ವಿದ್ಯುತ್ ಎಷ್ಟು ಒಳ್ಳೆಯ ಆಳೋ ಅಷ್ಟೇ ಕೆಟ್ಟ ಯಜಮಾನ ಎಂಬುದು ಸಾರ್ವಜನಿಕವಾಗಿ ತಿಳಿದ ವಿಚಾರ. ಆದರೂ ಈ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಅದನ್ನು ಪುನಃ ನೆನಪಿಸೋದು ಒಳ್ಳೆದು ಅನ್ನಿಸಿದೆ.
ಮೊದಲು ನಿಮ್ಮ ಮನೆಗೆ ಕರೆಂಟು ಬರುವ ಮೈನ್ ಸ್ವಿಚ್‌ನಿಂದಲೇ ವಿವರಿಸಲು ಸುರು ಮಾಡುತ್ತೇನೆ. ತಮ್ಮ ತಮ್ಮ ಮನೆಯಲ್ಲಿ ಮೈನ್ ಸ್ವಿಚ್ ಎಲ್ಲಿದೆ ಎಂದೇ ತಿಳಿಯದ ಎಷ್ಟೋ ಮಂದಿ ಮನೆಯ ಸದಸ್ಯರು ಇದ್ದಾರೆ. ಆದರೆ ನೆನಪಿಡಿ ಮನೆಯ ಪ್ರತಿಸದಸ್ಯನೂ ತಮ್ಮ ತಮ್ಮ ಮನೆಯ ಮೈನ್ ಸ್ವಿಚ್ ಎಲ್ಲಿದೆಯೆಂಬುದು ತಿಳಿದಿರಬೇಕಾದುದು ಅತೀ ಅವಶ್ಯ. ಇಷ್ಟೇ ಸಾಕೇ? ಊಹುಂ ಖಂಡಿತಾ ಸಾಲದು. ಮೈನ್ ಸ್ವಿಚ್ಚಿನ ಎದುರು ಭಾಗ ಯಾವುದೇ ಅಡೆ ತಡೆ ಇಲ್ಲದೆ ಸಂಚರಿಸುವಂತಿರಬೇಕು. ಕಾನೂನು ಪ್ರಕಾರ ಮೈನ್ ಸ್ವಿಚ್ಚಿನ ಎದುರು ಭಾಗದಲ್ಲಿ ಒಂದು ಮೀಟರ್ ವರೆಗೆ ಯಾವುದೇ ವಸ್ತು ಇಡುವಂತಿಲ್ಲ. ಯಾಕೆಂಬ ಸಂದೇಹವೇ? ಆಪತ್ಕಾಲದಲ್ಲಿ ಯಾರಾದರೂ ಓಡಿ ಬರುವುದು ಮೈನ್ ಸ್ವಿಚ್ಚಿನೆಡೆಗೇ ತಾನೆ. ಅದರ ಎದುರು ಭಾಗದಲ್ಲಿ ಏನೇನೋ ವಸ್ತುಗಳು ಇಟ್ಟು ಸಂಚಾರ ಮಾಡಲು ಸಾಧ್ಯವಾಗದೇ ಇದ್ದರೆ ಆಪತ್ಕಾಲದಲ್ಲಿ ಅಪಾಯ ತಪ್ಪಿಸಲು ಸಾಧ್ಯವಾಗದೇ ಹೋಗಿ ಯಾರದೋ ಜೀವಕ್ಕೇ ಕುತ್ತಾಗಬಹುದಲ್ಲವೇ?
