ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ

Upayuktha
0

ಮಂಗಳೂರು: ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಇಸಿ) 2021-22ರ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಹೊಸ ಸ್ವಾಯತ್ತ ಸ್ಥಾನಮಾನವನ್ನು ನೀಡಲಾಗಿದೆ.


ಕಾಲೇಜಿಗೆ 2018ರ ಸ್ವಾಯತ್ತ ಕಾಲೇಜುಗಳ ಯೋಜನೆಯ ಅಡಿಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನೀಡಿದ ಸ್ವಾಯತ್ತತೆಯನ್ನು 2019ರಲ್ಲಿ ಕಾಲೇಜು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅನುಮೋದನೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ರಿಯೋ ಡಿಸೋಜಾ ತಿಳಿಸಿದ್ದಾರೆ.


ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುಜಿಸಿ ತಜ್ಞರ ತಂಡವು 2020ರ ನವಂಬರ್ 28, 29 ರಂದು ಕಾಲೇಜಿಗೆ ಭೇಟಿ ನೀಡಿ ಕಾಲೇಜನ್ನು ಅನೇಕ ನಿಯತಾಂಕಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಿತ್ತು. ರಾಜ್ಯದ ಕೇವಲ ಬೆರಳೆಣಿಕೆಯಷ್ಟು ಇಂಜಿನಿಯರಿಂಗ್ ಕಾಲೇಜುಗಳು ಮಾತ್ರ ಸ್ವಾಯತ್ತ ಸ್ನಾನಮಾನವನ್ನು ಪಡೆದಿರುವುದು ಕಾಲೇಜಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ ಎಂದರು.


ಕಾಲೇಜು ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದ್ದು ಸ್ವಾಯತ್ತ ಸಂಸ್ಥೆಯ ಸ್ನಾನಮಾನವನ್ನು ಪಡೆದಿರುವುದು ಈ ಸಂಗತಿಗೆ ಮತ್ತಷ್ಟು ಪುಷ್ಟಿಯನ್ನು ನೀಡಿದೆ. ಸೇವೆ ಮತ್ತು ಉತ್ಕೃಷ್ಟತೆ ಎಂಬ ಅದರ ಧೇಯವಾಕ್ಯಕ್ಕೆ ಅನುಗುಣವಾಗಿ ಕಾಲೇಜಿನ ಕಠಿಣ ಪರಿಶ್ರಮದಿಂದಾಗಿ ಈ ಮಾನ್ಯತೆ ದೊರಕಿದ್ದು ಇದು ಕಾಲೇಜು ಪ್ರಾರಂಭದಿಂದಲೂ ಅಭ್ಯಾಸ ಮಾಡುತ್ತಿರುವ ಶೈಕ್ಷಣಿಕ ಚೌಕಟ್ಟು ಮತ್ತು ನೀತಿಗಳಿಗೆ ಕನ್ನಡಿ ಹಿಡಿದಂತಿದೆ ಎಂದರು.


ಉದ್ಯಮದ ಅಗತ್ಯತೆಗಳನ್ನು ಗುರುತಿಸುವ ಮೂಲಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು, ಆಯ್ಕೆಯ ಚುನಾಯಿತ ಕೋರ್ಸ್‌ಗಳನ್ನು ನೀಡಲು, ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ನಡೆಸಲು ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನವನ್ನು ನಡೆಸಲು ಸ್ವಾಯತ್ತತೆಯು ಕಾಲೇಜಿಗೆ ಅನುಕೂಲಕರವಾಗಲಿದೆ.


ಕಾಲೇಜು ಅನುಸರಿಸುತ್ತಿರುವ ಫಲಿತಾಂಶ-ಆಧಾರಿತ ಶಿಕ್ಷಣದ (ಒಬಿಇ) ಕಾರಣದಿಂದಾಗಿ, ಎಸ್‌ಜೆಇಸಿ ಈಗಾಗಲೇ ನ್ಯಾಷನಲ್ ಬೋರ್ಡ್ ಆಫ್ ಅಕೆಡಿಟೇಶನ್ (ಎನ್‌ಬಿಎ) ಯಿಂದ ತನ್ನ ನಾಲ್ಕು ಬಿ.ಇ, ಕೋರ್ಸುಗಳಿಗೆ ಮಾನ್ಯತೆ ಹೊಂದಿದ್ದು, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ನಿಂದ ಪ್ರತಿಷ್ಠಿತ ಎ + ದರ್ಜೆಯನ್ನು ಸಹ ಪಡೆದಿದೆ. 19 ವರ್ಷಗಳ ಇತಿಹಾಸ ಹೊಂದಿರುವ ಕಾಲೇಜಿನ ಕ್ಯಾಂಪಸ್‌ನಲ್ಲಿ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ.‌


ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ವಂ ವಿಲೈಡ್ ಪ್ರಕಾಶ್ ಡಿಸೋಜಾ, ಉಪನಿರ್ದೇಶಕರ ವಂ ರೋಹಿತ್ ಡಿಕೋಸ್ತಾ ಮತ್ತು ವಂ ಆಲಿನ್ ರಿಚರ್ಡ್ ಡಿಸೋಜಾ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ, ಐಕ್ಯೂಎಸಿ ಸಂಯೋಜಕ ಡಾ.ಶ್ರೀರಂಗ ಭಟ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top