
ಈಗಾಗಲೇ ಒಂದನೇ ಭಾಗದಲ್ಲಿ ಕುಂಬಳೆ ಸೀಮೆಯಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬಂದ ಮಿಲಿಟರೀ ಬ್ಲೋಕಿನ ಬಗ್ಗೆ ಬರೆದಿದ್ದೇನೆ. ಹಾಗೆಯೇ ನನ್ನ ತಂದೆಯವರಿಗೆ ಕಲೆಕ್ಟರ್ ಅವರು ಕೊಟ್ಟ ವಿಶೇಷ ಅಧಿಕಾರದ ಬಗ್ಗೆಯೂ ಬರೆದಿದ್ದೇನೆ.
ಇನ್ನು ಅನಂತಪುರ ಕ್ಷೇತ್ರದ ಅಪರೂಪದ ಮೊಸಳೆ ಒಂದನೇ ಬಬಿಯನ ಬಗ್ಗೆಯೇ ಇಂದಿನ ಲೇಖನ
*ಅನಂತಪುರ ಕ್ಷೇತ್ರದ ಇತಿಹಾಸದ ವಿಶೇಷತೆಯಲ್ಲಿ ಒಂದನೇ ಬಬಿಯನಿಗೆ ಪ್ರತ್ಯೇಕವಾದ ಸ್ಥಾನವಿದೆ. ಒಂದನೇ ಬಬಿಯನ ಮೊದಲೂ ಈ ಕ್ಷೇತ್ರದಲ್ಲಿ ಏಕೈಕವಾಗಿ ಮೊಸಳೆ ಇರುತ್ತಿತ್ತಂತೆ. ಅದರ ಬಗ್ಗೆಯೂ ಕತೆ ಇದೆ. ಅದನ್ನು ತಿಳಿಸುತ್ತೇನೆ. ಆದರೆ ಈ "ಬಬಿಯ" ನಾಮಾಕಿಂತ ಮೊಸಳೆಯಷ್ಟು ಯಾವುದೂ ಪ್ರಸಿದ್ಧಿ ಪಡೆದಿಲ್ಲ; ಅಥವಾ ಚರಿತ್ರೆಯಾಳದಲ್ಲಿ ಆ ಕತೆಗಳು ಹುದುಗಿ ಹೋಗಿರ ಬಹುದು. ನನಗೆ ಹಿರಿಯವರಿಂದ ತಿಳಿದ ಕತೆಯನ್ನಷ್ಟೇ ನಾನು ಹೇಳುತ್ತೇನೆ. ವ್ಯತ್ಯಸ್ಥ ಕತೆಗಳು ಧಾರಾಳ ಇರಲೂ ಸಾಕು. ಅದರ ಬಗ್ಗೆ ನನಗೆ ತಿಳಿದಿಲ್ಲ.
ನೀವೆಲ್ಲಾ ತಿಳಿದಂತೆ ಅನಂತ ಪದ್ಮನಾಭನ ನಿತ್ಯಪೂಜೆ ಯನ್ನು ನಿಷ್ಟೆಯಿಂದ ಮಾಡುತ್ತಿದ್ದವರು ಬಿಲ್ವಮಂಗಲ ಸ್ವಾಮಿಗಳು. ಅವರನ್ನು ಪರೀಕ್ಷಿಸಲು ಭಗವಂತ ಚಿಕ್ಕ ಮಗುವಿನ ರೂಪದಲ್ಲಿ ಬಂದು ತುಂಟಾಟವಾಡುತ್ತಿದ್ಧುದು ಸಾಮಾನ್ಯವಾಗಿತ್ತು. ಇದು