ಆದ್ದರಿಂದ ಸ್ಥಳ ಉಪಯೋಗ ಇಲ್ಲದೆ ಹಾಳಾಗುತ್ತದೆಂದು ಕಂಡರೂ ಮೈನ್ ಸ್ವಿಚ್ ನ ಎದುರು ಬದಿಯ ಮೂರು ಅಡಿಗಳಷ್ಟು ಸ್ಥಳವನ್ನು ಸದಾ ಖಾಲಿಯಾಗಿ ಇಡಿ. ಅಷ್ಟೇ ಸಾಲದು. ಮೈನ್ ಸ್ವಿಚ್ಚಿನ ಎದುರು ಭಾಗ ನೀರು ಅಥವಾ ತೇವಾಂಶ ಇರಲೇಬಾರದು. ಮೈನ್ ಸ್ವಿಚ್‌ನ ಎದುರು ಬದಿಯನ್ನು ಸಾಧ್ಯವಿದ್ದರೆ ರಬ್ಬರ್ ಮ್ಯಾಟ್ ಹಾಕಿ ಸಂರಕ್ಷಿಸಿ. ನೆನಪಿಡಿ ಈ ರಬ್ಬರ್ ಮ್ಯಾಟ್ ಯಾವ ಕಾಲದಲ್ಲೂ ಒದ್ದೆಯಾಗಿರಬಾರದು. ಕಾಲಕಾಲಕ್ಕೆ ಅದನ್ನು ಬದಲಾಯಿಸಲೇಬೇಕು. ಅದು ಒಣಗಿಯೇ ಇರ ಬೇಕಾದುದು ಅತೀ ಅವಶ್ಯ. ಇದು ಸಾಧ್ಯ ಇಲ್ಲದವರು ಒಂದು ಒಣ ಮರದ ಹಲಿಗೆಯನ್ನು ಆ ಸ್ಥಳದಲ್ಲಿ ಇಡಬಹುದು. ಈ ಹಲಿಗೆಯನ್ನು ಗಟ್ಟಿಯಾಗಿ ಕುಳಿತು ಕೊಳ್ಳಿಸಿರಬೇಕು. ಇದಕ್ಕೆ ಯಾವ ರೀತಿಯ ಚಲನೆಯೂ ಇರಬಾರದು. ಈ ಹಲಿಗೆ ಚಂಡಿಯಾಗಿದ್ದರೆ ಅಪಾಯಕ್ಕೇ ಆಹ್ವಾನ ಎಂಬುದೂ ನೆನಪಿರಲಿ. ಆದ್ದರಿಂದ ಇದು ಸದಾ ಒಣಗಿಯೇ ಇರಬೇಕು.
ಇನ್ನು ನಿಮ್ಮಲ್ಲಿ ಇನ್ ವರ್ಟರ್ ಇದ್ದರೆ ಅದರ ಸ್ವೀಚ್ ಕೂಡಾ ಆನ್ / ಆಫ್ ಮಾಡುವುದರ ಬಗ್ಗೆ ಮನೆಯ ಪ್ರತಿ ಸದಸ್ಯನೂ ತಿಳಿದು ಕೊಂಡಿರಬೇಕು. ಆಪತ್ಕಾಲದಲ್ಲಿ ಮೈನ್ ಸ್ವಿಚ್ ನೊಂದಿಗೆ ಇನ್ವರ್ಟರ್ ನ ಸ್ವಿಚ್ ಕೂಡಾ ಆಫ್ ಮಾಡಲೇಬೇಕು. ಇಲ್ಲದಿದ್ದರೆ ಅಪಾಯ ನಿಮ್ಮ ಹಿಂದೆಯೇ ಇದೆ ಎಂದೇ ಲೆಕ್ಕ. ಓನ್ ಇರುವ ಇನ್ವರ್ಟರ್ ಕೂಡ ವಿದ್ಯುತ್ ಶಕ್ತಿಯನ್ನು ಹೊರಗೆ ಬಿಡುತ್ತಿರುತ್ತದೆ. ಆದ್ದರಿಂದ ಅಪಾಯದ ಸಂದರ್ಭದಲ್ಲಿ ಮೈನ್ ಸ್ವಿಚ್ಚಿನೊಂದಿಗೆ ಇನ್ವರ್ಟರ್ ಕೂಡಾ ಆಫ್ ಮಾಡಲೇಬೇಕು.
