ಕಥೆ: ಕೋಪದ ಅಲೆಯ ಮೇಲೆ ಪ್ರೀತಿಯ ದೋಣಿ (ಭಾಗ-3)

Upayuktha
0

ವನು ಹೋದ ಮೇಲೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತು. ಅನನ್ಯಾ ಡೈನಿಂಗ್ ಟೇಬಲ್ ಮೇಲೆ ತಿಂಡಿ ಇಡಲು ಹೋದಾಗ ಅವಳ ಕಣ್ಣುಗಳು ಅಚ್ಚರಿಯಿಂದ ಅರಳಿದವು. ಅಲ್ಲಿ ಅವಳು ತಯಾರಿಸಿದ್ದ ತಿಂಡಿಯ ಪಕ್ಕದಲ್ಲೇ, ಒಂದು ಬಟ್ಟಲಿನಲ್ಲಿ ದೋಸೆ, ಚಟ್ನಿ, ಸಣ್ಣಗೆ ಕತ್ತರಿಸಿದ ಹಣ್ಣುಗಳು ಮತ್ತು ಅವಳು ಪ್ರತಿದಿನ ಕುಡಿಯುವ ಬಾದಾಮಿ ಹಾಲು ಸಿದ್ಧವಾಗಿತ್ತು!


​ಅರ್ಜುನ್ ತಾನು ರೆಡಿಯಾಗುವ ಹೊತ್ತಿಗೆ ಅವಳು ಏಳುವ ಮೊದಲೇ ಅವಳಿಗಾಗಿ ಇದೆಲ್ಲವನ್ನೂ ಸಿದ್ಧಪಡಿಸಿಟ್ಟಿದ್ದ. ಬಹುಶಃ ರಾತ್ರಿ ಅವಳು ಊಟ ಮಾಡದಿದ್ದುದು ಅವನ ಮನಸ್ಸನ್ನು ಅತೀವವಾಗಿ ನೋಯಿಸಿರಬೇಕು. ತಾನು ಹಸಿದಿದ್ದರೂ, ತನ್ನ ಪತ್ನಿ ಉಪವಾಸ ಇರಬಾರದೆಂದು ಅಷ್ಟು ಕಾಳಜಿಯಿಂದ ಅವಳಿಷ್ಟದ ತಿಂಡಿ ತಯಾರಿಸಿ, ಹಣ್ಣುಗಳನ್ನು ಕತ್ತರಿಸಿಟ್ಟ ಆ ಕೈಗಳನ್ನು ನೆನೆದಾಗ ಅನನ್ಯಾಳ ಮನಸ್ಸು ಒಮ್ಮೆಲೇ ಕರಗಿ ನೀರಾಯಿತು. ಅವಳು ಸೋಫಾದ ಮೇಲೆ ಕುಳಿತು ಅವನು ಮಲಗಿದ್ದ ಜಾಗವನ್ನು ನೋಡಿದಳು. ಅಷ್ಟು ಸಣ್ಣ ಸೋಫಾದಲ್ಲಿ ಆರು ಅಡಿ ಎತ್ತರದ ಅರ್ಜುನ್ ಹೇಗೆ ತಾನೆ ಮುದುರಿಕೊಂಡು ಮಲಗಿದ್ದಿರಬಹುದು ? ಎಂದೆನಿಸಿ ನೋವಾಯಿತು. ಆದರೆ ಹಿಂದಿನ ದಿನದ ಅವಳ ಕೋಪ ಎಷ್ಟು ಅಂಧವಾಗಿತ್ತೆಂದರೆ, ಅವನ ಪ್ರೀತಿಯನ್ನು ಗುರುತಿಸುವ ಶಕ್ತಿಯನ್ನೂ ಅವಳು ಆ ಕ್ಷಣದಲ್ಲಿ ಕಳೆದುಕೊಂಡಿದ್ದಳು.


