ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಕಾಣಿಸಿಕೊಂಡ ಹೊಸತಾದ ಜ್ವರ ಇದಾಗಿದ್ದು, ಆಂಗ್ಲ ಭಾಷೆಯಲ್ಲಿ ಈ ಜ್ವರವನ್ನು ‘ವೆಸ್ಟ್ ನೈಲ್ ಫೀವರ್’ ಎಂದು ಕರೆಯಲಾಗುತ್ತದೆ. ಈ ಜ್ವರ ಕಾಗೆ ಸೇರಿದಂತೆ ಚಿಕ್ಕ ಚಿಕ್ಕ ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಪಕ್ಷಿಯಿಂದ ಮತ್ತೊಂದು ಪಕ್ಷಿಗೆ ಅಥವಾ ಮನುಷ್ಯನಿಗೆ ಸೊಳ್ಳೆ ಹಾಗೂ ಸೋಂಕಿತ ಪಕ್ಷಿಯ ಕಡಿತದಿಂದ ಹರಡುತ್ತದೆ.
ವೆಸ್ಟ್ ನೈಲ್ ಜ್ವರ ವೈರಾಣುವಿನಿಂದ ಹರಡುತ್ತದೆ. ಆರ್‌ಎನ್‍ಎ ಗುಂಪಿಗೆ ಸೇರಿದ ಪ್ಲಾವಿ ವೈರಸ್ ಎಂಬ ಉಪ ಜಾತಿಗೆ ಸೇರಿದ ವೈರಾಣು ಇದಾಗಿರುತ್ತದೆ. ಝಿಕಾ ವೈರಾಣು ಡೆಂಗ್ಯೂ ವೈರಾಣು ಮತ್ತು ಹಳದಿ ಜ್ವರದ ವೈರಾಣು ಕೂಡಾ ಇದೇ ಉಪ ಜಾತಿಗೆ ಸೇರಿರುತ್ತದೆ. ಸೊಳ್ಳೆಗಳ ಮುಖಾಂತರ ಹರಡುವ ಈ ವೈರಾಣು ಬಹಳ ವಿರಳವಾದ ಖಾಯಿಲೆ ಆಗಿರುತ್ತದೆ. ಸುಮಾರು 80 ಶೇಕಡಾ ಮಂದಿಗಳಲ್ಲಿ ಈ ಜ್ವರದ ಯಾವುದೇ ಚಿಹ್ನೆಗಳು ಕಾಣಿಸಿಕೊಳ್ಳದೆ ಇರಬಹುದು. ಸುಮಾರು 20 ಶೇಕಡಾ ಮಂದಿಯಲ್ಲಿ ಜ್ವರ, ತಲೆನೋವು ವಾಂತಿ ಮತ್ತು ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಕೇವಲ ಒಂದು ಶೇಕಡಾ ಮಂದಿಯಲ್ಲಿ ಮೆನಿಜೈಂಟಿಸ್‍ಗೆ ತುತ್ತಾಗಿ ಮಾರಣಾಂತಿಕವಾಗಿ ಕಾಣಬಹುದು.
ಶಂಕಿತ ವ್ಯಕ್ತಿಯನ್ನು ಅಥವಾ ಪಕ್ಷಿಯನ್ನು ಸೊಳ್ಳೆ ಕಡಿದಾಗ ಗುಳ್ಳೆಗಳ ಈ ಸೋಂಕಿತ ರಕ್ತದ ಮುಖಾಂತರ ವೈರಾಣುವನ್ನು ತಮ್ಮ ದೇಹಕ್ಕೆ ಸೇರಿಕೊಳ್ಳುತ್ತದೆ. ಈ ಸೊಳ್ಳೆಗಳು ಇತರ ಆರೋಗ್ಯವಂತ ವ್ಯಕ್ತಿಯನ್ನು ಕಡಿದಾಗ ಆ ವ್ಯಕ್ತಿಗೂ ಈ ರೋಗ ಹರಡುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಈ ರೋಗ ನೇರವಾಗಿ ಹರಡುವುದಿಲ್ಲ. ಇದಲ್ಲದೆ, ರಕ್ತ ಪೂರಣ ಮಾಡುವಾಗ ಪ್ರಸವ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಅಥವಾ ಎದೆ ಹಾಲು ಮುಖಾಂತರವೂ ಹರಡಬಹುದು. ಅಂಗಾಂಗ ಕಷಿ ಮಾಡುವಾಗಲೂ ಈ ರೋಗ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ 60 ವಯಸ್ಸಿನವರಿಗಿಂತ ಜಾಸ್ತಿ ವಯಸ್ಕರಲ್ಲಿ ಈ ಜ್ವರ ಹೆಚ್ಚು ಕಂಡು ಬರುತ್ತದೆ.
