ಒಂದೆಕರೆ ಭೂಮಿಯನ್ನು ನಿರ್ವಹಿಸುವುದೇ ಕಷ್ಟವಾಗಿರುವ ಇಂದಿನ ದಿನಮಾನದಲ್ಲಿ ಬರೋಬ್ಬರಿ 142 ಎಕರೆ ಹೊಲ ಉಳುವುದೆಂದರೇ ಸಾಮಾನ್ಯವೇ? ಅದೂ ಪಟ್ಟಣದಲ್ಲಿ ಹುಟ್ಟಿ ಬೆಳೆದು ವಾಯುಸೇನೆಯಲ್ಲಿ ಉತ್ತಮ ಪಗಾರದ ನೌಕರಿ ತ್ಯಜಿಸಿ ಹಳ್ಳಿಗೆ ಬಂದು ಮೇಟಿ ಹಿಡಿಯುವುದೆಂದರೆ ಅಷ್ಟು ಸುಲಭ ಸಾಧ್ಯವೇ? ಈ ಪ್ರಶ್ನೆಗಳನ್ನು ಮನದಲ್ಲಿಟ್ಟುಕೊಂಡು ಕೊಪ್ಫಳ ಜಿಲ್ಲೆಯ ಆಚಾರ್ ತಿಮ್ಮಾಪುರ ಗ್ರಾಮದ ಶ್ರೀ ಫಾರಂಗೆ ನೀವು ಭೇಟಿ ನೀಡಿದರೆ ಮೂಕವಿಸ್ಮಿತರಾಗುವುದು ಖಚಿತ. ಉತ್ತಮ ಸಂಬಳದ ನೌಕರಿ ತ್ಯಜಿಸಿ ಕೃಷಿಯೇ ಜೀವನ ಎಂದು ಭಾವಿಸಿ ಸಂಸಾರವನ್ನು ಬೆಂಗಳೂರಿನಲ್ಲಿ ಬಿಟ್ಟು ಏಕಾಂಗಿಯಾಗಿ ಮಣ್ಣಿನೊಡನೆ ಸೆಣಸಾಡುತ್ತಿರುವ ವೀರ ಯೋಧನನ್ನು ನೀವು ಕಾಣತ್ತೀರಿ. ಹೌದು ಅವರೇ ನಮ್ಮ ಶ್ರೀಪಾದರಾಜ ಮುರಡಿ.
ತಮ್ಮ ಪಿತ್ರಾರ್ಜಿತ 42 ಎಕರೆಯೊಂದಿಗೆ ಅಕ್ಕಪಕ್ಕದ 100 ಎಕರೆ ಜಮೀನನ್ನು ಗುತ್ತಿಗೆ ಹಿಡಿದು ಅಲ್ಲೊಂದು ಸುಂದರ ಕೃಷಿ ಫಾರಂ ನಿರ್ಮಿಸಲು ಪಣ ತೊಟ್ಟಿದ್ದಾರೆ ಅವರು. ನಾಲ್ಕು ವರ್ಷಗಳ ಸತತ ಪರಿಶ್ರಮದಿಂದ ವೈವಿಧ್ಯಮಯ ಬೆಳೆಗಳೊಂದಿಗೆ ಹಸಿರು ಕಾಯಕದಲ್ಲಿ ತೊಡಗಿದ್ದಾರೆ. ಹಗಲು ಇರುಳೆನ್ನದೆ ಇಡೀ ಹೊಲದಲ್ಲಿ ಸಮಗ್ರ ಕೃಷಿ ಅಳವಡಿಸಿ ಸಾವಯವ ತತ್ವದೊಂದಿಗೆ ಕೃಷಿಯನ್ನು ಅವರು ಸಂತಸದಿಂದ ಅನುಭವಿಸುತ್ತಿರುವುದನ್ನು ನೋಡಿದರೆ ಎಂತಹವರಿಗೂ ನೌಕರಿಯಿಂದ ಹೊರಬಂದು ಕೃಷಿಯಲ್ಲಿ ತೊಡಗಬೇಕೆಂಬ ಭಾವನೆ ಮನದಲ್ಲಿ ಮೂಡತೊಡಗುತ್ತದೆ. ಹೊತ್ತು ಮುಳುಗುತ್ತಿರುವಂತೆ ಜಮೀನಿನ ಮೂಲೆಯಲ್ಲಿರುವ ಗುಡ್ಡಗಳಿಂದ ಕರಡಿಗಳು ಇಳಿದುಬರಲು ಆರಂಭಿಸುತ್ತವೆ. ಅವುಗಳೊಂದಿಗೆ ಸಹಜೀವನ ಮಾಡಲೇಬೇಕಾದ ಅನಿವಾರ್ಯತೆ. ಅವರ ಹೊಲಕ್ಕೆ ಭೇಟಿ ನೀಡಿ ಗುಡ್ಡದ ಮೇಲೇರಿ ಕರಡಿ ವೀಕ್ಷಣೆಗೆ ಕಾಯುವುದು ವನ್ಯಜೀವಿ ಪ್ರಿಯರ ಮನಕ್ಕೆ ಮುದನೀಡುತ್ತದೆ.