ಎಲ್ಲರೂ ತಿಳಿದ ಕತೆ. ಚರಿತ್ರೆಗಳು ಸೃಷ್ಟಿಯಾಗ ಬೇಕಿದ್ದರೆ ಪುರಾಣಗಳು ನಡೆಯ ಬೇಕಿದ್ದರೆ ಅದಕ್ಕೆಲ್ಲಾ ಒಂದು ಕಾರಣ ಇರಲೇ ಬೇಕಂತೆ. ಭಗವಂತ ಏನು ನಡೆಯಬೇಕೋ ಅದನ್ನು ನಡೆಸಲು ತನ್ನ ಆಟ ನಡೆಸಿಯೇ ನಡೆಸುತ್ತಾನೆ ಎಂಬ ನಂಬಿಕೆ ನಮ್ಮದು. ಮುಂದೆ ನಡೆದುದು ಅದುವೆ. ಹೊಸ ಸೃಷ್ಟಿ ಪ್ರಪಂಚಕ್ಕೆ ಅದ್ಭುತವೆನ್ನಿಸುವಂತಹಾ ದೇವಾಲಯದ ಸೃಷ್ಟಿ. ಹೊಸ ಚರಿತ್ರೆ ತಿರುವನಂತಪುರವೆಂಬ ಮಹಾರಾಜ್ಯದಲ್ಲಿಯೇ ಹೊಸ ಚರಿತ್ರೆಯ ಅಧ್ಯಾಯ ತೊಡಗಿದ್ಧು. ಈ ಕತೆ ನಡೆದುದೇ ಅದಕ್ಕಾಗಿ; ಇಲ್ಲಿ ಬಿಲ್ವ ಮಂಗಲ ಸ್ವಾಮಿಗಳೋ ನಿಮಿತ್ತ ಮಾತ್ರ. ಅವರೆಲ್ಲಾ ಭಗವಂತನ ಆಟದ ದಾಳಗಳು.
ಬಿಲ್ವಮಂಗಲಸ್ವಾಮಿಗಳು ಒಂದು ದಿನ ಪೂಜಾ ಜವಾಬ್ಧಾರಿಯಲ್ಲಿ ಇದ್ದರೂ ಅನಾಸಕ್ತರಾಗಿ ಪೂಜೆಗೆ ಹೂ ಹಾಗು ಪರಿಕರಗಳನ್ನು ಜೋಡಿಸುತ್ತಾ ಇದ್ದಾಗ ದಿನದಂತೆ ಬಂದ ಪುಟ್ಟ ಹುಡುಗ ತಂಟೆ ಮಾಡಲು ಸುರುಮಾಡುತ್ತಾನೆ. ಅನಾಸಕ್ತರಾಗಿದ್ದ ಬಿಲ್ವಮಂಗಲ ಸ್ವಾಮಿಗೆ ಭಗವಂತ ತನ್ನನ್ನು ಪರೀಕ್ಷಿಸುತ್ತಿದ್ದಾನೆಂಬ ಅರಿವಿದ್ದರೂ ಆ ಸಮಯಕ್ಕೆ ಮರೆವು ಕಾಡಿತ್ತು. ಅನಾಸಕ್ತಿಯ ಪ್ರಭಾವವೂ ಸೇರಿ ಬಾಲಕನನ್ನು ಜೋರು ಮಾಡುತ್ತಾ ತನ್ನ ಹಿಂಗೈಯಿಂದ (ಅಂಗೈಯ್ಯ ಹಿಂಬದಿ) ಬಾಲಕನಿಗೆ ಹೊಡೆಯುತ್ತಾರೆ. ಹಿಂಗೈಯಲ್ಲಿ ಹೊಡೆಯುವುದು ತನಗೆ ಎಂದೆಂದೂ ಬೇಡದ ವಸ್ತುವಿಗೆ ಮಾತ್ರ ಎಂಬ ಭಾವನೆ ಇದೆ. ಇದರಿಂದಲೇ ತನ್ನ ಶತ್ರುವಿಗೆ ಹೊರತು ಯಾರಿಗೂ ಹಿಂಗೈಯಿಂದ ಹೊಡೆಯಬಾರದು ಎನ್ನುತ್ತಾರೆ. ಹಿಂಗೈಯ್ಯ ಹೊಡೆತದಿಂದ ಸಿಟ್ಟುಗೊಂಡ ಬಾಲಕ ಇನ್ನು ನನ್ನನ್ನು ಕಾಣಬೇಕಿದ್ದರೆ "ತಿರು ಅನಂತಪುರಕ್ಕೆ" ಬಾ (ಇಲ್ಲಿ ಬಾಲಕ ಹೇಳಿದ ಶಬ್ಧ; ವಾಕ್ಯಗಳ ಬಗ್ಗೆ ವೈರುಧ್ಯಗಳಿವೆ. ಆದರೂ ಹೇಳಿದುದು ಅದೇ ಸ್ಥಳದ ಬಗ್ಗೆ.) ಎಂದು ಕೆಳಗೆ ಇಳಿದು (ಈಗಲೂ ಆ ಸುರಂಗ ಮಾರ್ಗ ಕಾಣ ಬಹುದಾದರೂ ಅದರ ಒಳಗೆ ಹೋಗಲು ನಿರ್ಭಂಧವಿದೆ. ಅದನ್ನು ಗೇಟು ಹಾಕಿ ಮುಚ್ಚಿರುತ್ತಾರೆ. ಈ ಲೇಖಕ ಆ ಸುರಂಗದೊಳಗೆ ತೆವಳಿ ಹೋಗಲು ಸಾಧ್ಯ ಇರುವಷ್ಟು ದೂರದವರೆಗೂ ಹೋಗಿರುತ್ತಾನೆ) ಬಲಬದಿಗೆ ಕಾಣುವ ಸುರಂಗದ ಮೂಲಕ ಹೋಗುತ್ತಾನೆ.
ಕ್ಷಮೆ ಕೇಳುತ್ತಾ ಬಾಲಕನನ್ನು ಹಿಂಬಾಲಿಸಿದ ಬಿಲ್ವಮಂಗಲ ಸ್ವಾಮಿಗೆ ಆ ಸುರಂಗ ಮಾರ್ಗ ಸಮುದ್ರಕ್ಕೆ ತಲಪಿದಾಗ ಮುಂದೆ ಹೋಗಲಾರದೆ ಬಾಲಕನನ್ನು ಪರಿ ಪರಿಯಿಂದ ನನ್ನನ್ನು ಬಿಟ್ಟು ಹೋಗ ಬೇಡ ಎಂದು ಬೇಡಿಕೊಳ್ಳುತ್ತಾರೆ.
ಆಗ ಬಾಲಕ ತನ್ನನ್ನು ಕಾಣ ಬೇಕಿದ್ದರೆ ಎಲ್ಲಿಗೆ ಹೇಗೆ ಬರ ಬೇಕೆಂಬ ಬಗ್ಗೆ ವಿವರ ಕೊಡುತ್ತಾನೆ. ಮುಂದಿನ ಕತೆ ತಿರುವನಂತಪುರದ ಅನಂತ ಪದ್ಮನಾಭಸ್ವಾಮೀ ದೇವಾಲಯದ ಚರಿತ್ರೆಗೆ ಸೇರಿ ಹೋಗುತ್ತದೆ. ಆದ್ದರಿಂದ ಅದನು ಅಲ್ಲಿಗೇ ಬಿಟ್ಟು ಇಲ್ಲಿಯ ಕತೆಯನ್ನು ಮಾತ್ರ ಮುಂದುವರಿಸೋಣ.
