ಮಂಗಳೂರು, ಅ. 31: ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ. ಕೇವಲ ಶೈಕ್ಷಣಿಕ ಅರ್ಹತೆ ಅಥವಾ ಅಂಕಗಳು ಉದ್ಯೋಗ ಪಡೆಯಲು ಸಾಕಾಗುವುದಿಲ್ಲ. ಉದ್ಯೋಗದಾತರು ನಿರೀಕ್ಷಿಸುವ ಕೌಶಲ್ಯಗಳನ್ನು ಬೆಳೆಸಿಕೊಂಡು, ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ಮುಖ್ಯಸ್ಥ ಹಾಗೂ ಭೂಗೋಳಶಾಸ್ತ್ರ ಪ್ರಾಧ್ಯಾಪಕ ಡಾ. ದಶರಥ ಪಿ. ಅಂಗಡಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ವ್ಯಕ್ತಿತ್ವ ವಿಕಸನ ಮಹತ್ವದ ಪಾತ್ರ ವಹಿಸುತ್ತದೆ. ವ್ಯಕ್ತಿತ್ವ ವಿಕಸನವು ನಿಧಾನವಾಗಿ ಸಾಗುವ ನಿರಂತರ ಪ್ರಕ್ರಿಯೆಯಾಗಿದ್ದು, ಅದನ್ನು ದೈನಂದಿನ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬೇಕು. ಬದುಕಿನ ಗುರಿಯನ್ನು ತಲುಪಲು ಅದೃಷ್ಟಕ್ಕಾಗಿ ಕಾಯದೆ ಸೂಕ್ತ ಯೋಜನೆ, ಸಿದ್ಧತೆ ಮತ್ತು ನಿರಂತರ ಪ್ರಯತ್ನ ಮಾಡಬೇಕು. ಡಿಜಿಟಲ್ ವೇದಿಕೆಗಳಲ್ಲಿ ಅಪಾರ ಪ್ರಮಾಣದ ಮಾಹಿತಿ ಲಭ್ಯವಿದ್ದರೂ, ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ವೃತ್ತಿಜೀವನಕ್ಕೆ ದಾರಿ ಕಂಡುಕೊಳ್ಳಲು ಸಮರ್ಥ ಮಾರ್ಗದರ್ಶನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, ದೇಶದಲ್ಲಿ ಪದವೀಧರರ ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಲ್ಲಿ ಕೌಶಲ್ಯದ ಕೊರತೆಯೂ ಒಂದಾಗಿದೆ. ಪಠ್ಯಕ್ರಮದ ಜ್ಞಾನದ ಜೊತೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಉದ್ಯೋಗ ಪಡೆಯಲು ಕೇವಲ ಅಂಕಗಳಿಕೆಯೊಂದೇ ಮಾನದಂಡವಲ್ಲ. ತಮ್ಮ ಜ್ಞಾನ, ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ್ಯವನ್ನೂ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ತೀವ್ರ ಸ್ಪರ್ಧೆಯ ಇಂದಿನ ಜಗತ್ತಿನಲ್ಲಿ ಜ್ಞಾನ, ಆರ್ಥಿಕ ಸಾಮರ್ಥ್ಯ, ಪ್ರಭಾವ ಮತ್ತು ಅದೃಷ್ಟದ ಜೊತೆಗೆ ಪರಿಶ್ರಮ ಹಾಗೂ ಸ್ವಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಮತ್ತು ವಿಶೇಷ ಸಾಮರ್ಥ್ಯಗಳನ್ನು ಗುರುತಿಸಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಲು ಪ್ರಯತ್ನಿಸಬೇಕು ಎಂದರು.
ತಲಪಾಡಿಯ ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ. ಮೀನಾ ಜಿ. ಫಣಿಕ್ಕರ್ ಅವರು ‘ವಿಶೇಷವಾಗಿ ಗುರುತಿಸಿಕೊಂಡು ಉದ್ಯೋಗ ಪಡೆದುಕೊಳ್ಳಿ: ಪರಿಣಾಮಕಾರಿ ಸ್ವವಿವರ, ವೃತ್ತಿಪರ ಕೌಶಲ್ಯ ಹಾಗೂ ಮೃದು ಕೌಶಲ್ಯಗಳ ವೃದ್ಧಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

