ನಮ್ಮ ಭರತ ಭೂಮಿ ಕೇವಲ ವೀರ ಶೂರ ಮಹಾರಾಜರಿಂದ ಆಳಲ್ಪಟ್ಟಿಲ್ಲ, ಬದಲಾಗಿ ಅವರಷ್ಟೇ ದಿಟ್ಟತನದಿಂದ,
ಸಮಯ ಪ್ರಜ್ಞೆಯಿಂದ
ಕಾರ್ಯನಿರ್ವಹಿಸಿದ ಹಲವಾರು ಮಹಿಳೆಯರಿಂದಲೂ
ಆಳ್ವಿಕೆಯನ್ನು ಕಂಡಿದೆ. ಋಗ್ವೇದ ಕಾಲದಿಂದ ಸ್ವತಂತ್ರ ಭಾರತದ ಪ್ರಸ್ತುತ ದಿನದವರೆಗೆ ನೂರಾರು ಮಹಿಳೆಯರು ತಮ್ಮದೇ ಆದ ಪ್ರೀತಿಯಲ್ಲಿ
ದೇಶಾಭಿಮಾನ,ರಾಜಕೀಯ ಮೌಲ್ಯಗಳು, ಸ್ವತಂತ್ರ ಪರಿಕಲ್ಪನೆಗಳನ್ನು ಹೊಂದಿದ್ದು,
ಒಂದೊಮ್ಮೆ ಯುದ್ಧ, ಅರಾಜಕತೆ, ಸಂತಾನಹೀನತೆಯಂತಹ ಅನಿವಾರ್ಯ ಕಾರಣಗಳಿಂದ ತಮಗೆ ಅಧಿಕಾರ ಹಸ್ತಾಂತರವಾದಾಗ ಅದನ್ನು ಅತ್ಯಂತ ಸಮರ್ಥವಾಗಿ
ನಿಭಾಯಿಸಿದ್ದಾರೆ.
ತಾವು ಆಳುತ್ತಿರುವ ನಾಡು ವಿಪತ್ತಿನಲ್ಲಿದ್ದಾಗ ಯುದ್ಧ ಮಾಡುವ ಮೂಲಕ ವೀರ ಧರ್ಮವನ್ನು
ನಿಭಾಯಿಸುವ ನಮ್ಮ ರಾಣಿ ಮಹಾರಾಣಿಯರು,
ನಂತರ ರಾಜ್ಯದ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ನೆಮ್ಮದಿಯಿಂದಿರಲಿ ಎಂಬ ಕಾರಣಕ್ಕಾಗಿ
ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಕಾರ್ಯಗಳನ್ನು
ಕೈಗೆತ್ತಿಕೊಳ್ಳುವ ಮೂಲಕ ಭರತ ಭೂಮಿಯ ಯಶೋಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಹೀಗೆ ಪ್ರಾಚೀನ ಯುದ್ಧದಿಂದ
ಹಿಡಿದು ಇಂದಿನ ಆಧುನಿಕ ಯುಗದ ಗಗನಯಾನದವರೆಗೆ ಹೆಣ್ಣು ಮಕ್ಕಳು ತಮಗಿರುವ ಹತ್ತು ಹಲವು ಸಾಮಾಜಿಕ ಸಾಂಸ್ಕೃತಿಕ
ಅಡೆ-ತಡೆಗಳನ್ನು
ಮೀರಿ ಅಸಾಧಾರಣ ಧೈರ್ಯ ಸಾಹಸಗಳನ್ನು
ಮೆರೆದು ದಂತ ಕಥೆಯಾಗಿ ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಅಂತಹ
ಕೆಲವು ವೀರನಾರಿಯರ ಕುರಿತ ಪರಿಚಯ
ರಾಣಿ
ವಿಷ್ಟಲದೇವಿ- ಋಗ್ವೇದ ಕಾಲದ ಮಹಾರಾಣಿ ವಿಷ್ಪಲದೇವಿಯು ಅಸಾಧಾರಣ ಧೈರ್ಯ ಶೌರ್ಯಗಳಿಗೆ
ಹೆಸರಾಗಿದ್ದು ಒಂದೊಮ್ಮೆ ಆಕೆ ಪಾಲ್ಗೊಂಡಿದ್ದ 'ಖೇಲಾ' ಯುದ್ಧದಲ್ಲಿ ಆಕೆಯ ಕಾಲು ಕಡಿಯಲ್ಪಟ್ಟಿತು. ಕಾಲನ್ನು ಕಡಿದುಕೊಂಡ ನಂತರವೂ ಕೂಡ ಆರೈಕೆಗೊಂಡು
ಕಬ್ಬಿಣದ ಕೃತಕ ಕಾಲನ್ನು ಜೋಡಿಸಿಕೊಂಡ
ಆಕೆ ಮತ್ತೆ ಯುದ್ಧ ರಂಗದ ಮುಂಚೂಣಿಯಲ್ಲಿ ನಿಂತು ಹೋರಾಡಿದ ಧೀರ ಮಹಿಳೆ.