ಹೊಲವೆಲ್ಲಾ ಸುತ್ತಾಡಿ ಸುಸ್ತಾಗುವಷ್ಟರಲ್ಲಿ ವಿಶಾಲ ಕೃಷಿಹೊಂಡ. ಮುಸ್ಸಂಜೆಯ ಇಳಿಬಿಸಿಲಿನಲ್ಲಿ ಹೊಂಡದಲ್ಲಿರುವ ಹಲವು ಮೀನುಗಳ ನೋಡುತ್ತಾ ತೋಟದ ಸೌಂದರ್ಯ ಅನುಭವಿಸುವುದು ಕೃಷಿ ಬದುಕಿನ ಜಂಜಡಗಳಿಂದ ನೊಂದ ಮನಸ್ಸಿಗೆ ಹೊಸ ಉಲ್ಲಾಸವನ್ನು ತುಂಬುತ್ತದೆ. ಬೆಳೆದ ಬೆಳೆಯನ್ನು ರೈತನೇ ಮಾರಾಟ ಮಾಡಬೇಕು ಹಾಗೂ ಅದರ ಮೌಲ್ಯವರ್ಧನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದನ್ನು ಸಾಕ್ಷಾತ್ಕರಿಸಿದವರು ಶ್ರೀಪಾದರಾಜ. ಅವರು ಬೆಳೆದ ಎಲ್ಲಾ ಉತ್ಪನ್ನಗಳನ್ನು ತಾವೇ ಸಂಸ್ಕರಿಸಿ ಸ್ವತಃ ಮಾರಾಟ ಮಾಡುವುದು ಅವರ ವಿಶೇಷತೆ. ಬೆಳೆದ ಸಾವಯವ ಅಕ್ಕಿ ಅವರ ಸ್ನೇಹಿತರ ಹಾಗೂ ಬಂಧುಬಳಗಕ್ಕೆ ಬೇಡಿಕೆಗೆ ತಕ್ಕಂತೆ ವರ್ಷವಿಡೀ ಸರಬರಾಜಾಗುತ್ತದೆ. ತರಕಾರಿಗಳು ಕೊಪ್ಪಳ ರೈತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಕೋವಿಡ್ ಅವಧಿಯಲ್ಲೂ ಎದೆಗುಂದದೆ ತೋಟಗಾರಿಕೆ ಇಲಾಖೆ ಮಾರಾಟ ವಾಹನ ಪಡೆದು ಹಗಲಿರುಳು ಗ್ರಾಹಕರ ಮನೆಬಾಗಿಲಿಗೆ ಹಣ್ಣು ಮತ್ತು ತರಕಾರಿ ಮುಟ್ಟಿಸಿದ ಕೀರ್ತಿ ಇವರದು. ತಮ್ಮದೇ ಅಲ್ಲದೆ ಇತರ ರೈತರ ಉತ್ಪನ್ನಗಳನ್ನು ತಾವೇ ಜವಾಬ್ಧಾರಿ ವಹಿಸಿಕೊಂಡು ಮಾರಾಟ ಮಾಡಿಕೊಟ್ಟ ಆಪದ್ಬಾಂಧವ.
ಮಣ್ಣಿನೊಡನೆ ಮಾತುಕಥೆಯ ಮುಖ್ಯ ಸಂಚಾಲಕರಾಗಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೆಗಲ ಮೇಲೆ ಹೊತ್ತು ಸ್ವಯಂಸೇವಕರಾಗಿ ಯಶಸ್ಸುಗೊಳಿಸುವ ಶ್ರೀಪಾದ ಅವರ ಇನ್ನೊಂದು ಕಲೆ ಹಾಡುಗಾರಿಕೆ. ರೈತಗೀತೆಗಳನ್ನು ಹಾಗೂ ಸ್ವರಚಿತ ರೈತರ ಕುರಿತಾದ ಕವನಗಳನ್ನು ಹಾಡುತ್ತಾ ರೈತರನ್ನು ಹುರಿದುಂಬಿಸಿ ಅವರಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸಿ ತನ್ನ ಕೈಲಾದ ಸಹಾಯ ಮಾಡುತ್ತಾ ಎಲ್ಲರೊಂದಿಗೂ ಬೆರೆತು ರೈತ ಸಮುದಾಯಕ್ಕೆ ಆತ್ಮೀಯವಾಗಿರುವ ಶ್ರೀಪಾದರಾಜ ಅವರನ್ನು ಸಂಪರ್ಕಿಸಲು 9945514000 ಸಂಖ್ಯೆಗೆ ಕರೆಮಾಡಿ.
-ಡಾ. ಪಿ. ಆರ್ ಬದರಿಪ್ರಸಾದ್
ಸಹಾಯಕ ಪ್ರಾದ್ಯಾಪಕರು (ಕೀಟಶಾಸ್ತ್ರ)
ಕೃಷಿ ಮಹಾವಿದ್ಯಾಲಯ, ಗಂಗಾವತಿ