ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ
ಭವಿಷ್ಯವೇನು ಚಿಂತಿಸದೆ ಬದುಕು ದೂಡುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸುವ ನೀ ಜನುಮವನು ಮಂಕುತಿಮ್ಮ
'ನೀವು ಸಾಹಿತಿಯಾಗಿ ಉದ್ದುದ್ದ ಭಾಷಣ ಬಿಗಿದು ಸಮಾಜ ಉದ್ದಾರ ಮಾಡಿದ್ದು ಸಾಕು. ಸಂಜೆ ಬೇಗನೇ ಮನೆಗೆ ಬಂದು ಮಗನಿಗೆ ಆನ್‍ಲೈನ್ ಪಾಠ ಹೇಳಿಕೊಟ್ಟು ಮನೆ ಉದ್ದಾರ ಮಾಡಿ' ಎಂದು ಮಡದಿ ಮನೋರಮೆ ಹುಕುಂ ಕೊಟ್ಟಳು. ಅವಳು ಮನೆಯಲ್ಲಿದ್ದರೂ ನಾನು ಹೊರಗೆ ಇದ್ದರೂ ಪೋನ್ ಮೂಲಕ ಆಗಿಂದಾಗ್ಗೆ ಹೀಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿರುವುದು ಅವಳ ವಿಶೇಷ ಗುಣ. ಗುಣವಂತೆಯ ಮಾತು ತಪ್ಪಿ ನಡೆಯುವುದುಂಟೇ. ಹಾಗೆ ನಡೆದಲ್ಲಿ ಮೆಚ್ಚನಾ ಪರಮಾತ್ಮನು! ಆಯ್ತು ಮಾರಾಯ್ತಿ, ಯಾವ ಅಡ್ಡದಾರಿಯಲ್ಲೂ ಹೋಗೊಲ್ಲ ಸೀದಾ ಮನೆಗೆ ಸೈಡ್‍ನಲ್ಲೇ ಬರುತ್ತೇನೆ ಆಯ್ತೆ ಎಂದು ಪೋನ್ ಮೇಲೆ ಬೆರಳಿಟ್ಟೆ. ಸ್ವಿಚ್ ಆಫ್ ಮಾಡುವಷ್ಟು ಸಿಟ್ಟು ಬಂದರೂ ಮಾಡಿದರೆ ಯಾವುದಾದರೂ ‘ಮಿಸ್’ ಕಾಲ್ ಬಂದರೆ! ಬಂದೇ ಬಿಟ್ಟಿತು. ಮಿಸ್ ಕಾಲ್ ಅಲ್ಲಾ, ಪ್ರಾಯದ ಗೆಳೆಯ ಮೋಹನರಾಜನ ವ್ಯಾಟ್ಸಪ್ ಮೆಸೇಜ್
ಹಗ್ಗ ಬಿಚ್ಚಿದ ಕೂಡಲೇ ಹಾಲಿಗಾಗಿ
ಹಾತೊರೆಯುವುದು ಕರು
ಬಾರು ತೆರೆದ ಕೂಡಲೇ ಅಲ್ಕೋಹಾಲಿಗಾಗಿ
ಹಾತೊರೆಯುವರು ಕುಡು-ಕರು
ಪ್ರಾಯದಲ್ಲಿ ಹುಡುಗಿಯರನ್ನು ಚುಡಾಯಿಸುವಲ್ಲಿ ಪಳಗಿದವನಾಗಿದ್ದ ಮೋಹನರಾಜ ಯಾವಾಗ ಕುಡಿಯುವುದು ಬಿಟ್ಟಿದ್ದಾನೆ! ಒಂದನೇ ಅಲೆಯ ಲಾಕ್‍ಡೌನ್‍ನಲ್ಲಿ ಬಾರ್‍ಗಳು ಪೂರಾ ಬಂದ್ ಆಗಿದ್ದು ಸರಿಯಷ್ಟೇ. ಇದರಿಂದ ದೇಶಕ್ಕೆ ಎಷ್ಟು ನಷ್ಟವಾಗಿದೆ ಎಂಬುದು ತಿಳಿದಿದಿಯೇ? ಅದಕ್ಕೆ ಎರಡನೇ ಅಲೆಗೆ ಮಿನಿ ಲಾಕ್‍ಡೌನ್ ! ಮನೆಗೆ ಪಾರ್ಸಲ್ ತೆಗೆದುಕೊಂಡುಹೋಗಬಹುದು... ಗೆಳೆಯನ ಉಚಿತ ಸಲಹೆ. ನನ್ನ ಈ ಹನಿಗವನ ಹಾಸ್ಯಸವಿಯಲ್ಲಿದೆ.
