ವಿಜಯಲಕ್ಷ್ಮಿ ಶಾನಭಾಗ್ ಅವರ ‘ಆವಿಯಾಗದ ಇಬ್ಬನಿ’ ಕೃತಿ ಬಿಡುಗಡೆ
ಕಾಸರಗೋಡು: ತಾತ್ತ್ವಿಕ ಆಲೋಚನೆಗಳನ್ನು ಹೊಂದಿರುವ ಚಿಂತನ ಎಂಬ ಸಾಹಿತ್ಯ ಪ್ರಕಾರವು ಕನ್ನಡದಲ್ಲಿ ವಿಪುಲವಾಗಿ ಬೆಳೆದಿದ್ದು ಆಕಾಶವಾಣಿಯು ಚಿಂತನ ಎಂಬ ತನ್ನ ಕಾರ್ಯಕ್ರಮದ ಮೂಲಕ ಈ ಪ್ರಕಾರವನ್ನು ಬೆಳೆಸಿ ಸಮೃದ್ಧಗೊಳಿಸಿದೆ ಎಂದು ಹಿರಿಯ ಕವಿ- ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಲೇಖಕಿ ವಿಜಯಲಕ್ಷ್ಮಿ ಶಾನಭಾಗ್ ಅವರ ‘ಆವಿಯಾಗದ ಇಬ್ಬನಿ’ ಎಂಬ ಚಿಂತನ ಲೇಖನಗಳ ಸಂಗ್ರಹವನ್ನು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಮಥುರಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಐಹಿಕ ಮತ್ತು ಪಾರಮಾರ್ಥಿಕ ವಿಚಾರಗಳನ್ನು ಆಳವಾದ ಚಿಂತನೆಗೆ ಒಳಪಡಿಸಿ ತನ್ನ ವೈಯಕ್ತಿಕ ಜೀವನಾನುಭವದಿಂದ ವಿಶ್ಲೇಷಿಸಿದಾಗ ಉತ್ತಮ ಚಿಂತನ ಬರಹಗಳು ಮೂಡಿ ಬರುತ್ತವೆ. ಆಕಾಶವಾಣಿಯಿಂದ ಪ್ರಸಾರವಾದ ಈ ಲೇಖನಗಳ ಜೊತೆಗೆ ಪತ್ರಿಕೆಗಳಿಗಾಗಿ ಬರೆದ ಲೇಖನಗಳನ್ನೂ ಸೇರಿಸಿ ಲೇಖಕಿ ಈ ಸಂಕಲನ ಪ್ರಕಟಿಸಿದ್ದಾರೆ ಎಂದು ಡಾ. ಪೆರ್ಲ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೇಖಕ ಅಂಶುಮಾಲಿ ಅವರು ಕೃತಿಯು ನಿತ್ಯ ಬದುಕಿಗೆ ಸಂಬಂಧಿಸಿದ ಹಲವು ಮೌಲಿಕ ವಿಚಾರಗಳನ್ನು ಸಾಹಿತ್ಯಿಕವಾಗಿ ಕಟ್ಟಿ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. ಲೇಖಕಿ - ವಿಮರ್ಶಕಿ ಕವಿತಾ ಕೂಡ್ಲು ಕೃತಿ ಪರಿಚಯ ಮಾಡಿಕೊಟ್ಟರು. ಲೇಖಕಿ ವಿಜಯಲಕ್ಷ್ಮಿ ಶಾನಭಾಗ್ ಅವರು ಲೇಖನಗಳನ್ನು ಬರೆಯಲು ಮತ್ತು ಕೃತಿ ಪ್ರಕಟಿಸಲು ಸಾಧ್ಯವಾದಆಂಶಗಳ ಕುರಿತು ಮಾತಾಡಿದರು.
ರಂಗನಿರ್ದೇಶಕ ಕಾಸರಗೋಡು ಚಿನ್ನಾ, ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ಕುಂಬಳೆಯ ವೈದ್ಯೆ ಡಾ. ಶಾರ್ವರಿ ಭಟ್ ಮೊದಲಾದವರು ಶುಭಾಶಂಸನೆಗೈದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು, ಸಾಹಿತಿಗಳು ಯುವ ತಲೆಮಾರಿನಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಬೇಕು ಎಂದು ಅವರು ಹೇಳಿದರು.
ಬಳಿಕ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಟಿ.ಎ.ಎನ್. ಖಂಡಿಗೆ, ಡಾ. ಪ್ರಮೀಳಾ ಮಾಧವ, ಡಾ. ಕಮಲಾಕ್ಷ ಕೆ., ಕೊಳಚಪ್ಪೆ ಗೋವಿಂದ ಭಟ್ ಮೊದಲಾದವರು ಭಾಗವಹಿಸಿದರು.
ವಿದುಷಿ ರಾಧಾ ಮುರಳೀಧರ್ ಪ್ರಾರ್ಥನೆ ಹಾಡಿದರು. ಲೇಖಕರ ಸಂಘದ ಕಾರ್ಯಾಧ್ಯಕ್ಷ ಪಿ. ಎನ್. ಮೂಡಿತ್ತಾಯ ಸ್ವಾಗತಿಸಿದರು. ಜತೆಕಾರ್ಯದರ್ಶಿ ವಿಶಾಲಾಕ್ಷ ಪುತ್ರಕ್ಕಳ ಧನ್ಯವಾದ ಸಮರ್ಪಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