
ನಿನ್ನೆ ಅಂದರೆ 10/10/2022 ರ ಸೋಮವಾರ ಅನಂತಪುರ ಕ್ಷೇತ್ರದ ಆಕರ್ಷಣೆಯಾಗಿದ್ದ ಬಬಿಯ ವಿಷ್ಣು ಪಾದ ಸೇರಿದ ವಾರ್ತೆ ಬರುವುದರೊಂದಿಗೆ ಬಬಿಯನೊಂದಿಗೆ ನನಗಿದ್ದ ಸ್ನೇಹಾಚಾರಗಳು ನೆನಪಾದುವು.
ಅಪರೂಪದಲ್ಲೇ ಅಪರೂಪವಾದ ಈ ಬಬಿಯ ಮೋಸಳೆಗೆ ಶ್ರದ್ದಾಂಜಲಿಯಾಗಿ ಒಂದು ಲೇಖನ ಬರೆಯೋಣ ಅನ್ನಿಸಿದೆ.
ಕತೆಯ ಸುರು ನಾನು ಹುಟ್ಟುವುದಕ್ಕಿಂತಲೂ ಹಿಂದೆ ಹೋಗ ಬೇಕಿದೆ. ಆದ್ದರಿಂದ ಲೇಖನ ಸ್ವಲ್ಪ ದೀರ್ಘವಾಗಲೂ ಸಾಕು. ಮುಂದುವರಿಯೋಣ ಅಲ್ಲವೇ?.
ನನ್ನ ಅಪ್ಪ ಮಾಯಿಪ್ಪಾಡಿ ಅರಮನೆಯ ಶ್ಯಾನುಭಾಗರಾಗಿ 1933 ರಲ್ಲಿ ಸೇರಿದ್ದರು. ಹದಿನಾರು ಗ್ರಾಮಗಳ ಒಡೆಯರಾಗಿ ಕುಂಬಳೆಸೀಮೆಯ ಅರಸರಾಗಿದ್ದ ರಾಮಂತರಸುಗಳದ್ದು ಆಗೆಲ್ಲಾ ದೊಡ್ಡ ವ್ಯವಹಾರ.
ನಾಲ್ಕು ಸೀಮಾ ದೇವಸ್ಥಾನಗಳು ನಾಲ್ಕು ಗ್ರಾಮ ದೇವಸ್ಥಾನಗಳು ಹಾಗೆಯೇ 32 ದೈವಕ್ಷೇತ್ರಗಳು ಸೀದಾ ಅರಮನೆಯ ಆಡಳಿತದೊಳಗೆ ಬಂದಿದ್ದರೆ ಎಷ್ಟೋ ದೇವಸ್ಥಾನ ದೈವಸ್ಥಾನಗಳು ಅನಾಥಸ್ಥಿತಿಯಲ್ಲಿ ಇದ್ದುದರ ನಿತ್ಯ ಪೂಜಾ ವ್ಯವಸ್ಥೆಗಳನ್ನು ಅರಮನೆಯೇ ನೋಡಿಕೊಳ್ಳುತ್ತಿತ್ತು.
ಅನಂತಪುರ ದೇವಸ್ಥಾನ ಕೂಡಾ ಅದರಲ್ಲಿ ಸೇರಿತ್ತು. ನಿತ್ಯ ಪೂಜೆಯವರು ಸರಿಯಾಗಿ ಸಿಕ್ಕದ ಕಾಲದಲ್ಲಿ ನನ್ನ ಸೋದರಮಾವನೇ ಅಲ್ಲಿ ಪೂಜಾಕಾರ್ಯ ನಿರ್ವಹಿಸಿದ್ಧೂ ಇತ್ತು. ಆಗ ಆ ದೇವಸ್ಥಾನದಲ್ಲಿ ಇದ್ದ ವಿಶೇಷ ಶಕ್ತಿಯ ಬಬಿಯನ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇದ್ಧುದರಿಂದ ಮುಂದೆ ಕುತೂಹಲಿಗಳಾದ ನಮಗೆ ಅದರ ಬಗ್ಗೆ ಸಾಕಷ್ಟು ತಿಳಿಯ ಹೇಳಿದ್ದರು. ಇದು ನಿನ್ನೆ ತೀರಿ ಹೋದ ಬಬಿಯ ಅಲ್ಲ ಅವನಿಗಿಂತ ಹಿಂದಿನ ಬಬಿಯ.