ಇನ್ನು ರಬ್ಬರ್ ಮ್ಯಾಟ್, ಮರದ ಹಲಿಗೆ ಯಾವುದೂ ಇಲ್ಲದ ಸಂದರ್ಭದಲ್ಲಿ ಮೈನ್ ಸ್ವಿಚ್ ನ ಯಾವುದೇ ಲೋಹದ ಭಾಗಗಳನ್ನು ಮುಟ್ಟದೆ ಅದರ ವಿದ್ಯುತ್ ನಿರೋಧಕ ಭಾಗವನ್ನು ಮಾತ್ರ ಮುಟ್ಟಿ ಸ್ವಿಚ್ ಆಫ್ ಮಾಡಬೇಕು. ಇನ್ನು ಮೈನ್ ಸ್ವಿಚ್ಚಿನ ಬೇರೆ ಯಾವುದೇ ಭಾಗಕ್ಕೂ ದೇಹದ ಯಾವುದೇ ಭಾಗ ತಗಲದಂತೆ ಜಾಗ್ರತೆ ವಹಿಸಿ ಮೈನ್ ಸ್ವಿಚ್ಚನ್ನು ಆಫ್ ಮಾಡಬೇಕು. ವಿದ್ಯುತ್ ನಿರೋಧಕ ವಸ್ತುವಿನಿಂದ ತಯಾರಿಸಿದ ಭಾಗ ಇಲ್ಲದ ಮೈನ್ ಸ್ವಿಚ್ ಆಗಿದ್ದರೆ ಒಣ ಮರದ ತುಂಡನ್ನು ಉಪಯೋಗಿಸಿ ಸ್ವಿಚ್ ಆಫ್ ಮಾಡಬಹುದು. ಅಥವಾ ಯಾವುದಾದರೂ ವಿದ್ಯುತ್ ನಿರೋಧಕ ವಸ್ತು (ರಬ್ಬರ್ ಗ್ಲೌಸ್ ಅಥವಾ ಇನ್ನೇನಾದರೂ) ವನ್ನು ಉಪಯೋಗಿಸಿ ಸ್ವಿಚ್ ಆಫ್ ಮಾಡಬಹುದು. ಇಂತಹ ವಸ್ತುಗಳನ್ನು ಆಪತ್ಕಾಲದಲ್ಲಿ ಕೈಗೆ ಸಿಗುವಂತೆ ಮೈನ್ ಸ್ವಿಚ್ಚಿನ ಸಮೀಪವೇ ಇಟ್ಟು ಕೊಳ್ಳಿ.
ನೆನಪಿಡಿ ಇಪ್ಪತ್ತು ಇಪ್ಪತೈದು ವರ್ಷದಿಂದ ನಮಗೇನೂ ಅಪಾಯ ಬಂದಿಲ್ಲ ಆದ್ದರಿಂದ ನಾನು ಮೈನ್ ಸ್ವಿಚ್ ಕಡೆ ನೋಡೋದೇ ಇಲ್ಲ ಎಂಬ ಧೋರಣೆ ಬೇಡವೇ ಬೇಡ. ಅಪಾಯ ಮೊದಲೇ ಹೇಳಿ ಬರೋದಿಲ್ಲ ಎಂಬುದು ನೆನಪಿರಲಿ. ಸದಾ ಜಾಗ್ರತರಾಗಿಯೇ ಇರುವವರು ಮಾತ್ರ ವಿದ್ಯುತ್ತಿನ ಯಜಮಾನರಾಗಬಲ್ಲರು.