ರಾಣಿ
ರುದ್ರಮ್ಮ ದೇವಿ- 13 ಸೆ ಶತಮಾನದಲ್ಲಿ ದಖನ್ ಪ್ರಾಂತವನ್ನು ಆಳುತ್ತಿದ್ದ
ಕಾಕತಿಯ ರಾಜಮನೆತನದ
ರಾಣಿ ರುದ್ರಮ್ಮದೇವಿಯು ಚಿಕ್ಕಂದಿನಿಂದಲೇ ಎಲ್ಲಾ ಬಗೆಯ ಯುದ್ಧ ಕಲೆಗಳಲ್ಲಿ
ತರಬೇತಿ ಹೊಂದಿದ್ದಳು.
ದೇವಗಿರಿಯ ಸೇನಾ ಬಲದ ವಿರುದ್ಧ ಹೋರಾಡಿದ ಆಕೆ ಅಸಾಧಾರಣ ಧೈರ್ಯ,ಶೌರ್ಯ ಹಾಗೂ ಛಾತಿಗಳನ್ನು ಹೊಂದಿದ ವೀರಯೋಧಳಾಗಿದ್ದಳು.
ಉಳ್ಳಾಲದ ರಾಣಿ
ಅಬ್ಬಕ್ಕ ಚೌಟ- ಕರಾವಳಿಯ ತೀರ ಪ್ರದೇಶ ಉಳ್ಳಾಲದ ರಾಣಿಯಾಗಿದ್ದ
ಅಬ್ಬಕ್ಕ ದೇವಿಯು ಕೂಡ ವೀರ ಮಹಿಳೆ. ಸಾಗರ ಮಾಧ್ಯಮದ ಮೂಲಕ ವಿದೇಶಗಳೊಂದಿಗೆ ಮಸಾಲೆ ಪದಾರ್ಥಗಳ ರಫ್ತು ವ್ಯವಹಾರವನ್ನು ಹೊಂದಿದ ಆಕೆ ಎಲ್ಲಾ ಬಂದರೂ ಪ್ರದೇಶಗಳ ಮೇಲಿನ ತನ್ನ ಹಿಡಿತವನ್ನು ತನ್ನ ಉಸಿರಿರುವವರೆಗೂ ಕಾಯ್ದುಕೊಂಡು
ಬಂದಳು. ಆಕೆಯ ಏಕಸ್ವಾಮ್ಯವನ್ನು ಮುರಿಯಲು ಹಲವಾರು ಬಾರಿ ಪೋರ್ಚುಗೀಸರು ಆಕೆಯ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದರೂ ಹಿಂಜರಿಯದೆ ಪ್ರತಿ ಬಾರಿಯೂ ಅವರನ್ನು ಹಿಮ್ಮೆಟ್ಟಿಸಿ ಕಳುಹಿಸಿದ ಚೌಟ ರಾಣಿ ಅಬ್ಬಕ್ಕದೇವಿ ತನ್ನ ನಿರಂತರ ಪ್ರಯತ್ನ ಶೀಲತೆಗೆ ಹಾಗೂ ಅಸಾಧಾರಣ ನಾಯಕತ್ವಕ್ಕೆ
ಇತಿಹಾಸದಲ್ಲಿ ಸ್ಥಾನ ಗಳಿಸಿದ್ದಾಳೆ.