ಎರಡನೆಯ ಮಹಾಯುದ್ಧ ಸುರುವಾಗುವುದರೊಂದಿಗೆ ಎಲ್ಲಾ ವ್ಯವಸ್ಥೆಗಳಲ್ಲೂ ಏರುಪೇರಾಗ ತೊಡಗಿತು. ಕಡ್ಡಾಯವಾಗಿ ಬೆಳೆದ ಆಹಾರವಸ್ತುಗಳನ್ನು ಸರ್ಕಾರಕ್ಕೆ ಸಲ್ಲಿಸ ಬೇಕಿತ್ತು. ಇದರಿಂದಲಾಗಿ ನಿತ್ಯ ವ್ಯವಸ್ಥೆಗಳಿಗೇ ಅಪಾರ ಅಕ್ಕಿ ಬೇಕಾಗಿದ್ದ ಕುಂಬಳೆ ಸೀಮೆಯ ಅರಮನೆಗೆ ಸಂಕಷ್ಟದ ಸ್ಥಿತಿ ಎದುರಾಗಿತ್ತು. ಎಡನಾಡು ಗ್ರಾಮದ ಪ್ರಥಮ ಡಿಗ್ರಿ ಪಡೆದ ನನ್ನ ಅಪ್ಪ ಇಂಗ್ಲೀಷ್ ನಲ್ಲಿ ಸರಾಗವಾಗಿ ವ್ಯವಹರಿಸುತ್ತಿದ್ಧುದು ಅರಮನೆಗೆ ಒಂದು ರೀತಿಯಲ್ಲಿ ಅಂದು ಸಹಾಯ ಮಾಡಿತ್ತು. ಯಾವುದೇ ರೀತಿಯಲ್ಲೂ ದೇವಸ್ಥಾನಗಳ ನಿತ್ಯಪೂಜೆಗಳಿಗೆ ವ್ಯತ್ಯಯ ಆಗದಂತೆ ನೈವೇಧ್ಯಕ್ಕಿರುವ ಅಕ್ಕಿ ಸಿಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಆಗೆಲ್ಲಾ ಮಂಗಳೂರಿನಲ್ಲಿಯೇ ಕಲೆಕ್ಟರ್ ಅವರ ಆಫೀಸ್ ಇದ್ದಿದ್ದುದು. ಆ ಕಾಲದ ಕಲೆಕ್ಟರ್ ಬ್ರಿಟಿಷ್ ಪ್ರಜೆ. ಅವರಿಗೆ ನನ್ನ ಅಪ್ಪನೊಂದಿಗೆ ಕೇವಲಾ ಇಂಗ್ಲಿಷ್ ಬಲ್ಲವರೆಂದಲ್ಲ ಸಾಮಾನ್ಯವಾಗಿಯೂ ಉತ್ತಮ ಸ್ನೇಹಾಚಾರ ಇತ್ತು.
ಅವರು ಕುದುರೆಯ ಮೇಲೆ ಕುಳಿತೇ ಕಾಸರಗೋಡಿನ ವ್ಯವಹಾರ ನೋಡಿಕೊಳ್ಳಲು ಬಂದರೆ ಮಾಯಿಪ್ಪಾಡಿ ಅರಮನೆಯಲ್ಲಿ ತಂಗುತ್ತಿದ್ದರು. ಅವರ ಅನುಕೂಲಕ್ಕಾಗಿಯೇ ಮಾಯಿಪ್ಪಾಡಿ ಅರಮನೆಯಲ್ಲಿ ಗೆಸ್ಟ್ ಹೌಸ್ ಒಂದನ್ನು ನಿರ್ಮಿಸಲಾಗಿತ್ತು.
