ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಸೇನಾ ವರ್ಣದ ಸಮವಸ್ತ್ರ ಅನಾವರಣ

Upayuktha
0

ದೇಶಸೇವೆಗೆ ಸೇನೆಯೊಂದೇ ಅಲ್ಲ, ಸಾಕಷ್ಟು ಅವಕಾಶಗಳಿವೆ : ಕ್ಯಾ. ನವೀನ್ ನಾಗಪ್ಪ


ಪುತ್ತೂರು: ಸೇನೆಗೆ ಸೇರುವ ಮೂಲಕ ದೇಶಸೇವೆಯನ್ನು ಕೈಗೆತ್ತಿಕೊಳ್ಳುವುದು ಉತ್ತಮ. ಹಾಗೆಂದು ಸೈನ್ಯದ ಭಾಗವಾಗದೆಯೂ ಭಾರತಾಂಬೆಯ ಸೇವೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಭಾರತೀಯ ಸೇನೆಗೆ ಸಹಕಾರಿಯೆನಿಸುವ ವಿನೂತನ ತಂತ್ರಜ್ಞಾನಗಳನ್ನು ರೂಪಿಸುವುದರ ಮೂಲಕ, ದೇಶಕ್ಕೆ ಪೂರಕವಾಗುವ ಸಂಗತಿಗಳಲ್ಲಿ ಭಾಗಿಯಾಗುವ ಮೂಲಕವೂ ದೇಶಸೇವೆ ನಡೆಸಬಹುದು ಎಂದು ಕಾರ್ಗಿಲ್ ಹೋರಾಟದಲ್ಲಿ ಭಾಗಿಯಾದ, ಸೇನಾಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ ಹೇಳಿದರು.


ಅವರು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಡೆದ ನಗರದ ನಟ್ಟೋಜ ಫೌಂಡೇಶನ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳ ಪದಗ್ರಹಣ ಹಾಗೂ ಸಶಸ್ತ್ರ ಪಡೆಗಳ ವರ್ಣದ ಸಮವಸ್ತ್ರ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.


ಕಾರ್ಗಿಲ್ ಯುದ್ಧದ ಸಂದರ್ಭವನ್ನು ನೆನಪಿಸಿಕೊಂಡ ಅವರು ಪಾಕಿಸ್ಥಾನ ನಿಯಮ ಮೀರಿ ಭಾರತದ ಭೂಪ್ರದೇಶದೊಳಗೆ ಅತಿಕ್ರಮಣ ನಡೆಸಿದ ಪರಿಣಾಮ ಕಾರ್ಗಿಲ್ ಯುದ್ಧ ಸನ್ನಿಹಿತವಾಯಿತು. ಭಾರತೀಯ ಸೈನ್ಯ ಬೆಟ್ಟದ ಕೆಳಗಿನಿಂದ ಏರುತ್ತಾ ಯುದ್ಧ ಮಾಡುವ ಸ್ಥಿತಿಯಲ್ಲಿದ್ದರೆ ಪಾಕಿಸ್ಥಾನ ಬೆಟ್ಟದ ಮೇಲಿನಿಂದ ಸುಲಭಕ್ಕೆ ಯುದ್ಧ ಮುಂದುವರೆಸುವ ಸ್ಥಿತಿಯಲ್ಲಿತ್ತು. ಆದರೆ ಭಾರತೀಯ ಸೈನಿಕರ ಕೆಚ್ಚು ಮೇಲಿದ್ದ ಪಾಕಿಸ್ಥಾನಿ ಸೈನಿಕರನ್ನು ಹಿಮ್ಮೆಟ್ಟಿಸಿತಲ್ಲದೆ ಪಾಕಿಗಳ ಸೇನೆಯಲ್ಲಿ ಅಪಾರ ಸಾವುನೋವನ್ನುಂಟು ಮಾಡಿ ವಿಜಯದ ನಗೆ ಬೀರಿತು ಎಂದರು.


ಯುದ್ಧಕ್ಕೆ ಅಡಿಯಿಡುವ ಹೊತ್ತಿನಲ್ಲಿ ಪ್ರತಿಯೊಬ್ಬ ಸೈನಿಕನಲ್ಲೂ ಅನಿಶ್ಚಿತತೆ ಮನೆಮಾಡಿರುತ್ತದೆ. ಮರಳಿ ಬರುವ ಬಗೆಗೆ ಯಾವುದೇ ನಿಶ್ಚಯ ಇರುವುದಿಲ್ಲ. ಆದಾಗ್ಯೂ ದೇಶಕ್ಕಾಗಿ ಮುಂದಡಿ ಇಡುವ ಹೊತ್ತಿನಲ್ಲಿ ಸಾಕಷ್ಟು ಆತ್ಮತೃಪ್ತಿ ಇರುತ್ತದೆ. ಯುದ್ಧದಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ ತನಗೆ ಇದುವರೆಗೆ ಸೈನಿಕನಾದ ಬಗೆಗೆ ಯಾವುದೇ ಪಶ್ಚಾತ್ತಾಪವಿಲ್ಲ. ಈ ದೇಶದ ಋಣ ತೀರಿಸುವಲ್ಲಿ ಕಿಂಚಿತ್ ಅವಕಾಶ ದೊರಕಿದ್ದರ ಬಗೆಗೆ ಖುಷಿ ಇದೆ ಎಂದರು.


