ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿ ಹಾಗೂ ಸ್ಥೈರ್ಯವನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು.ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆವ್. ಡಾ. ಪ್ರವೀಣ್ ಮಾರ್ಟಿಸ್ ಎಸ್‍ಜೆ, ಕರ್ನಾಟಕ ಬ್ಯಾಂಕ್‍ನ ಮಾಜಿ ಮಹಾಪ್ರಬಂಧಕ ಹಾಗೂ ಮುಖ್ಯ ಅನುಸರಣಾಕಾರಿ ಡಾ| ಮೀರಾ ಅರನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೋ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಐಸಾಕ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮಿನೇನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಂಸ್ಥಾಪಕರ ಕುಟುಂಬ ಸದಸ್ಯರು ದಿವಂಗತ ಪಿ.ಎಫ್.ಎಕ್ಸ್.ಸಾಲ್ದಾನ್ಹ ಅವರ ಭಾವಚಿತ್ರಕ್ಕೆ ಪುಷ್ಪ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಸ್ವಾಗತ ಭಾಷಣದಲ್ಲಿ ಅಧ್ಯಕ್ಷರಾದ ಅನಿಲ್ ಲೋಬೊ ಅವರು, ಸಂಸ್ಥಾಪಕರ ದೃಷ್ಟಿಕೋನ ಮತ್ತು ಧ್ಯೇಯವನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. 2018ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು. ಬ್ಯಾಂಕಿನ ಪ್ರಗತಿಯನ್ನು ವಿವರಿಸಿದ ಅವರು, 24 ವರ್ಷಗಳ ಬಳಿಕ ಶಾಖೆಗಳ ಸಂಖ್ಯೆ 16ರಿಂದ 21ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ರೂ.1,525 ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು ರೂ.300 ಕೋಟಿಯಿಂದ ರೂ.875 ಕೋಟಿಗೆ ಹೆಚ್ಚಳವಾಗಿವೆ ಎಂದರು. ಬ್ಯಾಂಕ್ ರೂ.13 ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ “ಎ” ದರ್ಜೆಯ ಲೆಕ್ಕಪರಿಶೋಧನಾ ವರ್ಗೀಕರಣವನ್ನು ಪಡೆಯುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಇರುವ 21 ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ 25ಕ್ಕೆ ವಿಸ್ತರಿಸುವ ಯೋಜನೆಯನ್ನೂ ಘೋಷಿಸಿದರು.
ತಮ್ಮ ಭಾಷಣದಲ್ಲಿ ವಂ.ಡಾ| ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷರಾದ ಅನಿಲ್ ಲೋಬೊ ಅವರ ನಾಯಕತ್ವವನ್ನು ಶ್ಲಾಘಿಸಿ, ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪರಿವರ್ತನೆಯನ್ನು ಮೆಚ್ಚಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ “ವಿದ್ಯಾಧನ ವಿದ್ಯಾರ್ಥಿ ಕ್ರೆಡಿಟ್ ಯೋಜನೆ”ಯನ್ನು ವಿಶೇಷವಾಗಿ ಪ್ರಶಂಸಿಸಿದರು. ಎಂಸಿಸಿ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಜನಪರ ಬ್ಯಾಂಕಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಡಾ| ಮೀರಾ ಅರನ್ಹಾ ಅವರು “ವಿದ್ಯಾಧನ ಶಿಕ್ಷಣ ಯೋಜನೆ”ಯನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಕಳೆದ ಏಳು-ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಅಭಿನಂದಿಸಿದ ಅವರು, ಬ್ಯಾಂಕಿನ ಭವಿಷ್ಯ ಬೆಳವಣಿಗೆಯಲ್ಲಿ ಕೃತಕಬುದ್ಧಿ ಮತ್ತೆ, ಹವಾಮಾನ ಹಾಗೂ ESG ಅಪಾಯ ನಿರ್ವಹಣೆ ಮತ್ತು ವಿಶ್ವಾಸದ ಕಾಪಾಡುವಿಕೆ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.
ರಾಯ್ ಕ್ಯಾಸ್ಟೆಲಿನೋ ಅವರು ಕೇವಲ ಏಳು ವರ್ಷಗಳಲ್ಲಿ ಬ್ಯಾಂಕ್ ಮೂರು ಪಟ್ಟು ಬೆಳವಣಿಗೆ ಸಾಧಿಸಿರುವುದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.
ಐಸಾಕ್ ವಾಸ್ ಅವರು ಸಂಪಾದಕರಾದ ಡಾ.ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆ ಮಾಡಿದರು. ತಮ್ಮ ಭಾಷಣದಲ್ಲಿ ಸಂಸ್ಥಾಪಕರು ಬ್ಯಾಂಕನ್ನು ಸಮುದಾಯದ ವಿಶ್ವಾಸದ ಸಂಕೇತವಾಗಿ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ಸ್‍ಗಳಾದ ಸಿಎ ಮ್ಯೂರಿಯಲ್ ಮಸ್ಕರೇನ್ಹಾಸ್ ಹಾಗೂ ಸಿಎ ಜಾಯ್ಸ್ಟನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹೆನ್ರಿ ಮೆಂಡೋನ್ಕಾ (ಎಚ್.ಎಂ.ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಿಶೆಲ್ ಫೆನಾರ್ಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಜೋಸೆಫ್ ಲೋಬೊ, ಝೇವಿಯರ್ ಡಿಸೋಜಾ ಮತ್ತು ಪ್ರೇಮ್ ಜೆ.ಮೊರಾಸ್ ಅವರನ್ನು ಗೌರವಿಸಲಾಯಿತು.
ನಿರ್ದೇಶಕರಾದ ರೋಶನ್ ಡಿಸೋಜಾ ಹಾಗೂ ಅನಿಲ್ ಪತ್ರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು. ಬ್ಯಾಂಕಿನ ಹೊಸ ಲೋಗೋ ವಿನ್ಯಾಸಗೊಳಿಸಿದ ಬನ್ನು ಫೆನಾರ್ಂಡಿಸ್ ಹಾಗೂ ಪಿಎಫ್‍ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ದೀಪಕ್ ಡಿಸೋಜಾ ಅವರನ್ನು ಸಹ ಗೌರವಿಸಲಾಯಿತು.
ಕಾರ್ಯಕ್ರಮವು ಮನೋಜ್ ಲೋಪೆಸ್ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮೆನೆಜಸ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಜೇಸನ್ ಶಿರ್ತಾಡಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಆಂಡ್ರೂ ಡಿಸೋಜಾ, ಹೆರಾಲ್ಡ್ ಮೊಂತೋರೊ, ಅನಿಲ್ ಪತ್ರಾವೊ, ಡೇವಿಡ್ ಡಿಸೋಜಾ, ಜೆ.ಪಿ.ರೋಡ್ರಿಗಸ್, ರೋಶನ್ ಡಿಸೋಜಾ, ಮೆಲ್ವಿನ್‍ವಾಸ್, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಾಲ್ದಾನ್ಹಾ, ಐರಿನ್ ರೆಬೆಲ್ಲೊ, ಆಲ್ವಿನ್‍ಪಿ. ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಹಾಗೂ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


