ಪ್ರತಿನಿತ್ಯ ಮನೆಯಲ್ಲಿ ತಯಾರಿಸಿದ ಆಹಾರ ತಿಂದರೆ ಬಹಳಷ್ಟು ಆರೋಗ್ಯವಂತರಾಗಿರುತ್ತೇವೆ. ಏಕೆಂದರೆ ನಮ್ಮ ಮನೆಯಲ್ಲಿರುವ ಮಹಿಳೆಯರು ಅಂದರೆ ನನ್ನ ತಾಯಿ, ಅಕ್ಕ-ತಂಗಿ, ಹೆಂಡತಿ-ಮಗಳು, ಅಡಿಗೆ ಮಾಡುವಾಗ ಸಾಂಪ್ರದಾಯಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಮಾಡುತ್ತ ಬಂದಿರುವ ಅಡಿಗೆ ಬಹಳಷ್ಟು ಸುರಕ್ಷಿತವಾಗಿರುತ್ತದೆ. ಅಲ್ಲಿ ಶುಚಿ-ರುಚಿ, ಸ್ವಚ್ಛತೆ-ಕಾಳಜಿ, ಪ್ರೀತಿ-ವಾತ್ಸಲ್ಯ, ಮಮತೆ ಎಲ್ಲಾ ತುಂಬಿರುತ್ತದೆ. ಆದರೂ ಇಂದಿನ ಬಹಳಷ್ಟು ಯುವಕ ಯುವತಿಯರಿಗೆ, ಮನೆಯೂಟ ಎಂದರೆ ತಾತ್ಸಾರ, ಬೇಸರ, ನಿಷ್ಕಾಳಜಿ. ಎಂದೋ ಒಂದು ದಿನ ಒಂದು ಹೊತ್ತು ಬದಲಾವಣೆಗೆ, ಹೊಸರುಚಿಗೆ ಮನೆ ಹೊರಗಿನ ರಸ್ತೆಯ ತಿಂಡಿ-ತಿನಿಸು, ಊಟ-ನೋಟ ಬಹಳ ಚೆನ್ನಾಗಿರಬಹುದು. ಆದರೆ ಎಲ್ಲಿಯವರೆಗೆ ದೇಹ ಮನಸ್ಸು ಆರೋಗ್ಯವಾಗಿರುತ್ತದೋ, ಎಲ್ಲಿಯವರೆಗೆ ಕಲುಷಿತ ಅಸ್ವಚ್ಛ ಆಹಾರ-ಪಾನೀಯ ಅವರಿಗೆ ಕಾಯಿಲೆ ಬಾರದಂತೆ ಅವರ ದೇಹ ತಡೆದುಕೊಳ್ಳುತ್ತದೋ, ಅಲ್ಲಿಯವರೆಗೆ ಈ ಆಟ ನಡೆಯಬಲ್ಲದು. ಆದರೆ ಹಿಂದಿನವರಿಗೆ ಹೋಲಿಸಿದರೆ ಇಂದಿನವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಅಷ್ಟು ಗಟ್ಟಿಯಿಲ್ಲ. ನಮ್ಮ ದೇಹವನ್ನು ನಿತ್ಯ ಹೊರಗೆ ಎಷ್ಟು ಸುಂದರ ಮಾಡಿಕೊಳ್ಳುತ್ತೇವೋ, ಹಾಗೆಯೇ ನಾಲಿಗೆಗೂ ಸ್ವಚ್ಛವಾದ, ಶುದ್ಧವಾದ, ತಾಜಾ ಬಿಸಿ ಬಿಸಿ ಆಹಾರ ಬೇಕು.
