|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ದೈತ್ಯ' ಸಂಹಾರಿ – ಅಧಿಕ ರಕ್ತದೊತ್ತಡ

'ದೈತ್ಯ' ಸಂಹಾರಿ – ಅಧಿಕ ರಕ್ತದೊತ್ತಡ

 ವಿಶ್ವ ಅಧಿಕ ರಕ್ತದೊತ್ತಡ ದಿನ –ಮೇ 17ಪ್ರತಿ ವರ್ಷ ಮೇ 17ರಂದು ವಿಶ್ವದಾದ್ಯಂತ “ವಿಶ್ವ ರಕ್ತದೊತ್ತಡ ದಿನ” ಎಂದು ಆಚರಿಸಲಾಗುತ್ತಿದೆ. ವಿಶ್ವ ರಕ್ತದೊತ್ತಡ ಸಂಘದಿಂದ 2005ರಿಂದ ಜಾರಿಗೆ ಬಂದ ಈ ಆಚರಣೆಯ ಮೂಲ ಉದ್ದೇಶ, ರಕ್ತದೊತ್ತಡ ಎಂಬ ‘ಸೈಲೆಂಟ್ ಕಿಲ್ಲರ್’ ರೋಗದ ಕುರಿತಾಗಿ ಹೆಚ್ಚಿನ ಜಾಗೃತಿ ಮೂಡಿಸಿ, ಆದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಆಗಿದೆ.  2022ರ ವಿಶ್ವ ಅಧಿಕ ರಕ್ತದೊತ್ತಡ ಆಚರಣೆಯ ಧ್ಯೇಯ ವಾಕ್ಯ ‘Measure your Blood pressure, control it, Live Longer’. ಅಂದರೆ “ನಿಮ್ಮ ರಕ್ತದೊತ್ತಡವನ್ನು ಆಗಾಗ ನೋಡಿಕೊಳ್ಳಿ, ನಿಯಂತ್ರಿಸಿ ಮತ್ತು ಜಾಸ್ತಿ ಕಾಲ ಬದುಕಿ” ಎಂಬುದಾಗಿದೆ. 


