ಗೋಕರ್ಣ: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡರೆ ಬದುಕು ಸುಲಲಿತ. ಕಾಲವನ್ನು ಮೀರಬೇಕಾದರೆ ಅದರ ಪರಿಭಾಷೆ ಅರ್ಥ ಮಾಡಿಕೊಳ್ಳಬೇಕು. ಗ್ರಹ, ರಾಶಿ, ನಕ್ಷತ್ರ, ವಾರ ಹೀಗೆ ವಿವಿಧ ಅಂಶಗಳ ಮೂಲಕ ಕಾಲನ ಭಾಷೆ ಅರ್ಥ ಮಾಡಿಕೊಳ್ಳಬಹುದು. ಗ್ರಹಚಕ್ರ ಎಂದರೆ ಪ್ರಕೃತಿ. ಇವುಗಳ ಚಲನೆಗೆ ಅನುಗುಣವಾಗಿ ಬದುಕು ಬದಲಾಗುತ್ತಾ ಹೋಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, ಕಾಲದ ಭಾಷೆ ಅರ್ಥ ಮಾಡಿಕೊಂಡರೆ ಜೀವನವನ್ನೇ ಅರ್ಥ ಮಾಡಿಕೊಳ್ಳಬಹುದು. ಒಳಿತು ಕೆಡುಕುಗಳನ್ನು ಇದರಿಂದ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಕಾಲದ ಮುಖ್ಯ ಲಕ್ಷಣ ಪರಿವರ್ತನೆ. ಯೋಗಿಗಳು ಕಾಲವನ್ನು ಮೀರಲು ಪ್ರಯತ್ನ ಮಾಡುತ್ತಾರೆ. ಶಾಶ್ವತವಾಗಿ ಉಳಿಯುವಂಥ, ಅವಿಕಾರವಾದ್ದನ್ನು ಬಯಸುತ್ತಾರೆ. ಕಾಲದ ಪರಿಧಿಯ ಒಳಗಿದ್ದರೆ ಪರಿವರ್ತನೆ ಅನಿವಾರ್ಯ. ಕಾಲದ ಗುಟ್ಟನ್ನು ಅರಿತುಕೊಳ್ಳಲು ಸಾಧ್ಯವಾದರೆ ಜೀವನ ಸಾರ್ಥಕವಾಗುತ್ತದೆ ಎಂದು ವಿಶ್ಲೇಷಿಸಿದರು.
ಅಸ್ಥಿ, ರಕ್ತ, ಮಜ್ಜೆ, ಚರ್ಮ, ಮೇಧಸ್ಸು, ಶುಕ್ರ, ಸ್ನಾಯು ಮುಂತಾದ ಸಪ್ತಧಾತುಗಳು ಕ್ರಮವಾಗಿ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳ ಮೂಲಕ ಸಂಕೇತವಾಗಿ ಪರಿಗಣಿಸಬಹುದು. ಅಂತೆಯೇ ಕುಟುಂಬದ ಸ್ಥಾನವನ್ನು ಕೂಡಾ ಗ್ರಹಗಳ ಮೂಲಕ ಹೇಳಬಹುದು. ಶಿವ, ಪಾರ್ವತಿ, ಸುಬ್ರಹ್ಮಣ್ಯ, ಕಾಳಿ, ಅವತಾರ ವಿಷ್ಣು, ಮಹಾವಿಷ್ಣು, ಲಕ್ಷ್ಮೀ, ಗಣಪತಿ, ಶಾಸ್ತಾ, ಆಂಜನೇಯ ಹೀಗೆ ಭಿನ್ನ ಗ್ರಹಗಳು ದೇವಸೂಚಕವೂ ಹೌದು ಎಂದು ಹೇಳಿದರು.
ಮಠದ ಬಾಹ್ಯ ಭವ್ಯತೆ ಶಿಷ್ಯರಿಂದ; ಶಿಷ್ಯರ ಅಂತರಂಗದ ಭವ್ಯತೆ ಮಠದಿಂದ ಬರಬೇಕು ಎಂದು ಹೇಳಿದರು. ಎಲ್ಲರೂ ಸುಖಿ, ಸಾರ್ಥಕ ಬದುಕು ಸಾಗಿಸುವಂತಾಗಲಿ ಎಂದು ಆಶಿಸಿದರು.
ಜ್ಞಾನದಷ್ಟು ಪವಿತ್ರ ಯಾವುದೂ ಇಲ್ಲ; ಅದಕ್ಕೆ ಸರಿ ಸಮಾನವಾದದ್ದು ಕೂಡಾ ಯಾವುದೂ ಇಲ್ಲ. ಮುತ್ತು ರತ್ನಕ್ಕಿಂತ ಅಕ್ಷರ ಸಂಪತ್ತು ಮೌಲಿಕವಾದದ್ದು. ಬದುಕನ್ನು ಬೆಳಗುವಂಥದ್ದು ಅರಿವಿನ ಸಂಪತ್ತು. ನಮ್ಮ ಪೂರ್ವಜರು ನೀಡಿದಂಥ ಜ್ಞಾನ ಮತ್ತಷ್ಟು ಅಮೂಲ್ಯ. ಇಂಥ ಜ್ಞಾನಸಂಪತ್ತು ಅಡಕಗೊಂಡಿರುವ ಓಲೆಗರಿಗಳು ಜ್ಞಾನಭಂಡಾರಗಳು. ಅವುಗಳನ್ನು ಉಳಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಾಚ್ಯವಸ್ತು ತಜ್ಞ ಅಶೋಕ್ ಹೆದ್ಲಿ, ಶ್ರೀಮಠದ ಅಪೂರ್ವ ತಾಳೆಗರಿಗಳ ಸಂಗ್ರಹದ ಅನಾವರಣ ನೆರವೇರಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲದ ಪದಾಧಿಕಾರಿಗಳಾದ ಕೇಶವ ಪ್ರಕಾಶ್ ಎಂ, ರುಕ್ಮಾವತಿ ರಾಮಚಂದ್ರ, ಸಾಗರ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರ್, ಕಾರ್ಯದರ್ಶಿ ಶ್ರೀನಾಥ ಸಾರಂಗ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