ಇತ್ತೀಚಿನ ಬಹಳಷ್ಟು ಜನರ ನಿತ್ಯ ಆಹಾರ ಪದ್ಧತಿಯಲ್ಲಿ ಹಿಂದಿನವರಂತೆ ಸಮಯ ಪ್ರಜ್ಞೆ, ಪ್ರಮಾಣ ಹಾಗೂ ಆಹಾರ ಪದಾರ್ಥಗಳ ಕಾಂಬಿನೇಶನ್ ಇವುಗಳ ನಡುವೆ ಸಂಪೂರ್ಣ ಹೊಂದಾಣಿಕೆ ಇಲ್ಲ. ಆಹಾರ ತೆಗೆದುಕೊಳ್ಳುವಾಗ ನಾವು ಆಹಾರದ ಸುರಕ್ಷತೆ, ಪೌಷ್ಠಿಕತೆ ಇವೆಲ್ಲವುಗಳನ್ನು ಗಮನಿಸಬೇಕು. ಅಸುರಕ್ಷಿತ ಆಹಾರ ತಿಂದರೆ ಏನಾಗುತ್ತದೆ ಬಲ್ಲಿರಾ? ಪ್ರಪಂಚದಲ್ಲಿ 600 ದಶಲಕ್ಷ ಜನಸಂಖ್ಯೆಯಲ್ಲಿ, ಹೆಚ್ಚು ಕಡಿಮೆ 10 ರಲ್ಲಿ ಒಬ್ಬರು ಕಲುಷಿತ ಆಹಾರ ತಿಂದ ಮೇಲೆ ಕಾಯಿಲೆ ಬೀಳುತ್ತಿದ್ದಾರೆ. ಈ ಕಾರಣದಿಂದ ಪ್ರತಿವರ್ಷ 4,20000 ಜನ ಸಾಯುತ್ತಿದ್ದಾರೆ. ಪ್ರತಿವರ್ಷ ಕಡಿಮೆ ಆದಾಯದ ದೇಶಗಳಲ್ಲಿ ಅಸುರಕ್ಷಿತ ಆಹಾರ ತಿನ್ನುವುದರಿಂದ ಬರುವ ಕಾಯಿಲೆಗಳ ನಿವಾರಣೆಗಾಗಿ ವೈದ್ಯಕೀಯ ಖರ್ಚಿಗಾಗಿ 110 ದಶಕೋಟಿ ಡಾಲರ್
ಗಳಷ್ಟು ಉತ್ಪಾದಕತೆಯನ್ನು ಈ ಕಾರಣದಿಂದ ಕಳೆದುಕೊಳ್ಳುತ್ತಿದ್ದಾರೆ. 5 ವರ್ಷದ ಕೆಳಗಿನ ಮಕ್ಕಳಲ್ಲಿ 40% ರಷ್ಟು ಮಕ್ಕಳು ಆಹಾರಕ್ಕೆ ಸಂಬAಧಿಸಿದ ಕಾಯಿಲೆಗಳ ಭಾರದಿಂದ ಒದ್ದಾಡುತ್ತಿದ್ದು, ಪ್ರತಿವರ್ಷ 1,25000 ಮಕ್ಕಳು ಮರಣ ಹೊಂದುತ್ತಿದ್ದಾರೆ. ಅಸುರಕ್ಷಿತ ಆಹಾರದಿಂದ ಬರುವ ಕಾಯಿಲೆಗಳಿಂದ ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ, ಕುಂಠಿತಗೊಳ್ಳುತ್ತದೆ. ಆಗ ಆರೋಗ್ಯ ಕಾಳಜಿಯ ವ್ಯವಸ್ಥೆಗಳು, ರಾಷ್ಟ್ರೀಯ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ವ್ಯಾಪಾರ ಕ್ಷೇತ್ರಗಳು ಕ್ಷೀಣವಾಗುತ್ತವೆ. ಆಹಾರ ಸುರಕ್ಷತೆ ಎಂಬುದು ವಿವಿಧ ರಾಷ್ಟ್ರೀಯ ಕೇಂದ್ರಗಳ ಜವಾಬ್ದಾರಿಯಾಗಿದ್ದು, ಇದಕ್ಕೆ ಒಮ್ಮೆಲೇ ಬಹು ವಿಭಾಗಗಳ ಆರೋಗ್ಯ ವಿಧಾನ ಬೇಕಾಗುತ್ತದೆ.
