||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೋಗ ಜಲಪಾತವೂ ಮೈಸೂರು ವೃಂದಾವನವೂ: ಸಹಜ ಮತ್ತು ಮಾನವ ನಿರ್ಮಿತ ಸೌಂದರ್ಯ

ಜೋಗ ಜಲಪಾತವೂ ಮೈಸೂರು ವೃಂದಾವನವೂ: ಸಹಜ ಮತ್ತು ಮಾನವ ನಿರ್ಮಿತ ಸೌಂದರ್ಯ


 

ಜೋಗದ ಜಲಪಾತ. ಇದು ಪ್ರಕೃತಿ. ಅನಾದಿ ಕಾಲದಿಂದ ಈ ಸೌಂದರ್ಯ ಸಹಜವಾಗಿಯೇ ಹರಿದು ಹೋಗುತ್ತಿದೆ ಇಲ್ಲಿ. ಯಾರೂ ನೋಡಬೇಕೆಂದಲ್ಲ, ಯಾರನ್ನೂ ಸೆಳೆಯಬೇಕೆಂದಲ್ಲ. ಆದರೂ ತನ್ನಂತೆ ತಾನು ಸ್ವತಂತ್ರವಾಗಿ ಯಾವ ಕಟ್ಟುಪಾಡುಗಳಿಲ್ಲದೆ ಯಾರ ಹಂಗಿಲ್ಲದೆ ನಿರ್ಭೀತಿಯಿಂದ ಹರಿಯುತಿದೆ. ಮಳೆ ಬಂದಾಗ ಮೈ ತುಂಬಿ, ಮಳೆ ನಿಂತಾಗ ಮನ ತುಂಬಿ, ಬೇಸಿಗೆಯಲಿ ನೀರಿಲ್ಲದೆ ಸೊರಗಿ ಕಾಲ ಕಾಲಕ್ಕೆ ಆಗುವ ಪ್ರಕ್ರಿಯೆಗಳಿಗೆ ಸ್ಪಂದಿಸುತ. ಮೈದುಂಬಿದರೂ ಸೊರಗಿದರೂ ಸಹಜವಾದ ಸೌಂದರ್ಯಕ್ಕೆ ಸಾಟಿಯಿಲ್ಲವೆಂಬಂತೆ. ಚಿರಯೌವನಕೆ ತಾನೆ ಸಾಕ್ಷಿ  ಎನುವಂತೆ. ಯುಗ ಯುಗಗಳು ಉರುಳಿದವು ಹಲವಾರು. ಭೂಮಿಯನು ಆಳಿದರು ರಾಜಮನೆತನಗಳು ಹಲವಾರು. ಸಹಸ್ರಾರು ಯುದ್ಧಗಳು, ಸಹಸ್ರಾರು ಸಂಧಿಗಳು, ಸಹಸ್ರಾರು ಸಂಸ್ಕೃತಿಗಳು, ಸಹಸ್ರಾರು  ಮತ ಭೇದಗಳು. ಹೀಗೇ ಸಹಸ್ರಾರು ವಿದ್ಯಮಾನಗಳಿಗೆ ಸಾಕ್ಷಿಯಾದರು ಮುಂದೆಯೂ ಚಿರಸ್ಥಾಯಿಯಾಗಿ ಉಳಿದಿರುವ ಉಳಿಯಲಿರುವ ಸೌಂದರ್ಯದ ಖನಿ ತಾನೆಂದು ಸಾರಿ ಹೇಳುವಂತೆ.


