'ದೇಶದ ಪರಿಧಿಯ ಒಳಭಾಗದಲ್ಲಿದ್ದುಕೊಂಡು ಯಾವುದೇ ಚಿಂತೆ ಕಂತೆಗಳಿಲ್ಲದೆ ತಮ್ಮ ದುಡಿಮೆಯಾಯ್ತು, ತಮ್ಮ ಕುಟುಂಬ, ಬಂಧು-ಬಳಗವಾಯ್ತು ಎನ್ನುವಂತಹ ರೀತಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡರೆ, ಇವರೆಲ್ಲರ ಈ ನಿರಾಳ ಬದುಕಿಗೆ ರಕ್ಷಣಾ ಕವಚದಂತೆ ನಿಂತಿರುವವರು ದೇಶದ ಗಡಿಯಲ್ಲಿ ಸದಾ ಹಗಳಿರುನೆನ್ನದೆ ಕಾಯುವ ಯೋಧರು'. ನಾವು ಇಲ್ಲಿ ಸುಖಮಯವಾಗಿ ಜೀವನ ನಡೆಸಬೇಕಾದರೆ ಅದಕ್ಕೆ ಮುಖ್ಯ ಕಾರಣವಾಗುವವರು ನಮ್ಮ ಯೋಧರಾಗಿರುತ್ತಾರೆ. ಅದಕ್ಕೆ ಹೇಳೋದು 'ಯೋಧರು ನಮ್ಮ ದೇಶದ ಬೆನ್ನೆಲುಬು' ಎಂದು.
ನಿಜವಾಗಿಯೂ ಭಾರತದಲ್ಲಾಗಲಿ ಅಥವಾ ಜಗತ್ತಿನ ಯಾವುದೇ ದೇಶಗಳಲ್ಲಾಗಲಿ ಯೋಧನಿಗೆ ಇರುವಷ್ಟು ಗೌರವ, ಪ್ರೀತಿ ಇನ್ನಾರಿಗೂ ಸಿಗಲು ಸಾಧ್ಯವಿಲ್ಲ. ಏಕೆಂದರೆ ಸಾಮಾನ್ಯವಾಗಿ ಜೀವನ ನಡೆಸುವ ಹಲವರು ತಮ್ಮ ಬದುಕಿನ ಉದ್ದೇಶಕ್ಕೋಸ್ಕರ ಮಾತ್ರ ದುಡಿದರೆ, ಯೋಧರು ಮಾತ್ರ ತಮ್ಮಲ್ಲಿ ಗಳಿಕೆಯ ಆಶಯವನ್ನು ಇಟ್ಟುಕೊಂಡಿದ್ದರೂ ಕೂಡ ಅದರ ಮೊದಲಾರ್ಧದಲ್ಲಿ ತಮ್ಮ ದೇಶವಾಸಿಗಳನ್ನು ರಕ್ಷಿಸುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಅವರ ಸೇವೆಯನ್ನು ಸದಾ ನಾವು ಮೆಚ್ಚಲೇ ಬೇಕಾಗಿದೆ. ದೇಶದ ರಕ್ಷಣೆಗೋಸ್ಕರ ಕುಟುಂಬ, ಸುಖ-ಭೋಗಗಳನ್ನು ತ್ಯಾಗ ಮಾಡಿ, ಪ್ರಾಣದ ಹಂಗನ್ನು ತೊರೆದು ಎದೆಗುಂದದೆ ಶೌರ್ಯತನದಿಂದ ಇದ್ದು, ಎಲ್ಲದಕ್ಕೂ ಸೈ ಎನ್ನುವಂತಹ ರೀತಿಯಲ್ಲಿ ಸದಾ ಸಿದ್ಧರಾಗಿರುತ್ತಾರೆ.
