ಧರ್ಮಸ್ಥಳ: ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ- ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‍ಗೆ ಮೂರು ತಿಂಗಳುಗಳ ಸಜೆ ಪುನರುಚ್ಚರಿಸಿದ ಬೆಳ್ತಂಗಡಿ ನ್ಯಾಯಾಲಯ
ಬೆಳ್ತಂಗಡಿಯ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಶ್ರೀಕ್ಷೇತ್ರ ಧರ್ಮಸ್ಥಳದಿಂದ ದಾಖಲಿಸಲ್ಪಟ್ಟಿದ್ದ ಮೂಲ ದಾವ ನಂಬ್ರ 226/2013ರಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹಾಗೂ ಇತರರ ವಿರುದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಕುಟುಂಬ ಹಾಗೂ ಸಂಸ್ಥೆಗಳ ಕುರಿತಾಗಿ ಗೌರವಕ್ಕೆ ಹಾನಿಯಾಗುವ ಯಾವುದೇ ಹೇಳಿಕೆ, ಸುದ್ದಿ ಅಥವಾ ಆರೋಪ ಮಾಡಬಾರದಾಗಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿತ್ತು. ಸದ್ರಿ ಆದೇಶವನ್ನು ಕೆ. ಸೋಮನಾಥ ನಾಯಕ್‍ರವರು ಉಲ್ಲಂಘಿಸಿ ಪದೇ ಪದೇ ಸುಳ್ಳು ಆರೋಪಗಳನ್ನು ಶ್ರೀಕ್ಷೇತ್ರ ಹಾಗೂ ಹೆಗ್ಗಡೆಯವರ ವಿರುದ್ಧ ಮಾಡುತ್ತಲೇ ಇದ್ದ ಕಾರಣ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಶ್ರೀ ಬಿ. ವರ್ಧಮಾನ್‍ರವರು ಶ್ರೀಕ್ಷೇತ್ರದ ಪರವಾಗಿ ಮಿಸ್.ಕೇಸ್:03/2015 ರಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸದ್ರಿ ಅರ್ಜಿಯ ಸುದೀರ್ಘ ವಿಚಾರಣೆ ಹಾಗೂ ವಾದವನ್ನು ಆಲಿಸಿ ಮಾನ್ಯ ನ್ಯಾಯಾಲಯವು ಈ ಹಿಂದೆ ಎರಡು ಬಾರಿ ಕೆ. ಸೋಮನಾಥ್ ನಾಯಕ್‍ರವರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶಗಳ ವಿರುದ್ಧ ಕೆ. ಸೋಮನಾಥ ನಾಯಕ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಪ್ರಕರಣವು ಹೆಚ್ಚುವರಿ ತನಿಖೆಗೆ ಮೂಲ ನ್ಯಾಯಾಲಯಕ್ಕೆ ಮರು ರವಾನಿಸಲ್ಪಟ್ಟಿತ್ತು.
ಸದ್ರಿ ಮೇಲ್ಮನವಿಯಲ್ಲಾದ ಆದೇಶ ಪ್ರಕಾರ ಕೆ. ಸೋಮನಾಥ ನಾಯಕ್‍ರವರ ಕಡೆಯಿಂದ ಹೆಚ್ಚುವರಿ ಸಾಕ್ಷಿಯ ತನಿಖೆ ಸಹ ನಡೆದು ಎರಡೂ ಪಕ್ಷಕಾರರ ವಾದವನ್ನು ಆಲಿಸಿದ ನಂತರ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸತೀಶ್ ಕೆ. ಜಿ.ಯವರು ದಿನಾಂಕ: 08-06-2021ರಂದು ಅಂತಿಮ ಆದೇಶ ಹೊರಡಿಸಿ, ಈ ಹಿಂದಿನ ತೀರ್ಪನ್ನೇ ಪುನರುಚ್ಚರಿಸಿರುತ್ತಾರೆ.