ದೇಹಕ್ಕೆ ಸಾಕಾಗುವಷ್ಟು ಸುರಕ್ಷಿತ ಹಾಗೂ ಪೌಷ್ಠಿಕ ಆಹಾರವು ಜೀವ ಉಳಿಸಲು ಹಾಗೂ ಉತ್ತಮ ಆರೋಗ್ಯ ಪೋಷಿಸಲು ಬೇಕಾಗುತ್ತದೆ. ಅಸುರಕ್ಷಿತ ಆಹಾರವು ಹಾನಿಕಾರಕ ಬ್ಯಾಕ್ಟೀರಿಯ (ಸೂಕ್ಷ್ಮಾಣು
ಜೀವಿಗಳು), ವೈರಸ್ (ಸೊಂಕು ಹಾಗೂ ನಂಜು ಉಂಟುಮಾಡುವ ರೋಗಾಣು), ಪ್ಯಾರಾಸೈಟ್ಸ್ (ಪರಾವಲಂಬಿ ಜೀವಿಗಳು) ಹಾಗೂ ರಾಸಾಯನಿಕ ಉಳಿಕೆಗಳು, ಇವೆಲ್ಲಾ ಒಟ್ಟಾಗಿ 200ಕ್ಕಿಂತ ಹೆಚ್ಚು ಕಾಯಿಲೆಗಳನ್ನು ಹೊತ್ತು ತರುತ್ತವೆ. ಅದು ಅತಿಸಾರ-ಭೇದಿಯಿಂದ ಕ್ಯಾನ್ಸರ್ವರೆಗೆ ಇರಬಹುದು. ಇದು ಕಾಹಿಲೆ ಮತ್ತು ಅಪೌಷ್ಠಿಕತೆಗಳ ವಿಷ ವರ್ತುಲವನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಇದು ಕಂದಮ್ಮಗಳನ್ನು, ಯುವಜನರನ್ನು, ಹಿರಿಯ ನಾಗರಿಕರನ್ನು, ಈಗಾಗಲೇ ಕಾಹಿಲೆಯಿಂದ ನರಳುತ್ತಿರುವವರನ್ನು ಕಾಹಿಲೆಯತ್ತ ದೂಡುತ್ತದೆ. ಆಹಾರ ಸುರಕ್ಷತೆ ಮತ್ತು ಬಲವಾದ ಆಹಾರ ವ್ಯವಸ್ಥೆಗಳನ್ನು ಖಾತ್ರಿಪಡಿಸಲು ಸರಕಾರ ಆಹಾರ ಉತ್ಪಾದಕರು ಹಾಗೂ ಬಳಕೆದಾರರ ಮಧ್ಯೆ ಒಳ್ಳೆಯ ಸಹಭಾಗಿತ್ವವಿರಬೇಕು. ಮುಖ್ಯವಾಗಿ, ಸೋಂಕಿನಿಂದ ಅಥವಾ ವಿಷಕಾರಿ ಗುಣದಿಂದ ಬ್ಯಾಕ್ಟೀರಿಯಾ, ವೈರಸ್ ಹಾಗೂ ಪ್ಯಾರಸೈಟ್ಗಳು ಮತ್ತು ರಾಸಾಯನಿಕ ವಸ್ತುಗಳಿಂದ ಆಹಾರ ಕಲುಷಿತವಾಗಿ ಅದರಿಂದ ಬರುವ ಕಾಹಿಲೆಗಳು ಜನರನ್ನು ರೋಗ, ನೋವು, ಸಾವುಗಳತ್ತ ದೂಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ದೀರ್ಘಕಾಲ ಉಳಿಯುವ ದೈಹಿಕ ಅಂಗವಿಕಲತೆ ಹಾಗೂ ಸಾವು ತರುತ್ತವೆ. ಸುರಕ್ಷಿತ ಆಹಾರ ಪೂರೈಕೆಯು ಆರೋಗ್ಯಕ್ಕೆ ಅತ್ಯವಶ್ಯಕ. ಇದರಿಂದ ಆಹಾರ ಮತ್ತು ಪೌಷ್ಠಿಕತೆಯು ಸುರಕ್ಷತೆ ದೊರೆಯುತ್ತದೆ.
