ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ: ಕನ್ನಡ ರಾಜ್ಯೋತ್ಸವ ಆಚರಣೆ

Upayuktha
0

ಪುತ್ತೂರು: ‘ಭಾಷೆ ಬರೀ ಭಾಷೆ ಅಲ್ಲ; ಅದರಲ್ಲಿದೆ ನಮ್ಮ ಸಂಸ್ಕೃತಿ, ಜೀವನ ಪರಿಚಯ’. ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಇಮ್ಮಡಿ ಪುಲಿಕೇಶಿ ರಾಷ್ಟ್ರಕೂಟರ ಕಾಲದಲ್ಲಿ ಅಖಂಡ ಕರ್ನಾಟಕವಿತ್ತು. ನಮ್ಮ ನಾಡಿನ ಚರಿತ್ರೆಯನ್ನು ನೋಡಿದಾಗ ನಮ್ಮ ಹಿರಿಯರ ನೆನಪಾಗಬೇಕು. ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆದರೂ ನಿಮ್ಮ ಮನೆ, ಮನಸ್ಸು, ಭಾವಕೋಶದಲ್ಲಿ ಕನ್ನಡವಿರಲಿ. ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬದುಕು, ಸಂಸ್ಕೃತಿ, ಜೀವನ ವಿಧಾನ ತಿಳಿಸುವುದು ಪುಸ್ತಕ ಮಾತ್ರ. ಆದುದರಿಂದ ಪುಸ್ತಕ ಓದಿ. ‘ಕವಿರಾಜಮಾರ್ಗ’ದಂತಹ ಕೃತಿ ಇಡೀ ಪ್ರಪಂಚದಲ್ಲೇ ಸಿಗದು. ಅದೊಂದು ಅಲಂಕಾರ ಗ್ರಂಥ, ಛಂದೋಗ್ರಂಥ ಸಾಹಿತ್ಯ ಗ್ರಂಥ. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ಕನ್ನಡ ನಾಡಿನ ಹಿರಿಮೆ ಅಪಾರ. ಎಲ್ಲೆಲ್ಲಿ ಕನ್ನಡ ಬಳಸಲು ಸಾಧ್ಯವೋ ಅಲ್ಲಿ ಕನ್ನಡ ಬಳಸಿ. ತಂತ್ರಜ್ಞಾನ ಆಧಾರಿತ ಕನ್ನಡ ಬಳಸಿ ಇತರರಿಗೆ ಪ್ರೇರಣೆ ಕೊಡಿ ಎಂದು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಎಚ್ ಜಿ ಹೇಳಿದರು.


ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು, ನುಡಿಯ ಮಹತ್ವವನ್ನು ತಿಳಿಸಿದರು.


ಆಂಗ್ಲ ಭಾಷೆ ಮಾತನಾಡುವಾಗ ಯಾರೂ ಕನ್ನಡ ಪದ ಬಳಸುವುದಿಲ್ಲ. ಆದರೆ ಕನ್ನಡ ಮಾತಾಡುವಾಗ ಅದೆಷ್ಟು ಆಂಗ್ಲ ಭಾಷಾ ಶಬ್ದ ಬಳಸುತ್ತೇವೆ. ಶುದ್ಧ ಕನ್ನಡದ ಬಗ್ಗೆ ಜಾಗೃತಿ ಇರಲಿ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿದಾಗ ಮಾತ್ರ ಈ ದಿನದ ರಾಜ್ಯೋತ್ಸವ ಸಾರ್ಥಕವಾದೀತು ಎಂದು ಕಾರ್ಯಕ್ರಮದ ಅಧ್ಯಕ್ಷರಾದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ವಿದ್ಯಾರ್ಥಿಗಳಲ್ಲಿ ಶುದ್ಧ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಿದರು.


ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಶೆಟ್ಟಿಯವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕನ್ನಡ ಉಪನ್ಯಾಸಕ ಸತೀಶ ಇರ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


ಪುಷ್ಪ ಸಮರ್ಪಣೆಯೊಂದಿಗೆ ಕರ್ನಾಟಕ ಮಾತೆಗೆ ನಮನ ಸಲ್ಲಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಕವನ ರಚನೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ ಹಾಗೂ ಕನ್ನಡದಲ್ಲಿ ಅಭಿಮಾನ ಮೂಡಿಸುವ ಹಾಡುಗಳನ್ನು ವಿದ್ಯಾರ್ಥಿಗಳು ಸುಮಧುರ ಕಂಠದಿಂದ ಹಾಡಿದರು.


ವಿದ್ಯಾರ್ಥಿನಿ ಅಪೂರ್ವ ರಾವ್ ವಂದಿಸಿದರು ಹಾಗೂ ವಿಧಾತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ, ಸಹನ, ಶರಧಿ, ಮಂಗಲ ದೀಪ್ತಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಜನನಿ ಎಲ್ಲರನ್ನೂ ಸ್ವಾಗತಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top