ಸೌಂದರ್ಯವಿರುವುದು ಸಹಜತೆಯಲ್ಲಿ ಮಾತ್ರವೆಂದೆನಿಸದಿರದು ಈ ಜಲಪಾತವನ್ನು ನೋಡುವಾಗ. ಯಾವಾಗ ಮನುಷ್ಯನೆಂಬ ಜೀವಿ ಸಹಜತೆಗೆ ಸಂಸ್ಕಾರವೆಂಬ ಚೌಕಟ್ಟನ್ನು ನಿರ್ಮಿಸತೊಡಗಿದನೊ, ಈ ಸಹಜತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳತೊಡಗಿದನೊ ಆವಾಗ ಸಹಜ ಸೌಂದರ್ಯ ಕ್ಷೀಣವಾಗತೊಡಗಿತು ಮಾತ್ರವಲ್ಲ ಮುಂದೆ ಅಪಾಯದ ಸೂಚನೆಯೂ ದೊರಕತೊಡಗಿತು. ಅನಾದಿ ಕಾಲದಿಂದಲೂ ಯಾವ ಸಂಸ್ಕೃತಿಯೇ ಆಗಲಿ ಪ್ರಕೃತಿ ಎದುರು ನಿಂತು ಜಯಿಸಿದ್ದೇ ಇಲ್ಲ. ಅಂತಿಮ ನಗೆ ಪ್ರಕೃತಿಯದ್ದೇ. ಈ ಹಿನ್ನೆಲೆಯಲ್ಲಿ ನೋಡಿದಾಗ ಮಾನವನ ಜೀವನವೂ ಹಾಗೆಯೇ ಅಲ್ಲವೆ? ಯಾರು ಸಹಜ ಜೀವನಕ್ಕೆ ಹತ್ತಿರವಾಗಿರುತ್ತಾನೋ ಆತನು ಯಾವಾಗಲೂ ಸಂಸಾರವೆಂಬ ಬಂಧನದಿಂದ ದೂರವಾಗಿರುತ್ತಾನೆ. ಕೆಲವರಿಗೆ ಸಂಸ್ಕೃತಿಯೊಂದಿಗೆ ಬದುಕು ಇಷ್ಟವಾದರೆ ಕೆಲವರಿಗೆ ಪ್ರಕೃತಿಯೊಂದಿಗೆ ಬದುಕುವುದು ಶ್ರೇಷ್ಠವೆನಿಸುವುದು. ಇಲ್ಲಿ ಯಾವುದಕ್ಕೂ ಆಕ್ಷೇಪವಲ್ಲ. ಸಂಸ್ಕೃತಿಯೂ ಬೇಕು ಪ್ರಕೃತಿಯೂ ಬೇಕು. ಆದರೆ ಅದರಲ್ಲಿ ತನ್ನ ಸ್ವಭಾವಕ್ಕೆ ಯಾವುದು ಸಹ್ಯವೋ ಅದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇರಬೇಕು. 


ಇತ್ತ ಮೈಸೂರಿನ ವೃಂದಾವನ... ಇದು ಸಂಸ್ಕೃತಿ. ಪ್ರಕೃತಿಯಲ್ಲಿ ಸಹಜವಾಗಿ ಹರಿಯುತ್ತಿದ್ದ ನೀರನ್ನು ತಡೆ ಹಿಡಿದು, ಅದರಿಂದ ನೀರಾವರಿ ಬೇಸಾಯ ಮಾಡಿ ಬದುಕು ಕಟ್ಟುವ ಕ್ರಿಯೆ. ಅದರೊಡನೆ ನೀರನ್ನು ಬೇಕಾದಷ್ಟೆ ಬೇಕೆನಿಸುವಲ್ಲಿ ಬಿಟ್ಟು ಅದರಿಂದ ಕಾರಂಜಿಗಳನ್ನು ಸೃಷ್ಟಿಸಿ, ನೀರನ್ನು