ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Upayuktha
0

ದೀರ್ಘಕಾಲಿಕ ಇತಿಹಾಸವಿರುವ ಶಾಸ್ತ್ರೀಯ ಭಾಷೆ ಕನ್ನಡ : ಜಯಂತಿ ಪಿ.


ಪುತ್ತೂರು: ಸುಮಾರು 2,000ದಷ್ಟು ವರ್ಷಗಳ ಇತಿಹಾಸವಿರುವ ಶಾಸ್ತ್ರೀಯ ಭಾಷೆ ಕನ್ನಡ. ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ವಿಚಾರವಾಗಿದೆ. ಕನ್ನಡ ನಾಡು ಅದೆಷ್ಟೋ ಮಂದಿ ಸುಭಟರು, ಕವಿಹೃದಯಿಗಳು ಹಾಗೂ ಒಳ್ಳೆಯ ರಾಜ ಮಹಾರಾಜರುಗಳಿಗೆ ಜನ್ಮ ನೀಡಿದೆ. ಅಂತೆಯೇ ಹಿಂದೂ ಪುನರುತ್ಥಾನ ಮಾಡಿದ ವಿದ್ಯಾರಣ್ಯರು ಕೂಡ ಈ ಮಣ್ಣಿನಲ್ಲಿ ಜನಿಸಿದ್ದಾರೆ. ಪಂಪ, ರನ್ನ, ಪೊನ್ನ ಅತ್ಯಂತ ಶ್ರೇಷ್ಠ ಕವಿ ಪುಂಗವರು ಹುಟ್ಟಿದ ನಾಡು ನಮ್ಮದು ಎಂದು ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ ಹೇಳಿದರು.


ಅವರು ನಗರದ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇಯಲ್ಲಿ ನವೆಂಬರ್ 1ರಂದು ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ವಿಭಜನೆಯಾಗಿದ್ದ ಕನ್ನಡನಾಡಿನ ಒಗ್ಗೂಡುವಿಕೆಯ ಕನಸು ಕಂಡ ರಾ.ಹ ದೇಶಪಾಂಡೆಯವರು ವಿದ್ಯಾವರ್ಧಕ ಸಂಘ ಸ್ಥಾಪಿಸಿ 19ನೇ ಶತಮಾನದಲ್ಲಿ ಭಾಷಾವಾರು ಪ್ರಾಂತ್ಯವನ್ನು ವಿಭಾಗಿಸಿ ಕನ್ನಡ ನಾಡು ಒಗ್ಗೂಡಿಸುವಲ್ಲಿ ಕೈಜೋಡಿಸಿದರು. ಹಾಗೆಯೇ ಆಲೂರು ವೆಂಕಟರಾಯರು ಬೆಳಗಾವಿ ಸಭೆಯಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ಹಾಡು ಹಾಡಿ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಏಕೀಕರಣ ಚಳುವಳಿಗೆ ಕೈಜೋಡಿಸಿದರು. ಇದರ ಪರಿಣಾಮವಾಗಿ 1956 ನವೆಂಬರ್ 1 ರಂದು ಮೈಸೂರು ಎಂಬ ಹೊಸ ನಾಡು ಉದಯವಾಯಿತು. ಇದು 1973 ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣಗೊಂಡಿತು. ಹೀಗೆ ಏಕೀಕರಣದ ಹೋರಾಟ 75 ವರ್ಷಕ್ಕಿಂತ ಮಿಗಿಲಾದದು ಎಂದು ಕರ್ನಾಟಕ ಏಕೀಕರಣದ ಕುರಿತು ಮಾಹಿತಿಯನ್ನು ನೀಡಿದರು.


ಕನ್ನಡವು ಒಂದು ವೈಜ್ಞಾನಿಕವಾದ ಭಾಷೆಯಾಗಿದೆ. ಈ ಸುಂದರವಾದ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬನೂ ಕೂಡ ಮನೆಯಲ್ಲಾದರೂ ಕನ್ನಡ ಬಳಕೆ ಮಾಡುವುದರ ಜೊತೆ ಜೊತೆಗೆ ಕನ್ನಡದ ಪುಸ್ತಕಗಳನ್ನು ಓದುವ ಸಂಕಲ್ಪ ಮಾಡಬೇಕು. ಅಷ್ಟೇ ಅಲ್ಲದೆ ಯುವ ಬರಹಗಾರರಿಗೆ ಪ್ರೋತ್ಸಾಹ ಮತ್ತು ಅವಕಾಶ ನೀಡಬೇಕು. ಅಲ್ಪ ಮಾನವನಾಗದೆ ನಾವು ವಿಶ್ವಮಾನವನಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟೋಜ ಮಾತನಾಡಿ ಕ್ಷಣ ಕ್ಷಣಕ್ಕೂ ಟಿವಿ ವಾಹಿನಿಗಳಲ್ಲಿ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ. ಇಂದು ರೇಡಿಯೋ, ಟಿ.ವಿ ವಾಹಿನಿಗಳಲ್ಲಿ ಇಂಗ್ಲಿಷ್ ಮಿಶ್ರಿತ ಕನ್ನಡವೇ ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ ಸ್ಪಷ್ಟ ಕನ್ನಡ ಮಾತನಾಡುತ್ತೇವೆ ಎಂಬ ದೃಢ ಸಂಕಲ್ಪ ನಮ್ಮದಾಗಬೇಕು. ಈ ರೀತಿಯಾಗಿ ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಹಾಗಾದರೆ ಮಾತ್ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಒಳ್ಳೆ ಸಂದೇಶ ಮೂಡಿಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟೋಜ, ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ತನ್ವಿಶ್ ಸ್ವಾಗತಿಸಿ, ರಿಶ್ವಿತ್ ವಂದಿಸಿದರು. ವಿದ್ಯಾರ್ಥಿ ಈಶಾನ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕೇತರ ವೃಂದ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top