ಹೆಂಡ ಕುಡಿದು
ಹೋದರೆ ಹೆಂಡ-ತಿ
ಬಾಗಿಲು ತೆರೆಯುವುದಿಲ್ಲ
ಅದಕ್ಕೆ
ನಾನು ಕುಡಿಯುವುದಿಲ್ಲ.
ಸರಿದಾರಿಯಲ್ಲೇ ಮನೆಯತ್ತ ಹೋಗುತ್ತಿರಲು ಎದುರಿಗೆ ರಮ್ಯ ರಾಮಣ್ಣ ಸಿಕ್ಕರು.
‘ಏನ್ ಕವಿಗಳೇ, ಸೀದಾ ಮನೆ ಕಡೆ ಹೊರಟಿದ್ದಿರಾ? ಕಲಾಭವನದ ಕಡೆ ಬರುವುದಿಲ್ಲವೇ? ಸಾಹಿತ್ಯ ಪರಿಷತ್ತಿಗೆ ನಾಯಕರಹಳ್ಳಿ ನಾಯಕರು ಕದ ಹಾಕಿದ್ದಾರೆಯೇ?
‘ಇಲ್ಲಾ ರಾಮಣ್ಣ, ಈಗ ಕರೋನ ಕಾಲ. ನಮ್ಮೂರ ಸುಳಿಯಲ್ಲಿ ಸಿಕ್ಕವರು ಪ್ರಕಾಶ್ ಒಂದು ಮೆಸೇಜ್ ಕಳಿಸಿದ್ದಾರೆ.
ಲಾಕಪ್‍ಗೂ ಲಾಕ್‍ಡೌನ್‍ಗೂ ವ್ಯತ್ಯಾಸ ಇಷ್ಟೇ. ಲಾಕಪ್‍ನಲ್ಲಿ ಒಳಗೆ ಹೋದರೆ ಒದೆ ಬೀಳುತ್ತದೆ; ಲಾಕ್‍ಡೌನ್‍ನಲ್ಲಿ ಹೊರಗೆ ಹೋದರೆ ಒದೆ ಬೀಳುತ್ತದೆ! ಆದುದರಿಂದ ಈಗ ಯಾವ ಕಡೆಯೂ ಬರುವಂತಿಲ್ಲ. ಇರಲಿ, ನಿಮ್ಮ ವಿಷಜ್ವಾಲೆ ನಾಟಕ ಸಿದ್ದವಾಯಿತೇ? ಗಂಗಣ್ಣ ಅವರ ಮೇ 23ರ ನಾಟಕೋತ್ಸವದಲ್ಲಿ ನಿಮ್ಮ ನಾಟಕಕ್ಕೆ ಅವಕಾಶ ಸಿಕ್ಕಿದೆ ಎಂದು ರಾಮಣ್ಣನ ಗಮನ ಪಕ್ಕದ ದಾರಿಗೆ ಹೊರಳಿಸಿದೆ.
ಎನ್.ಎಸ್.ರಾವ್ ಅವರ ನಾಟಕ ವಿಷಜ್ವಾಲೆ ಸರಿಯೇ. ಅದನ್ನು ಹಲವು ಬಾರಿ ತಮ್ಮ ತಂಡದಿಂದ ರಾಮಣ್ಣ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಆದರೆ ಈ ಬಾರಿ ವಿಶೇಷವಾಗಿ ಮಹಿಳೆಯರ ಒಂದು ತಂಡ ಕಟ್ಟಿ ಈ ನಾಟಕವನ್ನು ಕಲಿಸಿ ಅದಕ್ಕೆ ಸೇಡಿನ ಜ್ವಾಲೆ ಎಂದು ಹೆಸರಿಟ್ಟಿದ್ದರು. ಅದು ಏಕೆಂದು ತಿಳಿಯಲಿಲ್ಲ. “ಈ ಕರೋನ ಆರ್ಭಟದಲ್ಲಿ ನಿಮ್ಮ ನಾಟಕ, ನೃತ್ಯ, ಸಂಗೀತ ಸಾಂಸ್ಕೃತಿಕ ಉತ್ಸವ ನಡೆಯುವುದೇನಮ್ಮ.. ರಾಮಣ್ಣನವರಿಗೆ ಇನ್ನೂ ಅನುಮಾನ. “ರಾಮಣ್ಣನವರೇ, ಕಲಾವಿದರು ಯಾವಾಗಲೂ ಆಶಾವಾದಿಗಳಾಗಿರಬೇಕು. ಗಂಗಣ್ಣ ಕಲಾಭವನ ಬುಕ್ ಮಾಡಿದ್ದು ಖರೇ ತಾನೇ. ಅಕಸ್ಮಾತ್ ಕರೋನ ಹೀಗೆ ಮುಂದುವರಿದರೆ ನಾಟಕವೂ ಮುಂದಕ್ಕೆ ಹೋಗುತ್ತೇ ಅಷ್ಟೇ. ಅಷ್ಟರಲ್ಲಿ ಬೇರೆ ಯಾವುದಾದರೂ ಹೊಸ ನಾಟಕ ಕಲಿಸಿರಿ. ಬೆಂಗಳೂರಿನ ವಸುಮತಿ ರಾಮಚಂದ್ರ ಅವರು ದೇವಾನಾಂಪ್ರಿಯ ಎಂಬ ಮಕ್ಕಳಿಗೆ ಪ್ರಿಯವಾದ ನಾಟಕ ಬರೆದು ನನಗೆ ಪುಸ್ತಕ ಕಳಿಸಿದ್ದಾರೆ. ಸಾಮ್ರಾಟ್ ಅಶೋಕನ ಯುದ್ದ ಮತ್ತು ಮನಪರಿವರ್ತನೆ ಮೇಲೆ ಸೊಗಸಾಗಿ ಬರೆದಿದ್ದಾರೆ". ನನಗೆ ಈಗ ಕಲಿಸಲು ಸಮಯವಿಲ್ಲ ನೀವೇ ಕಲಿಸಿರಿ ಎಂದು ಮಾತಿನಲ್ಲೇ ಕೈ ತೊಳೆದುಕೊಂಡರು ರಾಮಣ್ಣ.