ಹತೋಟಿಯಿಂದ ಚಲಿಸುವಂತೆ ಮಾಡಿ ವಿಧವಿಧದ  ಬಣ್ಣಗಳನ್ನು ಸೇರಿಸಿ, ನೋಡುಗರನ್ನು ಆಕರ್ಷಿಸಲೆಂದೇ ಥಳುಕು ಬಳುಕಿನ ಸೌಂದರ್ಯವನ್ನು ಸೃಷ್ಟಿಸಿ ನಿತ್ಯವೂ ತಾರುಣ್ಯದಲ್ಲಿರುವಂತೆ ಸಾಧನೆಯಲ್ಲಿ ತೊಡಗಿರುವ ತರುಣರಂತೆ ಇರುವುದೇ ಈ ವೃಂದಾವನ. ಇಲ್ಲಿ ಸಂಪೂರ್ಣ ಸಂಸ್ಕೃತಿಯ ಅನಾವರಣವಾಗುತ್ತದೆ. ಅತ್ತ ದೇವ ನಿರ್ಮಿತ ಜಲಪಾತದಂಥ ಸೌಂದರ್ಯ, ಇತ್ತ ಮಾನವ ನಿರ್ಮಿತ ವೃಂದಾವನದಂಥ ಚಾತುರ್ಯ. ಇದರ ನಡುವೆ ಬದುಕಿದಾಗ ಅಲ್ಲಿರುವುದೇ ಜೀವನದ ಮಾಧುರ್ಯ. ಅತಿಯಾದರೆ ಎಲ್ಲವೂ ಅಂಕೆಯಲ್ಲಿರದು ಎನುವಂತೆ ಅತಿಯಾದ ಸಂಸ್ಕಾರವಾಗಲಿ ಅತಿಯಾದ ಸಹಜತೆಯಾಗಲಿ ಸೌಖ್ಯವನ್ನು ತಾರದು. ಅಂತೆಯೇ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಲು ಬಹಳ ಸಾಧನೆ ಬೇಕು. ನಿತ್ಯವೂ ಅದರೊಳಗೆ ತನ್ಮಯತೆ ಇರಬೇಕು. ಕಾಲಕಾಲಕ್ಕೆ ಬೇಕು ಬೇಡಗಳನ್ನು ತಿಳಿದುಕೊಂಡು ಸಂಸ್ಕೃತಿಯು ವಿಕೃತಿ ಆಗದಂತೆ ನೋಡಿಕೊಳ್ಳುತ್ತಿರಬೇಕು. ಉದಾಹರಣೆಗೆ ವೃಂದಾವನದ ಸೌಂದರ್ಯ ಕಾಪಾಡಿಕೊಂಡು ಬರಲು ಬಹಳ ಮುತುವರ್ಜಿ ಬೇಕು ಮಾತ್ರವಲ್ಲ ಆರ್ಥಿಕವಾಗಿ ಬಹಳ ದುಬಾರಿಯೂ ಹೌದು. ಆದರೆ ಜಲಪಾತಗಳ ಸೌಂದರ್ಯವು ಹಾಗಲ್ಲ. ನಿರ್ವಹಣೆಯ ಜವಾಬ್ದಾರಿ ಇಲ್ಲದೆ, ಚಿಕ್ಕಾಸು ಖರ್ಚಿಲ್ಲದೆ ನಿತ್ಯ ನೂತನವಾಗಿ ಇರುವುದೇ ಇದರ ಹಿರಿಮೆ.  


ಮಾನವರಲ್ಲಿಯೂ ಹಾಗೇ ಅಲ್ಲವೆ. ಕೆಲವರು ವೃಂದಾವನದಂತೆ ಬದುಕಿದರೆ ಕೆಲವರು ಜಲಪಾತದಂತೆ... ಮನೆ ಸಾಮಾನು ಜೋಡಿಸಿಡುವುದಾಗಲಿ, ಬಂದ ಅತಿಥಿಗಳೊಡನೆ ವ್ಯವಹರಿಸುವುದಾಗಲಿ, ತಿನ್ನುವ ಆಹಾರದಲ್ಲಾಗಲಿ, ವ್ಯವಹಾರದಲ್ಲಾಗಲಿ, ಉಡುವ ಬಟ್ಟೆಯಲ್ಲಾಗಲಿ ಪ್ರತಿಯೊಂದರಲ್ಲೂ ಅಚ್ಚುಕಟ್ಟು. ಉದಾಹರಣೆಗೆ ಒಂದು ಗ್ಲಾಸನ್ನೇ ತೆಗೆದುಕೊಳ್ಳುವುದಾದರೆ ಕಾಪಿ ಕುಡಿಯುವ ಗ್ಲಾಸುಗಳು ಬೇರೆ, ನೀರು ಕುಡಿಯುವ ಗ್ಲಾಸುಗಳು ಬೇರೆ. ನೆಂಟರಿಷ್ಟರು ಬಂದಾಗ ಅವರಿಗೆ ಕೊಡುವ ಗ್ಲಾಸುಗಳು ಬೇರೆ, ಕೆಲಸದವರಿಗೆ ಗ್ಲಾಸುಗಳು ಬೇರೆ. ದೊಡ್ಡವರಿಗೆ ಬೇರೆ, ಮಕ್ಕಳಿಗೆ ಬೇರೆ. ಅದರಲ್ಲೂ ವೈಯುಕ್ತಿಕವಾಗಿ ಅವರವರದ್ದೇ ಗ್ಲಾಸುಗಳು ಬೇರೆ ಬೇರೆ. ನಿತ್ಯಕ್ಕೆ ಬಳಸುವ ಗ್ಲಾಸುಗಳು ಬೇರೆ ನೈಮಿತ್ತಿಕಕ್ಕೆ ಬಳಸುವವು ಬೇರೆ.. ಹೀಗೆ ಪ್ರತಿಯೊಂದರಲ್ಲೂ ಯಾವುದೋ ಒಂದು ಶಿಸ್ತನ್ನು ಕಾಪಾಡಿಕೊಂಡು ಜೀವನವೆಂದರೆ ಶಿಸ್ತಿನ ಪರಿಪಾಲನೆ ಎನ್ನುವಂತೆ ಶಿಸ್ತನ್ನೇ ಪ್ರಧಾನವಾಗಿಸಿದವರು. ಚಪ್ಪಲಿ ಕಳಚಿ ಇಡುವಲ್ಲಿ, ಬಟ್ಟೆ ಒಣಗಿಸುವಲ್ಲಿ, ಉಟಕ್ಕೆ ಕೂರುವಲ್ಲಿ, ಮಾತಾಡುವಲ್ಲಿ, ಶಿಷ್ಠಾಚಾರಗಳಲ್ಲಿ ಹೀಗೆ ಎಲ್ಲೆಲ್ಲೂ ಅಚ್ಚುಕಟ್ಟುತನ ಎದ್ದು ಕಾಣುವಂತೆ ಇರಲು ಬಯಸುವವರು. ಹೆಚ್ಚಾಗಿ ಪೇಟೆ ಪಟ್ಟಣಗಳಲ್ಲಿ ಇಂಥ ಪ್ರವೃತ್ತಿ ಹೆಚ್ಚಾಗಿ ಕಂಡುಬಂದರೂ ಹಳ್ಳಿಗಳಲ್ಲೂ ಇಂತಹ ಶಿಸ್ತನ್ನು ಕಾಪಾಡಿಕೊಂಡು ಬರುವ ಹಲವಾರು ಮನೆತನಗಳಿವೆ. ನನಗನಿಸುವುದು ಇವರೆಲ್ಲರ ಬದುಕು ಮೈಸೂರಿನ ವೃಂದಾವನದಂತೆ ಅತ್ಯಂತ ಸಂಸ್ಕಾರಯುಕ್ತವಾಗಿರುವುದು. ಮಾತ್ರವಲ್ಲ ನೋಡುವವರಿಗೂ ಆಕರ್ಷಕವಾಗಿರುವುದು. ಅದೇವೇಳೆಯಲ್ಲಿ ಇಂತಹ ಶಿಸ್ತನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವುದೂ ಒಂದು ವಿಶಿಷ್ಠವಾದ ಕಲೆಯೆಂದೇ ಹೇಳಬಹುದು.