ನೆನಪಿಡಿ ಕೆಲವು ಸಲ ಮೈನ್ ಸ್ವಿಚ್ಚೇ ಅಪಾಯದ ತಾಣವಾಗಿರಬಹುದು. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಮೈನ್ ಸ್ವಿಚ್‌ಗೆ ಸೀದಾ ಕೈ ಹಾಕಬೇಡಿ. ಮೆಟಲ್ ಮೈನ್ ಸ್ವಿಚ್‌ಗಳನ್ನು ಓಪನ್ ಮಾಡಿ ನೋಡಿ (ಕೇರಳದಲ್ಲಿ ಮೆಟಲ್ ಮೈನ್ ಸ್ವಿಚ್ಚೇ ಆಗ ಬೇಕಿದ್ದರೆ ಕರ್ನಾಟಕದಲ್ಲಿ ಹಾಗಿಲ್ಲ) ಈ ಮೈನ ಸ್ವಿಚ್ಚಿನ ಒಳ ಭಾಗದಲ್ಲಿ ಎರಡು ರಚನೆ ಇದೆ. ಒಂದು ಸ್ವಿಚ್ ಭಾಗ. ಇನ್ನೊಂದು ಫ್ಯೂಸ್ ಯುನಿಟಿನ ಭಾಗ. ಆದ್ದರಿಂದ ಇದನ್ನು ಸ್ವಿಚ್ ಫ್ಯೂಸ್ ಯುನಿಟ್ ಅನ್ನುತ್ತಾರೆ. ನಾವು ಆಡು ಭಾಷೆಯಲ್ಲಿ ಮೈನ್ ಸ್ವಿಚ್ ಅನ್ನುತ್ತೇವಷ್ಟೆ.
ಇಡೀ ಸ್ವಿಚ್ ಪ್ಯೂಸ್ ಯುನಿಟಿನಲ್ಲಿ ಕೆಳಭಾಗ ಸ್ವಿಚ್ ಭಾಗವಾಗಿದೆ. ಅಲ್ಲಿ ಒಂದು ಚೌಕಾಕಾರದ ಸರಳಿನ ಮೇಲೆ ಇಂಗ್ಲಿಷ್ ಯು ಆಕಾರದ (U) ರಚನೆಯ ಎರಡು ತುಂಡುಗಳನ್ನು ಕಾಣಬಹುದು. ಅವುಗಳೇ ಸ್ವಿಚ್ ಹಾಕಿದಾಗ ವಿದ್ಯುತ್ ಸಂಪರ್ಕ ಕೊಡೋದು ಕಡಿಯೋದು ಮಾಡುವ ವಸ್ತು. ಈ ಚೌಕಾಕಾರದ ರಚನೆ ಎಂದರೆ ಚೌಕಾಕಾರದ ಕಬ್ಬಿಣದ ಸರಳಿನ ಮೇಲೆ ಫೈಬರ್ ನ ಚೌಕಾಕಾರದ ಪೈಪನ್ನು ಕುಳ್ಳಿರಿಸಿರುವುದಾಗಿರುತ್ತದೆ. ಮೈನ್ ಸ್ವಿಚ್ ಹಳತಾದಂತೆ ಅಥವಾ ಈ "ಯೂ" ಆಕಾರದ ರಚನೆ ಯಾವುದೋ ಕಾರಣಕ್ಕೆ ಸಡಿಲಾದರೆ ಲೂಸ್ ಕನೆಕ್ಷನ್ ಬಂದು ಆ ಫೈಬರ್ ರಚನೆ ಒಡೆದು ಅಥವಾ ಹೊತ್ತಿ ಹೋಗುತ್ತದೆ.