ರೋಗದ ಲಕ್ಷಣಗಳು:
ಸೊಳ್ಳೆ ಕಡಿತವಾದ ದಿನದಿಂದ 3 ರಿಂದ 14 ದಿನಗಳ ಬಳಿಕ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಜ್ವರ, ತಲೆನೋವು, ನಡುಕ, ವಿಪರೀತ ಬೆವರಿಳಿಕೆ, ಸುಸ್ತು, ಆಯಾಸ, ವಾಂತಿ ವಾಕರಿಕೆ, ಹಸಿವಿಲ್ಲದಿರುವುದು, ಬೇಧಿ ಸಾಮಾನ್ಯವಾಗಿರುತ್ತದೆ. ಕೆಲವರಲ್ಲಿ ಕೆಂಪು ಗುಳ್ಳೆಗಳು ಕಂಡು ಬರುತ್ತದೆ. ವೈರಾಣು ಕೇಂದ್ರೀಯ ನರಮಂಡಲಕ್ಕೆ ವ್ಯಾಪಿಸಿದಲ್ಲಿ ಅಪಸ್ಮಾರ, ಮೆನಿಂಜೈಂಟಿಸ್, ಕುತ್ತಿಗೆ ಸೆಟೆದುಕೊಳ್ಳುವುದು, ಮತಿಭ್ರಮಣೆ ಉಂಟಾಗಬಹುದು. ಸ್ನಾಯುಗಳು ಸಂಕುಚಿತಗೊಂಡು ಸ್ನಾಯುಗಳು ಹಿಡಿದುಕೊಂಡಂತಾಗುತ್ತದೆ. ಮೆದುಳು ದ್ರವ್ಯದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಒಂದು ಶೇಕಡಾ ರೋಗಿಗಳಲ್ಲಿ ಮೆದುಲಿಗೆ ಹಾನಿ ಜಾಸ್ತಿಯಾಗಿ ದೇಹದ ಮೇಲಿನ ನಿಯಂತ್ರಣ ತಪ್ಪಿ ಹೋಗಿ ಕೋಮಾ ಅಥವಾ ಮರಣ ಸಂಭವಿಸಬಹುದು. ಮಧು ಮೇಹ ಅಧಿಕರಕ್ತದೊತ್ತಡ ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ಈ ಸಾಧ್ಯತೆ ಜಾಸ್ತಿ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ?
ವೈರಾಣು ಜ್ವರದ ಸಾಮಾನ್ಯ ಲಕ್ಷಣಗಳು ಸೊಳ್ಳೆ ಕಡಿತದ ಚರಿತ್ರೆ, ರಕ್ತ ಪರೀಕ್ಷೆ, ಮೆದುಳು ದ್ರವ್ಯದ ಪರೀಕ್ಷೆ ಮತ್ತು ಎಲಿಸಾ (ELISA) ಎಂಬ ಪರೀಕ್ಷೆ ಮುಖಾಂತರ ವೈರಾಣು ವಿರುದ್ಧದ ಆಂಟಿಬಾಡಿಗಳನ್ನು ಪತ್ತೆ ಹಚ್ಚಿ ರೋಗವನ್ನು ಗುರುತಿಸಲಾಗುತ್ತದೆ.
ತಡೆಗಟ್ಟುವುದು ಹೇಗೆ?
ಈ ರೋಗಕ್ಕೆ ಲಸಿಕೆ ಲಭ್ಯವಿರುವುದಿಲ್ಲ. ಈ ಕಾರಣದಿಂದ ಎಲ್ಲಾ ಸಾಮಾನ್ಯ ರೋಗಗಳಿಗೆ ವಹಿಸುವ ಎಲ್ಲಾ ಎಚ್ಚರಿಕೆ ವಹಿಸತಕ್ಕದು. ಸೊಳ್ಳೆ ಕಡಿತದಿಂದ ಪಾರಾಗಬೇಕಾದ ಸೊಳ್ಳೆ ವಿನಾಶಕ ದ್ರಾವಣಗಳು ಸೊಳ್ಳೆ ಪರದೆಗಳು, ಮೈಮುಚ್ಚುವ ಬಟ್ಟೆ, ತೋಳಿನ ಅಂಗಿ ಧರಿಸಿ ಸೊಳ್ಳೆ ಕಡಿತದಿಂದ ಪಾರಾಗಬೇಕು. ಸೊಳ್ಳೆ ಉತ್ಪತ್ತಿಯಾಗಲು ಕಾರಣವಾಗುವ ನೀರು ನಿಲ್ಲುವ ತಾಣಗಳನ್ನು ನಿರ್ಮೂಲನ ಮಾಡಬೇಕು. ಶಂಕಿತ ರೋಗವಿರುವ ಜಾಗಕ್ಕೆ ಪ್ರಯಾಣ ಮಾಡಬಾರದು.