ಅಧಿಕ ರಕ್ತದದೊತ್ತಡ ಎನ್ನುವುದು ಒಂದು ರೋಗ ಎನ್ನುವುದಕ್ಕಿಂತಲೂ ಹಲವಾರು ರೋಗಗಳ ಲಕ್ಷಣ ಎಂದರೂ ತಪ್ಪಲ್ಲ. ಜಗತ್ತಿನಲ್ಲಿ ಜೀವಕ್ಕೆ ಮಾರಕವಾÀಗುವ ಮೊದಲನೇ ರೋಗ ಎಂದರೆ ಹೃದಯ ಸಂಬಂಧಿ ಖಾಯಿಲೆಗಳು. ಈ ಹೃದಯ ಸಂಬಂಧಿ ಖಾಯಿಲೆಯಾದ ಹೃದಯಾಘಾತಕ್ಕೆ ಮೂಲ ಕಾರಣ ಮತ್ತು ಮುನ್ನುಡಿ ಬರೆಯುವ ಮೊದಲ ರೋಗವೇ ಅಧಿಕ ರಕ್ತದೊತ್ತಡ. ಹೃದಯಾಘಾತಕ್ಕೆ ಎರಡನೇ ಮೂಲ ಕಾರಣ ಹಾಗೂ ಸ್ಟ್ರೋಕ್ ಮತ್ತು ಹೃದಯ ವೈಫಲ್ಯಕ್ಕೆ ಮೊದಲನೆ ಮೂಲ ಕಾರಣ ಎಂದರೆ ಅಧಿಕ ರಕ್ತದೊತ್ತಡ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ಸುಮಾರು 10ರಲ್ಲಿ 4 ಮಂದಿಗೆ ತಮಗೆ ಅಧಿಕ ರಕ್ತದ ಒತ್ತಡ ಇದೆ ಎನ್ನುವುದರ ಅರಿವೇ ಇಲ್ಲದಿರುವುದೇ ಬಹುದೊಡ್ಡ ದುರಂತ. ಅತೀ ಸುಲಭವಾಗಿ ಗುರುತಿಸಬಹುದಾದ ಮತ್ತು ಔಷಧಿಗಳಿಂದ ನಿಯಂತ್ರಿಸಬಹುದಾದ ಮತ್ತು ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡಿ ಗುಣ ಪಡಿಸಬಹುದಾದ ರೋಗವಾಗಿದ್ದರೂ ಜನರು ಅಧಿಕ ರಕ್ತದೊತ್ತಡದಿಂದಾಗಿ ಪ್ರಾಣ ಕಳಕೊಳ್ಳುವುದು ಬಹಳ ವಿಷಾಧಕರ ವಿಚಾರವೆಂದರೂ ತಪ್ಪಲ್ಲ. ಜಗತ್ತಿನಾದ್ಯಂತ ಏನಿಲ್ಲವೆಂದರೂ ಸುಮಾರು 1.5 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಿದ್ದು ವರ್ಷವೊಂದರಲ್ಲಿ ಸುಮಾರು 9.5 ಮಿಲಿಯನ್ ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಎಂಬುವುದೇ ಬಹಳ ಸೋಜಿಗ ಮತ್ತು ಅಚ್ಚರಿಯ ವಿಚಾರವೇ ಸರಿ. ಪ್ರತಿ ವರ್ಷ ಸುಮಾರು 17 ಮಿಲಿಯನ್ ಮಂದಿ ಹೃದಯ ಸಂಬಂಧಿ ಖಾಯಿಲೆಯಿಂದ ಸಾವನ್ನಪ್ಪುತ್ತಿದ್ದು ಇದರ ಸಿಂಹ ಅಧಿಕ ರಕ್ತದೊತ್ತಡದಿಂದ ಎಂದರೂ ತಪ್ಪಲ್ಲ. ಅಧಿಕ ರಕ್ತದೊತ್ತಡವಿರುವ ಶೇಕಡಾ 45 ಮಂದಿ ಹೃಯದಾಘಾತ ಮತ್ತು ಶೇಕಡಾ 51 ಮಂದಿ ಸ್ಟ್ರೋಕ್‍ನಿಂದ ಸಾವನ್ನಪ್ಪಿದ್ದಾರೆ ಎಂದರೆ ಈ ರೋಗದ ತೀವ್ರತೆ ಮತ್ತು ಪರಿಣಾಮ ಎಷ್ಟು ಎಂದು ನೀವೇ ಯೋಚಿಸಬಹುದು.


ಯಾಕಾಗಿ ಆಚರಿಸುತ್ತಾರೆ?

1. ಸಾಮಾನ್ಯ ಜನರಲ್ಲಿ ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸಿ ವರ್ಷದಲ್ಲಿ ಒಮ್ಮೆಯಾದರೂ ರಕ್ತದೊತ್ತಡ ಪರೀಕ್ಷಿಸಿ ಕೊಳ್ಳುವಂತೆ ಮನ ಒಲಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ.

2. ರಕ್ತದೊತ್ತಡ ತೊಂದರೆ ಇರುವವರು ನಿಯಮಿತವಾಗಿ ರಕ್ತದೊತ್ತಡ ಪರೀಕ್ಷಿಸಿಕೊಂಡು, ನಿರಂತರವಾಗಿ ಔಷಧಿ ತೆಗೆದುಕೊಳ್ಳುವಂತೆ ಮಾಡುವ ಉದ್ದೇಶದಿಂದ ಆಚರಿಸಲಾಗುತ್ತದೆ.

3. ಯುವಕರಲ್ಲಿ ದೇಹದ ತೂಕ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಮತ್ತು ಸಮತೋಲಿತ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ.

4. ಜನರಲ್ಲಿ ಕೆಟ್ಟ ಅಭ್ಯಾಸಗಳಾದ ಮಧ್ಯಪಾನ, ಧೂಮಪಾನ ವರ್ಜಿಸಿ ಮತ್ತು ಆಲಸಿ ಜೀವನ ಶೈಲಿ ಬದಲಿಸಿಕೊಂಡು, ಕರಿದ ತಿಂಡಿ, ಜಂಕ್ ಆಹಾರ ವರ್ಜಿಸಲು ಪ್ರೇರೇಪಿಸುವ ಸಲುವಾಗಿ ಈ ಆಚರಣೆ ನಡೆಸಿ, ರಕ್ತದೊತ್ತಡಕ್ಕೆ ಕಾರಣವಾಗುವ ಈ ಅಂಶಗಳ ಬಗ್ಗೆ ಅರಿವು ಮೂಡಿಸುವ ಸದುದ್ದೇಶವನ್ನು ಹೊಂದಿದೆ

5. ಅಧಿಕ ರಕ್ತದೊತ್ತಡದಿಂದ ಕಣ್ಣು, ಹೃದಯ, ಮೆದುಳು , ಕಿಡ್ನಿಗಳಿಗೆ ಉಂಟಾಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ

 

ರಕ್ತದ ಒತ್ತಡ ಎಂದರೇನು? 