​"ನಾನು ಎಷ್ಟು ಸ್ವಾರ್ಥಿಯಾದೆ?" ಎಂದು ಅವಳಿಗೆ ಅನ್ನಿಸತೊಡಗಿತು. ಅರ್ಜುನ್ ಕೆಲಸದ ಹುಚ್ಚು ಇರುವ ವ್ಯಕ್ತಿ ನಿಜ, ಆದರೆ ಆ ಕೆಲಸವನ್ನು ಅವನು ಮಾಡುವುದು ತನಗಾಗಿ ಅಲ್ಲವೇ? ನಮ್ಮ ಸುಂದರ ಭವಿಷ್ಯಕ್ಕಾಗಿ, ತನ್ನ ಪ್ರತಿಯೊಂದು ಚಿಕ್ಕ ಪುಟ್ಟ ಆಸೆಗಳನ್ನು ಪೂರೈಸುವುದಕ್ಕಾಗಿಯೇ ಅವನು ಅಷ್ಟು ಶ್ರಮ ಪಡುತ್ತಿರುವುದು ಎಂದು ಅವಳಿಗೆ ಗೊತ್ತಿತ್ತು . 


ಹಿಂದಿನ ದಿನ ಗೆಳತಿಯ ಮುಂದೆ ಗದರಿಸಿದ್ದು ಅವನ ಉದ್ದೇಶಪೂರ್ವಕ ಅವಮಾನವಾಗಿರಲಿಲ್ಲ, ಬದಲಿಗೆ ಆ ಪ್ರಾಜೆಕ್ಟ್‌ನ ಜವಾಬ್ದಾರಿಯ ಒತ್ತಡವಾಗಿತ್ತು. ಅವನು ಯಾವತ್ತೂ ತನ್ನನ್ನು ಕಡೆಗಣಿಸಿದವನಲ್ಲ. ಕಳೆದ ಐದು ವರ್ಷಗಳ ಸಂಸಾರದಲ್ಲಿ ಅವನು ತನ್ನ ಪ್ರತಿಯೊಂದು ಸಣ್ಣ ಬೇಡಿಕೆಯನ್ನೂ ಆಜ್ಞೆಯಂತೆ ಪೂರೈಸಿದ್ದಾನೆ. ತನ್ನನ್ನು ಅಷ್ಟು ಪ್ರೀತಿಸುವ ಗಂಡನನ್ನು ಇಂದು ಒಂದು ಬಟನ್ ಹಾಕಿಕೊಡುವ ಸೌಭಾಗ್ಯವನ್ನೂ ನೀಡದೆ ಕಳುಹಿಸಿಕೊಟ್ಟೆನಲ್ಲಾ ಎಂಬ ಅಪರಾಧ ಪ್ರಜ್ಞೆ ಅವಳನ್ನು ಕಾಡತೊಡಗಿತು. 


ಅವನ ದಿನ ಇಂದು ಹೇಗೆ ಕಳೆಯುವುದೋ? ಮಧ್ಯಾಹ್ನ ಊಟ ಮಾಡಬಹುದೇ?

‘ಆಫೀಸ್ ತಲುಪಿದ ಮೇಲೆ ಅವನು ಒಂದು ಬಾರಿಯಾದರೂ ತನಗೆ ಫೋನ್ ಮಾಡಿದ್ದರೆ ಚೆನ್ನಾಗಿತ್ತು‘ ಎಂಬ ಯೋಚನೆ ಅವಳ ಮನದಲ್ಲಿ ಮೂಡಿ ಬಂತು. ಮನಸ್ಸಿನ ತುಂಬಾ ತನ್ನ ಮೇಲಿನ ಬೇಸರ ಇಟ್ಟುಕೊಂಡು ಅವನು ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ತನ್ನಲ್ಲೇ ಯೋಚಿಸಿಕೊಂಡಳು.

ಕಥೆಯ ಎರಡನೇ ಭಾಗ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಕಥೆ: ಕೋಪದ ಅಲೆಯ ಮೇಲೆ ಪ್ರೀತಿಯ ದೋಣಿ (ಭಾಗ-2)


ಅಡುಗೆಮನೆಯಲ್ಲಿ ಸಿದ್ಧವಾಗಿದ್ದ ಆ ತಿಂಡಿಯ ಪಾತ್ರೆ, ಹೆಚ್ಚಿಟ್ಟ ಹಣ್ಣಿನ ಬಟ್ಟಲನ್ನು ನೋಡುತ್ತಾ ಕಣ್ಣೀರು ಹಾಕಿದಳು ಅನನ್ಯಾ. ಅವನು ಬೈದದ್ದು ಕೇವಲ ಒಂದು ಕ್ಷಣದ ಸಿಟ್ಟು, ಆದರೆ ಅವನ ಪ್ರೀತಿ ಪ್ರತಿ ಕ್ಷಣದ ಜೀವಂತ ಸತ್ಯ. ಅವನ ಮನಸ್ಸನ್ನು ನೋಯಿಸಬಾರದಿತ್ತು. ಅವನು ಆಫೀಸಿಗೆ ಹೋಗುವಾಗ ಅಷ್ಟು ಕಾತರದಿಂದ ತನ್ನನ್ನು ಕರೆಯುವಾಗ ಅವನ ಬಳಿಗೆ ಓಡಿ ಹೋಗಬೇಕಿತ್ತು.