ಇನ್ನು ಕೆಲವರು ಜಲಪಾತದಂತೆ ಬದುಕುವವರು. ಸಹಜತೆಯನ್ನೇ ಉಸಿರಾಗಿಸಿದವರು ಹಾಗೂ ಅದರಲ್ಲಿ ಸುಖವನ್ನು ಕಾಣುವವರು. ನೋಡುವವರ ದೃಷ್ಟಿಗೆ ಇವರ ಜೀವನ ಅಶಿಸ್ತಿನಂತೆ ಕಾಣಬಹುದು. ಆದರೆ ಸಹಜ ಜೀವನದ ಸಂತೃಪ್ತಿ ಅದು ಅನುಭವಿಸಿದವನಿಗೇ ಗೊತ್ತು. ಏನು ಸಹಜ ಜೀವನವೆಂದರೆ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟವಾಗಬಹುದು. ಆದರೆ ಸ್ಥೂಲವಾಗಿ ಹೇಳಬೇಕಾದರೆ ದೇಶ ಕಾಲಕ್ಕನುಸಾರವಾಗಿ ಯಾವುದೇ ಅತಿಯಾದ ಕಟ್ಟುಪಾಡುಗಳಿಲ್ಲದೆ ತನ್ನ ಆತ್ಮತೃಪ್ತಿಗೋಸ್ಕರ ಬದುಕುವುದು ಅಥವಾ ಅಥವಾ ಪ್ರಕೃತಿಗನುಗುಣವಾಗಿ ಪ್ರದರ್ಶನದ ಆಸಕ್ತಿ ಇಲ್ಲದೆ ಜೀವಿಸುವುದೇ ಸಹಜ ಬದುಕು. ಹೇಗೆ ಜಲಪಾತವು ಯಾವುದೇ ಕಟ್ಟುಪಾಡುಗಳಿಲ್ಲದೆ ಸ್ವಚ್ಛಂದವಾಗಿ ಮುನ್ನುಗ್ಗಿ ಹರಿಯುವುದೋ ಆ ತೆರದಿ. ಇಂಥ ಸ್ವಭಾವದವರಿಗೆ ಯಾವುದೇ ಸಂಸ್ಕೃತಿಗಳು ಬಂಧನವಾಗುವವು. ಬೆಳಿಗ್ಗೆ ಎದ್ದೊಡನೆ ಮುಖ ತೋಳೆಯಲು ಸ್ನಾನಕ್ಕೆ ಬಿಸಿ ನೀರೇ ಬೇಕಾಗಿಲ್ಲ. ಎದ್ದೊಡನೆ ಕುಡಿಯಲು ಕಾಪಿಯಾದರೂ ಸರಿ ಚಾಯವಾದರೂ ಸರಿ ಒಂದು ವೇಳೆ ಇಲ್ಲದಿದ್ದರೂ ಏನೂ ತೊಂದರೆ ಇಲ್ಲ. ತಿಂಡಿ ಊಟಗಳಲ್ಲಿ ಅಂಥ ಕಟ್ಟು ಪಾಡುಗಳಿಲ್ಲ. ಕೈಗೆ ಸಿಕ್ಕ ಗ್ಲಾಸು ಕಾಪಿ ಕುಡಿಯಲೂ ಆಗುತ್ತದೆ ನೀರು ಕುಡಿಯಲೂ ಆಗುತ್ತದೆ. ಒಂದು ವೇಳೆ ಚೊಂಬಿನಿಂದಲೇ ನೀರು ಕುಡಿಯುವುದೂ ಅಸಹಜವಲ್ಲ ಇಂಥವರಿಗೆ. ಇತರರೊಡನೆ ಇವರ ವ್ಯವಹಾರವೂ ಯಾವುದೇ ವಿಶೇಷ ಶಿಷ್ಟಾಚಾರಗಳಿಲ್ಲದೆ ನಡೆಯುತ್ತದೆ. (ಉದಾಹರಣೆಗೆ ನನ್ನಂತೆಯೇ ಎಂದು ಹೇಳಬಹುದು. ನಾನು ಸಣ್ಣಂದಿನಿಂದಲೇ ಸಹಜತೆಯೊಂದಿಗೇ ಬದುಕಿರುವುದರಿಂದ ಅತಿಯಾದ ಯಾವ ಶಿಷ್ಟಾಚಾರಗಳು ನನಗೆ ಹಿಡಿಸದು. ಅಂತೆಯೇ ಮುಖವಾಡಗಳಿಲ್ಲದ ಸಹಜ ವ್ಯವಹಾರವೆಂದರೆ ನನಗಿಷ್ಟ.)