ನಾನು ಮನೆಗೆ ಮರಳಿ ಕೈಕಾಲು ತೊಳೆದುಕೊಂಡು ಮಗನಿಗೆ ಪಾಠ ಹೇಳಲು ಕುಳಿತೆ. ನೀನು ದೊಡ್ಡವನಾದ ಮೇಲೆ ಏನಾಗ್ತಿಯೋ ಎಂದು ಏಳನೇ ತರಗತಿ ಓದುತ್ತಿದ್ದ ಮಗನಿಗೆ ದಡ್ಡ ಪ್ರಶ್ನೆ ಕೇಳಿದೆ. ಟಿವಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ನೋಡಿ ಭಲೇ ಕಿಲಾಡಿಯಾಗಿದ್ದ ಮಗ ನಾನು ದೊಡ್ಡವನಾದ ಮೇಲೆ ಅಪ್ಪ ಅಗುತ್ತೇನೆಯೇ ಹೊರತು ನಿನ್ನ ಹಾಗೆ ಸಾಹಿತಿ ಆಗೊಲ್ಲಾ ಎಂದ. ನನ್ನ ಮಗನ ಉತ್ತರಕ್ಕೂ ಒಂದು ಕಾರಣವಿತ್ತು. ಶಾಲೆಯಲ್ಲಿ ಮೇಡಂ ನಿಮ್ಮಪ್ಪ ನೋಡಿದರೇ ಸಾಹಿತಿ. ನಿನಗೆ ಇನ್ನೂ ಕನ್ನಡನೇ ಸರಿಯಾಗಿ ಓದಲು ಬರೆಯಲು ಬರುತಿಲ್ಲವಲ್ಲೋ ಎಂದು ಛೇಡಿಸಿದ್ದರಂತೆ! ನಾನಾದರೂ ಸಾಹಿತಿಯಾಗಬೇಕೆಂದು ಓದಲಿಲ್ಲ. ಶಾಲಾ ಕಾಲೇಜಿನ ದಿನಗಳಲ್ಲಿ ಕಥೆ ಪುಸ್ತಕಗಳನ್ನು ಅವರಿವರಿಂದ ಕೇಳಿ ಪಡೆದು ಓದುತ್ತಿದ್ದೆ. ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಿದಂತೆ ಕತೆಗಾರರು ಕಟ್ಟುತ್ತಿದ್ದ ಕತೆಗಳು ನನಗೆ ಇಷ್ಟವಾಗುತ್ತಿದ್ದವು. ಬಿಕಾಂ ಓದು ಮುಗಿದು ನಿರುದ್ಯೋಗಿಯಾದಾಗ ವಿಧಿಯಿಲ್ಲದೆ ಮನೆಯಲ್ಲೇ ಕುಳಿತು ಒಂದಿಷ್ಟು ಪ್ರೇಮ ಕಥೆಯನ್ನು ಕಲ್ಪಿಸಿ ಕಥೆ ಕಟ್ಟಿದೆ. ರವಿ ಬೆಳಗೆರೆ, ನಾಗತಿಹಳ್ಳಿ ಚಂದ್ರಶೇಖರ್ ಇವರ ಪ್ರೇಮ ಕಥೆಗಳು ಒಂದಿಷ್ಟು ಸ್ಫೂರ್ತಿ ನೀಡಿ ಬರೆದ ಪ್ರೇಮ ಕರೆದಿದೆ ಬಾರೋ ಕಥೆ ಪ್ರಿಯಾಂಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಬಾಡಿಗೆಯವರು ಕಥೆ ಮಂಗಳದಲ್ಲಿ ಬಂತು. ಡಾ.ಜಿ.ಎಸ್.ಶಿವರುದ್ರಪ್ಪರವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 1988ರಲ್ಲಿ ಬಳ್ಳಾರಿಯಲ್ಲಿ ನಡೆದ 10 ದಿನಗಳ ಕಥಾ ಕಮ್ಮಟದಲ್ಲಿ ಭಾಗವಹಿಸಿದೆ. ಕಥೆ ಬರೆಯಲು ಅನುಭವ ಬೇಕೆಂದು ಅನುಭವಿ ಕಥೆಗಾರರು ಬೋಧಿಸಿದರು. ರಾಜ್ಯಾದ್ಯಂತ 30 ಕತೆಗಾರರು ಭಾಗವಹಿಸಿದ್ದೆವು. ಡಿ.