​"ಅರ್ಜುನ್... ಐ ಆಮ್ ರಿಯಲಿ ಸಾರಿ" ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಅವನು ಇಂದು ಮನೆಗೆ ಬಂದ ಕೂಡಲೇ, ಅವನ ಎದೆಗೊರಗಿ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದಳು. ತನ್ನ ಅಹಂಕಾರದ ಮುಂದೆ ಅವನ ನಿಸ್ವಾರ್ಥ ಪ್ರೀತಿ ಎಷ್ಟು ದೊಡ್ಡದು ಎಂಬ ಅರಿವು ಅವಳಿಗೆ ಅರಿವಾಯಿತು.

ದಿನವಿಡೀ ಮನೆಯಲ್ಲಿ ಏಕಾಂಗಿಯಾಗಿದ್ದ ಅನನ್ಯಾಳಿಗೆ ಸಮಯವೇ ಸರಿಯುತ್ತಿರಲಿಲ್ಲ. ಗೋಡೆ ಗಡಿಯಾರದ ಮುಳ್ಳುಗಳು ಕೂಡ ಅವಳ ಮುನಿಸನ್ನು ನೋಡಿ ಅಪಹಾಸ್ಯ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. 

ಅರ್ಜುನ್ ತಯಾರು ಮಾಡಿಟ್ಟಿದ್ದ ಆ ತಿಂಡಿಯ ಬಟ್ಟಲನ್ನು ನೋಡಿದಾಗಲೆಲ್ಲಾ ಮನಸ್ಸು ಅನಾಥಪ್ರಜ್ಞೆಯಿಂದ ನಲುಗುತ್ತಿತ್ತು. ಕ್ಷಮೆಯನ್ನಾದರೂ ಹೇಗೆ ಕೇಳಲಿ ? ಎಂದು ಒಳಗೊಳಗೆ ತೊಳಲುತ್ತಿದ್ದಳು.


ಅಷ್ಟರಲ್ಲೇ ಹೊರಗಡೆ ಕಾರು ಬಂದು ನಿಂತ ಸದ್ದಾಯಿತು. ಸಮಯ ನೋಡಿದಳು, ಇನ್ನೂ ನಾಲ್ಕು ಗಂಟೆ! 

‘ ಪ್ರತಿದಿನ ರಾತ್ರಿ ಎಂಟು ಗಂಟೆಗೆ ಬರುತ್ತಿದ್ದವರು ಇಂದು ಇಷ್ಟು ಬೇಗ ಬಂದಿದ್ದಾರಲ್ಲ ‘ ಎಂದು ಒಳಗೊಳಗೆ ಖುಷಿಯಾದರೂ, ಮುಖದ ಮೇಲೆ ಮಾತ್ರ ಅದೇ ಗಂಭೀರತೆಯನ್ನು ಮುಖವಾಡ ಧರಿಸಿದಳು.

​ಅರ್ಜುನ್ ಒಳಗೆ ಬಂದ. ಅವನ ಮುಖದಲ್ಲಿ ಬೆಳಗಿನ ಆಯಾಸವಿರಲಿಲ್ಲ, ಯಾವುದೋ ತೀರ್ಮಾನ ಕೈಗೊಂಡವನಂತೆ ಗಂಭೀರವಾಗಿದ್ದ. 

" ಅನ್ವಿ, ಹೋಗಿ ರೆಡಿ ಆಗು. ನಾವು ಈಗಲೇ ಹೊರಗೆ ಹೋಗಬೇಕು " ಎಂದ ಅರ್ಜುನ್, ದನಿಯಲ್ಲಿ ಕಿಂಚಿತ್ತೂ ಅಳುಕಿರಲಿಲ್ಲ. ಅನನ್ಯಾ ಸೋಫಾದಿಂದ ಏಳದೆಯೇ,


 " ನಾನು ಎಲ್ಲಿಗೂ ಬರುವುದಿಲ್ಲ. ನಿಮ್ಮ ಕೆಲಸದ ಒತ್ತಡದ ನಡುವೆ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ? ಮತ್ತೆ ಯಾವುದಾದರೂ ಗೇಟ್ ಹತ್ತಿರ ನಿಲ್ಲಿಸಿ ಅವಮಾನ ಮಾಡಲು ಅಲ್ಲವೇ ?"  ಎಂದು ಹುಸಿಮುನಿಸು ತೋರುತ್ತಲೇ ಕೇಳಿದಳು.


