ಜೀವನ ಅನ್ನೋದು ಒಂದು ದೊಡ್ಡ ಪ್ರಯಾಣ. ಈ ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಸಾಧಿಸಬೇಕು, ಒಳ್ಳೆಯ ಹೆಸರು ಮಾಡಬೇಕು, ಸಂತೋಷದಿಂದ ಬದುಕಬೇಕು ಅನ್ನೋ ಆಸೆ ಇರುತ್ತದೆ. ಆದರೆ ಕನಸು ಕಾಣುವುದರಿಂದ ಮಾತ್ರ ಜೀವನ ಬದಲಾಗುವುದಿಲ್ಲ. ಅದನ್ನು ನಿಜ ಮಾಡಬೇಕಾದರೆ ಪರಿಶ್ರಮ, ತಾಳ್ಮೆ ಮತ್ತು ಆತ್ಮವಿಶ್ವಾಸ ಬೇಕಾಗುತ್ತದೆ. ಈ ಎಲ್ಲಾ ಗುಣಗಳು ಸೇರಿ ನಮ್ಮನ್ನು ಸಾಧನೆಯ ದಾರಿಗೆ ಕರೆದೊಯ್ಯುತ್ತವೆ.
ಸಾಧನೆ ಅಂದ್ರೆ ದೊಡ್ಡ ಪ್ರಶಸ್ತಿ ಗೆಲ್ಲೋದು ಅಥವಾ ಎಲ್ಲರ ಗಮನ ಸೆಳೆಯೋದು ಮಾತ್ರ ಅಲ್ಲ. ಪ್ರತಿದಿನ ನಾವು ನಮ್ಮ ಗುರಿಗಾಗಿ ಮಾಡುವ ಸಣ್ಣ ಸಣ್ಣ ಪ್ರಯತ್ನಗಳೂ ಕೂಡ ಸಾಧನೆಯ ಭಾಗವೇ. ಒಂದು ವಿದ್ಯಾರ್ಥಿ ನಿಯಮಿತವಾಗಿ ಓದುವುದು, ರೈತನು ಮಳೆಯಲ್ಲೂ ಬಿಸಿಲಲ್ಲೂ ದುಡಿಯುವುದು, ಕಲಾವಿದನು ದಿನವೂ ಅಭ್ಯಾಸ ಮಾಡುವುದು-ಇವೆಲ್ಲವೂ ಸಾಧನೆಯ ನಿಜವಾದ ಉದಾಹರಣೆಗಳು.
ಸಾಧನೆಯ ದಾರಿ ಯಾವತ್ತೂ ಸುಲಭವಾಗಿರುವುದಿಲ್ಲ. ಕೆಲವೊಮ್ಮೆ ಸೋಲು ಬರುತ್ತದೆ, ನಿರಾಸೆ ಆಗುತ್ತದೆ, ನಾವು ಮಾಡಿದ ಶ್ರಮ ವ್ಯರ್ಥವಾಯಿತೇನೋ ಅನ್ನಿಸಬಹುದು. ಆದರೆ ಸೋಲು ಜೀವನದ ಕೊನೆ ಅಲ್ಲ. ಅದು ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುವ ಒಂದು ಅನುಭವ. “ಬಿದ್ದವನೇ ಎದ್ದು ನಡೆಯಲು ಕಲಿಯುತ್ತಾನೆ” ಎಂಬ ಮಾತಿನಂತೆ, ಜೀವನದ ಕಷ್ಟಗಳೇ ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತವೆ.
ಯಶಸ್ಸು ಪಡೆಯಲು ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಆತ್ಮವಿಶ್ವಾಸ ಇದ್ದರೆ ಎಷ್ಟೇ ಕಷ್ಟ ಬಂದರೂ ನಾವು ಮುಂದೆ ಸಾಗಬಹುದು. ಜೊತೆಗೆ ಶಿಸ್ತು, ಸಮಯದ ಮಹತ್ವ ಮತ್ತು ನಿರಂತರ ಪ್ರಯತ್ನ ಜೀವನದಲ್ಲಿ ಬಹಳ ಮುಖ್ಯ. ಕನಸು ಎಲ್ಲರೂ ಕಾಣುತ್ತಾರೆ, ಆದರೆ ಅದನ್ನು ಸಾಕಾರಗೊಳಿಸಲು ದುಡಿಯುವವರೇ ನಿಜವಾದ ಸಾಧಕರು.
ಇತಿಹಾಸ ನೋಡಿದರೆ ದೊಡ್ಡ ಸಾಧನೆ ಮಾಡಿದ ಪ್ರತಿಯೊಬ್ಬರೂ ಕಷ್ಟಪಟ್ಟು ಮೇಲಕ್ಕೆ ಬಂದವರೇ. ಅವರ ಜೀವನದಲ್ಲಿ ಕೂಡ ಸಮಸ್ಯೆಗಳು, ಸೋಲುಗಳು ಇದ್ದವು. ಆದರೆ ಅವರು ಯಾವತ್ತೂ ಹಿಂತಿರುಗಲಿಲ್ಲ. ಅದಕ್ಕಾಗಿಯೇ ಇಂದು ಅವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ಕೊನೆಯಲ್ಲಿ ಹೇಳುವುದಾದರೆ, ಸಾಧನೆ ಎಂಬ ಹಾದಿ ಎಂದರೆ ಕೇವಲ ಯಶಸ್ಸು ತಲುಪುವ ದಾರಿ ಅಲ್ಲ; ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪಯಣ. ಧೈರ್ಯ, ಪರಿಶ್ರಮ ಮತ್ತು ಆತ್ಮವಿಶ್ವಾಸ ನಮ್ಮ ಜೊತೆ ಇದ್ದರೆ ಯಾವುದೇ ಗುರಿ ಅಸಾಧ್ಯವಲ್ಲ. ಒಂದು ಸಣ್ಣ ಹೆಜ್ಜೆಯಿಂದಲೇ ದೊಡ್ಡ ಸಾಧನೆ ಆರಂಭವಾಗುತ್ತದೆ.
- ವಿನುತಾ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


