ನಿಟ್ಟೆ: ಕನ್ನಡ ಭಾಷೆ ಪ್ರಾಂತ್ಯಕ್ಕೆ ಅನುಸಾರವಾಗಿ ವೈವಿಧ್ಯತೆ ಹೊಂದಿದೆ. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನದಲ್ಲಿ ಕನ್ನಡ ಭಾಷೆ ಇಂದಿಗೂ ಸ್ಪಷ್ಟ, ಸ್ವಚ್ಛಂದವಾಗಿ ಆಂಗ್ಲಪದ ಬಳಕೆಯಾಗದೆ ಉಳಿದು ಬೆಳೆದು ಬಂದಿರುವುದು ಹೆಮ್ಮೆಯ ವಿಚಾರ ಎಂದು ಸಾಹಿತಿ ಕದ್ರಿ ನವನೀತ್ ಶೆಟ್ಟಿ ಹೇಳಿದರು.
ಮಂಗಳವಾರ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಗ್ಲಾಸ್ ಹೌಸ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಎಲ್ಲ ಭಾಷಿಗರಿದ್ದರೂ ಕನ್ನಡ ಭಾಷೆಗೆ ಹೆಚ್ಚಿನ ಮಹತ್ವ ಇದೆ. ರಾಜ್ಯೋತ್ಸವದ ಶುಭ ಸಂದರ್ಭ ಭಾಷೆಯ ಜತೆಗೆ ನಮ್ಮ ಕರುನಾಡು, ತುಳುನಾಡಿನ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಆಗಬೇಕಿದೆ. ಕನ್ನಡದ ಅಸ್ಮಿತೆ, ಭಾರತೀಯತೆ, ನಮ್ಮ ಮಾತೃಭಾಷೆಯ ಸಂರಕ್ಷಣೆಯೊಂದಿಗೆ ಮುನ್ನಡೆಯೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ನಿಟ್ಟೆ ವಿವಿಯು ಕನ್ನಡದ ಅಭಿವೃದ್ಧಿಗಾಗಿ ಅನೇಕ ಕನ್ನಡ ಕಾರ್ಯಕ್ರಮ, ಯೋಜನೆ ಜಾರಿಗೆ ತಂದಿದೆ. ಕನ್ನಡ ಕಲಿಯುವ ಕಾರ್ಯಕ್ರಮದ ಜತೆಗೆ, ಕನ್ನಡದ ಸರ್ಟಿಫಿಕೆಟ್ ಕೋರ್ಸ್ ಆರಂಭಿಸಲಾಗಿದ್ದು, ಅನುವಾದದ ಕೆಲಸಗಳು ನಡೆಯುತ್ತಿದೆ ಎಂದರು.
ನಿಟ್ಟೆ ವಿವಿಯ ಪ್ರೊ.ಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷ ಡಾ.ಸುಮಲತಾ ಶೆಟ್ಟಿ, ಡೆಂಟಲ್ ಕಾಲೇಜು ಡೀನ್ ಡಾ.ಮಿತ್ರಾ ಹೆಗ್ಡೆ, ಡಾ. ಶ್ರೀಪಾದ ಮೆಹಂದಳೆ, ಪ್ರೊ.ಆನಂದ ಬಂಗೇರ, ಕನ್ನಡ ವಿಭಾಗದ ಡಾ.ಸಾಯಿಗೀತಾ, ಪ್ರೊ.ಪ್ರವೀಣ್ ಶೆಟ್ಟಿ, ರಾಜೇಶ್, ಡಾ.ಸತೀಶ್ ರಾವ್, ಅನಿಲ್, ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.
ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಶಶಿಕುಮಾರ್ ಶೆಟ್ಟಿ ವಂದಿಸಿದರು. ಕೆ.ಕೆ. ಯಶೋದಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