ಆಸೆ ಕ್ಷೀಣಿಸಿದಷ್ಟೂ ನೆಮ್ಮದಿ,ಸಮಾಧಾನ ಹೆಚ್ಚು- ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

Upayuktha
0


ಬಳ್ಳಾರಿ: ಅಸೆ ಕ್ಷೀಣಿಸಿದಷ್ಟೂ ನೆಮ್ಮದಿ - ಸಮಾಧಾನ ಹೆಚ್ಚಾಗುತ್ತದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ ಶಿವಾನುಭವ ಸಂಪದ - 14ರಲ್ಲಿ ಆಶೀರ್ವಾದ ಮಾಡಿದ ಶ್ರೀಗಳು, ಆಸೆ ಅತಿ ಆಸೆ ಆಗಬಾರದು. ಆಸೆ ದುರಾಸೆ ಆಗಬಾರದು. ಅತಿ ಆಸೆ - ದುರಾಸೆ ಮನುಷ್ಯನನ್ನು ಹಾಗೂ ಮನುಷ್ಯತ್ವವನ್ನು ಹಾಳುಮಾಡುತ್ತವೆ ಎಂದರು. 

ಭಾವನೆಗಳೆ ಇಲ್ಲದ ಬುದ್ಧಿಗೂ ಬೆಲೆ ಇಲ್ಲ. ಬುದ್ದಿಗೆ ಇರುವ ಮಹತ್ವಕ್ಕಿಂತಲೂ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ. ಬುದ್ಧಿಗಿಂತಲೂ ಭಾವನೆಗಳೇ ದೊಡ್ಡವು. ಕಾರಣ ಪ್ರತಿಯೊಬ್ಬರೂ ನಾವು, ನಮ್ಮವರು, ತಂದೆ - ತಾಯಿ, ಅಕ್ಕ - ಅಣ್ಣ, ನಮ್ಮವರು ಎನ್ನುವ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಮುಖ್ಯ ಉಪನ್ಯಾಸಕರಾಗಿದ್ದ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಅಂಗಡಿ ಅವರು, `ಸಮಾಜದ ಅಭಿವೃದ್ಧಿಯಲ್ಲಿ ಶರಣರ ಪಾತ್ರ' ವಿಷಯದ ಕುರಿತು ಉಪನ್ಯಾಸ ನೀಡಿ, ಲಿಂಗಪೂಜೆಯಲ್ಲಿ ವಿಜ್ಞಾನವಿದೆ, ಆಧ್ಯಾತ್ಮವಿದೆ. ಲಿಂಗದ ಜೊತೆಗಿನ ಅವಿನಾಭಾವದ ಆತ್ಮೀಯತೆಯಲ್ಲಿ ಅನುಭಾವವಿದೆ, ಬೆಳಕಿದೆ. ಲಿಂಗಪೂಜೆಯನ್ನು ಎಲ್ಲರೂ ಮಾಡಬಹುದಾಗಿದೆ ಎಂದರು. 

12ನೇ ಶತಮಾನದ ಶರಣರು ಸಮಾಜ, ಆಧ್ಯಾತ್ಮ, ವಿಜ್ಞಾನ ಮತ್ತು ಬದುಕಿನ ಜೊತೆ ಜೊತೆಯಲ್ಲ ಸಮಾಜದ ಅಭಿವೃದ್ಧಿಗೆ ಮುಕ್ತ ಅವಕಾಶಗಳನ್ನು ಸೃಷ್ಠಿಸಿದ್ದರು. ವ್ಯಕ್ತಿಯಲ್ಲಿಯ ಮನಸ್ಸು - ಹೃದಯ ಮತ್ತು ಚಿಂತನೆಗಳಲ್ಲಿಯ ಬದಲಾವಣೆಗಳನ್ನು ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಎಂದು ವಚನಕಾರರು ಗುರುತಿಸಿದರು ಎಂದರು. 

ತೊಗರಿ ವೀರಮಲ್ಲಪ್ಪ ಮೆಮೋರಿಯಲ್ ಕಾಲೇಜ್ ಆಫ್ ಫಾರ್ಮಸಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಎಲ್.ಟಿ. ಶೇಖರ್ ಅವರು, ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠಕ್ಕೆ 500 ವರ್ಷಗಳ ಇತಿಹಾಸವಿದ್ದು, ಈ ಭಾಗದಲ್ಲಿ ಅತ್ಯಂತ ಪ್ರಭಾವಿ ಮಠವಾಗಿದೆ. ಭಕ್ತಿ, ಶ್ರದ್ಧೆ, ಆಧ್ಯಾತ್ಮದ ಜೊತೆಯಲ್ಲಿ ಜನಸಾಮಾನ್ಯರಲ್ಲಿ ದಯೆ ಹಾಗೂ ಧರ್ಮದ ಮೂಲಕ ಜಾಗೃತಿ ಮೂಡಿಸಲು ಶ್ರೀಮಠವು ನಡೆಸುತ್ತಿರುವ `ಶಿವಾನುಭವ ಸಂಪದ'ವು ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಮೂಡಿಸಲಿ ಎಂದು ಆಶಯ ವ್ಯಕ್ತಪಡಿಸಿದರು. 

ಶ್ರೀಗುರು ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯ ತಂಡವು ವಚನ ಗಾಯನ ನೆರವೇರಿಸಿತು. ಶ್ರೀಮತಿ ನೀಲಾ ನವಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಅಕ್ಕನ ಬಳಗದ ಎಚ್.ಎಂ. ಶಕುಂತಲ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕ್ಕನ ಬಳಗದ ಶ್ರೀಮತಿ ಕೆ. ಪಾರ್ವತಿ ಅವರು ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ರೇವತಿ ಮಂಗಳವಾಡಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top