ಸಾಮಾನ್ಯವಾಗಿ ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುತ್ತಿರುವ ರಕ್ತವು ತನ್ನ ರಕ್ತನಾಳಗಳ ಮೇಲೆ ಉಂಟುಮಾಡುವ ಒತ್ತಡದ ಪ್ರಮಾಣವನ್ನು ಸ್ಮಿಗ್ಮೊಮಾನೋಮೀಟರ್ ಎಂಬ ಯಂತ್ರದ ಮೂಲಕ ದಾಖಲಿಸಲಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡವನ್ನು ಎರಡು ಅಂಕಿಗಳಲ್ಲಿ ಗುರುತಿಸಲಾಗುತ್ತದೆ. ಉದಾಹರಣೆ 120/80. ಇಲ್ಲಿ ತೋರಿಸಿರುವ ‘ಅಂಶ’ವನ್ನು (ನ್ಯೂಮರೇಟರ್) ರಕ್ತದ ಸಂಕುಚನದ ಒತ್ತಡ ಅಥವಾ ಸಿಸ್ಟೊಲಿಕ್ ಬ್ಲಡ್ ಫ್ರೆಶರ್ ಎಂದೂ, ಛೇದವನ್ನು (ಡಿನೋಮೀನೆಟರ್) ರಕ್ತದ ವ್ಯಾಕುಚನ ಒತ್ತಡ ಅಥವಾ ಡಯಾಸ್ಟೋಲಿಕ್ ಬ್ಲಡ್ ಫ್ರೆಶರ್ ಎಂದು ಕರೆಯಲಾಗುತ್ತದೆ. ಈ ರಕ್ತದ ಒತ್ತಡ ವ್ಯಕ್ತಿಯ ವಯಸ್ಸಿಗನುಗುಣವಾಗಿ ಯಾವುದು ಸಹಜ ಮತ್ತು ಅಸಹಜ ಎಂದು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ 30ರಿಂದ 40 ವಯಸ್ಸಿನಲ್ಲಿ 120/80 ಮತ್ತು 40-60 ವಯಸ್ಸಿನಲ್ಲಿ 130/90 ಸಹಜ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಸಂಕುಚನ ರಕ್ತದೊತ್ತಡ ಅತಿಯಾದ ಒತ್ತಡವಾದಾಗ, ಸಂತಸವಾದಾಗ ಜೋರಾಗಿ ವ್ಯಾಯಾಮ ಮಾಡಿದಾಗ ಅಥವಾ ಓಡಿದಾಗ, ಹಾಗೂ ಊಟ ಮಾಡಿದ ಬಳಿಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ವ್ಯಾಕುಚನ ಒತ್ತಡ ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಏರುಪೇರಾಗುವುದಿಲ್ಲ. ರಕ್ತದ ಒತ್ತಡ ಜಾಸ್ತಿಯಾದಾಗ ನಿದ್ರಾಹೀನತೆ, ತಲೆ ನೋವು, ಎದೆ ಬಡಿತ ಜಾಸ್ತಿಯಾಗುವುದು. ಕಣ್ಣು ಮಂಜಾಗುವುದು, ಸುಸ್ತು, ದ್ವಂದ್ವ ಮನಸ್ಸು, ಕಿವಿಯೊಳಗೆ ಸದ್ದು, ಉಸಿರಾಟದ ತೊಂದರೆ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ನಿಮಗೆ ಅಧಿಕ ರಕ್ತದ ಒತ್ತಡ ಇಲ್ಲವೋ ಎಂಬುದನ್ನು ನಿಮ್ಮ ವಯಸ್ಸು, ದೇಹದ ತೂಕ, ಜೀವನ ಶೈಲಿ ಇತ್ಯಾದಿಗಳನ್ನು ಪರಿಗಣಿಸಿ ವೈದ್ಯರೇ ನಿರ್ಧರಿಸುತ್ತಾರೆ.