ಅದರಲ್ಲಿಯೂ ನಮ್ಮ ಭಾರತೀಯ ಯೋಧರು ಇನ್ನಷ್ಟು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ನಮ್ಮ ದೇಶದ ಗಡಿಯು ಅತ್ಯಂತ ಕಠಿಣವಾದ ಭೌಗೋಳಿಕ ವಾತಾವರಣಗಳನ್ನು ಹೊಂದಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತರದ ಗಡಿ ಭಾಗದಲ್ಲಿ ಹಿಮಾಲಯ ಪರ್ವತ ಶ್ರೇಣಿಯಿದ್ದು ಅಲ್ಲಿನ ಆ 50 ಡಿಗ್ರಿ ಸೆಲ್ಸಿಯಸ್ ವರೆಗೂ ಕುಸಿಯುವ ವಾತಾವರಣದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸಬೇಕಾಗುತ್ತದೆ. ಆ ಪ್ರದೇಶಗಳೆಲ್ಲಷ್ಟೇ ಅಲ್ಲದೆ, ರಾಜಸ್ಥಾನದ ಸುಡುವ ಬಿಸಿಲಿನಲ್ಲಿ, ಧೂಳಿನ ಬಿರುಗಾಳಿದಂತಹ ಸವಾಲುಗಳನ್ನು ಎದುರಿಸಬೇಕಾಗಿದ್ದು ಇನ್ನೂ ಹಲವು ಅಪಾಯಕಾರಿ ಪ್ರದೇಶಗಳಿದ್ದು ಇಂತಹ ದೇಶದ ರಕ್ಷಣೆಗೆ ಸದಾ ಸಿದ್ಧರಾಗಿರಬೇಕಾಗುತ್ತದೆ. ಆದರೆ ಇದಾವುದನ್ನು ಲೆಕ್ಕಿಸದೆ ದೇಶದ್ರೋಹಿ ಆಕ್ರಮಣಕಾರಿಗಳನ್ನು ಹೊಡೆದುರುಳಿಸಿ ದೇಶ ಕಾವಲಿಗೋಸ್ಕರ ತಮ್ಮ ಪ್ರಾಣ ತ್ಯಾಗಮಾಡಲೂ ಕೂಡ ಸಿದ್ದರಾಗಿರುತ್ತಾರೆ.
ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಯೋಧನ ಧೈರ್ಯ,ಛಲ ಅಂತೆಯೇ ದೇಶದ ಕುರಿತು ಆತನೊಳಗೆ ಅಚ್ಚೊತ್ತಿದಂತಿರುವ ದೇಶಪ್ರೇಮ. ಕೆಲವೊಬ್ಬರಿಗೆ ತಾನು ಸೈನಿಕ ವೃತ್ತಿಗೆ ಸೇರ್ಪಡೆ ಹೊಂದಬೇಕು ಎನ್ನುವಂತಹ ಕನಸು ಅವರ ಬಾಲ್ಯದಿಂದಲೇ ಅವರಿಗೆ ಸಿಕ್ಕಂತಹ ವಾತಾವರಣದಿಂದ ಬಂದಿರಬೇಕು.ಹಾಗಾಗಿ ದೇಶದ ರಕ್ಷಣೆಯ ನಿಮಿತ್ತ ಕಠಿಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವಂತದ್ದು ಜ್ಞಾಪಕದಲ್ಲಿದ್ದರೂ ಕೂಡ ಪ್ರತಿ ಕ್ಷಣಗಳನ್ನು ಸಂತೋಷದಿಂದ, ಬಹಳ ಹೆಮ್ಮೆಯಿಂದ ಸ್ವೀಕರಿಸುತ್ತಾರೆ.
ಹಾಗೆಯೇ ಯೋಧನ ತಂದೆ ತಾಯಿಗಳಿಗೂ ಒಂದು ಸಲಾಂ ಹೊಡೆಯಲೇಬೇಕು. ಭಾರತಮಾತೆಯನ್ನು ರಕ್ಷಿಸುವ ಪುಣ್ಯ ಕಾರ್ಯದಲ್ಲಿ ನಿರತನಾಗುವಂತಹ ಯೋಧನಿಗೆ ಜನ್ಮವನ್ನು ನೀಡಿ, ತಮ್ಮ ಮಗುವಿನ ರಕ್ಷಣೆಯ ಚಿಂತನೆ ಮನದೊಳಗೆ ಇದ್ದರೂ ಕೂಡ, ಯಾವುದೇ ಸ್ವಾರ್ಥವಿಲ್ಲದೆ ಆತ ದೇಶ ಸೇವೆಗೋಸ್ಕರ, ದೇಶದ ರಕ್ಷಣೆಗೋಸ್ಕರ ತೆರಳುತ್ತಿದ್ದಾನೆ ಎನ್ನುವ ಕಾರಣದಿಂದ ಪ್ರೋತ್ಸಾಹಿಸಿ ಕಳುಹಿಸಿಕೊಡುವ ತಂದೆ ತಾಯಿಗಳಿಗೆ ಸದಾ ಧನ್ಯರಾಗಿರಬೇಕು.
ನಮ್ಮೆಲ್ಲರ ಈ ನೆಮ್ಮದಿಯ ನಿದ್ದೆಗೆ ಮುಖ್ಯ ಕಾರಣವಾಗುವವರು ಯೋಧರಾಗಿದ್ದು, ನಮ್ಮ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಅವರು ನಮ್ಮ ಬದುಕಿನ ನಿಜವಾದ ಹೀರೋಗಳಾಗಿದ್ದಾರೆ. ಆ ಹೀರೋಗಳಿಗೆ ಸರಿಸಾಟಿಯಾದವರು ಯಾರು ಇಲ್ಲ. ಆದ್ದರಿಂದ ಆ ಯೋಧರಿಗೆ ನಾವೆಲ್ಲರೂ ಸದಾ ಋಣಿಯಾಗಿರೋಣ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