​ಅರ್ಜುನ್ ಅವಳ ಹತ್ತಿರ ಬಂದು, ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮೆಲ್ಲಗೆ ನಕ್ಕ. “ಆ ಹಳೆಯ ಪುರಾಣ ಈಗ ಬೇಡ. ಹಠ ಬಿಟ್ಟು ರೆಡಿ ಆಗು ಅಂದೆ ಅಷ್ಟೇ.”


​“ನನಗೆ ಇಷ್ಟವಿಲ್ಲ ಅರ್ಜುನ್. ನಿಮಗೆ ನನ್ನ ಭಾವನೆಗಳು ಅರ್ಥವಾಗುವುದೇ ಇಲ್ಲ. ನಿಮಗೆ ಪ್ರೀತಿ ಮಾಡಬೇಕು ಎನಿಸುತ್ತೋ ಆಗ ಪ್ರೀತಿ ಮಾಡುವಿರಿ. ನಂತರ ಸ್ವಲ್ಪ ಹೊತ್ತಿಗೆ…‌! ಇದೆಲ್ಲ ನನಗೆ ಸರಿಯಾಗದು ನಾನು ಖಂಡಿತ ಬರುವುದಿಲ್ಲ ನನ್ನನ್ನು ಒತ್ತಾಯಿಸಬೇಡಿ" ಎಂದು ಹಠ ಹಿಡಿದು ಕುಳಿತಳು.


​ಅರ್ಜುನ್ ಈಗ ಹತ್ತಿರ ಬಂದು ಅವಳ ಕೈ ಹಿಡಿದ. ಅವನ ಸ್ಪರ್ಶದಲ್ಲಿ ಒಂದು ರೀತಿಯ ಸೆಳೆತವಿತ್ತು. "ನೋಡು ಅನ್ವಿ, ನೀನು ಮರ್ಯಾದೆಯಿಂದ ರೆಡಿ ಆಗಿ ಬರ್ತೀಯಾ… ಇಲ್ಲಾಂದ್ರೆ ನಾನು ನಿನ್ನನ್ನ ಹೀಗೆಯೇ ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಬೇಕಾಗುತ್ತೆ. ಇದು ಅರ್ಜುನನ ಆಜ್ಞೆ " ಎಂದ ತುಂಟತನದ ನೋಟ ಬೀರುತ್ತಾ. ಅವನ ಆ ಮಾತಿಗೆ ಒಳಗೊಳಗೆ ನಗು ಬಂದರೂ, ಅದನ್ನು ಅದುಮಿಟ್ಟುಕೊಂಡು ಮುನಿಸು ತೋರಿದಳು.


ಆದರೆ ಅವನು ಅವಳನ್ನು ಬಿಡಲಿಲ್ಲ. ಅವನ ಪ್ರೀತಿ ಮತ್ತು ಅಧಿಕಾರದ ಮುಂದೆ ಅವಳ ಹಠ ಸೋಲೊಪ್ಪಿಕೊಂಡಿತು. “ಸರಿ ಹೊರಡುವೆ, ಮೊದಲು ನನ್ನ  ಕೈಯನ್ನು ಬಿಡಿ" ಎಂದು ಒರಟಾಗಿ ಹೇಳಿ ರೂಮಿಗೆ ಓಡಿದಳು. ಮನಸ್ಸು ಮಾತ್ರ ಉಲ್ಲಾಸದಿಂದ ಕುಣಿಯುತ್ತಿತ್ತು. ಯಾಕೆಂದು ಅವಳಿಗೆ ಗೊತ್ತಿರಲಿಲ್ಲ.


​ರೂಮ್ ಗೆ ಹೋದ ಮೇಲೆ ಅನನ್ಯಾಳ ಮನದ ಮುನಿಸು ಪೂರ್ತಿಯಾಗಿ ಕರಗಿ ಹೋಯಿತು. 'ಅವರಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇಲ್ಲದಿದ್ದರೆ ಇಷ್ಟು ಬೇಗ ಕೆಲಸ ಬಿಟ್ಟು ಬರುತ್ತಾರೆಯೇ? ಹೀಗೆ ಹೊರಗಡೆ ಕರೆದೊಯ್ಯಲು ಒತ್ತಾಯಿಸುತ್ತಾರೆಯೇ' ಎನ್ನುತ್ತಾ ಅವನಿಗೆ ಇಷ್ಟವಾಗುವಂತೆ ಅಲಂಕರಿಸಿಕೊಳ್ಳಬೇಕು ಎಂದು ತೀರ್ಮಾನಿಸಿದಳು.


ಅರ್ಜುನ್ ಇಂದು ಗಾಢ ನೀಲಿ ಬಣ್ಣದ ಶರ್ಟ್ ಹಾಕಿದ್ದ. ಅವಳು ಕೂಡ ಅದೇ ಬಣ್ಣದ ರೇಷ್ಮೆ ಸೀರೆಯನ್ನು ಆರಿಸಿಕೊಂಡಳು. ಕನ್ನಡಿಯ ಮುಂದೆ ನಿಂತು ಅಚ್ಚುಕಟ್ಟಾಗಿ ಸೀರೆಯುಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ಮುಡಿ ತುಂಬಾ ಘಮಘಮಿಸುವ ಮಲ್ಲಿಗೆ ಮುಡಿದುಕೊಂಡಳು.


​ಹೊರಗೆ ಬಂದಾಗ ಅರ್ಜುನ್ ಅವಳನ್ನು ಕಂಡು ಒಂದು ಕ್ಷಣ ಮೌನವಾದ. ಅವನ ಕಣ್ಣುಗಳಲ್ಲಿ ಹೊಳಪಿತ್ತು. ಹಿಂದೆ ಆಗಿದ್ದರೆ ಅವನಿಂದ ಒಂದು ಉಡುಗೊರೆ ಪಡೆಯುವ ಚಾನ್ಸ್ ಇತ್ತು. ಆದರೆ ಇಂದು ಅವನು ತುಸು ದೂರವೇ ನಿಂತಿದ್ದ. ಅವಳೂ ಅಷ್ಟೇ ಸಲಿಗೆಯಿಂದ ಹತ್ತಿರ ಹೋಗಲಿಲ್ಲ. ಗಂಭೀರವಾಗಿ ನಿಂತುಕೊಂಡಳು.


"ನೀಲಿ ಸೀರೆಯಲ್ಲಿ ಮಲ್ಲಿಗೆ ಮುಡಿದ ನನ್ನ ಅನ್ವಿ… ದೇವಲೋಕದ ಅಪ್ಸರೆಯಂತೆ ಕಾಣ್ತಿದ್ದೀಯಾ" ಎಂದು ಮೃದುವಾಗಿ ಪಿಸುಗುಟ್ಟಿದ. ಅವಳು ಅದನ್ನು ಕೇಳಿಸಿಕೊಳ್ಳದವಳಂತೆ ಮುಖ ತಿರುಗಿಸಿ, "ಹೊರಡೋಣವೇ" ಎಂದಳು. ಅರ್ಜುನ್ ಒಂದು ಬಾರಿ ಅವಳನ್ನು ಪೂರ್ತಿಯಾಗಿ ನೋಡಿ ಕಣ್ತುಂಬಿಕೊಂಡು ಕಾರು ಏರಿದ. ಅವಳು ಅವನನ್ನು ಹಿಂಬಾಲಿಸಿ ಕಾರು ಹತ್ತಿ ಕುಳಿತಳು.


ಕಾರಿನಲ್ಲಿ ಹೋಗುವಾಗಲೂ ಅನನ್ಯಾ ಕಿಟಕಿಯ ಹೊರಗೆ ದಿಟ್ಟಿಸುತ್ತಿದ್ದಳು. ಅರ್ಜುನ್ ಪದೇ ಪದೇ ಸೈಡ್ ಮಿರರ್ ಮೂಲಕ ಅವಳನ್ನೇ ನೋಡುತ್ತಾ ತುಂಟತನದಿಂದ ಕಣ್ಣು ಹೊಡೆಯುತ್ತಿದ್ದ. ಅವಳು ಕೋಪದಂತೆ ನಟಿಸಿದರೂ, ಒಳಗೊಳಗೆ ಅವನ ಮೇಲಿನ ಕನಿಕರ ಮತ್ತು ಪ್ರೀತಿ ಮಿತಿ ಮೀರುತ್ತಿತ್ತು. 