 

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಕೆಲಸ ಮತ್ತು ಕಲುಷಿತ ವಾತಾವರಣದಿಂದಾಗಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಎಳೆಯ ಮಕ್ಕಳಿಂದ ಹಿಡಿದು ಹದಿಹರೆಯದಲ್ಲೂ, ಮಧ್ಯ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಮೊದಲೆಲ್ಲಾ ಇಳಿ ವಯಸ್ಸಿನಲ್ಲಿ ಹಿಡಿದು ಹದಿಹರೆಯದಲ್ಲೂ ಮಧ್ಯ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತದೆ.ಮೊದಲೆಲ್ಲಾ ಇಳಿವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಧುಮೇಹ ಮತ್ತು ರಕ್ತದೊತ್ತಡ ಈಗೀಗ ಯುವಕರಲ್ಲಿ ಮಕ್ಕಳಲ್ಲೂ ಕಾಣಸಿಗುವುದು ಬಹಳವಿಷಾದದ ಮತ್ತು ನೋವಿನ ಸಂಗತಿ. ಅಧಿಕ ರಕ್ತದÀ ಒತ್ತಡದಿಂದಾಗಿ ಜನರು ದಿನಬೆಳಗಾಗುವುದರಲ್ಲಿ ಸಾಯದಿದ್ದರೂ ಈ ಅಧಿಕರಕ್ತದೊತ್ತಡ ಕ್ಷಣಕ್ಷಣಕ್ಕೂ ಮನುಷ್ಯನನ್ನೂ ಸಾಯಿಸುತ್ತಿದೆ.


ಪಾಶ್ವವಾಯು, ಹೃದಯ ವೈಫಲ್ಯ, ಹೃದಯಾಘಾತ, ಮೂತ್ರಪಿಂಡದ ವೈಫಲ್ಯ ಮುಂತಾದವುಗಳಿಗೆ ಅಧಿಕ ರಕ್ತದೊತ್ತಡ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ. ಹೆಚ್ಚಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಲ್ಲಿ ಗುರಿ ಅಂಗಗಳಾದ (ಟಾರ್ಗೆಟ್ ಅರ್ಗನ್ಸ್) ಕಣ್ಣು, ಹೃದಯ ಮೆದುಳು ಮತ್ತು ಮೂತ್ರಪಿಂಡ ಹಚ್ಚು ಹಾನಿಗೊಳಗಾಗುತ್ತದೆ. ಹೀಗಾಗದಂತೆ ತಡೆಗಟ್ಟಲು ರಕ್ತದ ಒತ್ತಡವನ್ನು ನಿರಂತರವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯ. ಸೂಕ್ತ ಚಿಕಿತ್ಸೆ, ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸೂಕ್ತ ಮಾರ್ಪಾಡು ಮಾಡಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟು ಕೊಂಡಲ್ಲಿ ಮೇಲೆ ತಿಳಿಸಿದ ರೋಗಗಳನ್ನು ನಿಯಂತ್ರಿಸಿ ನೂರುಕಾಲ ಸುಖವಾಗಿ ಬಾಳಬಹುದು. ಇಲ್ಲವಾದಲ್ಲಿ ಸಾವು ಯಾವ ಕ್ಷಣದಲ್ಲೂ ಬರಸಿಡಿಲಿನಂತೆ ಬಂದೊದಗಬಹುದು.


ರಕ್ತದೊತ್ತಡವನ್ನು ನಿಯಂತ್ರಿಸುವುದು ಹೇಗೆ?

ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ, ಅನಾರೋಗ್ಯಕರವಾದ ಆಹಾರ ಮತ್ತು ಜೀವನಶೈಲಿ, ಕಲುಷಿತ ಆಹಾರ, ಕಲುಷಿತ ವಾತಾವರಣ ಮತ್ತು ಅರ್ಥಿಕ ಅಭಿವೃದ್ಧಿಗಳಿಂದಾಗಿ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ರಕ್ತದೊತ್ತಡ ಮತ್ತು ಮಧುಮೇಹರೋಗಗಳ ಸಂಖ್ಯೆ ಗಣನೀಯವಾಗಿ ಏರಿದೆ. 