ಚಿಕಿತ್ಸೆ ಹೇಗೆ:
ಎಲ್ಲಾ ವೈರಾಣುಗಳ ಚಿಕಿತ್ಸೆಯಂತೆ ಈ ರೋಗಕ್ಕೆ ಸಾಕಷ್ಟು ವಿಶ್ರಾಂತಿ, ಸಾಕಷ್ಟು ದ್ರವಾಹಾರ ನೀಡಿ ರೋಗಿಯನ್ನು ಉಪಚರಿಸಬೇಕು. ಮೈಕೈನೋವು, ತಲೆ ನೋವಿಗೆ ನೋವು ನಿವಾರಕ ಔಷಧಿ ನೀಡಬಹುದು ಅತಿಯಾದ ಸುಸ್ತು, ನಿಶ್ಯಕ್ತಿ ಇದ್ದಲ್ಲಿ ಗ್ಲುಕೋಸ್ ದ್ರಾವಣ ರಕ್ತನಾಳಗಳ ಮುಖಾಂತರ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾತಿ ಮಾಡಿ ನೀಡಲಾಗುತ್ತದೆ. ಮಧುಮೇಹ ಮತ್ತು ವಯಸ್ಕರಲ್ಲಿ ವಿಶೇಷ ಕಾಳಜಿ ನೀಡಬೇಕಾಗುತ್ತದೆ. ಹೆಚ್ಚಿನವರಲ್ಲಿ ಈ ಕಾಗೆ ಜ್ವರ ಯಾವುದೇ ಚಿಕಿತ್ಸೆ ನೀಡದೆ (80%) ಗುಣವಾಗುತ್ತದೆ. ಉಸಿರಾಟ ತೊಂದರೆ ಇದ್ದಲ್ಲಿ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಶಂಕಿತ ವ್ಯಕ್ತಿಗೆ ಬ್ಯಾಕ್ಟಿರಿಯಾ ಸೋಂಕು ತಗುಲದಂತೆ ಎಚ್ಚರ ವಹಿಸಲಾಗುತ್ತದೆ.
ಕೊನೆಮಾತು:
ಈ ವೆಸ್ಟ್ ನೈಲ್ ವೈರಾಣುಗಳು ಮೊದಲ ಬಾರಿಗೆ 1937 ರಲ್ಲಿ ಉಗಾಂಡಾದ ವೆಸ್ಟ್‍ನೈಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳಲ್ಲಿ ಕಂಡು ಬಂತು. ಈ ಕಾರಣದಿಂದಲೇ ಈ ವೈರಾಣುವಿಗೆ ವೆಸ್ಟ್ ನೈಲ್ ವೈರಾಣು ಎಂದು ಹೆಸರು ಬಂದಿದೆ. 1953 ರಲ್ಲಿ ನೊದಲ ಬಾರಿಗೆ ನೈಲ್ ಬೆಟ್ಟದ ಕಾಗೆಗಳಲ್ಲಿ ಮತ್ತು ಹಕ್ಕಿಗಳಲ್ಲಿ ಈ ವೈರಾಣು ಪತ್ತೆ ಹಚ್ಚಲಾಯಿತು. ಈ ಕಾರಣದಿಂದಲೇ ಕಾಗೆ ಜ್ವರ ಮೂಲ ಹೆಸರು ಸೇರಿಕೊಂಡಿತು. ಕುದುರೆಗಳಲ್ಲಿ ಹೆಚ್ಚು ಸಾವಿಗೆ ಕಾರಣವಾಗುವ ಈ ವೈರಣುವಿಗೆ ಲಸಿಕೆ ಇದೆಲ್ಲೂ ಇಲ್ಲ. ಮನುಷ್ಯರಿಗೆ ಸರಿಯಾದ ಲಸಿಕೆ ಇನ್ನೂ ಬಂದಿಲ್ಲ. ಹೆಚ್ಚಿನ ಎಲ್ಲಾ ಹಕ್ಕಿಗಳ ದೇಹದಲ್ಲಿ ಇರುವ ಈ ವೈರಾಣು, ಸೊಳ್ಳೆಗಳ ಮುಖಾಂತರ ಮಾನವನಿಗೆ ಹರಡುತ್ತದೆ. ಮನುಷ್ಯರಲ್ಲಿ ನೇರವಾಗಿ ನರಮಂಡಲಕ್ಕೆ ವ್ಯಾಪಿಸಿದಲ್ಲಿ ಶೇಕಡಾದ 10 ಮಂದಿಯಲ್ಲಿ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹಕ್ಕಿಜ್ವರ, ಹಂದಿ ಜ್ವರ, ಇಲಿ ಜ್ವರ, ಬಾವಲಿ ಜ್ವರ, ಮಂಗಜ್ವರದ ಪಟ್ಟಿಗೆ ಇದೀಗ ಕಾಗೆ ಜ್ವರ ಸೇರಿಕೊಂಡು ಮತ್ತು ಮನುಷ್ಯಕುಲವನ್ನು ದಂಗು ಬಡಿಸಿರುವುದಂತೂ ನಿಜವಾದ ಮಾತು.
-ಡಾ|| ಮುರಲೀ ಮೋಹನ್ ಚೂಂತಾರು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