ರಾಣಿ
ವೇಲು ನಾಚಿಯಾರ್- ಆಕೆ ತನಗೆ ಸ್ವಾತಂತ್ರ
ದೊರೆಯಲಿ ಎಂದು ಕಾಯಲಿಲ್ಲ, ಬದಲಾಗಿ ತನ್ನ ನಾಡಿನ ಸ್ವಾತಂತ್ರ್ಯಕ್ಕಾಗಿ ಆಕೆ ಉಗ್ರವಾಗಿ ಹೋರಾಡಿ ದಳು. 18ನೇ ಶತಮಾನದ ಆದಿ ಭಾಗದಲ್ಲಿ ಅತ್ಯಂತ ಹಳೆಯ ಶಿವಗಂಗೆ ಎಂಬ ರಾಜ ಮನೆತನದ ಒಡತಿಯಾಗಿ ಆಕೆ ತನ್ನ ಸೇನೆಯನ್ನು ಮುನ್ನಡೆಸಿದಳು ಮಾತ್ರವಲ್ಲ ಉದಯಲ್ ಪದೈ ಎಂಬ ಮಹಿಳೆಯರ ಒಂದು ಪಡೆಯನ್ನೇ ಆಕೆ ಕಟ್ಟಿದಳು.
ತನ್ನ ನಾಡಿನ ಸುತ್ತಣ ಎಲ್ಲಾ ರಾಜ್ಯಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಆಕೆ ಬ್ರಿಟಿಷ್ ಅರಸೊತ್ತಿಗೆಯ ಈಸ್ಟ್ ಇಂಡಿಯಾ ಕಂಪನಿಯನ್ನು
ಅತ್ಯಂತ ದಿಟ್ಟವಾಗಿ
ಎದುರಿಸಿ ಇತಿಹಾಸ ನಿರ್ಮಿಸಿದಳು.
ಕಿತ್ತೂರು ರಾಣಿ
ಚೆನ್ನಮ್ಮ- ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಕಿತ್ತೂರು ಒಂದು ಪುಟ್ಟ ಸಂಸ್ಥಾನವಾಗಿದ್ದರೂ ಕೂಡ 'ನಮ್ಮ ನೆಲ ನಮ್ಮ ಹಕ್ಕು' ಎಂದು ಸಾಧಿಸಿ ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ಬೆಳ್ಳಿಚುಕ್ಕಿ' ಎಂದು ಇತಿಹಾಸಕಾರರಿಂದ ಹೊಗಳಿಸಿಕೊಂಡ ಮಹಾನ್ ಕಲಿ ರಾಣಿ ಚೆನ್ನಮ್ಮ.
ಪತಿಯ ಮರಣದ ನಂತರ ಸವತಿಯ ಮಗನನ್ನು ಚೆನ್ನಾಗಿ ಬೆಳೆಸಿ ಆತನನ್ನು ಪಟ್ಟಕ್ಕೆ ಏರಿಸಿದಳು.
ಮುಂದೆ ಆತ ಅಕಾಲ ಮರಣಕ್ಕೆ ಈಡಾದಾಗ ಮಾಸ್ತಮರಡಿಯ
ದೇಸಾಯಿಯವರ ಮಗನನ್ನು ದತ್ತಕ ಪುತ್ರನನ್ನಾಗಿ ಸ್ವೀಕರಿಸಿ ಯುವರಾಜ ಪಟ್ಟ ಕಟ್ಟಿದಳು. ಇದನ್ನು ಒಪ್ಪದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ರಣ ಕಹಳೆಯನ್ನು
ಊದಿ ಹೋರಾಡಿದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ
.
ಝಾನ್ಸಿ ರಾಣಿ
ಲಕ್ಷ್ಮೀಬಾಯಿ- ರಾಣಿಯಾಗಿ ಬದುಕಿದರೂ ಕೂಡ ಆಕೆ ಓರ್ವ ಯೋಧರಂತೆ ಮರಣವನ್ನು ಎದುರಿಸಿದಳು. ಕೇವಲ 19 ರ ಹರೆಯದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ತನ್ನ ಬೆನ್ನ ಹಿಂದೆ ಪುಟ್ಟ ಮಗುವನ್ನು ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಯುದ್ಧದಲ್ಲಿ
ಹೋರಾಡಿ ಇತಿಹಾಸದಲ್ಲಿ
ಚಿರಸ್ಥಾಯಿಯಾಗಿ ಉಳಿದಿದ್ದಾಳೆ.
1850 ರಲ್ಲಿ ಆಕೆ ಬ್ರಿಟಿಷರೊಂದಿಗೆ ಹೋರಾಡಿ ಮಡಿಯುವ ಸಮಯದಲ್ಲಿ ಆಕೆ ಬಯಸಿದ್ದು ನಾನು ಬ್ರಿಟಿಷರ ಕೈ ಸೆರೆಯಾಗದ ನನ್ನ ಮಾತೃಭೂಮಿಯಲ್ಲಿ ಪ್ರಾಣ ಬಿಡಬೇಕು ಎಂದು.