ಇದರೊಂದಿಗೆ ಅದನ್ನು ಕುಳ್ಳಿರಿಸಿದ ಕಬ್ಬಿಣದ ಸರಳು ಸೀದಾ ವಿದ್ಯುತ್ತಿನೊಂದಿಗೆ ಸಂಪರ್ಕ ಹೊಂದುತ್ತದೆ. ಪರಿಣಾಮ ಮೈನ್ ಸ್ವಿಚ್ ಮುಟ್ಟಿದವನಿಗೆ ಶಾಕ್. ಇನ್ನು ಅರ್ತ್ ವಯರ್ ಕನೆಕ್ಷನ್ ಎಲ್ಲೆಲ್ಲಿ ಹೋಗಿದೆಯೋ ಅಲ್ಲೆಲ್ಲಾ ಶಾಕ್. ಇದಲ್ಲದೆ ಅದು ಚಿಕ್ಕದಾಗಿ ಒಡೆದು ಮಾತ್ರ ಹೋಗಿದ್ದರೆ ವಿದ್ಯುತ್ ಅರ್ತಿಗೆ ಸೋರಿ ಹೋಗಿ ನಿಮ್ಮ ಕರೆಂಟು ಮೀಟರ್ ಅತಿ ವೇಗವಾಗಿ ತಿರುಗತೊಡಗುತ್ತದೆ. ಇಎಲ್‌ಸಿಬಿ ಕೂರಿಸಿ ಇರುವ ಮನೆಗಳಲ್ಲಿ ಅಪಾಯ ಬಾರದಂತೆ ಇದು ಸಂಪರ್ಕವನ್ನು ಕಡಿತಗೊಳಿಸಿ ತಡೆಗಟ್ಟುತ್ತದೆ. ಹಳೇ ಕಾಲದಲ್ಲಿ ವಿದ್ಯುತ್ ಸಂಪರ್ಕ್ ಪಡೆದ ಮನೆಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ELCB ಹೊಸದಾಗಿ ಕೆಲವು ಕಡೆ ಕುಳ್ಳಿರಿಸಿರುತ್ತಾರೆ ಇಲ್ಲದಿದ್ದಲ್ಲಿ ಅದು ಇರುವುದಿಲ್ಲ.
ಅಪಾಯದ ಸಮಯದಲ್ಲಿ ಮೈನ್ ಸ್ವಿಚ್‌ನ ಬಳಿ ಬಂದಾಗ ಕರೆಂಟ್ ಲೀಕೇಜ್ ಪರೀಕ್ಷಿಸುವುದಕ್ಕಾಗಿಯೇ ಒಂದು ಕರೆಂಟ್ ಟೆಸ್ಟರ್ ಮೈನ್ ಸ್ವಿಚ್ಚಿನ ಹತ್ತಿರ ಇಟ್ಟುಕೊಳ್ಳಿ. ಮೈನ್ ಸ್ವಿಚ್‌ನಲ್ಲಿ ಕರೆಂಟು ಲೀಕೇಜ್ ಇದೆಯೋ ಎಂಬುದನ್ನು ಆಗಾಗ ಪರೀಕ್ಷಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದೇ ವಿಧ್ಯುತ್ ಉಪಕರಣಗಳ ಉಪಯೋಗಕ್ಕೆ ಮೊದಲು ಮಾಡಲೇ ಬೇಕಾದ ಕೆಲಸ ಈ ಲೀಕೇಜ್ ಪರೀಕ್ಷೆ. ಟೆಸ್ಟರ್ ಇಲ್ಲದಿದ್ರೆ ಅಥವಾ ಕೆಲಸದ ಜರೂರು ಇರುವಾಗ ಏನು ಮಾಡಲಿ ಎಂಬ ಸಂದೇಹಕ್ಕೂ ಉತ್ತರ ಬೇಕಲ್ಲಾ?. ಮೈನ್ ಸ್ವಿಚ್‌ನಿಂದ ತೊಡಗಿ ಯಾವುದೇ ವಿದ್ಯುತ್ ಉಪಕರಣಗಳನ್ನು ಮುಟ್ಟುವಾಗ ಕೈಯ ಹಿಂಬದಿಯಿಂದಲೇ ಮೊದಲು ಮುಟ್ಟಿ ನೋಡಿ. ಕರೆಂಟಿನ ಶಾಕ್ ಇಲ್ಲ ಎಂಬುದು ಖಚಿತವಾದ ಮೇಲೆ ಮಾತ್ರ ಮುಂಗೈಯಿಂದ ಮುಟ್ಟಬಹುದು. ಯಾಕೆ ಕೈಯ್ಯ ಹಿಂಬದಿಯಿಂದಲೇ ಮುಟ್ಟಬೇಕು? ಕೈಯ್ಯ ಹಿಂಬದಿಗೆ ಶಾಕ್ ಹೊಡೆಯೋದಿಲ್ಲವೇ? ಎಂಬ ಸಂದೇಹಕ್ಕೂ ಉತ್ತರ ಕೊಡಬೇಕಲ್ಲಾ?
