್ಸಿಯನ್ನು ಮಗ ದಾಮೋದರ್ ರಾವ್‌ನೊಂದಿಗೆ ತೊರೆದ ನಂತರ, ಕುಟುಂಬವು ಸ್ವಂತ ಮನೆಗಾಗಿ ಐದು ತಲೆಮಾರುಗಳವರೆಗೆ ಕಾಯಬೇಕಾಯಿತು.
ಚಿತ್ರದಲ್ಲಿರುವವರು:
ಅರುಣ್ ರಾವ್ ಝಾನ್ಸಿವಾಲಾ (ನೀಲಿ ಕುರ್ತಾ) ಅವರ ಮಗ ಯೋಗೀಶ್ ರಾವ್ ಜಾನ್ಸಿವಾಲಾ (ಕೆಂಪು ಕುರ್ತಾ) ಅವರ ಸೊಸೆ ಪ್ರೀತ್ ಮತ್ತು ಅವರ ಇಬ್ಬರು ಮಕ್ಕಳಾದ ಪ್ರಿಯೇಶ್ ಮತ್ತು ಧನಿಕಾ ರಾವ್ ಝಾನ್ಸಿವಾಲಾ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