ಮನಸ್ಸಿನ ಮಲಿನತೆ ನಿರಂತರ ಯೋಗದಿಂದ ದೂರ: ಸಹನಾ
ಪುತ್ತೂರು: ಮಾತಿನ ದೋಷವನ್ನು ವ್ಯಾಕರಣದ ಮೂಲಕ, ದೇಹದ ದೋಷವನ್ನು ಆಯುರ್ವೇದದ ಮೂಲಕ ಹಾಗೂ ಮನಸ್ಸಿನ ಮಲಿನತೆಯನ್ನು ನಿರಂತರ ಯೋಗದ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಶಿಕ್ಷಕಿ ಸಹನಾ ಹೇಳಿದರು.
ಅವರು ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಸಂಸ್ಕೃತದ ಯೋಗ ಎಂಬ ಪದವು ಯುಜ್ ಧಾತುವಿನಿಂದ ಉತ್ಪತ್ತಿಯಾಗಿದೆ. ಮನಸ್ಸು, ದೇಹ ಮತ್ತು ಆತ್ಮದ ಸಮ್ಮಿಲನವೇ ಯೋಗ. ಯಾವುದೇ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಹಾಗೂ ಏಕಾಗ್ರತೆಯಿಂದ ಮಾಡಿದಾಗ ಅದು ಯೋಗವಾಗುತ್ತದೆ ಎಂದ ಅವರು, ಜ್ಞಾನಯೋಗ, ಭಕ್ತಿಯೋಗ ಹಾಗೂ ಕರ್ಮಯೋಗಗಳ ಮೂಲಕ ಜೀವನದಲ್ಲಿ ಸಮತೋಲನ ಸಾಧಿಸಲು ಸಾಧ್ಯ ಎಂದರು.
ಯೋಗ, ಧ್ಯಾನ, ಭಜನೆ ಹಾಗೂ ಶ್ಲೋಕ ಪಠಣಗಳಿಂದ ಏಕಾಗ್ರತೆ ವೃದ್ಧಿಯಾಗುತ್ತದೆ. ಆರೋಗ್ಯದ ಕಡೆಗೆ ಗಮನಹರಿಸುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡಬಲ್ಲರು ಹಾಗೂ ಆರೋಗ್ಯವಂತ ವ್ಯಕ್ತಿಗಳು ಉತ್ತಮ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಎಂದು ತಿಳಿಸಿದರು.
ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ಯೋಗವು ದೇಹವನ್ನು ಮಾತ್ರವಲ್ಲದೆ ಮನಸ್ಸು ಮತ್ತು ಆತ್ಮವನ್ನೂ ಬಲಪಡಿಸುತ್ತದೆ. ಸೂರ್ಯನಮಸ್ಕಾರ ಸೇರಿದಂತೆ ವಿವಿಧ ಯೋಗಾಭ್ಯಾಸಗಳು ದೇಹದ ಸಾಮರ್ಥ್ಯವನ್ನು ವೃದ್ಧಿಸುವುದರ ಜೊತೆಗೆ ವ್ಯಕ್ತಿಯ ಮಿತಿಗಳನ್ನು ಮೀರುವ ಶಕ್ತಿಯನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಹಾಗೂ ವಿವಿಧ ಯೋಗಭಂಗಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಯೋಗಗೀತೆಯನ್ನು ಹಾಡಿದರು. ವಿದ್ಯಾರ್ಥಿನಿಯರಾದ ಮೆಹೆಕ್ ಪ್ರಸ್ತಾವಿಸಿ, ಶಾರ್ವಿ ನಿರೂಪಿಸಿದರು.