ರಾಜರಾಜೇಶ್ವರಿಯ ಸನ್ನಿದಿಯಾದ ಕಾರಣ ಮಾಂಸಾಹಾರ ಸೇವಿಸ ಬಾರದೆಂಬ ಅಪ್ಪನ ಕೇಳಿಕೆಯನ್ನು ಮನ್ನಿಸಿ ಆ ಕಲೆಕ್ಟರ್ ಇಲ್ಲಿ ಇರುವಾಗ ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ. ಉತ್ತಮ ಮಾತುಗಾರರಾಗಿದ್ದ ಆಗಿನ ರಾಜ ಶ್ರೀ ವೆಂಕಟೇಶವರ್ಮ ರಾಜರು ಮಾತಿನಿಂದಲೇ ಕಲೆಕ್ಟರ್ ಕೂಡಾ ಗೌರವ ಕೊಡುವ ವ್ಯಕ್ತಿಯಾಗಿ ಬೆಳೆದಿದ್ದರು. ಕಲೆಕ್ಟರ್ ಅವರೊಂದಿಗಿನ ಈ ಸ್ನೇಹಾಚಾರ ಅಪ್ಪನಿಗೆ ಹೋನರರಿ ಮೆಜಿಸ್ಟ್ರೇಟ್ ಎಂಬ ಪದವಿಯನ್ನು ಕೊಟ್ಟು ಚಿಕ್ಕ ಪುಟ್ಟ ಕೇಸುಗಳನ್ನು ಅವರ ಕೋರ್ಟಿನಲ್ಲೇ ತೀರ್ಮಾನ ಮಾಡಿ ಶಿಕ್ಷೆ ಕೊಡುವ ಅಧಿಕಾರ ಕೂಡಾ ಕೊಡುವಂತೆ ಮಾಡಿತ್ತು. ಆ ಕಾಲಕ್ಕೆ ಮೂರು ತಿಂಗಳು ಜೈಲು ಶಿಕ್ಷೆಯ ವರೆಗೆ ಹಾಗೂ ಐದು ರುಪಾಯಿ ಪೈನ್ ಮಾಡುವ ಅಧಿಕಾರ ಈ ಮೆಜಿಸ್ಟ್ರೇಟರಿಗೆ ಇತ್ತು.
ಎರಡನೇ ಮಹಾಯುದ್ಧ ಸುರುವಾದಾಗ ಬ್ರಿಟಿಸರು ಅವರ ಮಿಲಿಟರಿಯವರಿಗೆ ವಿಮಾನ ಮೂಲಕ ಬೋಂಬ್ ಗಳನ್ನು ಹಾಕಲು ತರಬೇತಿ ಕೊಡುವ ಬಗ್ಗೆ ಕುಂಬಳೆ ಸೀಮೆಯೊಳಗಿರುವ ಸಿದ್ಧಿಬೈಲು ಕ್ಷೇತ್ರವನ್ನು ಆರಿಸಿಕೊಂಡರು. ಅವರ ತರಬೇತಿಗಳ ಪರಿಣಾಮ ಹತ್ತಿರದ ಕ್ಷೇತ್ರಗಳ ಮೇಲೆ ಬೀರ ಬಾರದೆಂಬ ಉದ್ದೇಶದಿಂದ ಎಡನಾಡು; ಕಾನ; ಕಣ್ಣೂರು.. ಇತ್ಯಾದಿ ಸ್ಥಳಗಳಲ್ಲಿದ್ದ ಜನರನ್ನು ತೆರವು ಗೊಳಿಸಿ ಅಷ್ಟೂ ಸ್ಥಳವನ್ನು ಜನ ಸಂಚಾರ ನಿರ್ಭಂದಿತ ಪ್ರದೇಶವಾಗಿ ಘೋಷಿಸಿ "ಬ್ಲೋಕ್ಡ್ ಏರಿಯ" ಎಂದು ಘೋಷಿಸಿದರು. ಊರಲ್ಲಿ ಅದು ಬ್ಲೊಕ್ ಬಂದಿದೆ ಎಂದೇ ಪ್ರಚಲಿತವಾಗಿತ್ತು.
ಈ ಸಮಯದಲ್ಲಿ ಮಾಯಿಪ್ಪಾಡಿ ಅರಮನೆಗೆ ತೆರವುಗೊಳಿಸಿದ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಜವಾಬ್ಧಾರಿಯನ್ನು ಸರ್ಕಾರ ಕೊಟ್ಟಿತು. ಅಂದರೆ ಅವಶ್ಯ ಇರುವವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಿ ಕೊಡಬೇಕಿತ್ತು. ಈ ಜವಾಬ್ಧಾರಿ ಅರಮನೆಯ ಶ್ಯಾನುಭೋಗರು ಎಂಬ ನೆಲೆಯಲ್ಲಿ ನನ್ನ ತಂದೆಯವರಿಗೇ ಬಂದಿತ್ತು.
ಈ ವ್ಯವಸ್ಥೆ ಮಾಡುವಾಗ ನನ್ನ ತಂದೆಯವರು ಕಲೆಕ್ಟರ್ ರೊಡನೆ ಅನಂತಪುರ ದೇವಸ್ಥಾನದ ನಿತ್ಯ ಪೂಜೆ ನಿಲ್ಲದಂತೆ ಪೂಜೆಯವರಿಗೆ ನಿರ್ಭಂದಿತ ಪ್ರದೇಶದಲ್ಲಿ ಸಂಚರಿಸಲು ಅವಕಾಶ ಕೊಡಬೇಕೆಂದು ನಿವೇದನೆ ಮಾಡಿದ್ದರು. ಮೊದಲು ಒಪ್ಪದ ಮದ್ರಾಸ್ ಸರ್ಕಾರ ಕಲೆಕ್ಟರ್ ಅವರ ಒತ್ತಾಯದ ಕೇಳಿಕೆಯ ಮೇರೆಗೆ ಕೆಲವು ನಿರ್ಭಂಧಗಳೊಡನೆ ಸಂಚಾರಕ್ಕೆ ನಿಶ್ಚಿತ ಸಮಯದಲ್ಲಿ ಅನುಮತಿ ನೀಡಿತ್ತು.
ಅದರೊಂದಿಗೆ ಪೂಜೆಯವರೂ ಸೇರಿ ದಿನಕ್ಕೆ ನಾಲ್ಕು ಜನರಿಗೆ ನಿರ್ಭಂದಿತ ಪ್ರದೇಶದೊಳಗೆ "ಬ್ಲೋಕ್ ಏರಿಯಾದ ಅಧಿಕಾರಿಯ ಅಪ್ಪಣೆ ಪಡೆದು" ಸಂಚರಿಸಲು ಮಾಯಿಪ್ಪಾಡಿ ಅರಮನೆಯ ಕಾರ್ಯದರ್ಶಿ (ಅವರು ಶ್ಯಾನುಭೋಗರ ಬದಲು ಕಾರ್ಯದರ್ಶಿ ಎಂಬ ಪದವನ್ನೇ ಬಳಸುತ್ತಿದ್ದರು. ರಾಜರಿಗೆ "ಹಿಸ್ ಹೈನೆಸ್" ಎಂಬ ಪದವನ್ನೂ ಬಳಸುತ್ತಿದ್ದರು.)ಯವರಿಗೆ ಪರ್ಮಿಟ್ ಕೊಡುವ ಅಧಿಕಾರ ನೀಡಿತು. ಪ್ರತಿದಿನ ಮುಂಜಾನೆ ಕೇಂಪ್ ಆಫೀಸರಲ್ಲಿಗೆ ಜನ ಕಳುಹಿಸಿ ತಂದೆಯವರು ಬೋಂಬ್ ಹಾಕಲು ತರಭೇತಿ ಕೊಡುವ ಸಮಯ ತಿಳಿದು ನಿರ್ಭಂದಿತ ಪ್ರದೇಶದೊಳಗೆ ಸಂಚರಿಸ ಬಹುದಾದ ಸಮಯವನ್ನು ನಿಗದಿ ಗೊಳಿಸಬೇಕಿತ್ತು. ಆಗ ಸಿಕ್ಕಿದ ಸಮಯದ ಅನುಸಾರ ಪೂಜೆಯವರನ್ನು ಅನಂತಪುರಕ್ಕೆ ಕಳುಹಿಸ ಬೇಕಿತ್ತು. ಉಳಿದಂತೆ ನೈವೇಧ್ಯಕ್ಕಿರುವ ಸಾಮಾನುಗಳು ಯಾ ಸೌದೆ ಇತ್ಯಾದಿಗಳ ವ್ಯವಸ್ಥೆ ಮಾಡಲು ಬೇಕಾದ ಜನಗಳನ್ನು ಕಳುಹಿಸ ಬಹುದಿತ್ತು. ಎಲ್ಲಾರೀತಿಯ ತಪಾಸಣೆ ಮಾಡಿದ ಮೇಲೆಯೇ ಅವರನ್ನು ಒಳಗೆ ಸಂಚರಿಸಲು ಬಿಡುತ್ತಿದ್ದರು. ಯಾವ ರೀತಿಯಲ್ಲೂ ಒಂದು ದಿನದಲ್ಲಿ ನಾಲ್ಕು ಜನಕ್ಕಿಂತ ಹೆಚ್ಚು ಸಂಚರಿಸುವಂತಿರಲಿಲ್ಲ. ಒಬ್ಬನೇ ಎರಡು ಸಲ ಹೋದರೆ ಅದನ್ನು ಇಬ್ಬರಾಗಿಯೇ ಪರಿಗಣಿಸುತ್ತಿದ್ದರು.
