ಹವ್ಯಾಸದ ಕಥೆ

Upayuktha
0

ನ್ನ ಶಾಲಾ ದಿನಗಳಲ್ಲಿನ "ಹವ್ಯಾಸ" ಗಳ ಕುರಿತು ಹೇಳಲು ಬಂದಿರುವೆ. ಎಷ್ಟು ಪುಟ್ಟದಾಗಿ ಹೇಳಿ ಮುಗಿಸಲು ಸಾಧ್ಯವೋ... ಅಷ್ಟು ಪುಟ್ಟದಾಗಿ ಹೇಳುವೆ. ನನ್ನ "ಹವ್ಯಾಸ"ದ ಕಥೆ ಕೇಳಿ ನಗುವಿರೇನೋ?


1.ಚಾಕ್ಲೆಟ್ ಸಿಪ್ಪೆ ಸಂಗ್ರಹ

2.ಬೆಂಕಿ ಪೊಟ್ಟಣದ ಚಿತ್ರ

3.ಪತ್ರಿಕೆಗಳಲ್ಲಿ ಬಂದ ಫೋಟೋಗಳು

4.ಹಕ್ಕಿಗಳ ಪುಕ್ಕಗಳು

5.ಕಲ್ಲುಗಳು

6.ಒಣ ರೆಂಬೆಯ ಅಣಬೆಗಳು... ಹೀಗೆ ಹಲವಾರು.


ಹಕ್ಕಿಗಳ ಪುಕ್ಕಗಳ ಸಂಗ್ರಹ ಬಹಳ ಆಸಕ್ತಿಯದ್ದಾಗಿತ್ತು. ಕೆಲವು ಸಣ್ಣ ರೆಕ್ಕೆಗಳು ಇದ್ದವು. ತೋಟದಲ್ಲಿ,ಗುಡ್ಡದಲ್ಲಿ ಈ ಪುಕ್ಕಗಳು ಬಿದ್ದಿರುತ್ತಿದ್ದವು. ಅತಿ ಸಣ್ಣದು ಸಿಕ್ಕಿದರೂ ಸಂಭ್ರಮ ನನಗೆ. ಅದರ ಬಣ್ಣವೇ ಆಕರ್ಷಕ. ಆ ಪುಕ್ಕಗಳನ್ನು ನನ್ನ ಅಪ್ಪನಿಗೆ ತೋರಿಸಿ ಅದ್ಯಾವ ಹಕ್ಕಿಯದೆಂದು ಕೆಲವು ಸಲ ಕೇಳುತ್ತಿದ್ದೆ.


ಅದೆಷ್ಟು ರೆಕ್ಕೆ,ಪುಕ್ಕಗಳಿದ್ದವು ಗೊತ್ತೇ...ನೀಲಿ,ಹಳದಿ,ಕೆಂಪು,ಕಂದು ..ಹೀಗೆ ಹಲವು ಬಣ್ಣ. ಕೆನ್ನೆಯ ಮೇಲೆ ಮೆಲ್ಲನೆ ಅತ್ತಿತ್ತ ಸೋಕಿಸಿದರೆ ಕಚಗುಳಿ.


ಒಂದು ದಿವಸ ಅದನ್ನೆಲ್ಲಾ ಹರವಿಕೊಂಡು ಎಷ್ಟು ಇದೆಯೆಂದು ಎಣಿಸುತ್ತಿದ್ದೆ.


ಆ ಹೊತ್ತಿಗೆ ನೆರೆ ಕರೆಯ ಮನೆಯ ಹಿರಿಯೊಬ್ಬರ ಆಗಮನ. 


ನನ್ನನ್ನೂ ..ಹಕ್ಕಿ ಪುಕ್ಕಗಳನ್ನು ಬಿಟ್ಟ ಕಣ್ಣು ಬಿಟ್ಟ ಹಾಗೇ ವೀಕ್ಷಿಸಿದರು. 


"ಇಂದೆಂತದು ಕೂಸೆ?" ಎಂದರು. ಹಕ್ಕಿ ಪುಕ್ಕಗಳ  ಕಥೆ ಹೇಳಿದೆ.