'ಇಷ್ಟು ದೊಡ್ಡ ಆಫೀಸರ್, ಉನ್ನತ ಹುದ್ದೆಯವನು. ತನ್ನ ಒಂದು ಮಾತಿನಲ್ಲಿ ಆಫೀಸನ್ನು ನಡುಗಿಸುವಷ್ಟು ಅಧಿಕಾರವುಳ್ಳವನು, ಕೇವಲ ನನಗಾಗಿ ಇಷ್ಟೆಲ್ಲಾ ಸರ್ಕಸ್ ಮಾಡುತ್ತಿದ್ದಾನಲ್ಲ' ಎಂದು ಅನ್ನಿಸಿ, ಅವನನ್ನು ತೋಳುಗಳಲ್ಲಿ ತಬ್ಬಿಕೊಳ್ಳಬೇಕು ಎಂದೆನಿಸುತ್ತಿತ್ತು. ಆದರೂ ಸಂಯಮ ವಹಿಸಿಕೊಂಡು ಗಂಭೀರವಾಗಿ ಕುಳಿತುಕೊಂಡಳು. ಎಲ್ಲಿಗೆ ಹೋಗುವುದೆಂದು ಅವಳಿಗೂ ಗೊತ್ತಿಲ್ಲವಲ್ಲ.


​ಕಾರು ಒಂದು ಅಪರಿಚಿತ ಬಡಾವಣೆಯ ಸುಂದರವಾದ ಮನೆಯ ಮುಂದೆ ನಿಂತಿತು. ಅರ್ಜುನ್ ಕೆಳಗಿಳಿದು ಬಂದು ಅವಳಿಗಾಗಿ ಡೋರ್ ತೆರೆದ. ಬೆಲ್ ಒತ್ತಿದಾಗ ಬಾಗಿಲು ತೆರೆದವರನ್ನು ನೋಡಿ ಅನನ್ಯಾ ಬೆಚ್ಚಿಬಿದ್ದಳು. ಅದು ಅರುಂಧತಿ!


​“ಅನ್ವಿ! ....." ಅರುಂಧತಿ ಹತ್ತಿರ ಬಂದಳು. "ಅರು!” ಎನ್ನುತ್ತಾ ಅನನ್ಯಾಳೂ ಹತ್ತಿರ ಹೋದಳು. ಇಬ್ಬರೂ ಒಮ್ಮೆಲೇ ಕೂಗಿ ಅಪ್ಪಿಕೊಂಡರು.

​“ನೀನು ಹೇಗೆ ಇಲ್ಲಿ?” ಅನನ್ಯಾ ಅಚ್ಚರಿಯಿಂದ ಕೇಳಿದಳು. ಅರುಂಧತಿ ನಗುತ್ತಾ ಅರ್ಜುನ್ ಕಡೆ ಕೈ ತೋರಿಸಿದಳು. 


“ನಿನ್ನ ಅರ್ಜುನ ರಾಯರಿಗೆ ಸಾಟಿಯಿಲ್ಲ ಅನ್ವಿ. ನಿನ್ನೆ ಅವರು ನಿನ್ನನ್ನು ಬೈದಿದ್ದಕ್ಕೆ ಎಷ್ಟು ನೊಂದುಕೊಂಡಿದ್ದರೋ ಏನೋ… ಇಂದು ಬೆಳಗ್ಗೆಯೇ ನನ್ನ ಪತಿ ಶ್ರೀಕಾಂತ್‌ಗೆ ಕಾಲ್ ಮಾಡಿ ಅಡ್ರೆಸ್ ಪತ್ತೆ ಹಚ್ಚಿ, ನಿನಗೆ ಗೊತ್ತಿಲ್ಲದಂತೆ ಈ ಸರ್ಪ್ರೈಸ್ ಪ್ಲಾನ್ ಮಾಡಿದ್ದಾರೆ! " ಎಂದಾಗ ಅನನ್ಯಾ ಅರ್ಜುನ್ ಕಡೆ ನೋಡಿದಳು. ಅವನು ದೂರದಲ್ಲಿ ನಿಂತು, ಏನೂ ಅರಿಯದವನಂತೆ ಶ್ರೀಕಾಂತ್ ಜೊತೆ ಹರಟೆ ಹೊಡೆಯುತ್ತಿದ್ದ.


