ಮೊದಲ ತುಳು ನಾಟಕಕಾರ ಎಂದು ಪ್ರಸಿದ್ಧರಾಗಿರುವ ಮಾಧವ ತಿಂಗಳಾಯರ ಬದುಕು, ಸಾಹಿತ್ಯ ಸೃಷ್ಟಿ, ಸಮಾಜ ಸುಧಾರಣೆಯ ತುಡಿತ ವಿಶೇಷವಾದುದು.
ಜುಲೈ 3, 1913ರಲ್ಲಿ ಬೋಳಾರದ ತಿಮ್ಮಪ್ಪ ಕರಿಯ ದಣ್ಣಾಯ ಮತ್ತು ಜಾನಮ್ಮ ದಂಪತಿಗಳಿಗೆ ಜನಿಸಿದ ಮಾಧವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಮ್ಮ ಮಾವ ಕೃಷ್ಣಪ್ಪ ತಿಂಗಳಾಯ ಮತ್ತು ಸಮಾಜ ಸುಧಾರಕ ಅಜ್ಜ ಮೋಹನಪ್ಪ ತಿಂಗಳಾಯರ ಪೋಷಣೆಯಲ್ಲಿ ಬೆಳೆದರು.
ಮೋಹನಪ್ಪ ತಿಂಗಳಾಯರು ಆರ್ಯ ಸಮಾಜದ ತತ್ವಗಳನ್ನು ಸ್ವೀಕರಿಸಿ ಸಮಾಜದಲ್ಲಿದ್ದ ಮದ್ಯಪಾನ, ಪ್ರಾಣಿ ಬಲಿಗಳ ವಿರುದ್ಧ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಹೊಯಿಗೆ ಬಜಾರಿನ ಶ್ರೀ ಜ್ಞಾನೋದಯ ಸಮಾಜವು ಅವರ ಚಟುವಟಿಕೆಗಳ ಕೇಂದ್ರವಾಗಿತ್ತು. ಕೃಷ್ಣಪ್ಪ ತಿಂಗಳಾಯರೂ ಸ್ವತಃ ನಟರೂ ನಾಟಕ ಮಂಡಳಿಯ ಸಂಚಾಲಕರು ಆಗಿದ್ದವರು. ಇವರಿಬ್ಬರ ಪ್ರಭಾವ ಹಾಗೂ ಪ್ರೀತಿ ಮಾಧವರ ಮೇಲಿತ್ತು.
ಚಿಕ್ಕ ವಯಸ್ಸಿನಲ್ಲಿಯೇ ಅಭಿನಯದ ಪಾಠ ಕಲಿತ ತಿಂಗಳಾಯರು ಮಾತು, ಅಭಿನಯ, ಸಂಗೀತದ ಕಲೆಗಳನ್ನು ಕರಗತ ಮಾಡಿ ಕೊಂಡರು.
ಜ್ಞಾನೋದಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರೊಜಾರಿಯೋ ಹೈಸ್ಕೂಲ್ ಮತ್ತು ಗಣಪತಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ನಡೆಸಿದರು. ಗವರ್ನಮೆಂಟ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ನಡೆಸಿ ವೈದಕೀಯ ಶಿಕ್ಷಣಕ್ಕೆ ಮದ್ರಾಸ್‌ಗೆ ತೆರಳಿದರು. ಅನಾರೋಗ್ಯದ ನಿಮಿತ್ತ ಶಿಕ್ಷಣವನ್ನು ನಿಲ್ಲಿಸಿ ಹಿಂತಿರುಗಿ ಬರಬೇಕಾಯಿತು.
ಸಮಾಜದ ಸುಧಾರಣೆಯಲ್ಲಿ ಆಸಕ್ತಿ ತಾಳಿದ್ದ ಇವರು ಜನ ಮರ್ಲ್, ಧರ್ಮದ ಉದಲ್, ಬದಿ ರಕ್ಕಸೆ ಎಂಬ ತುಳು ನಾಟಕಗಳನ್ನು ಬರೆದು ಪ್ರದರ್ಶಿಸಿದರು. ಪ್ರೇಮ ಪೂರ್ಣಿಮಾ, ಪತಿತೋದ್ಧರಣ ಚಾರಿತ್ರಿಕ ನಾಟಕಗಳನ್ನು ಬರೆದರು. ಈ ನಾಟಕ ಗಳು ಮೋಹನಪ್ಪ ತಿಂಗಳಾಯರ ಸಮಾಜದ ಸುಧಾರಣೆಯ ಕಾಯಕಕ್ಕೆ ಪೂರಕವಾಗಿತ್ತು.
