ಸಂಸ್ಕೃತಿ ಆಚರಣೆಗಳಿಂದ ವಿಮುಖರಾಗಬಾರದು: ಶ್ರೀ ವಿಧುಶೇಖರ ಭಾರತೀ
ಪುತ್ತೂರು: ಉನ್ನತ ಓದು, ಅಧ್ಯಯನಗಳನ್ನು ಹೊಂದಿದ ತಕ್ಷಣ ನಮ್ಮ ಮೂಲ ಆಚರಣೆಗಳಿಂದ ನಾವು ವಿಮುಖರಾಗಬಾರದು. ಮಹಾನ್ ತಪಸ್ವಿಗಳು, ಸಾಧಕರು ನಮ್ಮ ದೇಸೀಯವಾದ ಚಿಂತನೆಗಳನ್ನು, ಮಾರ್ಗದರ್ಶನವನ್ನು ನಮಗೆ ನೀಡಿದ್ದಾರೆ. ಅದು ಸರಿಯಿದೆಯೇ ಇಲ್ಲವೇ ಎಂಬ ವಿಮರ್ಶೆಯ ಅಗತ್ಯವಿಲ್ಲ. ಸರಿಯಲ್ಲದಿದ್ದರೆ ಅಂತಹ ವಿಚಾರಗಳನ್ನು ನಮ್ಮ ಹಿಂದಿನವರು ನಮಗೆ ಹೇಳುತ್ತಿರಲಿಲ್ಲ ಎಂದು ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಪುತ್ತೂರಿನ ಪ್ರಪ್ರಥಮ ಸಿಬಿಎಸ್‍ಇ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯವನ್ನು ಶೃಂಗೇರಿಯ ಮಠದಲ್ಲಿ ಶಿಲಾಫಲಕ ಬಿಡುಗಡೆಗೊಳಿಸುವುದರ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಇಂದು ಹಲವು ಮಂದಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳುತ್ತಿದ್ದಾರೆ. ಆದರೆ ಹಾಗೆ ಹೋದ ಕೆಲವರು ನಮ್ಮ ಆಚಾರ ವಿಚಾರಗಳನ್ನು ಮರೆತು ಅಲ್ಲಿಯ ಸಂಸ್ಕøತಿಗೆ ತಮ್ಮನ್ನು ತಾವು ಒಪ್ಪಿಸಿಕೊಂಡುಬಿಡುತ್ತಿದ್ದಾರೆ. ಇದು ಅತ್ಯಂತ ವಿಷಾದನೀಯ ಸಂಗತಿ. ಅಂತಹವರು, ವಿದೇಶೀಯರೇ ಇಂದು ಭಾರತದ ನೆಲಕ್ಕೆ ಬಂದು ಇಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸಿ, ಇಲ್ಲಿಯ ಉತ್ಕೃಷ್ಟತೆಯನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ನುಡಿದರು.
ಪ್ರತಿಯೊಬ್ಬರೂ ತಾವು ಕೇವಲ ಹೆತ್ತವರಿಗೆ ಮಾತ್ರ ಮಕ್ಕಳಲ್ಲ, ಭಾರತ ಮಾತೆಗೂ ಮಕ್ಕಳೆಂಬುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ತಮ್ಮ ಹೆತ್ತವರನ್ನು ಪ್ರೀತಿಸುವುದರ ಜತೆಗೆ ಭಾರತ ಮಾತೆಯನ್ನೂ ಆರಾಧಿಸಬೇಕು. ವಿದೇಶಕ್ಕೆ ಓದಿನ ಕಾರಣಗಳಿಗಾಗಿ ತೆರಳಿದರೂ ಮರಳಿ ಭಾರತಕ್ಕೆ ಬಂದು ತಮ್ಮ ಸೇವೆಯನ್ನು ಸಮರ್ಪಿಸಬೇಕು. ಈ ದೇಶದ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದರಲ್ಲದೆ ಸಂಸ್ಕಾರರಹಿತವಾದ ವಿದ್ಯೆ ದುರ್ವಿನಿಯೋಗವಾಗುತ್ತದೆ ಹಾಗೂ ಸಂಸ್ಕಾರಭರಿತವಾದ ವಿದ್ಯೆ ಲೋಕಕಲ್ಯಾಣಕ್ಕಾಗಿ ಬಳಕೆಯಾಗುತ್ತದೆ ಎಂದರು.
ಪ್ರಸ್ತಾವನೆಗೈದ ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸುವ ಕಾಯಕದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ತಮ್ಮನ್ನು ತಾವು ಅರ್ಪಿಸಿಕೊಂಡಿವೆ. ಭಾರತೀಯತೆಯನ್ನು ಪಸರಿಸುವ ರಾಯಭಾರಿಗಳಾಗಿ ಮುಂದಿನ ಜನಾಂಗವನ್ನು ರೂಪಿಸುವ ಸದುದ್ದೇಶದೊಂದಿಗೆ ವಿದ್ಯಾ ಸಂಸ್ಥೆ ಮುನ್ನಡೆಯುತ್ತಿದೆ. ಶೃಂಗೇರಿ ಶ್ರೀಗಳ ಅನುಗ್ರಹ ಸಂಸ್ಥೆಗೆ ದೊರಕಿರುವುದು ಪುಣ್ಯ ವಿಶೇಷವೇ ಸರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಭಟ್ಟ ಗಾಳಿಮನೆ, ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ತೇಜಶಂಕರ ಸೋಮಯಾಜಿ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿ ಬಾಲಕೃಷ್ಣ ಬೋರ್ಕರ್, ನಟ್ಟೋಜ ಕುಟುಂಬಸ್ಥರಾದ ಅಂಬಿಕಾ ನಟ್ಟೋಜ, ಶ್ರೀಕೃಷ್ಣ ನಟ್ಟೋಜ ಮತ್ತಿತರರು ಉಪಸ್ಥಿತರಿದ್ದರು.
Key Words: Puttur, Ambika Vidyalaya, CBSE school, ಅಂಬಿಕಾ ವಿದ್ಯಾಲಯ, ಸಿಬಿಎಸ್‌ಇ ಶಾಲೆ, ಪುತ್ತೂರು
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