ಈಗ ಇಲ್ಲಿ ಅರುಂಧತಿ ಹಾಗೂ ಶ್ರೀಕಾಂತ್ ಇಲ್ಲದಿದ್ದರೆ ಈ ಕ್ಷಣದಲ್ಲಿ ಅವನನ್ನು ಅಪ್ಪಿ ಬಿಡುತ್ತಿದ್ದಳು. ಈ ಅನಿರೀಕ್ಷಿತ ಭೇಟಿ ಅವಳಿಗೆ ಅಷ್ಟು ಖುಷಿ ನೀಡಿತ್ತು.


'ತನಗಾಗಿ, ತನ್ನ ಪ್ರೀತಿಗಾಗಿ ಅರ್ಜುನ್ ಇಷ್ಟೊಂದು ಶ್ರಮ ಪಟ್ಟಿದ್ದಾನಲ್ಲ ಎಂದೆನಿಸಿತು ಅವಳಿಗೆ. ಅವನ ಬಗ್ಗೆ ಹೆಮ್ಮೆಯೂ, ಅಭಿಮಾನವು ಮೂಡಿತು.


​ಅರುಂಧತಿ  ಅನನ್ಯಾಳಿಗಾಗಿ ಹಲವು ಬಗೆಯ ತಿಂಡಿ ತಿನಸುಗಳನ್ನು ತಯಾರಿಸಿದ್ದಳು. ಗೆಳತಿಯರಿಬ್ಬರೂ ತಿಂಡಿ ಸವಿಯುತ್ತಾ ಹತ್ತು ವರ್ಷಗಳ ಎಲ್ಲಾ ನೆನಪುಗಳನ್ನು ಮೆಲುಕು ಹಾಕಿದರು. ಹೈಸ್ಕೂಲ್ ದಿನಗಳು, ಕಾಲೇಜ್ ದಿನಗಳು, ಮದುವೆ ಮುಂದಿನ ಬದುಕು ಎಲ್ಲವೂ ಅದರಲ್ಲಿ ಬಂದಿದ್ದವು. ಅರ್ಜುನ್ ಮತ್ತು ಶ್ರೀಕಾಂತ್ ಕೂಡ ಬೇಗನೆ ಸ್ನೇಹಿತರಾದರು. ರಾತ್ರಿ ಅಲ್ಲೇ ಊಟ ಮುಗಿಸಿ ಹೊರಡುವಾಗ ಅನನ್ಯಾಳ ಮನಸ್ಸು ಹೂವಿನಂತೆ ಹಗುರವಾಗಿತ್ತು. ​ವಾಪಸ್ ಬರುವಾಗ ಕಾರಿನಲ್ಲಿ ಅನನ್ಯಾ ಅರ್ಜುನ್ ಭುಜದ ಮೇಲೆ ತಲೆ ಇಟ್ಟುಕೊಂಡಳು. 


"ಅರ್ಜುನ್… ಐ ಆಮ್ ರಿಯಲಿ ಸಾರಿ. ಬೆಳಗ್ಗೆ ನಿಮ್ಮ ಶರ್ಟ್ ಬಟನ್ ಕೂಡ ನಾನು ಹಾಕಿಕೊಡಲಿಲ್ಲ… ನೀವು ತಿಂಡಿ ತಯಾರಿಸಿ, ಹಣ್ಣು ಕತ್ತರಿಸಿಟ್ಟಿದ್ದನ್ನು ನೋಡಿ ನನಗೆ ಅಳು ಬಂತು" ಎಂದಳು ಮೆಲ್ಲಗೆ. ಅವಳ ದನಿಯಲ್ಲಿರುವ ಪ್ರಾಮಾಣಿಕತೆಯನ್ನು ಗುರುತಿಸಿದ ಅವನು ಕಿರುನಗೆ ಬೀರಿದ. ಆ ನಗುವಿನಲ್ಲಿ ಎಲ್ಲವೂ ಅಡಗಿತ್ತು.