ಈ ರೀತಿಯ ವ್ಯವಸ್ಥೆ ಆಗುವುದರೊಂದಿಗೆ ಅನಂತಪುರದ ನಿತ್ಯಪೂಜೆಗಳು ನಿರಂತರವಾಗಿ ನಡೆದರೂ ಅದು ನಿತ್ಯ ಒಂದೇ ಸಮಯಕ್ಕೆ ಆಗುತ್ತಿರಲಿಲ್ಲ. ಇನ್ನು ಭಕ್ತರಿಗೆ ಒಳಗೆ ಬರುವ ಅವಕಾಶವೂ ಇದ್ದಿರಲಿಲ್ಲ. ಆದರೆ ಪೂಜೆ ನಡೆದು ಕ್ಷೇತ್ರದ ಮೊಸಳೆ ಎನ್ನಿಸಿದ ಬಬಿಯನಿಗೆ ನಿತ್ಯವೂ ಕೊಡುವ ನೈವೇಧ್ಯ ತಪ್ಪಿದ ಸಮಯದಲ್ಲಾದರೂ ಸಲ್ಲಿಕೆಯಾಗುತ್ತಿತ್ತು.
ದಿನಾ ಪೂಜೆಗೆ ಹೋಗುತ್ತಿದ್ದವರೊಂದಿಗೆ ಸ್ಥಳೀಯರಲ್ಲಿ ಅರೆಬರೆ ಭಾಷೆ ಅರ್ಥವಾಗುವವರ ಮುಖಾಂತರ ಮಾತನಾಡಿಸುತ್ತಿದ್ದ ಕೇಂಪ್ ಆಫೀಸರರಿಗೆ ಬಬಿಯನ ವಿಷಯ ತಿಳಿದು ಕುತೂಹಲ ಏರಿತ್ತು. ಆಗಾಗ ಬಬಿಯನ ಬಗ್ಗೆ ವಿಚಾರಿಸುತ್ತಲೇ ಇದ್ದ. ಅವನ ಕಾರ್ಯಭಾರಗಳ ಹೊರೆಯಿಂದ ಅವನಿಗೆ ಬಬಿಯನನ್ನು ವೀಕ್ಷಿಸಲು ಮಾತ್ರ ಸಾಧ್ಯವಾಗಿರಲಿಲ್ಲ.
ಮುಂದಿನ ವಿವರ ಹಾಗೂ ಆಗಿನ ಬಬಿಯನ ನಡವಳಿಕೆಗಳ ಬಗ್ಗೆ ಮುಂದಿನ ಭಾಗದಲ್ಲಿ ಹೇಳುತ್ತೇನೆ. ಅಪರೂಪದ ಸಸ್ಯಾಹಾರಿ ಬಬಿಯನ ಕೊಲೆಯ ಬಗ್ಗೆ ಮುಂದಿನ ಭಾಗದಲ್ಲಿ.
(ಸ್ವಂತ ಅನುಭವ ಹಾಗೂ ಹಿರಿಯರ ಹೇಳಿಕೆಯನ್ನಾಧರಿಸಿದ ಲೇಖನ)
-ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