ನಯನ ರಂಗಮಂದಿರದಲ್ಲಿ ಸಾಹಿತ್ಯ–ರಂಗಭೂಮಿ–ಜಾನಪದ ಸಂಭ್ರಮ; ಖ್ಯಾತ ಸಾಹಿತಿಗಳು, ಕಲಾವಿದರ ಸಂಗಮ
ಬೆಂಗಳೂರು: ಸಾಹಿತ್ಯ, ರಂಗಭೂಮಿ ಹಾಗೂ ಜಾನಪದ ಕಲೆಯ ಸಂಯೋಜನೆಯೊಂದಿಗೆ ಲೇಖಕ ರವಿ ಅಂಬೋಜಿಯವರ ಬಹುನಿರೀಕ್ಷಿತ ‘ಗುಲಾಬಿ ಸೇನೆ’ ಕಾದಂಬರಿಯ ಲೋಕಾರ್ಪಣೆ ಕಾರ್ಯಕ್ರಮವು ಮೇ 15ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ರಂಗಚಂದಿರ ಟ್ರಸ್ಟ್ ಸಹಯೋಗದಲ್ಲಿ ಮಾಗಡಿಯ ಶಾರದಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ರಂಗನಾಯಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಸಾಂಸ್ಕೃತಿಕ–ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜು ಅವರು ‘ಗುಲಾಬಿ ಸೇನೆ’ ಕಾದಂಬರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಖ್ಯಾತ ನಾಟಕಕಾರ ಹಾಗೂ ರಂಗ ನಿರ್ದೇಶಕ ಡಾ. ಬೇಲೂರು ರಘುನಂದನ್ ಕೃತಿಯ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಸಾಹಿತಿ ಡಾ. ಎಚ್.ಎಲ್. ಪುಷ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಸವಿತಕ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ, ಲೇಖಕಿ ಡಾ. ಆರ್.ಕೆ. ಸರೋಜಾ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ. ಸೋಮಶೇಖರ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಂಗಚಂದಿರ ಟ್ರಸ್ಟ್ ಗೌರವಾಧ್ಯಕ್ಷ ರಾಧಾಕೃಷ್ಣ ಹೆಗಡೆ, ಟ್ರಸ್ಟ್ ಅಧ್ಯಕ್ಷೆ ಡಾ. ಟಿ. ಪದ್ಮ, ಸಂಚಾಲಕರಾದ ಸಿ.ಆರ್. ಮುರುಡಯ್ಯ, ಡಾ. ಮಾಗಡಿ ಗಿರೀಶ್, ಶ್ರೀಧರ್ ಗೌಡ, ಉಪಾಧ್ಯಕ್ಷ ಹೇಮಂತ್ ಗೌಡ ಹಾಗೂ ಕಾರ್ಯದರ್ಶಿ ಜಿಪಿಒ ಚಂದ್ರು ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 10:30ಕ್ಕೆ ಹೋರಾಟದ ಗೀತೆಗಳ ಗಾಯನವನ್ನು ಸವಿಗಾನ ಮಂಜು ತಂಡ ಪ್ರಸ್ತುತಪಡಿಸಲಿದ್ದು, ಸ್ವರ ಅಮೃತ ಸಂಗೀತ ಶಾಲೆಯ ಮಕ್ಕಳು ಜಾನಪದ ಗೀತೆಗಳ ಗಾಯನದ ಮೂಲಕ ರಂಜಿಸಲಿದ್ದಾರೆ.
ಇದೇ ವೇಳೆ ರವಿ ಅಂಬೋಜಿಯವರ ‘ಮಾರ್ಗದಾಳು’ ಕಾದಂಬರಿ ಆಧಾರಿತ ಏಕವ್ಯಕ್ತಿ ಪ್ರಯೋಗ ನಾಟಕವೂ ಪ್ರದರ್ಶನಗೊಳ್ಳಲಿದೆ. ಕಗ್ಗೆರೆ ಮಂಜುನಾಥ್ ಅವರ ಪ್ರಸ್ತುತಿಯಲ್ಲಿ, ಸಿದ್ದರಾಮ್ ಕೊಪ್ಪರ್ ನಿರ್ದೇಶನದಲ್ಲಿ ಈ ನಾಟಕ ಮೂಡಿಬರಲಿದ್ದು, ಜಿಪಿಒ ಚಂದ್ರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.
ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಹಾಗೂ ರಂಗಚಂದಿರ ಟ್ರಸ್ಟ್ ಕಾರ್ಯದರ್ಶಿ ಜಿಪಿಒ ಚಂದ್ರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