ಹಾಗೆಂದು ಆತ್ಮಾಭಿಮಾನದ ಕೊರತೆ ಇವರಿಗಿರುವುದಿಲ್ಲ. ಎಲ್ಲರಂತೆ ಮಾನಾಪಮಾನಗಳಿಗೆ ಸ್ಪಂದಿಸಿದರೂ ಯಾವುದೇ ತಕರಾರುಗಳೂ ಇರಲಾರದು. ಎಲ್ಲ ವಿಚಾರಗಳಲ್ಲೂ ಎಲ್ಲರೊಡನೆ ಹೊಂದಿಕೊಂಡು ಹೋಗಲು ಇಂಥವರಿಗೆ ಅಸಾಧ್ಯವೇನಲ್ಲ. ಜಲಪಾತಗಳು ಯಾವುದೇ ತಡೆ ಬಂದರೂ ಬೇರೆ ಸೂಕ್ತವಾದ ದಾರಿ ಹುಡುಕಿ ಮುನ್ನಡೆದಂತೆ ಇಂಥವರು ಕೂಡ ಯಾವ ಕಾಲಕ್ಕೂ ವ್ಯವಹಾರದಲ್ಲಿ ಶಿಸ್ತೆಂಬ ತಡೆಗಳುಂಟಾದರೆ ಅದರಿಂದ ಹೊರಬರಲು ಬೇರೆ ಮಾರ್ಗವನ್ನು ಹುಡುಕಿಕೊಂಡಾರೇ ಹೊರತು ಶಿಸ್ತಿಗಂಟಿಕೊಂಡೇ ಇರಲಾರರು. ಜೀವನಕ್ಕೆ ಬೇಕಾದಷ್ಟೇ ಶಿಸ್ತು ಬೇಕೇ ಹೊರತು ಶಿಸ್ತಿಗಾಗಿಯೇ ಜೀವನವೆಂಬ ನೀತಿ ಇವರಲ್ಲಿಲ್ಲ. ಅಂದರೆ ಅನ್ಯರಿಗೋಸ್ಕರ ಬದುಕದೆ ತನ್ನ ಆತ್ಮ ತೃಪ್ತಿಗೋಸ್ಕರ ಬದುಕುವುದೇ ಇವರ ಧ್ಯೇಯವಾಗಿರುತ್ತದೆ. ಉದಾಹರಣೆಗೆ ಜನ ಮೆಚ್ಚಬೇಕೆಂದು ವಿವಿಧ ವಿನ್ಯಾಸಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡ ವೃಂದಾವನ ತೆರದಿ ಇರದೆ, ತನ್ನಂತೆ ತಾನು ಹರಿದು ಹೋದಾಗ ಅದೇನು ಸೊಬಗಿದೆಯೋ ಅದನ್ನು ಬೇಕಾದರೆ ಸವಿಯಿರಿ ಬೇಡದಿದ್ದರೆ ಬಿಡಿ. ನಾನಂತು ನನಗಿಷ್ಟ ಬಂದಂತೆಯೇ ಮುನ್ನುಗ್ಗುವುದು ಎಂಬ ಭಾವವಿರುವ ಜಲಪಾತಗಳಂತೆ. ನಾವು ಯಾವ ತರಹದವರೆಂದು ನಮ್ಮನ್ನು ನಾವು ತಿಳಿದುಕೊಂಡರೆ ಸಾಕು. ವೃಂದಾವನವೂ ಇರಬಹುದು ಜಲಪಾತವೂ ಇರಬಹುದು ಎರಡೂ ಸಹ್ಯವೇ ಅವರವರ ಸ್ವಭಾವಕ್ಕನುಗುಣವಾಗಿ. ಆದರೆ ಇನ್ನೊಬ್ಬರ ಅನುಕರಣೆ ಮಾತ್ರ ನಮಗೆ ಬೇಡ ಸಹಜತೆಯಿಂದಿರುವ ಸಂಸ್ಕಾರ ನಮ್ಮದಾಗಲಿ....

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post