ವಿ.ಬಡಿಗೇರ ಹನಿಗವನ ಕವಿ. ಇನ್ನೊಬ್ಬರು ಸೀರಿಯಸ್ ಕತೆಗಾರರು. ಇವರಿಬ್ಬರು ಒಂದೇ ರೂಮಿನಲ್ಲಿದ್ದರು. ರಾತ್ರಿ ಬಡಿಗೇರರಿಗೆ ಕತ್ತಲು ಬೇಕು. ಅವರಿಗೆ ಲೈಟ್ ಬೇಕು. ಇವರಿಬ್ಬರೂ ಒಟ್ಟಿಗೆ ಅದ್ಯಾಗೇ ಹತ್ತು ದಿನಗಳು ಕಳೆದರೋ! ಕುಂ.ವೀರಭದ್ರಪ್ಪ, ಸದಾಶಿವ ಮತ್ತು ರಾಜಶೇಖರ್ ನಿರಮಾನ್ವಿ ಶಿಬಿರದ ನಿರ್ದೇಶಕರು. ಇವರ ಪ್ರತಿದಿನ ಉಪನ್ಯಾಸಕ್ಕೆ ಇಬ್ಬರು ಬಂಡಾಯ ಕತೆಗಾರರು ಸಿಗರೇಟ್ ಪ್ಯಾಕಿನಲ್ಲಿ ಗನ್ ಮಾಡಿ ಡೆಸ್ಕ್ ಮೇಲಿಟ್ಟು ತಮಾಷೆ ಮಾಡುತ್ತಿದ್ದರು. ಗಜೇಂದ್ರಗಡದ ಕೆರಕಲಮಟ್ಟಿ ಪ್ರಸಾದ್ ಒಬ್ಬ ಒಳ್ಳೆಯ ಕುಂಚಕಲಾವಿದ. ಅತಿಥಿ ಉಪನ್ಯಾಸಕರು ಭಾಷಣ ಮಾಡುತ್ತಿರುವಾಗಲೇ ಅವರ ಕ್ಯಾರಿಕೇಚರ್ ಬರೆದುಬಿಡುತ್ತಿದ್ದ ಕುಶಲಕರ್ಮಿ. ಚುಕ್ಕಿ ಚಿತ್ರದಲ್ಲಿ ನನ್ನ ಭಾವಚಿತ್ರವನ್ನು ಬರೆದುಕೊಟ್ಟಿದ್ದಾರೆ. ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಎಂ.ಪಿ. ಪ್ರಕಾಶ್ ಮುಕ್ತಾಯ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ನೀಡಿದ್ದರು. ಚಿತ್ರ ನಟ ಶಂಕರ್‌ನಾಗ್ ಮುಖ್ಯ ಅತಿಥಿ. ಕಮ್ಮಟಕ್ಕೆ ಹೋಗುವ ಮೊದಲು ಉತ್ಸಾಹದಿಂದ ಕಥೆಗಳನ್ನು ಬರೆಯುತ್ತಿದ್ದೆ. ಕಮ್ಮಟದ ಭಾಷಣ ಕೇಳಿ ಬಂದ ಮೇಲೆ ಕಥೆ ಬರೆಯುವುದನ್ನೇ ನಿಲ್ಲಿಸಿದೆ. ನನ್ನ ಚಿತ್ತ ಕವಿತೆಯತ್ತ ಹೊರಳಿತು. ಅವು ಪೇಪರ್, ಮ್ಯಾಗಜಿನ್‍ನಲ್ಲಿ ಪ್ರಕಟವಾಗಿ ಒಂದಿಷ್ಟು ಬೆಳಕಿಗೆ ಬಂದೆ. ಹಾಸನ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಹೆಚ್.ಬಿ. ಜ್ವಾಲನಯ್ಯನವರು ಇದ್ದಾಗ್ಗೆ 3ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ಅರಸೀಕೆರೆಯಲ್ಲಿ ನಡೆಯಿತು. ಎಸ್.ಕೆ. ಕರೀಂಖಾನ್ ಸಮ್ಮೆಳನದ ಅಧ್ಯಕ್ಷರು. ಇಲ್ಲಿ ನನಗೆ ಕವಿಗೋಷ್ಠಿಗೆ ಅವಕಾಶ ಸಿಕ್ಕಿತ್ತು. ಪ್ರಾಸಕ್ಕೆ ಬದ್ದನಾಗಿ ಈ ಕವಿತೆ ಬರೆದಿದ್ದೆ.