ಸಾಮಾನ್ಯವಾಗಿ ಕರೆಂಟ್ ಶಾಕ್ ಹೊಡೆಸಿ ಕೊಂಡವರು ಕರೆಂಟ್ ನನ್ನನ್ನು ಹಿಡಿದು ಕೊಂಡಿತು ಎಂಬುದನ್ನು ನೀವು ಕೇಳಿಸಿ ಕೊಂಡಿರಬಹುದು. ಆದರೆ ಕರೆಂಟ್ ಯಾರನ್ನೂ ಹಿಡಿಯೋದಿಲ್ಲ. ಅದರ ಬದಲು ನಾವೇ ಕರೆಂಟನ್ನು ಹಿಡಿದುಕೊಳ್ಳುತ್ತೇವೆ. ಆಲೋಚಿಸುವಷ್ಟೂ ಸಮಯ ಇಲ್ಲದೆ ಅಪಾಯ ಬಂದಾಗ ನಮ್ಮ ಮೆದುಳು ಆ ವಸ್ತುವನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಆಜ್ಞೆ ಕೊಡುತ್ತದೆ. ಕರೆಂಟ್ ಶಾಕ್ ಹೊಡೆದಾಗ ಇದೇ ಆಗೋದು. ಮೆದುಳು ಶಾಕ್ ಹೊಡೆದ ಕೂಡಲೇ ಆ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೋ ಎಂದು ಆಜ್ಞೆ ಕೊಡುತ್ತದೆ. ಕೈ ಅದನ್ನು ಸರಿಯಾಗಿ ಪಾಲಿಸ್ತದೆ. ಯಾವ ವಸ್ತು ಕರೆಂಟ್ ಶಾಕ್ ಕೊಡುತ್ತಿದೆಯೋ ಅದೇ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಇದು ಅಪಾಯವನ್ನು ದೊಡ್ಡ ರೂಪಕ್ಕೇ ತಿರುಗಿಸಿ ಬಿಡುತ್ತದೆ. ನೀವು ಹಿಂಗೈಯಲ್ಲಿ ಶಾಕ್ ಇರುವ ವಸ್ತುಗಳನ್ನು ಮುಟ್ಟಿದಾಗ ಕೈ ಅದರಿಂದ ದೂರ ಸರಿಯುತ್ತದೆ. ಯಾಕೆಂದರೆ ಮಿದುಳಿನ ಆಜ್ಞೆ ಅದರಿಂದ ದೂರ ಇರು ಎಂದಾಗಿರುತ್ತದೆ ಅಥವಾ ಹಿಡಿದುಕೊಳ್ಳಲು ಹೇಳಿದರೂ ಕೈ ಅದನ್ನು ಹಿಡಿಯಬೇಕಿದ್ದರೆ ಒಮ್ಮೆಗೆ ಅದನ್ನು ಬಿಟ್ಟು ಹೊರಬರಲೇಬೇಕು. ಒಮ್ಮೆ ಅದನ್ನು ಬಿಟ್ಟಿತೋ ಕೂಡಲೇ ಮೆದುಳು ಸರಿಯಾಗಿ ಕೆಲಸ ಮಾಡಲು ಸುರು ಮಾಡುತ್ತದೆ. ಅಪಾಯವನ್ನು ಗುರುತಿಸುತ್ತದೆ. ಆದ್ದರಿಂದ ಪ್ರತಿ ಬಾರಿ ನೀವು ವಿದ್ಯುತ್ ಉಪಕರಣಗಳನ್ನು ಮುಟ್ಟುವಾಗಲೂ ಟೆಸ್ಟರ್ ಉಪಯೋಗಿಸದಿದ್ದರೂ ಸರಿ ಹಿಂಗೈಯಿಂದ ಮೊದಲು ಮುಟ್ಟಿ ಆ ಮೇಲೆ ಮುಂಗೈಯಿಂದ ಮುಟ್ಟುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಷ್ಟು ಮಾಡಿದರೆ ಆಳನ್ನು ಆಳಾಗಿಯೇ ಇಡುವುದರಲ್ಲಿ ನೀವು ಗೆದ್ದಂತೆಯೆ.
