ಕಾಕೋಳಿನಲ್ಲಿ ರೂ.35 ಲಕ್ಷ ವೆಚ್ಚದ ಶಾಲಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Upayuktha
0

 ಪಿಎಂ ಶ್ರೀ ಸಂಯುಕ್ತ ಪ್ರೌಢಶಾಲೆಯಲ್ಲಿ ಸಮುದಾಯ–ಸಂಸ್ಥೆಗಳ ಸಹಯೋಗದ ಮಾದರಿ ಯೋಜನೆ



ಯಲಹಂಕ:
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯ, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಶಿಕ್ಷಣಾಭಿಮಾನಿಗಳು ಒಂದಾಗಿ ಕೈಜೋಡಿಸಿದರೆ ಅದ್ಭುತ ಪರಿವರ್ತನೆ ಸಾಧ್ಯ ಎಂಬುದಕ್ಕೆ ಬೆಂಗಳೂರು ಹೊರವಲಯದ ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಪಿಎಂ ಶ್ರೀ ಸಂಯುಕ್ತ ಪ್ರೌಢಶಾಲೆ ಮಾದರಿಯಾಗಿ ಹೊರಹೊಮ್ಮಿದೆ.


ಸುಮಾರು ರೂ.35 ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ಶಾಲಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ಜೂನ್ 20, 2026ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಳ್ಳಲಿದೆ.


ಪಾಂಚಜನ್ಯ ಪ್ರತಿಷ್ಠಾನದ ಪ್ರೇರಣೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ ಸಕ್ರಿಯ ಸಹಭಾಗಿತ್ವ, ಸ್ಥಳೀಯ ಸಮುದಾಯದ ಬೆಂಬಲ ಹಾಗೂ ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್‌ಆರ್ ಸಹಕಾರದ ಫಲವಾಗಿ ಈ ಸಮಗ್ರ ಪರಿವರ್ತನೆ ಸಾಧ್ಯವಾಗಿದೆ.


15 ತರಗತಿ ಕೊಠಡಿಗಳ ಸಮಗ್ರ ನವೀಕರಣ

ಕಾಕೋಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 400 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಯಲ್ಲಿ ಹಲವು ವರ್ಷಗಳಿಂದ ಮೂಲಸೌಕರ್ಯ ಸುಧಾರಣೆಯ ಅಗತ್ಯತೆ ಕಂಡುಬಂದಿತ್ತು. ವಿದ್ಯಾರ್ಥಿಗಳಿಗೆ ಗುಣಮಟ್ಟದ, ಆಕರ್ಷಕ ಹಾಗೂ ಪ್ರೇರಣಾದಾಯಕ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ 15 ತರಗತಿ ಕೊಠಡಿಗಳ ನವೀಕರಣ, ಗೋಡೆಗಳ ಶೈಕ್ಷಣಿಕ ಸುಂದರೀಕರಣ, ಕಲಿಕಾ ಪರಿಸರದ ಸುಧಾರಣೆ ಹಾಗೂ ಶಾಲಾ ಆವರಣದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.



ಬೇಸಿಗೆ ರಜೆಯ ಸೀಮಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಸಮರ್ಪಕ ಯೋಜನೆ, ನಿರಂತರ ಮೇಲ್ವಿಚಾರಣೆ ಹಾಗೂ ವಿವಿಧ ತಂಡಗಳ ಸಮನ್ವಯದಿಂದ ಕೇವಲ ಹತ್ತು ವಾರಗಳೊಳಗೆ ಗುಣಮಟ್ಟದ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.


ಪಾಂಚಜನ್ಯ ಪ್ರತಿಷ್ಠಾನದ ಕಾರ್ಯಕರ್ತರು ಹಾಗೂ ಎಸ್‌ಡಿಎಂಸಿ ಸದಸ್ಯರು ಕಾಮಗಾರಿಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ, ಗುಣಮಟ್ಟ ಮತ್ತು ಸಮಯಪಾಲನೆಯನ್ನು ಖಚಿತಪಡಿಸಿದ್ದಾರೆ.



ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಲಿಮಿಟೆಡ್‌ನ ನಿರ್ದೇಶಕರು ಹಾಗೂ ಸಹ-ಸಂಸ್ಥಾಪಕರಾದ ಶ್ರೀ ಕೃಷ್ಣರಾಜ ಶರ್ಮಾ ಭಾಗವಹಿಸಲಿದ್ದಾರೆ. ಯಲಹಂಕ ವಲಯ (ಎನ್-4) ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೈಲಾ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ವಿಜೇತ್ ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.



“ಪ್ರತಿಯೊಬ್ಬ ಮಗುವಿಗೂ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಮೂಡಿಸುವ ಕಲಿಕಾ ವಾತಾವರಣ ದೊರೆಯಬೇಕು. ಈ ಯೋಜನೆಯು ಕೇವಲ ಕಟ್ಟಡಗಳ ನವೀಕರಣವಲ್ಲ; ಇದು ಮಕ್ಕಳ ಕನಸುಗಳಿಗೆ ಹೊಸ ಬಲ ತುಂಬುವ ಪ್ರಯತ್ನ. ಜವಾಬ್ದಾರಿಯುತ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಮತ್ತು ನಾಗರಿಕರು ಒಂದಾಗಿ ಕಾರ್ಯನಿರ್ವಹಿಸಿದಾಗ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಅರ್ಥಪೂರ್ಣ ಬದಲಾವಣೆ ಸಾಧ್ಯ ಎಂಬುದನ್ನು ಈ ಯೋಜನೆ ಸಾಬೀತುಪಡಿಸಿದೆ” ಎಂದು ಪಾಂಚಜನ್ಯ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿ ಶ್ರೀ ಮುರಳಿ ಕಾಕೋಳು ತಿಳಿಸಿದ್ದಾರೆ.



ಪಾಂಚಜನ್ಯ ಪ್ರತಿಷ್ಠಾನದ ಪ್ರೇರಿತ ‘ಕಲಿಕಾ ಪಯಣ’ (Learning Journey) ಪರಿಕಲ್ಪನೆಯಡಿ ಶಾಲೆಯ ಪ್ರತಿಯೊಂದು ತರಗತಿ ಕೊಠಡಿಯನ್ನೂ ಒಂದು ಜೀವನಮೌಲ್ಯದ ಪ್ರತೀಕವಾಗಿ ರೂಪಿಸಲಾಗಿದೆ. ಕುತೂಹಲ, ಕಲಿಕೆ, ಶಿಸ್ತು, ಜವಾಬ್ದಾರಿ, ನಾಯಕತ್ವ, ಸೃಜನಶೀಲತೆ, ಸೇವಾಮನೋಭಾವ ಮತ್ತು ಸಾಧನೆ ಮೊದಲಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ತರಗತಿ ಕೊಠಡಿಗಳಿಗೆ ವಿಶಿಷ್ಟ ವಿಷಯಾಧಾರಿತ ವಿನ್ಯಾಸ ನೀಡಲಾಗಿದೆ. ಇದು ಕೇವಲ ಭೌತಿಕ ಮೂಲಸೌಕರ್ಯ ಅಭಿವೃದ್ಧಿಯಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದತ್ತ ಸಾಗುವ ಶೈಕ್ಷಣಿಕ ಪಯಣವಾಗಿದೆ.



ಐವ್ಯಾಲ್ಯೂ ಇನ್ಫೋಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್‌ಆರ್ ಬೆಂಬಲ, ಸಮುದಾಯದ ಪಾಲ್ಗೊಳ್ಳುವಿಕೆ ಹಾಗೂ ಶಾಲೆಯ ಮೇಲಿನ ಬದ್ಧತೆಯಿಂದ ರೂಪುಗೊಂಡಿರುವ ಈ ಯೋಜನೆಯು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಆಧಾರಿತ ಅಭಿವೃದ್ಧಿಯ ಯಶಸ್ವಿ ಉದಾಹರಣೆಯಾಗಿ ಗುರುತಿಸಿಕೊಳ್ಳುತ್ತಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top