ನಮ್ಮವರಿಗೆ ಈಗೊಳ್ಳೆ ಕಲೆಕ್ಷನ್
ಮಾಡದಿರಿ ಏಕೆಂದು ಕೊಶ್ಚನ್
ನಾವೀಗ ಮಾಡಬೇಕು ಸೆಲೆಕ್ಷನ್
ಅದೇ ವಿಧಾನಸಭೆ ಎಲೆಕ್ಷನ್
ಊರ ತುಂಬಾ ಓಡಾಡಿದವು ಕಾರು
ರಾತ್ರಿ ತುಂಬಿ ತುಳುಕಿದವು ಬಾರು
ಹೀಗೆ ಮುಂದುವರಿದ ಕಾರು ಬಾರು ಕವಿತೆ ಕೇಳಿ ಸೇರಿದ್ದ ಮಂದಿ ಸೆರೆ ಕುಡಿದಷ್ಟೇ ಖುಷಿಯಲ್ಲಿ ಚಪ್ಪಾಳೆ ಹೊಡೆದರು. ಜನತಾ ಮಾಧ್ಯಮ ಪತ್ರಿಕೆಯಲ್ಲಿ ಅನಂತರಾಜು ತಮ್ಮ ಕವಿತೆಗೆ ಚಪ್ಪಾಳೆ ಗಿಟ್ಟಿಸಿಕೊಂಡರು ಎಂದು ವಿಮರ್ಶೆಯಲ್ಲಿ ಕುಟುಕಿದರು. ಜಡೆಕವಿತೆ ಬಿಟ್ಟು ಮೋಟು ಕವಿತೆಯತ್ತ ಹೊರಳಿದೆ. ಬಿ.ವಿ. ವೈಕುಂಠರಾಜು ಅವರ ವಾರಪತ್ರಿಕೆಯಲ್ಲಿ ಸಾಕಷ್ಟು ಬರೆದೆ. ಸಂಪಾದಕರು ನನ್ನ ಹನಿಗವಿತೆಗಳಿಗೆ ಒಳ್ಳೊಳ್ಳೆಯ ವ್ಯಂಗ್ಯಚಿತ್ರಗಳನ್ನು ಬರೆಸುತ್ತಿದ್ದರು.
ಕಾಲೇಜಿನಲ್ಲಿ ಪ್ರೇಮಪತ್ರ
ಬರೆಯುತ್ತಿದ್ದ ಕಾಳಿದಾಸ
ಇದೀಗ ಮದುವೆಯಾಗಿ
ಬರೆಯುತ್ತಿದ್ದಾನೆ ದುರಂತ
ಕಥನಾ ಕಾವ್ಯ..
ಇದು ನಿಮ್ಮ ಅನುಭವ ಕಾವ್ಯವೇ ಎಂದು ಈ ಹನಿಗವನ ಓದಿದ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಳು. ಆಕೆ ಹಾಸನದ ಹೇಮಗಂಗೋತ್ರಿಯಲ್ಲಿ ಎಂ.ಎ. ಓದುತ್ತಿರುವ ವಿದ್ಯಾರ್ಥಿನಿ. ಪ್ರಾಜೆಕ್ಟ್ ವರ್ಕ್ ಗಾಗಿ ಕವಿಯೊಬ್ಬರನ್ನು ಸಂದರ್ಶನ ಮಾಡಿ ಪ್ರಶ್ನೋತ್ತರ ತಯಾರಿಸಿ ಲೇಖಕರ ಕುರಿತು 20 ಪುಟದಷ್ಟು ಮಾಹಿತಿ ಬರೆದುಕೊಂಡು ಬರುವಂತೆ ಹೇಮಗಂಗೋತ್ರಿಯ ಪ್ರಾಧ್ಯಾಪಕ ಹ್ಯಾರಾನೆ ವಸಂತಕುಮಾರ್ ಕಳಿಸಿದ್ದರು. ಇವರು ಹೇಮಾವತಿ ನದಿ ತೀರದ ಸಾಂಸ್ಕ್ರತಿಕ ಅಧ್ಯಯನ ಎಂಬ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದರು. ಇವರಿಗೆ ನಾನು ನನ್ನ ಗೊರೂರು ಹೇಮಾವತಿ ದರ್ಶನ ಪುಸ್ತಕ ಕೊಟ್ಟಿದ್ದೆನು. ನನ್ನನ್ನು ಇಂಟರ್‌ವ್ಯೂ ಮಾಡಲು ಬಂದಿದ್ದ ಹುಡುಗಿ ನಮ್ಮ ಹೇಮಾವತಿ ಪ್ರಾಜೆಕ್ಟಿನ ನೀರುಗಂಟಿ ನಿಂಗಯ್ಯನ ಮಗಳು ಮಂಗಳ. ನನಗೆ ಅವಳ ಮೊದಲನೇ ಪ್ರಶ್ನೆಗೆ ಸುಳ್ಳು ಹೇಳಲು ನಾಚಿಕೆಯಾಗಿ ಅರ್ಧಸತ್ಯ ಹೇಳಿದೆ. ‘ಇಲ್ಲಮ್ಮ ನಾನು ಕಾಲೇಜಿನಲ್ಲಿ ಓದುವಾಗ ಯಾರಿಗೂ ಪ್ರೇಮಪತ್ರ ಬರೆಯಲಿಲ್ಲ. ಆದರೆ ಕಲ್ಪನೆಯ ಕಾಳಿದಾಸ ಮಾತ್ರ ನಾನೇ. ಕಾವ್ಯ ಮಾತ್ರ ನನ್ನ ಹೆಂಡತಿ ನಾನೀಗ ಅವಳ ದಾಸ ಎಂದೆ. ಮಂಗಳ ನಕ್ಕಳು ಮಡದಿ ಶಕುಂತಲ ನಗಲಿಲ್ಲ. ಸಂದರ್ಶನ ಮುಗಿಸಿ ಮನೆಗೆ ಮಂಗಳ ಹೊರಟಾಗ ‘ತೆಗೆದುಕೋ ಮಂಗಳ, ನಿನ್ನ ಪ್ರದೇಶದ ನೆಲಜಲದ ಬಗ್ಗೆ ತಿಳಿದುಕೊಳ್ಳಲು ಈ ಗೊರೂರು ಹೇಮಾವತಿ ದರ್ಶನ ಪುಸ್ತಕ ಓದು. ಇದರಲ್ಲಿ ನನ್ನ ಪರಿಚಯವೂ ಇದೆ ನಿಧಾನವಾಗಿ ಓದಿ 20 ಪುಟ ದಾಟು ಎಂದು ಮನೆಯಿಂದ ಮಂಗಳಳನ್ನು ದಾಟಿಸಿದೆ. ಈ ಪುಸ್ತಕ ಪ್ರಕಟಿಸಿದವರು ಗೊರೂರು ಎಸ್. ಪರಮೇಶ್. ಅವರೀಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಭಯಂಕರ ಪತ್ತೇದಾರಿ ಕಾದಂಬರಿ ಬರೆದು ಪ್ರಕಟಿಸಿ ಕೈ ಸುಟ್ಟುಕೊಂಡ ಅವರು ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಗುಡ್‍ಬೈ ಹೇಳಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾರೆ. ಇರಲಿ ನನ್ನ ಹನಿಗವನ ಪ್ರಕಟಿಸಿ ಪ್ರೋತ್ಸಾಹಿಸಿದ ಉದಯವಾಣಿ ದಿನಪತ್ರಿಕೆಯನ್ನು ಮರೆಯುವಂತಿಲ್ಲ. ಬೆಂಗಳೂರು ಎಡಿಷನ್‍ನಲ್ಲಿ ಈ ಕವನಗಳು ಪ್ರಕಟಗೊಳ್ಳುತ್ತಿದ್ದವು. ನಾನು ಉದಯವಾಣಿಗೆ ಕಳಿಸುವ ಮೊದಲು ನೀರ್ನಳ್ಳಿ ಗಣಪತಿಯವರಿಗೆ ಹನಿಗವನ ಕಳಿಸುತ್ತಿದ್ದೆ. ಅವರು ಆ ಎಲ್ಲಾ ಹನಿಗವನಗಳಿಗೂ ವ್ಯಂಗ್ಯಚಿತ್ರ ಬರೆದುಕೊಡುತ್ತಿದ್ದರು.
ಎದುರು ಮನೆ ಹುಡುಗಿ
ಮೊದಲು ಹೊರಗೆ ಬರಲು
ಹೆದರದವಳು ಇತ್ತೀಚಿಗೆ
ಹೊರಗೆ ಬಾರದೆ ಒಳಗಿದ್ದಾಳೆ
ಬಹುಶ: ಹೊರಗಾಗಿರಬೇಕೆಂದು
ಊರಲ್ಲಿ ಗುಲ್ಲು!
