ವಕೀಲಿ ವೃತ್ತಿಗೆ ಆಕಾಶವಲ್ಲ, ಬಾಹ್ಯಾಕಾಶವೇ ಮಿತಿ: ಶೇಣವ

Upayuktha
0

  



ಮೂಡುಬಿದಿರೆ
:ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ ವಕೀಲ ವೃತ್ತಿಯಲ್ಲಿ ದೊರೆಯುವ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸು ಬೇರೆ ಯಾವ ಕ್ಷೇತ್ರಗಳಲ್ಲೂ ಸಿಗಲಾರದು. ಇಲ್ಲಿ ಆಕಾಶವಲ್ಲ, ಬಾಹ್ಯಾಕಾಶವೇ ನಮ್ಮ ಮಿತಿ ಎಂದರು.


ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಾಯಕತ್ವ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಬಳಿಕ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಎದುರಿಸಿದ್ದೆ. ಇದೀಗ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮೂರನೇ ಪ್ರಮುಖ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದೇನೆ.  ತಾನು ಮೂಲತಃ ವೈದ್ಯನಾಗುವ ಕನಸು ಕಂಡಿದ್ದೆ. ಆದರೆ ಪಿಸಿಎಂಬಿ ವಿಭಾಗದಲ್ಲಿ ಅನುತ್ತೀರ್ಣನಾದ ಬಳಿಕ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡೆ. ಜೀವನದ ಸೋಲುಗಳೇ ನನ್ನ ಯಶಸ್ಸಿನ ದಾರಿಯನ್ನು ರೂಪಿಸಿದವು ಎಂದು ಹೇಳಿದರು.


ಸ್ವಾತಂತ್ರ‍್ಯ ಹೋರಾಟಗಾರರು, ರಾಷ್ಟ್ರನಾಯಕರು ಹಾಗೂ ಸಮಾಜ ಪರಿವರ್ತಕರು ವಕೀಲ ವೃತ್ತಿಯಿಂದಲೇ ಬಂದವರು. ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ವಕೀಲರಾಗಿದ್ದರು. ಇಂದಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲೂ ಹಲವಾರು ಪ್ರಮುಖ ನಾಯಕರು ಕಾನೂನು ಹಿನ್ನೆಲೆಯಿಂದ ಬಂದವರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾನೂನು ಚಿಂತನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಹಕ್ಕುಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ಆದರೆ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಕಾನೂನು ಶಿಕ್ಷಣದ ಪಾವಿತ್ರ‍್ಯವನ್ನು ಕಾಪಾಡಿಕೊಂಡು ಸಮಾಜದಲ್ಲಿ ಕಾನೂನು ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕುಎಂದು ಹೇಳಿದರು. ಗುರಿಯತ್ತ ಸ್ಪಷ್ಟವಾದ ಗಮನ, ಶಿಸ್ತು ಮತ್ತು ನೈತಿಕತೆ ಯಶಸ್ಸಿನ ಮೂಲಮಂತ್ರ. ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯವತಿಯಿಂದ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ಜಗದೀಶ್ ಶೇಣವ, ಶರತ್ ಶೆಟ್ಟಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮೊಹಮ್ಮದ್ ಸಫ್ವಾನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ, ಶ್ವೇತಾ ಜೈನ್,  ಮನೋಜ್ ಶೆಣೈ,  ಜಯಪ್ರಕಾಶ್ ಭಂಡಾರಿ, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೋ ಮಹಾಂತೇಶ್ ಜಿ ಎಸ್ ಇದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top