1. ಜೀವನ ಶೈಲಿಯ ನಿಯಂತ್ರಣ

ಐಷಾರಾಮಿ ಜೀವನ ಶೈಲಿಯನ್ನು ತೊರೆಯಿರಿ. ನಿಯಮಿತವಾದ ವ್ಯಾಯಮ ಮಾಡುವುದನ್ನು ಅಭ್ಯಾಸಮಾಡಬೇಕು. ನಿಯಮಿತವಾದ ವ್ಯಾಯಾಮದಿಂದ ಮಾಂಸಖಂಡಗಳು ಬಲಗೊಂಡು ಬೊಜ್ಜುಕರಗಿ ರಕ್ತದೊತ್ತಡ ಮತ್ತು ಕೊಲೆಸ್ಟ್ರೋಲ್ ನಿಯಂತ್ರಣದಲ್ಲಿರುತ್ತದೆ.


ಧೂಮಪಾನ, ಮಧ್ಯಪಾನವನ್ನು ಕಡ್ಡಾಯವಾಗಿ ತ್ಯಜಿಸಬೇಕು. ನಿರಂತರ ಧೂಮಪಾನ ನಿಮ್ಮ ಜೀವಿತಾವಧಿಯನ್ನು 15 ರಿಂದ 20 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡ, ಹೃದಯಾಘಾತ ಮತ್ತು ಅರ್ಬುಧ ರೋಗಗÀಳಿಗೆ ನಾಂದಿ ಹಾಡುತ್ತದೆ. ಧೂಮಪಾನ ಮಾಡುವುದರಿಂದ ರಕ್ತನಾಳಗಳ ಒಳಗೆ ಪಾಚಿಕಟ್ಟಿಕೊಂಡು ಅಥವಾ ರಕ್ತನಾಳಗಳು ಕುಗ್ಗಿಕೊಂಡು ರಕ್ತದೊತ್ತಡವನ್ನು ಉಂಟುಮಾಡಬಹುದು. ಮಧ್ಯಪಾನ ಕೂಡ ನಿಮ್ಮ ಮಾಂಸಖಂಡಗಳಿಗೆ ಮತ್ತು ರಕ್ತನಾಳಗಳಿಗೆ ಘಾಸಿ ಮಾಡಿ ರಕ್ತದೊತ್ತಡ ಹೆಚ್ಚಿಸುತ್ತದೆ. ಮಧ್ಯಪಾನ ಯಾವತ್ತೂ ಒಳ್ಳೆಯದಲ್ಲ.  


ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವುನ್ನು ಕಡಿಮೆ ಮಾಡಬೇಕು. ಕೆಲಸದ ಸಮಯದಲ್ಲಿ ಅತಿಯಾದ ಒತ್ತಡದಿಂದಾಗಿ ರಸದೂತಗಳ ಸ್ರವಿಸುವಿಕೆಯಲ್ಲಿ ಏರುಪೇರಾಗಿ ರಕ್ತದೊತ್ತಡಕ್ಕೆ ಮುನ್ನುಡಿ ಬರೆಯಬಹುದು. ದೇಹದ ಆರೋಗ್ಯದ ಮುಂದೆ ಯಾವುದೂ ಗಣ್ಯವಲ್ಲ. ಒತ್ತಡ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಲ್ಲಿ ಕೆಲವನ್ನೂ ತೊರೆದು ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ. ಸಾಕಷ್ಟು ಆಳವಾದ ಉಸಿರಾಟ, ಪ್ರಾಣಾಯಾಮ, ಯೋಗ, ಧ್ಯಾನ ಮುಂತಾದವುಗಳಿಂದ ನಿಮ್ಮ ದೇಹದ ಮತ್ತು ಮನಸ್ಸಿನ ಮೇಲಿನ ಉತ್ತಡವನ್ನು ಕಡಿಮೆಮಾಡಿ ಆರೋಗ್ಯವಂತರಾಗಿ ಹೆಚ್ಚುಕಾಲ ಬದುಕುವುದರಲ್ಲಿಯೇ ನಿಮ್ಮ ಒಳಿತು ಅಡಗಿದೆ. ಒತ್ತಡದ ಜೀವನದಿಂದಾಗಿ ನಿದ್ರೆಗೂ ಭಂಗಬಂದೀತು. ನಿದ್ರಾಹೀನತೆಯಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರೋಲ್ ಪ್ರಮಾಣ ಹೆಚ್ಚಾಗುತ್ತದೆ. ದಿನವೊಂದಕ್ಕೆ ಕನಿಷ್ಟ 6-7 ಗಂಟೆಗೂ ಸುಖನಿದ್ರೆ ನಮ್ಮ ದೇಹಕ್ಕೆ ಅತೀ ಅಗತ್ಯ.