ಇದನ್ನೂ ಓದಿ: ಕುಂಬಳೆ: ಅನಂತಪುರ ಸರೋವರ ಕ್ಷೇತ್ರದ ದೇವರ ಮೊಸಳೆ ಬಬಿಯಾ ಇನ್ನಿಲ್ಲ
ತನ್ನನ್ನು ಬಿಟ್ಟು ಸಮುದ್ರದಲ್ಲಿ ಸರಾಗವಾಗಿ ನಡೆದು ಹೋಗುತ್ತಿದ್ದ ಬಾಲಕನನ್ನು ಮಾತಿನಲ್ಲೇ ತಡೆದ ಬಿಲ್ವಮಂಗಲ ಸ್ವಾಮಿಗಳು ನಿನ್ನನ್ನು ಪೂಜಿಸಿ ನಿನ್ನ ಪಾದ ಸ್ಪರ್ಶ ಪಡೆದ ಈ ಭೂಮಿಯನ್ನು ಬರಡಾಗಿಸಿ ಈ ರೀತಿ ಹೋಗುವುದು ನ್ಯಾಯವೇ? ಎಂದು ಕೇಳುತ್ತಾರೆ. ಆಗ ಆ ಬಾಲಕ ನಿನ್ನ ಕೇಳಿಕೆ ಭಕ್ತಿಗಳೆರಡೂ ನನಗೆ ಮೆಚ್ಚಿಗೆಯಾಗಿದೆ. ಈ ಕ್ಷೇತ್ರದ ಶಕ್ತಿ ನಾಶವಾಗದಂತೆಯೂ ಕ್ಷೇತ್ರ ಬರಡಾಗದಂತೆಯೂ ನನ್ನ ಶಕ್ತಿಯ ಒಂದಂಶವನ್ನು ಮೊಸಳೆಯ ರೂಪದಲ್ಲಿ ನೀನು ಪೂಜಿಸುವ ಕ್ಷೇತ್ರಕ್ಕೆ ಸಮುದ್ರದ ಮೂಲಕ ಕಳುಹಿಸುತ್ತೇನೆ. ಹಾಗೆಯೇ ಇಲ್ಲಿಯ ಪೂಜಾ ಮೂರ್ತಿಯಲ್ಲೂ ನನ್ನ ಒಂದಂಶವನ್ನು ಇರಿಸುತ್ತೇನೆ ಎಂದು ಹೇಳುತ್ತಾನೆ. ನನ್ನ ಪೂಜಾದಿಗಳನ್ನು ನಡೆಸುವುದರೊಂದಿಗೆ ಆ ಮೊಸಳೆಯನ್ನು ನನ್ನದೇ ಶಕ್ತಿಯ ಸ್ವರೂಪ ಎಂದು ತಿಳಿದು ಅದಕ್ಕೆ ನೈವೇಧ್ಯವನ್ನು ಸಮರ್ಪಿಸಿ ಎಂದು ಹೇಳಿ ಸಮುದ್ರದ ನಡುವೆ ಅಂತರ್ಧಾನನಾಗುತ್ತಾನೆ.
ಮರುದಿನದಿಂದಲೇ ಶ್ರೀಕ್ಷೇತ್ರದ ಕೆರೆಯಲ್ಲಿ ಮೊಸಳೆಯೊಂದು ಕಾಣಸಿಗುತ್ತದೆ. ಅಲ್ಲೆಲ್ಲೂ ಮೊಸಳೆ ಇರುವ ಪ್ರದೇಶವೇ ಇಲ್ಲದಿರುವಾಗ ಏಕೈಕ ಮೊಸಳೆಯೊಂದು ದೇವಸ್ಥಾನದ ಮೆಟ್ಟಲುಗಳ ಮೇಲೆ ತಲೆ ಇಟ್ಟು ಮಲಗಿರುವುದು ಪೂಜೆ ಮುಗಿಸಿ ಹೊರಬಂದ ಬಿಲ್ವಮಂಗಲ ಸ್ವಾಮಿಗಳಿಗೆ ಕಾಣಸಿಗುತ್ತದೆ.
ಕೂಡಲೇ ಕೈಯ್ಯಲ್ಲಿದ್ದ ನೈವೇಧ್ಯವನ್ನು ಪಾತ್ರೆಸಮೇತ ಮೊಸಳೆಯ ಎದುರಿಟ್ಟು ಭಗವಂತಾ ನಿನ್ನ ಅಪ್ಪಣೆಯಂತೆ ನೈವೇಧ್ಯ ಸಮರ್ಪಿಸಿದ್ದೇನೆ ಸ್ವೀಕರಿಸು ಎನ್ನುತ್ತಾರೆ. ನೈವೇಧ್ಯವನ್ನು ಪಾತ್ರೆ ಸಮೇತ ಮೊಸಳೆ ಕೊಂಡು ಹೋಗುತ್ತದೆ. ಯಾವುದೇ ಚಿಂತೆ ಮಾಡದೆ ಬಿಲ್ವಮಂಗಲ ಸ್ವಾಮಿಗಳು ಹಿಂದಿರುಗುತ್ತಾರೆ.
