ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

Shreya Hegde
0

ಚತುರ್ಥ ವಿಶ್ವಗೀತಾ ಪರ್ಯಾಯ ಪೂರೈಸಿ ಆಗಮಿಸಿದ ಶ್ರೀ ಸುಗುಣೇಂದ್ರ ತೀರ್ಥರಿಗೆ ಭವ್ಯ ಅಭಿನಂದನೆ


ಅಟ್ಲಾಂಟಾ: ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಅಮೆರಿಕಕ್ಕೆ ಆಗಮಿಸಿದ ಪರಮಪೂಜ್ಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಟ್ಲಾಂಟಾ ಮಹಾನಗರದಲ್ಲಿ ಭಕ್ತಿಪೂರ್ವಕ ಗುರು ಅಭಿವಂದನೆಯ ಮಹಾಪೂರವೇ ಹರಿದುಬಂತು. ಅಭಿನಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಅಟ್ಲಾಂಟಾದ ಈ ಸಂಭ್ರಮವನ್ನು ತಮ್ಮ ಚತುರ್ಥ ಪರ್ಯಾಯದ ಮಂಗಳೋತ್ಸವವೆಂದೇ ಭಾವಿಸುವುದಾಗಿ ಹೇಳಿದರು. ವಿಶ್ವದಾದ್ಯಂತ ಇರುವ ಭಕ್ತರನ್ನು ಶ್ರೀಕೃಷ್ಣನ ಸೇವೆ ಹಾಗೂ ಭಗವದ್ಗೀತೆಯೊಂದಿಗೆ ಬೆಸೆಯುವ ಸಂಕಲ್ಪದಿಂದಲೇ ಚತುರ್ಥ ಪರ್ಯಾಯವನ್ನು ‘ವಿಶ್ವಗೀತಾ ಪರ್ಯಾಯ’ ಹಾಗೂ ‘ಎನ್‌ಆರ್‌ಐ ಪರ್ಯಾಯ’ವಾಗಿ ರೂಪಿಸಲಾಗಿತ್ತು ಎಂದು ತಿಳಿಸಿದರು.


ತಮ್ಮ ನಾಲ್ಕು ಪರ್ಯಾಯಗಳ ಅನುಭವವನ್ನು ಸ್ಮರಿಸಿದ ಶ್ರೀಗಳು, ಗೀತಾಮಂದಿರ, ನವರತ್ನ ರಥ, ಸುವರ್ಣಮಯ ಪಾರ್ಥಸಾರಥಿ ರಥ, ಅಖಂಡ ಗೀತಾ ಪಾರಾಯಣ ಹಾಗೂ ಗೀತಾ ಸಮ್ಮೇಳನಗಳು ಸೇರಿದಂತೆ ವಿವಿಧ ಸಾಧನೆಗಳನ್ನು ಉಲ್ಲೇಖಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಲಕ್ಷಕಂಠ ಗೀತಾ ಮಹೋತ್ಸವವನ್ನೂ ಸ್ಮರಿಸಿದ ಅವರು, ಪರ್ಯಾಯದ ಯಶಸ್ಸಿಗೆ ವಿಶ್ವದಾದ್ಯಂತದ ಭಕ್ತರ ಪ್ರಾರ್ಥನೆ, ಭಕ್ತಿ ಮತ್ತು ಸಹಕಾರವೇ ಪ್ರಮುಖ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ತಮ್ಮ 53ನೇ ಚಾತುರ್ಮಾಸ್ಯ ವ್ರತವನ್ನು ನವಿ ಮುಂಬೈನಲ್ಲಿ ಪೂರೈಸಿ ನೇರವಾಗಿ ಅಟ್ಲಾಂಟಾಕ್ಕೆ ಆಗಮಿಸಿದ ಶ್ರೀಪಾದರು, ಭಕ್ತರು ಎಲ್ಲಿದ್ದಾರೋ ಅಲ್ಲಿಗೆ ಶ್ರೀಕೃಷ್ಣ ಬರುತ್ತಾನೆ ಎಂದರು. ಅಟ್ಲಾಂಟಾದಲ್ಲಿಯೂ ಶ್ರೀಕೃಷ್ಣನ ಸಾನ್ನಿಧ್ಯ ಶಾಶ್ವತವಾಗಿ ನೆಲೆಸಲಿ ಎಂದು ಆಶೀರ್ವದಿಸಿದರು.