2. ಆರೋಗ್ಯಕರವಾದ ಆಹಾರ 

ನಿಮ್ಮದೇಹದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪೂರಕವಾಗುವ ಸಮತೋಲಿತ ಆಹಾರವನ್ನೂ ಸೇವಿಸಿ ನಿಮ್ಮ ದೇಹ, ಹೃದಯ ಮತ್ತು ಮನಸ್ಸು ಆರೋಗ್ಯಕರವಾಗಿರಲೂ ಪೂರಕವಾಗುವಂತಹ ತಾಜಾ ಹಣ್ಣುಗಳು, ಹಸಿ ತರಕಾರಿಗಳು, ಧಾನ್ಯಗಳು ಮತ್ತು ಪೋಷಕಾಂಶಯುಕ್ತ ಸಮೃದ್ಧ ಆಹಾರವನ್ನು ಸೇವಿಸಬೇಕು. ಉಪ್ಪಿನ ಅಂಶ ಜಾಸ್ತಿ ಇರುವಂತಹ ಆಹಾರಗಳಾದ ಉಪ್ಪಿನಕಾಯಿ, ಕರಿದತಿಂಡಿಗಳು ಮತ್ತು ಸಿದ್ಧ ಆಹಾರಗಳನ್ನು ತ್ಯಜಿಸಬೇಕು. ದಿನನಿತ್ಯದ ಆಹಾರಗಳಲ್ಲಿ ನಿಧಾನವಾಗಿ  ಜೀರ್ಣವಾಗುವ ಪುಟ್ಟ ಧಾನ್ಯಗಳು ಅಂಟಿ ಆಕ್ಸಿಡೆಂಟ್‍ಗಳು ಯಥೇಚ್ಚವಾಗಿರುವ ಹಣ್ಣು, ನಾರಿನಂಶ ನೀಡುವ ತರಕಾರಿಗಳು, ಸೊಪ್ಪು ಪಲ್ಲೆಗಳನ್ನು ಹೆಚ್ಚು ಸೇವಿಸಬೇಕು. ಸೋಡಿಯಂ ಅಂಶ ಕಡಿಮೆ ಇರುವ ಬಾಳೆ ಹಣ್ಣು ಕಿತ್ತಳೆ, ಆಲೂಗಡ್ಡೆ, ಮೊಸರು ಮುಂತಾದ ಆಹಾರಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕಾರಿಯಾಗಬಲ್ಲದು. ಅದೇ ರೀತಿ ಪೋಟಾಸಿಯಂ ಜಾಸ್ತಿ ಇರುವ ಬೀನ್ಸ್ ದ್ವಿದಳ ಧಾನ್ಯಗಳು ಮತ್ತು ಹಣ್ಣುಗಳನ್ನು ಹೆಚ್ಚಿಗೆ ಸೇವಿಸಬೇಕು. ದಿನನಿತ್ಯ 3ರಿಂದ 4 ಲೀಟರ್ ನೀರು ನಮ್ಮ ದೇಹದ ವಿಷಕಾರಕ ವಸ್ತುಗಳನ್ನು ಹೊರಹಾಕಲು ಮತು ದೇಹದ ರಕ್ತದೊತ್ತಡವನ್ನು ನಿಯಂತ್ರಿಸಲು ಅತೀ ಅಗತ್ಯ. ಹೆಚ್ಚು ಕೆಫೇನ್ ಇರುವ ಕಾಫಿ, ಇಂಗಾಲಯುಕ್ತ ಪೆಪ್ಸಿ, ಕೋಕ್ ಇತ್ಯಾದಿಗಳು ನಮ್ಮ ದೇಹದ ರಕ್ತದ ಒತ್ತಡವನ್ನು ಹೆಚ್ಚು ಮಾಡುವುದಲ್ಲದೆ ಇತರ ಕ್ಯಾನ್ಸರ್‍ನಂತಹ ರೋಗಗಳಿಗೆ ಮುನ್ನುಡಿ ಬರೆಯಬಹುದು. ನಾವು ಸೇವಿಸುವ ದ್ರವ್ಯದಲ್ಲಿ ಸಕ್ಕರೆಯ ಅಂಶ ನಿಯಮಿತವಾಗಿರಲಿ. ಸಕ್ಕರೆ ನಮ್ಮ ದೇಹದ ತೂಕವನ್ನು ಜಾಸ್ತಿ ಮಾಡಿ ಪರೋಕ್ಷವಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇತ್ತೀಚೆಗೆ ಗ್ರೀನ್ ಟೀ ಕೂಡಾ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಸಿದ್ಧ ಪೇಯಗಳಾದ ಪೆಪ್ಸಿ ಕೋಕ್‌ ಅನ್ನು ಮತ್ತು ಕಾಫಿ, ಟೀಯನ್ನು ತ್ಯಜಿಸಿ, ನೈಸರ್ಗಿಕ ಪೇಯಗಳ ಹಣ್ಣಿನ ರಸ, ಎಳನೀರು, ಕಬ್ಬಿನ ರಸ ಮತ್ತು ಶುದ್ಧ ನೀರು ಇತ್ಯಾದಿಗಳನ್ನು ಸೇವಿಸಿದಲ್ಲಿ ಖಂಡಿತವಾಗಿಯೂ ನಮ್ಮ ಆರೋಗ್ಯಕ್ಕೆ ಪೂರಕ ಎನ್ನುವುದರಲ್ಲಿ ಎರಡು ಮಾತಿಲ್ಲ.


3. ನಿಯಮಿತ ಆರೋಗ್ಯ ತಪಾಸಣೆ ಮತ್ತು ಔಷಧಿ ಸೇವನೆ:

ಸಕಾಲಿಕ ಮತ್ತು ನಿಯಮಿತ ಔಷಧಿಗಳಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು. ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡಿಸಿ ಗುರಿ ಅಂಗಗಳಾದ ಹೃದಯ, ಕಣ್ಣು ಮತ್ತು ಕಿಡ್ನಿಯ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ವೈದ್ಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಔಷಧಿಗಳ ಪ್ರಮಾಣವನ್ನು ನಿಯಂತ್ರಸಬೇಕು. ಸ್ವಯಂ ಮದ್ದುಗಾರಿಕೆ ಯಾವತ್ತೂ ಮಾಡಬಾರದು. ಅಧಿಕ ರಕ್ತದೊತ್ತಡ ಎನ್ನುವುದು ನಿಯಂತ್ರಿಸಬಹುದಾದ ಮತ್ತು ಹತೋಟಿಯಲ್ಲಿಡಬಹುದಾದ ಸಾಮಾನ್ಯ ರೋಗ ಲಕ್ಷಣವಾಗಿದ್ದು, ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಕುತ್ತು ತರಲೂಬಹುದು.


ಕೊನೆಮಾತು: 