ತನ್ನ ಕಾಲಬುಡದಲ್ಲಿ ಪಾಕಿಗಳು ಎಸೆದ ಗ್ರೆನೇಡ್ ಸಿಡಿದ ಕೆಲವು ಕ್ಷಣ ಬದುಕಿದ್ದೇನಾ ಸತ್ತಿದ್ದೇನಾ ಎಂಬ ಪರಿವೆಯೇ ಇರಲಿಲ್ಲ. ಸುತ್ತ ಪೂರ್ತಿ ದಟ್ಟ ಹೊಗೆ ವಾಸನೆ ಮೂಡಿತ್ತು. ತುಸು ಹೊತ್ತಿನಲ್ಲಿ ನಮ್ಮ ದೇಶದ ಸಮವಸ್ತç ಧರಿಸಿದವರೊಬ್ಬರು ತನ್ನ ಬಳಿಗೆ ಬರುವುದು ಕಾಣಿಸಿತು. ಹಾಗೆ ಬಂದವರೇ ತನ್ನನ್ನು ಉದ್ದೇಶಿಸಿ ಹೆದರುವ ಅಗತ್ಯವಿಲ್ಲ, ನಾನು ಬಂದಿದ್ದೇನೆ ಎಂದರು. ಅವರು ಯಾರೆಂದು ಪರಾಂಬರಿಸಿ ನೋಡಿದಾಗ ಕಣ್ಣ ಮುಂದಿದ್ದವರು ಕ್ಯಾಪ್ಟನ್ ವಿಕ್ರಮ್ ಭಾತ್ರಾ. ಆದರೆ ಭಾರತ ತನ್ನ ಕೊನೆಯ ಗುರಿಯನ್ನು ತಲಪಿ ತ್ರಿವರ್ಣ ಧ್ವಜ ಹಾರಿಸುವ ಹೊತ್ತಿಗೆ ಮಹಾನ್ ಯೋಧ ಕ್ಯಾಪ್ಟನ್ ವಿಕ್ರಮ್ ಭಾತ್ರಾರನ್ನು ಕಳೆದುಕೊಂಡದ್ದು ದುರ್ದೈವ ಎಂದರು.



ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಭಾರತ ಮಾತೆ ಇಂದಿಗೂ ನಾನಾ ಬಗೆಯ ಸಂಕಲೆಗಳಿಂದ ಬಂಧಿಯಾಗಿಯೇ ಇದ್ದಾಳೆ. ಅದನ್ನು ಕಳಚುವ ಕಾರ್ಯ ಮುಂದಿನ ತಲೆಮಾರಿನಿಂದ ನಡೆಯಬೇಕು. ಈ ದೇಶಕ್ಕಾಗಿ ನಾನೇನಾದರೂ ಮಾಡಬೇಕು ಎಂಬ ಭಾವನೆ ಎಳೆಯ ಮಕ್ಕಳಿಂದ ಮೂಡಿಬರಬೇಕು ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ವಸಂತ ಗೌಡ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷೆ ಸ್ವಾತಿ ಜೆ ರೈ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸೇನಾನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಹವಾಲ್ದಾರ್ ಚಂದ್ರಶೇಖರ್ ಹಾಗೂ ಭವ್ಯಾ ದಂಪತಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಘಕ್ಕೆ ನೂತನವಾಗಿ ಆಯ್ಕೆಯಾವರಿಗೆ ಕ್ಯಾಪ್ಟನ್ ನವೀನ್ ನಾಗಪ್ಪ ಬ್ಯಾಡ್ಜ್ ಹಾಗೂ ಧ್ವಜ ವಿತರಿಸಿ, ಸಶಸ್ತç ಪಡೆಗಳ ಬಣ್ಣದ ಸಮವಸ್ತçವನ್ನು ಅನಾವರಣಗೊಳಿಸಿದರು. ರಜಪೂತ್, ಮರಾಠ, ನಾಗಾ ಹಾಗೂ ಗೂರ್ಖಾ ರೆಜಿಮೆಂಟ್‌ನ ಬಣ್ಣದ ಸಮವಸ್ತçವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಕ್ಯಾ.ನವೀನ್ ನಾಗಪ್ಪ ಅವರನ್ನು ಅಂಬಿಕಾ ವತಿಯಿಂದ ಸನ್ಮಾನಿಸಲಾಯಿತು. ಪಿಟಿಎ ಅಧ್ಯಕ್ಷೆ ಸ್ವಾತಿ ಜೆ ರೈ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಉಪಪ್ರಾಂಶುಪಾಲೆ ವಿನುತಾ ಎಂ ಸಾಲೆ ಅವರನ್ನು ಅಭಿನಂದಿಸಲಾಯಿತು. ಪುತ್ತೂರಿನ ಹಲವಾರು ಮಂದಿ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಜಿ ಸೈನಿಕ ಸಂಘದ ವತಿಯಿಮದ ಹವಾಲ್ದಾರ್ ಚಂದ್ರಶೇಖರ್ ದಂಪತಿಯನ್ನು ಸನ್ಮಾನಿಸಲಾಯಿತು.


ವಿದ್ಯಾರ್ಥಿನಿ ಅನುಶ್ರೀ ಹಾಗೂ ಬಳಗ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಪ್ರಸ್ತಾವನೆಗೈದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಪ್ರಮಾಣವಚನ ಬೋಧಿಸಿದರು. ಅಂಬಿಕಾ ವಿದ್ಯಾಲಯದ ಮಾತಾಜಿ ಗೌರಿ ವಂದಿಸಿದರು. ಸಂಸ್ಥೆಯ ಮಾತಾಜಿಯರಾದ ಸುಷ್ಮಾ ಮಿಥುನ್ ಹಾಗೂ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಯಶ್ವಿ, ಹೇಮಾಂಗಿನಿ ಹಾಗೂ ಆರಾಧ್ಯಾ ಅಮೈ ರಾಷ್ಟ್ರಗೀತೆ ಹಾಡಿದರು. 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top