ಸಮಾರಂಭದಲ್ಲಿ ಮಾತನಾಡಿದ ಅಟ್ಲಾಂಟಾ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕರಾದ  ಜಯಪ್ರಸಾದ್, ಅಟ್ಲಾಂಟಾ ಶ್ರೀಕೃಷ್ಣ ಮಂದಿರ ನಿರ್ಮಾಣದ ಹಿಂದಿರುವ ಶ್ರೀಪಾದರ ಮಹಾಸಂಕಲ್ಪವನ್ನು ಸ್ಮರಿಸಿ, ಪ್ರಸನ್ನಾಚಾರ್ಯರ ನಿರಂತರ ಮಾರ್ಗದರ್ಶನ ಹಾಗೂ ವಿವೇಕ್ ಅವರ ಅವಿರತ ಪರಿಶ್ರಮ ಮತ್ತು ತ್ಯಾಗವನ್ನು ವಿಶೇಷವಾಗಿ ಕೊಂಡಾಡಿದರು. ಈ ಮಂದಿರ ಯಾರೊಬ್ಬರ ವೈಯಕ್ತಿಕ ಸಾಧನೆಯಲ್ಲ; ಶ್ರೀಪಾದರ ಸಂಕಲ್ಪ, ತಪಃಶಕ್ತಿ ಹಾಗೂ ಶ್ರೀಕೃಷ್ಣನ ಅನುಗ್ರಹದ ಫಲ ಎಂದು ತಿಳಿಸಿದರು.


ಗುರು ಅಭಿವಂದನಾ ಕಾರ್ಯಕ್ರಮದಲ್ಲಿ ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡರು. ವಿಶೇಷವಾಗಿ ತಾಯಂದಿರು ಮತ್ತು ಪುಟ್ಟ ಮಕ್ಕಳು ಪುಷ್ಪಾರ್ಚನೆ ಹಾಗೂ ಫಲಸಮರ್ಪಣೆಯ ಮೂಲಕ ಶ್ರೀಪಾದರಿಗೆ ಗುರುಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದದ್ದು ಸಮಾರಂಭದ ಮನಮುಟ್ಟುವ ವಿಶೇಷತೆಯಾಗಿತ್ತು. ಮುಂದಿನ ಪೀಳಿಗೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಶ್ರೀಕೃಷ್ಣ ಭಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಮಕ್ಕಳ ಈ ಭಾಗವಹಿಸುವಿಕೆ ಅತ್ಯಂತ ಸಂತೋಷದ ಸಂಗತಿ ಎಂದು ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಪ್ರಸನ್ನಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃತಿ ಉದಯ್ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ರಾವ್ ಸ್ವಾಗತಿಸಿದರು ಹಾಗೂ ಮುರಳಿ ಕುರುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣ, ಮುಖ್ಯಪ್ರಾಣ ದೇವರು ಹಾಗೂ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹ ಸಮಸ್ತ ಭಕ್ತರ ಮೇಲಿರಲಿ ಹಾಗೂ ಅಟ್ಲಾಂಟಾ ಶ್ರೀಕೃಷ್ಣ ಮಂದಿರದ ಎಲ್ಲ ಸಂಕಲ್ಪಗಳು ಯಶಸ್ವಿಯಾಗಿ ಸಾಕಾರಗೊಳ್ಳಲಿ ಎಂದು ಶ್ರೀಪಾದರು ಆಶೀರ್ವದಿಸಿದರು.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top