ಈ ಶತಮಾನದ ಅತೀ ಸಾಮಾನ್ಯವಾದ ಮತ್ತು ದೈತ್ಯ ಸಂಹಾರಿ ರೋಗ ಅಧಿಕ ರಕ್ತದೊತ್ತಡ ಎಂದರೂ ತಪ್ಪಲ್ಲ. ವಿಪರ್ಯಾಸದ ಮತ್ತು ಸೋಜಿಗದ ವಿಚಾರವೆಂದರೆ ಪ್ರತಿ 10ರಲ್ಲಿ 4 ಮಂದಿಗೆ ತಮಗೆ ರಕ್ತದೊತ್ತಡ ಇದೆ ಎಂಬುದರ ಅರಿವೇ ಇಲ್ಲದಿರುವುದು. ಅಧಿಕ ರಕ್ತದೊತ್ತಡದ ಪಾಲು ಮಾತ್ರ ಸಿಂಹ ಪಾಲು. ಅನಾರೋಗ್ಯಕರವಾದ ಆಹಾರ ಪದ್ಧತಿ ಅಧಿಕ ರಕ್ತದೊತ್ತಡಕ್ಕೆ ಮೂಲಕಾರಣವಾಗಿದ್ದು ಶೇಕಡಾ 30% ಮಂದಿಯಲ್ಲಿ ಅಧಿಕ ಉಪ್ಪಿನ ಸೇವನೆ ಮತ್ತು 20% ಮಂದಿಯಲ್ಲಿ ಕಡಿಮೆ ಪೋಟಾಸಿಯಂ ಸೇವನೆ ಕಾರಣವಾಗಿರುತ್ತದೆ. ಸುಮಾರು 20 ಶೇಕಾಡ ಮಂದಿಯಲ್ಲಿ ನಿಯಮಿತ ವ್ಯಾಯಾಮದ ಕೊರತೆ ಹಾಗೂ ಶೇಕಡಾ 30 ಮಂದಿಯಲ್ಲಿ ಅಧಿಕ ಬೊಜ್ಜು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ಮಧ್ಯಪಾನ ಮತ್ತು ಧೂಮಪಾನ ಸೇರಿಕೊಂಡು ಅಧಿಕ ರಕ್ತದೊತ್ತಡವನ್ನು ಸಾವಿನ ಸಾಮ್ರಾಜ್ಯದ ಅನಬಿಷಿಕ್ತ ದೊರೆಯನ್ನಾಗಿ ಖಾಯಂ ಆಗಿ ಪ್ರತಿಷ್ಠಾಪಿಸಿ ಬಿಟ್ಟಿದೆ. ಇನ್ನೊಂದು ವಿಷಾದನೀಯ ವಿಚಾರವೆಂದರೆ ರೋಗಿಗಳು ತಮಗೆ ಅಧಿಕ ರಕ್ತದೊತ್ತಡವಿದ್ದರೂ, ದಿವ್ಯ ನಿರ್ಲಕ್ಷ, ಅನಾರೋಗ್ಯಕರ ಆಹಾರ, ಅನಿಯಂತ್ರಿತ ಜೀವನ ಶೈಲಿ, ಅಕಾಲಿಕ ಔಷಧಿ ಸೇವನೆ ಮತ್ತು ಉಡಫೆ ದೋರಣೆಯಿಂದಾಗಿ ರಾತ್ರಿ ಕಂಡ ಬಾವಿಗೆ ಹಗಲೂ ಬೀಳುವಂತೆ ತಮ್ಮ ಮರಣಕ್ಕೆ ತಾವೇ ಮುನ್ನುಡಿ ಬರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಆರೋಗ್ಯಕಾರ ಆಹಾರ ಮತ್ತು ಜೀವನ ಶೈಲಿ ನಿಯಂತ್ರಿತ ಮತ್ತು ಸಕಾಲಿಕ ಔಷಧಿಗಳ ಸೇವನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ತುರ್ತು ಕಾರ್ಯ ಆಗಬೇಕಿದೆ. ಅದಲ್ಲದೆ ಅತೀ ಸುಲಭವಾಗಿ ಗುರುತ್ತಿಸಲಾಗುವ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಲಾಗುವ ರೋಗಗಳಲ್ಲಿ ಒಂದಾದ ಅಧಿಕ ರಕ್ತದೊತ್ತಡ, ಇಂದಿನ ಕಾಲಘಟ್ಟದಲ್ಲಿ ಜಾಗತಿಕವಾಗಿ ಬಹು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಬೆಳೆದು ನಿಂತಿರುವುದು ನಮ್ಮ ಈ ಶತಮಾನದ ಬಹು ದೊಡ್ಡ ಕುಚೋದ್ಯ ಮತ್ತು ವ್ಯಂಗ್ಯವೆಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ನಾವೆಲ್ಲ ರಚನಾತ್ಮಕವಾಗಿ ಯೋಚಿಸಿ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಬದಲಿಸಿದಲ್ಲಿ ರಕ್ತದೊತ್ತಡವನ್ನು ತಡೆಗಟ್ಟಬಹುದು. ಹಾಗಾದಲ್ಲಿ ಮಾತ್ರ ವಿಶ್ವ ರಕ್ತದೊತ್ತಡ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದು ಅರ್ಥಪೂರ್ಣವಾಗಬಹುದು ಮತ್ತು ಅದರಲ್ಲಿಯೇ ಮನುಕುಲದ ಉನ್ನತಿ ಅಡಗಿದೆ.

-ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd (U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 09845135787


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post