"ಅಮ್ಮ,ಅಪ್ಪನಿಗೆ ಗೊತ್ತಿಲ್ಲವಾ ನಿನ್ನ ಹಕ್ಕಿ ಪುಕ್ಕ ಸಂಗ್ರಹ..?" ಮತ್ತೆ ಪ್ರಶ್ನೆ. 


ನನ್ನ ಅಮ್ಮ ಬಂದಾಗ ಅದೇ ಪ್ರಶ್ನೆ ಕೇಳಿದರು.


"ಅವಳಿಗೆ ಹಾಗೇ. ಹಕ್ಕಿಗಳು, ಪ್ರಾಣಿಗಳು ಅಂದ್ರೆ ಭಾರೀ ಪ್ರೀತಿ" ಎಂದರು ಅಮ್ಮ ಖುಷಿಯಲ್ಲಿ.


"ಕುಸುಮಕ್ಕಾ (ನನ್ನಮ್ಮನ ಹೆಸರು) ನಿಮಗೆ ಸ್ವಯ ಉಂಟಾ? ಮಕ್ಕಳಿಗೆ ಬುದ್ದಿಯಿಲ್ಲ. ನೀವಾದ್ರೂ ಹೇಳೋದಲ್ಲವಾ.. ಇದರಲ್ಲಿ ಗಿಡುಗ, ಗೂಬೆ ಗಳ ರೆಕ್ಕೆಗಳಿವೆ. ಅವನ್ನೆಲ್ಲಾ ಮನೆಯೊಳಗೆ ತರಲೇ ಬಾರದು. ದೋಷ ಉಂಟು..ಗೊತ್ತುಂಟಾ?" ಎಂದರು.


ಮುಗಿಯಿತು ಕಥೆ.ಅವರು ಹೋದ ಮೇಲೆ ಅಮ್ಮನ ರಾಗವೇ ರಾಗ.


ಅಪ್ಪ ಪೇಟೆಯಿಂದ ಬರುವ ಮೊದಲು ಆ ರೆಕ್ಕೆಗಳನ್ನೆಲ್ಲಾ ದೂರ ಎಸೆದು ಬಾ.. ಈಗಾಗಲೇ..ಏನಾದ್ರು ದೋಷ ಬಂದಿದೆಯೋ ಏನೋ..ಅಯ್ಯೋ ದೇವರೇ.." ಎಂದು.


ನಾನು ಜೋರಾಗಿ ಅತ್ತಿದ್ದೆ. ಮನದಲ್ಲಿ ಭಯ. ಅವ್ರು ಹೇಳಿದ್ದು ನಿಜವಾಗಿದ್ದರೆ? ಎಂದು.


ಎಲ್ಲಾ ರೆಕ್ಕೆ,ಪುಕ್ಕಗಳನ್ನು ಖಾಕಿ ಲಕೋಟೆಗೆ ತುಂಬಿಸಿದೆ. ಗುಡ್ಡಕ್ಕೆ ಹೋಗಿ ಎಲ್ಲವನ್ನು ಎಸೆದೆ.


ಬಣ್ಣಬಣ್ಣದ ರೆಕ್ಕೆ, ಪುಕ್ಕಗಳು ಗಾಳಿಯಲ್ಲಿ ತೇಲುತ್ತ...ಮರೆಯಾದವು.. ನನ್ನ ಆಸೆಯು, ಹವ್ಯಾಸವೂ ಹಾಗೆಯೇ ಕರಗಿತ್ತು.


ಕಣ್ಣೀರ ಧಾರೆಯನ್ನು ಒರೆಸುತ್ತಾ ಮನೆಗೆ ಬಂದೆ. ಅದ ದುಃಖ ವಿವರಿಸಲು ಕಷ್ಟ.


ಮತ್ತೆ ಎಲ್ಲಾದರೂ ಹಕ್ಕಿ ಪುಕ್ಕ ಕಂಡಾಗ ಅಲ್ಲೇ ಕುಳಿತು.. ಅದರ ಚೆಲುವನ್ನು ನೋಡುತ್ತಿದ್ದೆ. ಮತ್ತೆಂದಿಗೂ ಹೆಕ್ಕಿ ತರಲೇ ಇಲ್ಲ.


-  ಅರುಣಾ ಜಿ.ಭಟ್ ಬದಿಕೋಡಿ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top