ಮರುದಿನ ಬೆಳಗ್ಗೆ ಪೂಜೆಗಾಗಿ ಬಂದ ಬಿಲ್ವಮಂಗಲ ಸ್ವಾಮಿಗಳಿಗೆ ಆಶ್ಚರ್ಯ ಕಾದಿರುತ್ತದೆ. ಸಂಪೂರ್ಣ ಶುದ್ಧವಾಗಿ ತೊಳೆದಿಟ್ಟ ನೈವೇಧ್ಯದ ಪಾತ್ರೆ ದೇವಸ್ಥಾನದ ಮೆಟ್ಟಲಿನಲ್ಲಿ ಕಾಣುತ್ತದೆ. "ಭಗವಂತಾ ಏನಪ್ಪಾ ನಿನ್ನ ಮಹಿಮೆ" ಎನ್ನುತ್ತಾ ಪೂಜಾಕಾರ್ಯಗಳನ್ನು ಮುಗಿಸಿ ಬಂದ ಬಿಲ್ವಮಂಗಲ ಸ್ವಾಮಿಗಳಿಗೆ ಅಂದೂ ದೇವಸ್ಥಾನದ ಮೆಟ್ಟಲುಗಳ ಮೇಲೆ ತಲೆ ಇರಿಸಿ ಕಾಯುತ್ತಿದ್ದ ಮೊಸಳೆಯನ್ನು ಕಂಡಾಗ ಹಿಂದಿನ ದಿನದಂತೆಯೇ ಪಾತ್ರೆ ಸಮೇತ ನೈವೇಧ್ಯವನ್ನು ಇರಿಸುತ್ತಾರೆ. ಮುಂದೆ ಇದೇ ಕ್ರಿಯೆ ಪುನರಾವರ್ತನೆಯಾಗುತ್ತಾ ಹೋಗುತ್ತದೆ. ಅದರ ನಂತರ ಎಷ್ಟು ಮೊಸಳೆಗಳು ಬಂದು ಹೋದುವೋ ಆ ಪದ್ಮನಾಭ ಸ್ವಾಮಿಗೇ ಗೊತ್ತು.
ಅನಂತಪುರದಲ್ಲಿ ಪೂಜಾ ವ್ಯವಸ್ಥೆಗಳು ಸರಿಯಾಗಿ ನಡೆಯದೆ ಇರುವುದು ತಿಳಿದ ಕುಂಬಳೆಯ ಅರಸರು ಅಲ್ಲಿಯ ಪೂಜಾ ವ್ಯವಸ್ಥೆಯನ್ನು ತಾವೇ ನಡೆಸುವ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಎಷ್ಟೇ ಪೂಜಾದಿ ಕಾರ್ಯಗಳಲ್ಲಿ ನ್ಯೂನ್ಯತೆ ಬಂದರೂ ದೇವಸ್ಥಾನದ ಸರೋವರದಲ್ಲಿ ಮೊಸಳೆಯೊಂದು ಒಂದಾಗಿಯೇ ಇರುವುದು ಮಾತ್ರ ತಪ್ಪಿರಲಿಲ್ಲ. ಹಾಗೆಯೇ ನೈವೇಧ್ಯದ ಅನ್ನವನ್ನು ಮೊಸಳೆಗೆ ಕೊಡುವ ವ್ಯವಸ್ಥೆಯೂ ನಿಂತಿರಲಿಲ್ಲ. ಆದರೆ ಈ ಮೊಸಳೆಗೆ ನೈವೇಧ್ಯವನ್ನು ನೈವೇಧ್ಯ ಪಾತ್ರೆಯಲ್ಲೇ ಕೊಡುವ ಕ್ರಮ ಮಾತ್ರ ನಿಂತೇ ಹೋಗಿತ್ತು. ಒಮ್ಮೆ ಪಾತ್ರೆ ಕೊಂಡುಹೋದ ಮೊಸಳೆ ಪಾತ್ರೆ ಹಿಂದಿರುಗಿಸಲಿಲ್ಲ ಇದರಿಂದಾಗಿ ಈ ಕ್ರಮ ನಿಂತುದು ಎಂದರೆ ಈ ಕಾರಣ ಹೇಳಿ ದೇವಸ್ಥಾನದ ಪರಿಚಾರಕರು ಅತ್ಯಂತ ಬೆಲೆಬಾಳುವ ನೈವೇಧ್ಯ ಪಾತ್ರೆಯನ್ನು ಅಪಹರಿಸಿದರೆಂದೂ ಕಾರಣ ಹೇಳುತ್ತಾರೆ. ಸತ್ಯ ಆ ಪದ್ಮನಾಭ ಸ್ವಾಮಿಗೇ ಗೊತ್ತು. (ಸ್ನೇಹಿತರೇ ಈ ವಿಷಯಗಳೆಲ್ಲಾ ಮನೆಯಲ್ಲಿ ಹಿರಿಯವರು ಮಾತನಾಡುತ್ತಿದ್ದಾಗ ಚಿಕ್ಕ ಬಾಲಕನಾಗಿ ನಾನು ಕೇಳಿ ತಿಳಿದು ಕೊಂಡ ವಿಷಯಗಳಷ್ಟೆ. ಖಂಡಿತಾ ಇದರ ಸತ್ಯಾಸತ್ಯಗಳು ನನಗೆ ತಿಳಿಯದು. ಈ ಪುಣ್ಯ ಭೂಮಿಯಲ್ಲಿ ಇದೆಲ್ಲಾ ನಡೆಯ ಬಹುದೆಂಬುದು ನನ್ನ ವಿಶ್ವಾಸ)
ಮಾಯಿಪ್ಪಾಡಿಯಲ್ಲಿ ಇರುವ ಕುಂಬಳೆ ಸೀಮೆಯ ಅರಸರು ಧರ್ಮಭೀರುಗಳು ಮಾತ್ರವಲ್ಲ ಪೂಜಾಕ್ರಮಗಳೆಲ್ಲಾ ಕ್ರಮದಂತೆಯೇ ನಡೆಯಬೇಕೆಂಬ ಅಭಿಪ್ರಾಯ ಹೊಂದಿದವರೇ ಆಗಿದ್ದರು. ಆದುದರಿಂದ ಅನಂತಪುರದಲ್ಲಿ ಹೊಸ ವ್ಯವಸ್ಥೆ ತಂದು ಆಗಮನಾದಿ ಶಾಸ್ತ್ರಗಳನ್ನು ಕಲಿತ ಉತ್ತಮ ಕುಲದ ಬ್ರಾಹ್ಮಣರೊಬ್ಬರನ್ನು ದಿನನಿತ್ಯದ ಪೂಜೆಗೆ ವ್ಯವಸ್ಥೆ ಮಾಡುತ್ತಾರೆ.
(ಸರಿಯಾಗಿ ಇವರು ಯಾವ ಕುಟುಂಬದವರೆಂದು ನೆನಪಿಲ್ಲ. ನನ್ನ ತಂದೆಯವರು ಅವರ ಬಗ್ಗೆ ಪ್ರಸ್ತಾಪ ಮಾಡಿದ ನೆನಪಿದೆ. ಆದರೆ ಅಂದು ಅದನ್ನು ಹೆಚ್ಚು ತಲೆಗೆ ಹಚ್ಚಿ ಕೊಂಡಿರಲಿಲ್ಲವಾದ ಕಾರಣ ಈಗ ನೆನಪಿಲ್ಲ. ನಾನರಿತಂತೆ ಆ ಕುಟುಂಬದವರು ಈಗಲೂ ಇದ್ದಾರೆ.). ಈ ಕುಟುಂಬದ ಅರ್ಚಕರು ಮೊದಲ ದಿನವೇ ಅತಿ ಭಕ್ತಿ ಶ್ರದ್ದೆಯಿಂದ ಪೂಜೆ ಮಾಡಿ ಅವರಿಗಿಂತ ಹಿಂದಿನವರು ಕೊಡುತ್ತಿದ್ದಂತೆ ನೈವೇಧ್ಯವನ್ನು ಮೆಟ್ಟಲಿಗೆ ಸುರಿದು ಕೊಟ್ಟಾಗ ಮೊಸಳೆ ಆ ನೈವೇಧ್ಯವನ್ನು ಸ್ವೀಕರಿಸದೆ ತಿರುಗಿ ಹೋಯಿತಂತೆ. ಇದರಿಂದ ಗಾಭರಿಗೊಂಡ ಆ ಪೂಜೆಯವರು ರಾತ್ರಿ ಇಡೀ ನಿದ್ರೆ ಮಾಡದೆ ನನ್ನಿಂದ ಏನು ತಪ್ಪಾಯಿತು ತಿಳಿಸು ಭಗವಂತಾ ಎಂದು ಪ್ರಾರ್ಥಿಸುತ್ತಾರೆ. ಮುಂಜಾನೆ ಅರೆ ನಿದ್ರಾವಸ್ಥೆಯಲ್ಲಿ ಅವರಿಗೆ ನೀನು ಪಾತ್ರೆಯಲ್ಲಿ ಕೊಡಬೇಕಾದ ನೈವೇಧ್ಯವನ್ನು ನೆಲದಲ್ಲಿ ಸುರಿದು ಹೋದುದು ಸರಿಯೇ? ಎಂದು ಕೇಳಿದಂತಾಗುತ್ತದೆ. ಈಗ ಎಚ್ಚತ್ತ ಅವರಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಮರುದಿನ ಬೆಳಗ್ಗಿನ ಪೂಜೆ ಮುಗಿಸಿ ಹೊರ ಬರುವಾಗ ತದೇಕ ಚಿತ್ತದಿಂದ ಭಗವಂತನ ಮೂರ್ತಿಯೆಡೆಗೆ ನೋಡುತ್ತಾ ನಿಂತ ಮೊಸಳೆ ಕಾಣುತ್ತದೆ.
ಯಾವ ಭಗವಂತ ಹೇಳಿಸಿದನೋ ತಿಳಿಯದು ಆ ಪೂಜೆಯವರ ಬಾಯಿಯಿಂದ ಬಬಿಯಾ ನಿನ್ನ ನೈವೇಧ್ಯ ನೈವೇಧ್ಯ ಪಾತ್ರೆಯಲ್ಲೇ ಕೊಡುತ್ತೇನೆ ಎಂದು ನೈವೇಧ್ಯ ಮಾಡಿದ ಉರುಳಿಯನ್ನೇ ಮೊಸಳೆಯ ಮುಂದೆ ಇರಿಸುತ್ತಾರೆ. ಮೊಸಳೆ ಪಾತ್ರೆಯೊಂದಿಗೆ ನೀರೊಳಗೆ ಕಾಣೆಯಾಗುತ್ತದೆ. ನಿರಾಳ ಮನಸ್ಸಿನಿಂದ ಪೂಜೆಯವರು ಮನೆಗೆ ಹೋಗುತ್ತಾರೆ. ಬೆಳಗ್ಗೆ ಬಂದವರಿಗೆ ನೈವೇಧ್ಯ ಮಾಡಲು ಪಾತ್ರೆ ಇಲ್ಲ. ಇನ್ನೇನು ಮಾಡಲಿ ಅರಮನೆಗೆ ಹೋಗಿ ತಿಳಿಸಲೇ? ಎಂದು ಚಿಂತಿಸುತ್ತಾರೆ. ಆದರೆ ಅನಿರೀಕ್ಷಿತವಾಗಿ ಅವರ ಬಾಯಿಯಿಂದ "ಬಬಿಯಾ ನೈವೇಧ್ಯ ಪಾತ್ರೆಯೇ ಇಲ್ಲದೆ ನೈವೇಧ್ಯ ಹೇಗಪ್ಪಾ ಮಾಡಲಿ?" ಎಂಬ ವಾಕ್ಯ ಹೊರಗೆ ಬರುತ್ತದೆ. ಅವರ ಮಾತು ಪೂರ್ಣಗೊಳ್ಳುತ್ತಿದ್ದಂತೆ ಮೊಸಳೆ ನೈವೇಧ್ಯದ ಉರುಳಿಯೊಂದಿಗೆ ಮೇಲೆ ಬಂದು ಮೆಟ್ಟಲಿನ ಮೇಲೆ ನೈವೇಧ್ಯದ ಉರುಳಿ ಇಟ್ಟು ಹೋಯಿತಂತೆ. ಅಲ್ಲಿಂದ ಆ ಮೊಸಳೆಗೆ ಬಬಿಯ ಎಂಬ ಹೆಸರೇ ಖಾಯಂ ಆಗುತ್ತದೆ.
