ಧರ್ಮಸ್ಥಳ: ಹಿರಿಯ ಸಾಹಿತಿ ಹಾಗೂ ತಜ್ಞ ಕಲಾವಿದರಾದ ಅಂಬಾತನಯ ಮುದ್ರಾಡಿ ಅವರ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಮುದ್ರಾಡಿಯವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದು ನಮ್ಮಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
2018ರ ಜುಲೈ 17 ರಂದು ಧರ್ಮಸ್ಥಳದಲ್ಲಿ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಉತ್ತಮ ಸಂದೇಶ ನೀಡಿದ್ದರು. ನಾವು ಪ್ರತಿ ವರ್ಷ ಧರ್ಮಸ್ಥಳದಲ್ಲಿ ಆಯೋಜಿಸುವ ಭಜನಾ ತರಬೇತಿ ಕಮ್ಮಟ, ಮದ್ಯವರ್ಜನ ಶಿಬಿರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆಯುವ ಕೃಷಿಮೇಳ ಮೊದಲಾದ ಸಮಾರಂಭಗಳಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ.
ಉತ್ತಮ ವಾಗ್ಮಿಯಾಗಿ, ಸಾಹಿತಿಯಾಗಿ, ಹವ್ಯಾಸಿ ಯಕ್ಷಗಾನ ಹಾಗೂ ಹರಿಕಥಾ ಕಲಾವಿದರಾಗಿ ಸಂಘಟಕರಾಗಿ, ಸಹೃದಯ ಲೇಖಕರಾಗಿ ಅವರು ಚಿರಪರಿಚಿತರು. ಅವರ ಸರಳ ವ್ಯಕ್ತಿತ್ವ, ನೇರ ನಡೆ-ನುಡಿ, ವೈಚಾರಿಕ ಚಿಂತನಾ ಲಹರಿಗಳು ಸ್ತುತ್ಯರ್ಹವಾಗಿವೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನುಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