
ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು 2023ರ ಫೆಬ್ರವರಿ ತಿಂಗಳಲ್ಲಿ 'ಗುರುವಿನ ಗುರುತು' ಎಂಬ ಒಂದು ವಾರದ ಅಧ್ಯಯನ ಪ್ರವಾಸವನ್ನು ಸಂಯೋಜಿಸುತ್ತಿದೆ.
ನಾರಾಯಣ ಗುರುಗಳ ಜನ್ಮಸ್ಥಳ ಕೇರಳದ ಚೆಂಬಳಂತಿ, ಆಧ್ಯಾತ್ಮಿಕ ಸಿದ್ಧಿಸ್ಥಳ ಮರುತ್ತಮಲೆ, ಮೊದಲ ಶಿವದೇವಾಲಯ ಸ್ಥಾಪನೆಯ ಅರವಿಪುರ, ವೈಕಂ ಚಳವಳಿಯ ಐತಿಹಾಸಿಕ ಸ್ಥಳ, ಶಿವಗಿರಿಯ ಸಮಾಧಿ ಮತ್ತು ಶಿಕ್ಷಣ ಸಮುಚ್ಚಯ ಹಾಗೂ ಗುರುಗಳ ಜೀವನ ಮತ್ತು ಸಾಧನೆಗೆ ಸಂಬಂಧಿಸಿದ ಕೇರಳದಲ್ಲಿರುವ ಐತಿಹ್ಯಗಳನ್ನು ಸಂದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಈಗಾಗಲೇ 2021ರ ಸಂಶೋಧನಾ ಪ್ರಶಸ್ತಿ ಪುರಸ್ಕೃತ ಕೃತಿಯು ಪ್ರಕಟವಾಗಿದ್ದು, 2022ರ ಪ್ರಶಸ್ತಿಗೆ ಯುವ ವಿದ್ವಾಂಸರು ಅಧ್ಯಯನ ನಡೆಸುತ್ತಿದ್ದಾರೆ. 2023ರ ಸಂಶೋಧನ ಪ್ರಶಸ್ತಿಗೆ ಈ ಅಧ್ಯಯನ ಪ್ರವಾಸವು ಪೂರಕವಾಗಲಿದ್ದು, ಉತ್ತಮ ಸಂಶೋಧನಾ ಕೃತಿಯನ್ನು ಅಧ್ಯಯನನ ಪೀಠವು ನಿರೀಕ್ಷಿಸುತ್ತಿದೆ.
ಒಟ್ಟು 10 ಮಂದಿ ಆಸಕ್ತ ಸಂಶೋಧಕರಿಗೆ ಮಾತ್ರ ಅವಕಾಶವಿದೆ. ಸಂಶೋಧನಾ ಅರ್ಹತೆಗಳಿಗೆ ತಕ್ಕಂತೆ ಆಯ್ಕೆ ಸಮಿತಿಯ ಮೂಲಕ ತಂಡದ ಆಯ್ಕೆ ನಡೆಯಲಿದೆ. ಪ್ರವಾಸದಲ್ಲಿ ಭಾಗವಹಿಸುವ ಸಂಶೋಧಕರು 50 ವರ್ಷದ ಒಳಗಿನವರಾಗಿದ್ದು, ಪದವಿ ಶಿಕ್ಷಣ ಮುಗಿಸಿರಬೇಕು.
ಪ್ರವಾಸ ಮುಗಿದ 15 ದಿನಗಳ ಒಳಗೆ ಕನಿಷ್ಠ 25 ಪುಟಗಳ ಪ್ರವಾಸ ಕಥನವನ್ನು ಬರೆದು ಪೀಠಕ್ಕೆ ಸಲ್ಲಿಸಬೇಕು. ಅದು ಪೀಠದ ವತಿಯಿಂದ ಪ್ರಕಟವಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಭಾಗವಹಿಸುವ ಅವಕಾಶ ಇರುವುದಿಲ್ಲ. ರೈಲ್ವೇ ಪ್ರಯಾಣದ ಟಿಕೆಟ್ ದರವನ್ನು ಮಾತ್ರ ಪೀಠದಿಂದ ಭರಿಸಲಾಗುತ್ತದೆ. ಉಳಿದ ಖರ್ಚುಗಳನ್ನು ಸಂಶೋಧಕರೇ ಭರಿಸಬೇಕಾಗುತ್ತದೆ.
ಆಸ್ಕತ ಸಂಶೋಧಕರು 2022ರ ಡಿ.31ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ| ಗಣೇಶ್ ಅಮೀನ್ ಸಂಕಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