ಮಾನ್ಯ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೆ. ಸೋಮನಾಥ ನಾಯಕ್‍ರವರು ಸಮಾಜ ಸುಧಾರಕನೆಂಬ ಸೋಗಿನಲ್ಲಿ ಎಲ್ಲೆ ಮೀರಿ ವರ್ತಿಸಿ ಶ್ರೀ ಕ್ಷೇತ್ರ, ಹೆಗ್ಗಡೆಯವರು ಹಾಗೂ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ದುರುದ್ದೇಶದಿಂದ ಅಪಪ್ರಚಾರ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ಸ್ಪಷ್ಟಪಟ್ಟಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆ. ಸೋಮನಾಥ ನಾಯಕ್‍ರವರು ತನ್ನ ಆದೇಶವನ್ನು ಉಲ್ಲಂಘಿಸಿರುವುದನ್ನು ತೀಕ್ಷ್ಣವಾಗಿ ಪರಿಗಣಿಸಿ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ತನ್ನ ಕರ್ತವ್ಯ ಮತ್ತು ಅಧಿಕಾರ ಈ ಪ್ರಕರಣದಲ್ಲಿ ಚಲಾಯಿಸುವುದು ಅಗತ್ಯ ಎಂದು ಹೇಳಿದೆ. ಕೆ. ಸೋಮನಾಥ ನಾಯಕ್ ಮಾಡಿರುವ ಅಪರಾಧಕ್ಕೆ ಸೂಕ್ತ ಶಿಕ್ಷೆ ನೀಡದಿದ್ದಲ್ಲಿ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಕೆ. ಸೋಮನಾಥ ನಾಯಕ್‍ರಿಗೆ 3 ತಿಂಗಳ ಸೆರೆಮನೆವಾಸವಲ್ಲದೆ ಅವರ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿ ಶ್ರೀಕ್ಷೇತ್ರಕ್ಕೆ ರೂ.4,50,000/-ವನ್ನು ಪರಿಹಾರ ರೂಪದಲ್ಲಿ ನೀಡತಕ್ಕದೆಂದು ಆದೇಶಿಸಿದೆ.
ಈ ಪ್ರಕರಣದಲ್ಲಿ ತನ್ನನ್ನು ಸಂರಕ್ಷಿಸಿಕೊಳ್ಳಲು ಯಾವುದೇ ಆಧಾರ ಯಾ ವಾಸ್ತವಾಂಶಗಳು ಇಲ್ಲವೆಂದು ಗೊತ್ತಿದ್ದರೂ, ನ್ಯಾಯಾಲಯದ ಅವಧಿಯನ್ನು ದುರುಪಯೋಗಪಡಿಸಿ ಮತ್ತೊಮ್ಮೆ ಶ್ರೀಕ್ಷೇತ್ರಕ್ಕೆ ಉಪಟಳ ನೀಡಿದ ಕಾರಣಕ್ಕೆ ಮಾನ್ಯ ನ್ಯಾಯಾಲಯವು ಹೆಚ್ಚುವರಿ ಪರಿಹಾರಾರ್ಥವಾಗಿ ರೂ.2,000/-ನೀಡುವಂತೆ ಸಹ ಆದೇಶಿಸಿರುತ್ತದೆ. ಈ ಆದೇಶ ಜಾರಿಗೆ ಬರಲು ಒಂದು ತಿಂಗಳ ಅವಕಾಶವನ್ನು ಮಾನ್ಯ ನ್ಯಾಯಾಲಯ ನೀಡಿದೆ.
ಶ್ರೀ ಕ್ಷೇತ್ರದ ಪರವಾಗಿ ಬೆಳ್ತಂಗಡಿಯ ನ್ಯಾಯವಾದಿಗಳಾದ ಶ್ರೀ ರತ್ನವರ್ಮ ಬುಣ್ಣು ಹಾಗೂ ಶ್ರೀ ಎಂ. ಬದರಿನಾಥ ಸಂಪಿಗೆತ್ತಾಯ ವಾದಿಸಿದ್ದರು.
-(ಎ.ವಿ. ಶೆಟ್ಟಿ)
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