ರಂಗಭೂಮಿಯ ಮೂಲಕ ಸಮಾಜ ಸೇವೆ ಮಾಡಬೇಕೆಂಬ ಧ್ಯೇಯದಿಂದ ಸೇವಾದಳ ನಾಟಕ ಮಂಡಳಿ ಸ್ಥಾಪಿಸಿದರು. ರವೀಂದ್ರನಾಥ ಠಾಕೂರರ ಸೆಕ್ರಿಫ್ರೈಸ್ ನಾಟಕವನ್ನು ಸಮರ್ಪಣೆ ಎಂದು ಕನ್ನಡಕ್ಕೆ ಅನುವಾದಿಸಿ ಆಡಿ ತೋರಿಸಿದರು.
ಕಂಠೀರವ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ಚಂದ್ರಗುಪ್ತ ಹೆಸರಿನಲ್ಲಿ ಸಣ್ಣಕಥೆಗಳನ್ನು ಬರೆದರು. ವಿದ್ಯಾರ್ಥಿ ಎಂಬ ಕೈಬರಹದ ಮಾಸ ಪತ್ರಿಕೆ ಮಾಡಿ ಅದರಲ್ಲಿ ವ್ಯಂಗ್ಯಚಿತ್ರಗಳನ್ನೂ ಬಿಡಿಸುತ್ತಿದ್ದರು.
1932ರ ಸತ್ಯಾಗ್ರಹ ಸಮರದಲ್ಲಿ ಭಾಗವಹಿಸಿ ಹೊಡೆತಗಳನ್ನು ತಿಂದುದಲ್ಲದೆ ಖಟ್ಲೆಗಳು ಆಗಿತ್ತು.
8.3.1934ರಂದು ನವಚೇತನ ಅಥವಾ ಜಾಗೃತಿ ನಾಟಕ ಪ್ರದರ್ಶನಗೊಂಡಿತು. ಜನಜೀವನವನ್ನು ಯಥಾರ್ಥವಾಗಿ ಚಿತ್ರಿಸುವ ಕನ್ನಡದ ಆ ಸಂದರ್ಭದ ವಿಶಿಷ್ಟ ನಾಟಕವದು. ಕೂಲಿಕಾರ ಹಾಗೂ ಬಂಡವಾಳಗಾರರ ಸಂಘರ್ಷವನ್ನು ಚಿತ್ರಿಸುವ ನಾಟಕ ಅದು.
ಯುವ ಪ್ರತಿಭೆ ಅರಳುತ್ತಿದ್ದ ಸಂದರ್ಭದಲ್ಲಿಯೇ ಕಾಯಿಲೆಯಿಂದ ಸೆಪ್ಟೆಂಬರ್ 11, 1934 ರಂದು ಅವರು ನಿಧನ ಹೊಂದಿದರು.
1934 ರ ನವೆಂಬರ್ ತಿಂಗಳಲ್ಲಿ ಜಾಗೃತಿ ನಾಟಕ ಪುಸ್ತಕವಾಗಿ ಪ್ರಕಟಣೆಗೊಂಡಿತು. ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತ ಉಳ್ಳಾಲ ಮಂಗೇಶ ರಾಯರು ಹೀಗೆನ್ನುತ್ತಾರೆ. "ಈ ಗ್ರಂಥಕಾರರು ಇಷ್ಟು ಎಳೆ ಪ್ರಾಯದಲ್ಲಿ ಇಂಥ ಗ್ರಂಥವನ್ನು ಬರೆಯಲಿಕ್ಕೆ ಉದ್ಯುಕ್ತರಾದರೆಂದು ನನಗೆ ತುಂಬಾ ಸಂತೋಷವಿತ್ತು. ಇಂಥ ಹಲವು ಗ್ರಂಥಗಳು ಅವರ ಲೇಖನಿಯಿಂದ ಹುಟ್ಟಿ ಬರುವವೆಂದೂ ನನಗೆ ಭರವಸೆ ಇತ್ತು. ಆದರೆ ವಿಧಿಯು ಮಾತ್ರ ಬೇರೊಂದೆಣಿಸಿತು".
ನಾಟಕಕಾರ, ಸಮಾಜ ಸುಧಾರಕ ಮಾಧವ ತಿಂಗಳಾಯರ ಜೀವನ ಆದರ್ಶಗಳನ್ನು ಪಾಲಿಸುವ ಕಾರ್ಯ ಇಂದು ನಡೆಯಬೇಕಾಗಿದೆ.
- ಕೃಷ್ಣಮೂರ್ತಿ ಕುಳಾಯಿ ಚಿತ್ರಾಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