ಮಂಗಳೂರು, ಏ.27: 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದತ್ತ ನೇರ ಅವಕಾಶ ಒದಗಿಸುವ ಉದ್ದೇಶದಿಂದ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು 2026-27ನೇ ಸಾಲಿನ ಡಿಪ್ಲೋಮಾ ಇಂಜಿನಿಯರಿಂಗ್ ಪ್ರವೇಶಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಸಂಸ್ಥೆ ತಿಳಿಸಿದೆ. ಈ ಸಂಬಂಧ ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
1946ರಲ್ಲಿ ಸ್ಥಾಪಿತವಾದ ಈ ಪಾಲಿಟೆಕ್ನಿಕ್ 75 ವರ್ಷಗಳ ಸುವರ್ಣ ಪರಂಪರೆಯನ್ನು ಹೊಂದಿದ್ದು, ಕದ್ರಿ ಹಿಲ್ಸ್‌ನ ವಿಶಾಲ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲೇ ಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆಯನ್ನು ಈ ಸಂಸ್ಥೆ ಹೊಂದಿದೆ. ಸ್ವಾಯತ್ತತೆಯಿಂದಾಗಿ ಪಠ್ಯಕ್ರಮವನ್ನು ಕೈಗಾರಿಕಾ ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಷ್ಕರಿಸುವುದು, ತ್ವರಿತ ಫಲಿತಾಂಶ ಪ್ರಕಟಣೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಲ್ಲಿದೆ.
SSLC ನಂತರ ವಿದ್ಯಾರ್ಥಿಗಳು ನೇರವಾಗಿ 3 ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದ್ದು, ನಂತರ ಉದ್ಯೋಗ ಅಥವಾ ಲ್ಯಾಟರಲ್ ಎಂಟ್ರಿ ಮೂಲಕ ಬಿ.ಇ./ಬಿ.ಟೆಕ್ ಪದವಿಗೆ ಮುಂದುವರಿಯುವ ಅವಕಾಶವಿದೆ. ಸಂಸ್ಥೆಯಲ್ಲಿ ಪ್ರತಿವರ್ಷ 60ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ನೇಮಕಾತಿಗೆ ಆಗಮಿಸುತ್ತಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತಿದೆ.
ಸಂಸ್ಥೆಯಲ್ಲಿ ಆಟೋಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಕೆಮಿಕಲ್, ಪಾಲಿಮರ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಹಾಗೂ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಒಟ್ಟು 8 ಡಿಪ್ಲೋಮಾ ಕೋರ್ಸುಗಳು ಲಭ್ಯವಿದ್ದು, ಒಟ್ಟು 520 ಸೀಟುಗಳಿವೆ.
ಪ್ರವೇಶಾತಿ ಪ್ರಕ್ರಿಯೆ KPT-CAT ಪರೀಕ್ಷೆಯ ಮೂಲಕ ನಡೆಯಲಿದ್ದು, SSLC ಅಂಕಗಳಿಗೆ 75 ಶೇಕಡಾ ಹಾಗೂ ಪ್ರವೇಶ ಪರೀಕ್ಷೆಗೆ 25 ಶೇಕಡಾ ತೂಕ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಏಪ್ರಿಲ್ 27ರಿಂದ ಪ್ರಾರಂಭವಾಗಿದ್ದು, ಮೇ 11 ಅಂತಿಮ ದಿನಾಂಕವಾಗಿದೆ. KPT-CAT ಪರೀಕ್ಷೆ ಮೇ 6 ಮತ್ತು ಮೇ 13ರಂದು ನಡೆಯಲಿದೆ.
ಸಂಸ್ಥೆಯಲ್ಲಿ ಸರ್ಕಾರದ ನಿಗದಿತ ದರಗಳ ಪ್ರಕಾರ ಅತ್ಯಂತ ಕಡಿಮೆ ಶುಲ್ಕ ವಿಧಿಸಲಾಗುತ್ತಿದ್ದು, ಕೆಲವು ವರ್ಗದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕದಲ್ಲಿಯೇ ಶಿಕ್ಷಣ ಪಡೆಯುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ವೆಬ್‌ಸೈಟ್ ವೀಕ್ಷಿಸಬಹುದು ಅಥವಾ ನೇರವಾಗಿ ಕಾಲೇಜನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