ಹಾಗೆಯೇ ಅಂದಿನಿಂದ ನೈವೇಧ್ಯ ಕೊಡುವ ಸಮಯಕ್ಕೆ ಪೂಜೆಯವರು ಬಬಿಯಾ ನೈವೇಧ್ಯ ತಯಾರಿದೆ ಎಂದು ಕೂಗಿ ಹೇಳಿದರೆ ಮೊಸಳೆ ಬರುತ್ತಿತ್ತಂತೆ. ನೈವೇಧ್ಯ ತಯಾರಿಸಿದ ಪಾತ್ರೆಯನ್ನು ಅದರ ಮುಂದಿರಿಸಿದರೆ ಅದನ್ನು ತೆಗೆದುಕೊಂಡು ಸರೋವರದಲ್ಲಿ ಮುಳುಗಿ ಹೋಗುತ್ತಿತ್ತಂತೆ. ಹಾಗೆಯೇ ಮರುದಿನ ಬೆಳಗ್ಗೆ ನೈವೇಧ್ಯದ ಪಾತ್ರೆ ಮೆಟ್ಟಲುಗಳ ಮೇಲೆ ಶುದ್ಧೀಕರಿಸಿಯೇ ಕಾಣಲು ಸಿಗುತ್ತಿತ್ತಂತೆ.
ಈ ಬಬಿಯ ಎಷ್ಟು ಜನಪ್ರಿಯನಾದನೆಂದರೆ ಸರೋವರದ ಬದಿಯಲ್ಲಿ ನಿಂತು ಭಕ್ತಿಯಿಂದ ಪದ್ಮನಾಭಸ್ವಾಮಿಯನ್ನು ಪ್ರಾರ್ಥಿಸಿ ಯಾರೇ ಪ್ರೀತಿಯಿಂದ ಬಬಿಯಾ ನಿನ್ನ ದರ್ಶನಕ್ಕೇ ಬಂದಿದ್ದೇವೆ; ನಿನ್ನ ಮುಖವನ್ನಾದರೂ ತೋರಿಸು ಎಂದರೆ ತಲೆ ಹೊರಗೆ ಹಾಕಿ ಮುಖ ತೋರಿಸಿ ಹೊರಟು ಹೋಗುತ್ತಿತ್ತಂತೆ. (ಭಕ್ತಿಯ ಪರಾಕಾಷ್ಟೆಯಲ್ಲಿ ಉತ್ಪ್ರೇಕ್ಷೆ ಬಂದಿರಲೂ ಸಾಕು. ಆದರೆ ಈ ಬಬಿಯ ಕರೆದಾಗ ಮುಖ ತೋರಿಸುತ್ತಿದ್ದನೆಂದು ನನ್ನ ತಂದೆಯವರೇ ಹೇಳಿದ್ದರು)
ಹರ ಹರಾ ಈ ಜನಪ್ರಿಯತೆಯೇ ಮುಳುವಾಯಿತೇ ಅನಂತ ಪದ್ಮನಾಭಸ್ವಾಮಿಯ ಬಬಿಯನಿಗೆ?
"ಮುಂದಿನ ಭಾಗದಲ್ಲಿ ಅಪರೂಪದ ದೈವಾಂಶ ಸಂಭೂತನ ಕೊಲೆ ಹೀನ ಮನುಜನಿಂದ".
ಅನುಭವಗಳನ್ನು ಕೇಳಿ ಅನುಭವಿಸಿ ಬರೆದವರು
- ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