ತುಸು ಮುಂದೆ ಬಂದ ನಂತರ ಒಂದೆಡೆಯಲ್ಲಿ ​ಅರ್ಜುನ್ ಕಾರ್ ನಿಲ್ಲಿಸಿ, ಅವಳನ್ನು ಮೃದುವಾಗಿ ತನ್ನಡೆಗೆ ತಿರುಗಿಸಿ ಕೆನ್ನೆ ಸವರಿದ,


“ನಿನ್ನ ಆ ಕೋಪದಲ್ಲೂ ಒಂದು ಪ್ರೀತಿಯಿಯಿದೆ ಅನ್ವಿ. ಅದು ಒಂದು ಕವಿತೆಯಂತೆ. ಕೋಪದ ಅಲೆಯ ಮೇಲೆ ಪ್ರೀತಿಯ ದೋಣಿಯಂತೆ ನಿನ್ನ ಮುನಿಸು. ಕೆಲಸದ ಒತ್ತಡದಲ್ಲಿ ನಿನ್ನನ್ನು ನೋಯಿಸಿದ್ದು ನನ್ನದೇ ತಪ್ಪು. ಆದರೆ ಎಲ್ಲರೂ ಆಫೀಸ್ ನಲ್ಲಿ ನನಗಾಗಿ ಕಾಯುತ್ತಿರುವಾಗ ನಾನಾಗಿ ತಡ ಮಾಡಿದರೆ ನನಗೆ ಕೆಟ್ಟ ಹೆಸರು ಬರುವುದಿಲ್ಲವೇ? ಏನಿದ್ದರೂ ನನಗೆ ನನ್ನ ಆಫೀಸ್ ನನ್ನ ಜವಾಬ್ದಾರಿಗಳೇ ಮುಖ್ಯ ಎಂದು ನಿನಗೆ ಗೊತ್ತಿದೆಯಲ್ಲ. ಆದರೂ ಇನ್ನು ಮುಂದೆ ಆಫೀಸ್ ಒತ್ತಡವನ್ನು ಗೇಟ್‌ನ ಹೊರಗೇ ಬಿಟ್ಟು ಬರುತ್ತೇನೆ. ಯಾಕೆಂದರೆ ನಿನ್ನ ಈ ಮುನಿಸಿಗಿಂತ ಯಾವ ಒತ್ತಡವೂ ನನಗೆ ಹೆಚ್ಚಲ್ಲ. ಆಫೀಸಿನ ಒತ್ತಡವನ್ನಾದರೂ ಹೇಗಾದರೂ ನಿಭಾಯಿಸಬಹುದು, ಆದರೆ ನಿನ್ನ ಈ ಪ್ರೀತಿಯ ಮುನಿಸನ್ನು ಮಾತ್ರ ತಡೆಯಲು ನನಗೆ ಆಗುತ್ತಿಲ್ಲ" ಎಂದಾಗ ಅನನ್ಯಾಳ ಕಣ್ಣಂಚು ಒದ್ದೆಯಾಯಿತು. ಅವನೆದೆಯಲ್ಲಿ ಮೊಗವಿರಿಸಿದಳು.


​"ನನಗೆ ಈ ಮಲ್ಲಿಗೆಯ ಘಮ ಮತ್ತು ನಿನ್ನ ನಗು ಮಾತ್ರ ಸಾಕು ಅನ್ವೀ....." ಎಂದವನ ಮಾತಿಗೆ ಅವಳು ಸಂಪೂರ್ಣ ಸೋತು ಹೋಗಿದ್ದಳು. 


"ಇನ್ನು ಮುಂದೆ ನಾನು ಬದಲಾಗುತ್ತೇನೆ, ನಿನ್ನ ಆಫೀಸ್ ನಿನ್ನ ಒತ್ತಡ ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೂ ಕೋಪದ ನಂತರ ಇಷ್ಟು ಸೊಗಸಾದ ಉಡುಗೊರೆ ನೀನು ಕೊಡುವುದಿದ್ದರೆ ಈ ಕೋಪವೂ ನನಗೆ ಪ್ರಿಯವೇ" ಎನ್ನುತ್ತಾ ಅನನ್ಯಾ ಅವನನ್ನು ತಬ್ಬಿಕೊಂಡಳು.


​ಜೀವನದಲ್ಲಿ ಸಣ್ಣ ಪುಟ್ಟ ಮುನಿಸುಗಳು ಇದ್ದಾಗಲೇ ಪ್ರೀತಿಯ ಆಳ ತಿಳಿಯುವುದು. ಅರ್ಜುನ್ ಎಂಬ ಈ ತನ್ನ ‘ಹೃದಯದ ಅರಸ’ನ ಜೊತೆಗಿನ ಪುಟ್ಟ ಜಗಳವೂ ಒಂದು ಸುಂದರ ಕವಿತೆಯಂತೆಯೇ ಅನಿಸಿತು ಅನನ್ಯಾಳಿಗೆ.

ಶುಭಂ

-ಪ್ರಸನ್ನಾ ವಿ. ಚೆಕ್ಕೆಮನೆ


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top