ಜಲ್ಕಾರಿ ಬಾಯಿ- ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಆಪ್ತಳಾಗಿದ್ದ ವೀರಯೋಧಳೇ ಜಲ್ಕಾರಿ ಬಾಯಿ. ರಾಣಿ ಲಕ್ಷ್ಮೀಬಾಯಿ ಹಾಗೂ ಆಕೆಯ ಪುಟ್ಟ ಮಗುವನ್ನು ರಕ್ಷಿಸುವ ಸಲುವಾಗಿ ಶತ್ರುಗಳ ಹಿಡಿತದಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ತಾನು ರಾಣಿ ಲಕ್ಷ್ಮೀಬಾಯಿಯ ವೇಷದಲ್ಲಿ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿದ ದಿಟ್ಟ ಮಹಿಳೆ. ಆಕೆಯ ಧೈರ್ಯ ಮತ್ತು ಸ್ತೈರ್ಯಗಳೇ ರಾಣಿ ಲಕ್ಷ್ಮೀಬಾಯಿಗೆ ಮತ್ತೊಂದು ಅವಕಾಶವನ್ನು ಹಾಗೂ ಸ್ವತಃ ಆಕೆಗೆ ಭಾರತೀಯ ಸ್ವಾತಂತ್ರ್ಯ
ಸಂಗ್ರಾಮದ ಇತಿಹಾಸದಲ್ಲಿ
ಒಂದು ಮಹತ್ತರ ಸ್ಥಾನವನ್ನು ಕಲ್ಪಿಸಿಕೊಟ್ಟಿತು.
ಉದಾದೇವಿ- 1857ರ ಪ್ರಥಮ ಸ್ವಾತಂತ್ರ್ಯ
ಸಂಗ್ರಾಮದಲ್ಲಿ ಭಾಗವಹಿಸಿದ
ಓರ್ವ ದಲಿತ ಮಹಿಳೆ ಉದಾದೇವಿ. ಲಖನೌ ಪ್ರಾಂತದ ಹೊರ ಭಾಗದಲ್ಲಿ ಯುದ್ಧ ಭೂಮಿಯಲ್ಲಿ
ಆಕೆ ಮರದ ಮೇಲೆ ಕುಳಿತು ಬಿಲ್ಲನ್ನು ಹಿಡಿದು ಹಲವಾರು ಶತ್ರುಗಳನ್ನು
ಮರಣಕ್ಕೆ ಈಡು ಮಾಡಿದಳು. ಸಾಯುವ ಮುನ್ನ ನೂರಾರು ಶತ್ರುಗಳನ್ನು ಸಂಹರಿಸಿದ ಖ್ಯಾತಿ ಆಕೆಯದು. ಆಕೆಯ ಧೈರ್ಯ ಹಾಗೂ ಶೌರ್ಯಗಳು ಇಂದಿಗೂ ಆಕೆಯನ್ನು ನೆನೆಯುವವರ ಮನದಲ್ಲಿ ಪ್ರತಿಧ್ವನಿಸುತ್ತದೆ.
ಸ್ನೇಹಿತರೆ... ಹೆಣ್ಣು ಮಕ್ಕಳು ಕೇವಲ ಪ್ರೀತಿ ವಾತ್ಸಲ್ಯ ಮಮತೆ ಕರ್ತವ್ಯ ಪ್ರಜ್ಞೆಗೆ ಮಾತ್ರವಲ್ಲ
ಧೈರ್ಯ ಶೌರ್ಯ ಸಾಹಸಗಳಿಗೆ ಕೂಡ ಹೆಸರಾದವರು. ರೊಟ್ಟಿ ತಟ್ಟುವ ಕೈ ಸಮಯ ಬಂದಾಗ ಖಡ್ಗವನ್ನು ಹಿಡಿಯಬಲ್ಲದು,
ವಿಮಾನವನ್ನು ಚಲಾಯಿಸಬಲ್ಲದು ಎಂಬುದಕ್ಕೆ ಮಹಿಳೆಯರೇ ಸಾಕ್ಷಿ. ಇಂತಹ ಎಲ್ಲ ಮಹಿಳಾ ಶಕ್ತಿಗೆ ಕೋಟಿ ನಮನಗಳು
ವೀಣಾ ಹೇಮಂತ್
ಗೌಡ ಪಾಟೀಲ್
ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