ನಗರೀಕರಣ ಹಾಗೂ ಬಳಕೆದಾರರ ಹವ್ಯಾಸಗಳ ಬದಲಾವಣೆಗಳು, ಅಸಂಖ್ಯಾತ ಜನರು, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಅಸುರಕ್ಷಿತ ನೀರಿರುವ ಬಚ್ಚಲುಗಳ ಬಳಿಯಲ್ಲಿ ಸಿದ್ಧವಾಗುತ್ತಿರುವ ಆಹಾರ ತಿನ್ನುವ ರೂಢಿ ಮಾಡಿಕೊಂಡಿದ್ದಾರೆ. ರಸ್ತೆ ಬದಿಯ ಗಾಡಿಗಳಲ್ಲಿ ಬೆಳಗ್ಗೆ-ಸಂಜೆ ಜನ ಆಹಾ! ಎಂದು ತಿನ್ನುವ ಬಿಸಿ ಬಿಸಿ ಇಡ್ಲಿವಡೆಗಳಿಗೆ ಮಾಡಿದ ಚಟ್ನಿಯಲ್ಲಿ ಬಳಸಿದ ಪದಾರ್ಥಗಳು, ಮತ್ತೆ ಮತ್ತೆ ಬೋಂಡಾ, ಬಜ್ಜಿ, ಕರಿದ ಎಣ್ಣೆಯ ಬಾಣಲೆಗಳಲ್ಲೇ ಹತ್ತಾರು ಬಾರಿ ಬಳಸಿದ ಎಣ್ಣೆಯಲ್ಲೇ ಮತ್ತೆ ಮತ್ತೆ ಕರಿದಾಗ ಆ ಎಣ್ಣೆಯ ಬಣ್ಣ ಹಳೆಯದಾಗಿರುತ್ತದೆ. ಈಗೀಗ ಹಿಂದಿನಂತೆ ಗಾಣದಲ್ಲಿ ಅರೆದ ಶುದ್ಧವಾದ ಕಡಲೆಕಾಯಿ, ಸೂರ್ಯಕಾಂತಿ, ಎಳ್ಳು, ಕೊಬ್ಬರಿ ಎಣ್ಣೆ ಬಳಸದೇ ಕಡಿಮೆ ಬೆಲೆಯ ಅಷ್ಟು ಶುದ್ಧವಾಗಿಲ್ಲದ ವಿವಿಧ ಎಣ್ಣೆಗಳು, ಡಾಲ್ಡಾ ಬಳಸುವುದರಿಂದ ಎಷ್ಟೋ ಜನರಿಗೆ ಚರ್ಮದ ಕಾಹಿಲೆಗಳು, ಬಾಯಿ ಗಂಟಲಿನ ಹುಣ್ಣುಗಳು, ವಾಂತಿ-ಭೇದಿ ಆರಂಭವಾಗುತ್ತದೆ.
ಎಲ್ಲಿಯವರೆಗೆ ಜನರ ದೇಹ ಯಾವುದೇ ಕಲುಷಿತ ಆಹಾರದ ಪರಿಣಾಮವನ್ನು ತಡೆಯುವಷ್ಟು ಶಕ್ತಿ ಹೊಂದಿರುತ್ತದೋ ಅಲ್ಲಿಯವರೆಗೆ ಅವರಿಗೆ ಏನೂ ಆಗುವುದಿಲ್ಲ ಎಂಬ ಭ್ರಮೆ. ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುವವರೆಗೆ ಅವರಿಗೆ ಕಾಹಿಲೆ ಬರಲಿಕ್ಕಿಲ್ಲ. ಆದರೆ ನಾನು ಪ್ರತಿನಿತ್ಯ ಸಂಜೆ ನೋಡುವ ದೃಶ್ಯಗಳಲ್ಲಿ ತಂದೆ-ತಾಯಿ, ತಾತ-ಅಜ್ಜಿ, ಕೂಸುಗಳಿಗೆ, ಕಂದಮ್ಮಗಳಿಗೂ, ಬಸುರಿ-ಬಾಣಂತಿಯರಿಗೂ, ಹಿರಿಯನಾಗರಿಕರಿಗೂ ಈ ರಸ್ತೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಿಸಿ ಆಹಾ! ಓಹೋ! ಎಂದು ತಲೆಯಾಡಿಸುತ್ತಿರುತ್ತಾರೆ. ಆದರೆ ಆ ಗಳಿಗೆಯ ತಿಂದ ತೃಪ್ತಿಯ ತೇಗು ಬರುವಷ್ಟರಲ್ಲೇ ಅನಾರೋಗ್ಯ ಆವರಿಸಿದಾಗ ತಿಳಿಯುತ್ತದೆ ನಿಮಗೆ ಆರೋಗ್ಯದ ಮಹತ್ವ ಹಾಗೂ ಈ ಅನಾರೋಗ್ಯ ಆಹಾರ ತಿಂದಾಗ ಬರುವ ಹೊಟ್ಟೆನೋವು ಮುಂತಾದ ಕಾಹಿಲೆಗಳಿಂದ ಕಣ್ಣುಗಳಲ್ಲಿ ಸುರಿಯುತ್ತದೆ ನೀರು-ಜೇಬಿನಿಂದ ಪೀಕಬೇಕಾಗುತ್ತದೆ ದುಡ್ಡು. ಆದ್ದರಿಂದ ಎಚ್ಚರ. ಸುರಕ್ಷಿತ ಆಹಾರವನ್ನೇ ತಿನ್ನಿ, ಮನೆ ಆಹಾರಕ್ಕೆ ಶರಣೆನ್ನಿ.
ಎನ್.ವಿ. ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು
ಆಕಾಶವಾಣಿ, ಮೈಸೂರು
ಮೊ: 9606965238
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