ಇನ್ನು ನಿಮ್ಮ ಮನೆಯ ವಿದ್ಯುತ್ ಕನೆಕ್ಷನ್ ಗೆ ಅರ್ತಿಂಗ್ ಕೊಡುವ ಬಗ್ಗೆ ಒಂದಷ್ಟು. ಎಷ್ಟೋ ಕಡೆ ಕನೆಕ್ಷನ್ ಕೊಡ ಬೇಕಿದ್ದರೆ ಎಲೆಕ್ಟ್ರಿಸಿಟಿ ಬೋರ್ಡಿನವರು ಅರ್ತ ಕನೆಕ್ಷನ್ ಕೊಡಲು ಹೇಳ್ತಾರೆ. ಆದ್ದರಿಂದ ಹೇಗಾದರೂ ಒಂದು ಅರ್ತ್ ಕನೆಕ್ಷನ್ ಎಂದು ಕೊಟ್ಟುಬಿಟ್ಟರೆ ಸಾಕು ಎಂಬ ಭಾವನೆಯಿಂದ ಕೆಲಸ ಮುಗಿಸುವವರು ಇದ್ದಾರೆ. ಆದರೆ ಈ ಅರ್ತಿಂಗೇ ನಮ್ಮ ಜೀವ ರಕ್ಷಕ ಎಂಬುದನ್ನು ನಾವು ಆರ್ಥಿಕ ಲೆಕ್ಕಾಚಾರದಲ್ಲಿ ಮರೆತು ಬಿಡ್ತೇವೆ. ಆದ್ದರಿಂದ ಆರ್ಥಿಕ ಲೆಕ್ಕಾಚಾರ ಮರೆತು ಸರಿಯಾದ ಅರ್ತಿಂಗ್ ಕೊಡುವುದು ಅತೀ ಅವಶ್ಯ. ಇದು ಮಾತ್ರ ಅಲ್ಲದೆ ಅರ್ತಿಂಗ್ ಸರಿಯಾಗಿದೆಯೋ ಎಂಬುದನ್ನು ಕೂಡಾ ಕಾಲಾಕಾಲಕ್ಕೆ ಪರಿಕ್ಷಿಸುತ್ತಾ ಇರಲೇಬೇಕು. (ಈ ಬಗ್ಗೆ ಬರೆದರೆ ಅದೇ ದೊಡ್ಡ ಅಧ್ಯಾಯವಾಗಬಹುದು. ಆದ್ದರಿಂದೆ ಮುಂದೆ ಇದರ ಬಗ್ಗೆಯೇ ಒಂದು ಲೇಖನ ಬರೆಯುತ್ತೇನೆ) ಎಲ್ಲಾ ವಿದ್ಯುತ್ ಉಪಕರಣಗಳಿಗೆ ಅರ್ತ್ ಕನೆಕ್ಷನ್ ಕೊಟ್ಟಿರಲೇಬೇಕು ಎಂಬುದನ್ನುಇನ್ನೊಮ್ಮೆ ನೆನಪಿಸುತ್ತೇನೆ.
ಸಾಕಲ್ಲ ಇಷ್ಟು ವಿವರಣೆ?
- ಎಡನಾಡು ಕೃಷ್ಣ ಮೋಹನ ಭಟ್ಟ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