ಈ ಹನಿಗವನ ಒಂದು ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಇದನ್ನು ಓದಿದ ನಮ್ಮ ಬೀದಿಯ ಕಾಫಿಪುಡಿ ಮಿಲ್ ಮಾಲಿಕ ಶ್ರೀನಿವಾಸ ಇದೇನು ಕವಿಗಳೇ ಹೀಗೆ ಮುಚ್ಚುಮರೆಯಿಲ್ಲದೇ ಬರೆದಿದ್ದಿರಾ? ಎಂದರು. ನನಗೂ ಇದು ಪೇಚಿನ ಪ್ರಸಂಗವೇ. ನಾನು ಈ ಹನಿಗವನವನ್ನು ಮೂರು ತಿಂಗಳು ಮೊದಲೇ ಕಲ್ಪಿಸಿ ಬರೆದು ಆ ಮಾಸಿಕಕ್ಕೆ ಕಳಿಸಿದ್ದೆ. ನನ್ನ ಗ್ರಹಚಾರಕ್ಕೆ ಈ ಹನಿಗವನ ಪ್ರಕಟವಾಗುವ ಕಾಲಕ್ಕೆ ಎದುರು ಮನೆ ಹುಡುಗಿ ಹೆಣ್ಣಾಗಿದ್ದಳು. ಕವಿತೆ ಈ ಕುರಿತಂತೆಯೇ ಇದೆ ಎಂಬುದು ಶ್ರೀನಿವಾಸರ ಕಲ್ಪನೆ. ಇಲ್ಲಾ ಸಾರ್ ಇದೊಂದು ಕಾಲ್ಪನಿಕ ಕವಿತೆ. ಅಂತೆಯೇ ಘಟನೆ ನಡೆದಿರುವುದು ಕಾಕತಾಳೀಯ ಎಂದರೂ ಶ್ರೀನಿ ನಂಬಲಿಲ್ಲ.
ಹಾಸನದ ಹಿರಿಯ ಕವಿ ಚನ್ನರು ಕಟು ವಿಮರ್ಶಕರು. ಇವರು ನನ್ನ ಬರಹವನ್ನು ಎಷ್ಟೇ ಟೀಕಿಸಿದರೂ ವೀರಪ್ಪನ್ ಭೂತ ನಾಟಕವನ್ನು ಮೆಚ್ಚಿ ಪ್ರಜಾವಾಣಿಯಲ್ಲಿ ವಿಮರ್ಶೆ ಬರೆದಿದ್ದರು. ನನ್ನ ಹನಿಗವನಗಳು ಅವರಿಗೆ ಇಷ್ಟವಾಗಿದ್ದವು. ನಗೆಮುಗುಳು ಮಾಸಿಕದಲ್ಲಿ ಈ ಚಿತ್ತಚೋರ ಕವಿತೆ ಪ್ರಕಟವಾಗಿತ್ತು.
ಎಲೈ ಶೇಷಮ್ಮ
ನಿನ್ನ ಹೃದಯದ ಬಾಗಿಲು
ತೆರೆದು ಒಳಗಿಣಿಕಿದರೆ
ಅಲ್ಲಿ ಆಗಲೇ ನನ್ನಂತಹ
ನಲ್ವತ್ತು ಹೃದಯಚೋರರಿದ್ದಾರಲ್ಲೇ!
ನಮ್ಮ ಕಲಾಭವನದ ಕುಮಾರ್ ಹಾಸನದ ಕಲಾಭವನದಲ್ಲಿ ಅಲಿಬಾಬ ಮತ್ತು ನಲ್ವತ್ತು ಮಂದಿ ಕಳ್ಳರು ನಾಟಕ ನಿರ್ದೇಶಿಸಿ ಪ್ರದರ್ಶಿಸುತ್ತಿದ್ದರು. ನಾನು ನಾಟಕಗಳ ವಿಮರ್ಶೆ ಬರೆಯುತ್ತಿದ್ದೆನಾದ್ದರಿಂದ ನನ್ನನ್ನು ನಾಟಕ ನೋಡಲು ಬರಲೇಬೇಕೆಂದು ಒತ್ತಾಯಿಸಿದ್ದರು. ಅಲ್ಲಿ ಕವಿಚೆನ್ನರು ‘ಯಾರು ಮಾರಾಯ ನಿನ್ನ ಹೃದಯ ಕದ್ದ ನಾರಿಯರು' ಎಂದರು. ಅವರು ಈ ಮೊದಲು ನನ್ನ ಇನ್ನೊಂದು ನಾಟಕ ನಾರಿ ಹೆಜ್ಜೆ ನರಿ ಕಣ್ಣು ನಾಟಕ ಕುರಿತು ವಿಮರ್ಶೆ ಬರೆದಿದ್ದರು. ಅವರು ತಮಾಷೆಗೆ ಕೇಳಿದ್ದರೂ ಅದೇ ಕಾಲಕ್ಕೆ ಕಲಾಭವನಕ್ಕೆ ಒಬ್ಬಾಕೆ ಬಂದು ‘ಏನ್ರಿ, ನನ್ನ ಮೇಲೆ ಕವನ ಬರೆದು ಅವಮಾನ ಮಾಡ್ತಿದ್ದಿರಾ. ನನ್ನ ನೋಡುವುದಕ್ಕೆ 40 ಗಂಡು ಬಂದರೂ ನಾನು ಒಪ್ಪಿಲ್ಲ ಎಂದು ತಾನೇ ನಿಮ್ಮ ಚುಟುಕಿನ ಗೂಢಾರ್ಥ! ನೀವೇನೂ ನನ್ನ ಹೃದಯ ಕದಿಯುವುದು ಬೇಡ. ನಾನೇ ನನ್ನ ಹೃದಯವನ್ನು ನಿಮಗೆ ಒಪ್ಪಿಸ್ತಿನಿ. ನನ್ನನ್ನು ಒಪ್ಪಿಕೊಂಡು ಮದುವೆಯಾಗ್ತೀರಾ.. ಎಂದಾಗ ನಾನು ಕಂಗಾಲು! ಪಾಪ ಆಕೆಯ ಹೆಸರು ಶೇಷಮ್ಮ ಅಂತೆ! ಆಗ ನಮ್ಮ ಕವಿ ಚನ್ನರು ಕವನ ಅರ್ಥವನ್ನು ಹಲಸಿನ ತೊಳೆ ಬಿಡಿಸಿದಂತೆ ಬಿಡಿಸಿ ಬಿಡಿಸಿ ಹೇಳಿ ನನ್ನನ್ನು ಅವಳ ಕಾಟದಿಂದ ತಪ್ಪಿಸಿದರು.
ಹೋದ ವರ್ಷ ನನ್ನ ಹೊಸ ಪುಸ್ತಕ ಗ್ರಾಮೀಣ ಸೊಗಡಿನ ಸಾಹಿತಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ನನ್ನ ಸಹೋದರನ ಒಂದು ಪುಸ್ತಕದ ಬಿಡುಗಡೆ ಸಮಾರಂಭವನ್ನು ಎನ್‍ಡಿಆರ್‌ಕೆ ಕಾಲೇಜಿನಲ್ಲಿ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದಿಂದ ಜಿ.ಆರ್. ಮಂಜೇಶ್ ಏರ್ಪಡಿಸಿದ್ದರು. ನನ್ನ ಪುಸ್ತಕವನ್ನು ಮಳಲಿ ವಸಂತಕುಮಾರ್ ಬಿಡುಗಡೆ ಮಾಡಿ ಮಾತನಾಡಿದರೆ ನನ್ನ ತಮ್ಮನ ಪುಸ್ತಕವನ್ನು ಕುಂ.ವೀರಭದ್ರಪ್ಪ ಬಿಡುಗಡೆ ಮಾಡಿ ಮಾತನಾಡಿದರು. ಅದಾಗಿ ಕೆಲವು ದಿನಗಳ ಮೇಲೆ ಹೇಮಾವತಿ ಪ್ರತಿಮೆ ಬಳಿ ಸಿಕ್ಕಿದ ನಮ್ಮ ಕವಿ ಚನ್ನರು ‘ಅಲ್ರಪ್ಪ, ಗೊರೂರು ಬ್ರದರ್ಸ್, ನಿಮ್ಮಗಳ ಪುಸ್ತಕ ಬಿಡುಗಡೆ ಮಾಡ್ಲಿಕ್ಕೆ ಅಷ್ಟು ದೂರದಿಂದ ಸಾಹಿತಿಗಳನ್ನು ಕಾಸು ಖರ್ಚು ಕರೆಸಿಕೊಳ್ತೀರಲ್ಲಾ, ನಾವೇನು ಅವರಿಗಿಂತ ಕಡಿಮೆ ವಿಮರ್ಶೆ ಮಾಡುತ್ತೇವೆಯೇ. ಒಟ್ಟಿನಲ್ಲಿ ನಿಮಗೆ ಹಿತ್ತಿಲ ಗಿಡ ಮದ್ದಲ್ಲ ಬಿಡಿ' ಎಂದು ಸಿಟ್ಟಿನಲ್ಲಿ ಹಿಟ್ಟಾಡಿಸಿದರು. ನಾನು ಮೌನದಿ ನನ್ನ ಹನಿಗವನ ನೆನೆದೆ.
ಬರೆದಂತೆ ನಡೆಯಲು
ಸಾಧ್ಯವಿಲ್ಲ ಏಕೆಂದರೆ
ಬರೆಯುವುದು ಕೈಯಲ್ಲಿ
ನಡೆಯುವುದು ಕಾಲಲ್ಲಿ
-ಗೊರೂರು ಅನಂತರಾಜು
ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