ಉಜಿರೆ:
ತಂತ್ರಜ್ಞಾನದ ಅತಿಯಾದ ಅವಲಂಬನೆಯ ಭರಾಟೆಯ ನಡುವೆ ವಿದ್ಯಾರ್ಥಿಗಳು ಡಿಜಿಟಲ್ ವೇದಿಕೆಗಳೊಂದಿಗೆ ಸಮಾನ ದೂರ ಕಾಯ್ದುಕೊಂಡು
ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿಸಿಕೊಳ್ಳುವುದರ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು
ಎಸ್.ಡಿ.ಎಂ ಸ್ನಾತಕೋತ್ತರ
ಕೇಂದ್ರದ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಡಾ. ಮಂಜು ಶ್ರೀ ಆರ್
ಅಭಿಪ್ರಾಯಪಟ್ಟರು.
ಅವರು
ಎಸ್.ಡಿ.ಎಂ ಕಾಲೇಜಿನ
ಜ್ಞಾನ ಮಂಟಪ ಘಟಕವು ಬುಧವಾರ
ಎಸ್.ಡಿ.ಎಂ ಸ್ನಾತಕೋತ್ತರ
ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ 'ಡಿಜಿಟಲ್ ಡಿಟಾಕ್ಸ್ ಫಾರ್ ದ ಮಾಡರ್ನ್
ಮೈಂಡ್' ಕುರಿತು ವಿಚಾರಗಳನ್ನು ಮಂಡಿಸಿ ಮಾತನಾಡಿದರು.
ಮೊಬೈಲ್
ಸಂವಹನವಿಲ್ಲದೆಯೇ ಒಂದು ಕ್ಷಣವೂ ಬಿಟ್ಟಿರಲಾಗದ
ಭಾವೋನ್ಮಾದದ ಸ್ಥಿತಿ ವಿದ್ಯಾರ್ಥಿಗಳನ್ನಷ್ಟೇ ಅಲ್ಲ, ದೊಡ್ಡವರನ್ನೂ ವಿಚಲಿತಗೊಳಿಸಿದೆ. ಇದರಿಂದಾಗಿ ಡಿಜಿಟಲ್ ವೇದಿಕೆಗಳ ವ್ಯಾಪಕ ವರ್ತುಲದಿಂದ ಬಿಡಿಸಿಕೊಳ್ಳಲಾಗದ ಅನಿವಾರ್ಯತೆ ಎದುರಾಗಿದೆ. ಈ ಹಂತದಲ್ಲಿ ಸ್ಕ್ರೀನ್
ಜೊತೆಗೆ ನಿರಂತರವಾಗಿ ಒಡನಾಡುವ ಪ್ರವೃತ್ತಿಯಿಂದ ವಿಮುಖಗೊಳ್ಳಲು ನೆರವಾಗುವ ಡಿಜಿಟಲ್ ಡಿಟಾಕ್ಸ್ ಪರಿಕಲ್ಪನೆಯ ಸೂತ್ರಗಳನ್ನು ಅನ್ವಯಿಸಿಕೊಳ್ಳಬೇಕು ಎಂದರು.
ಡಿಜಿಟಲ್
ತಾಂತ್ರಿಕತೆಯನ್ನು ಸಂಪೂರ್ಣವಾಗಿ ತೊರೆಯದೇ ಅದರೊಂದಿಗಿದ್ದೂ ಅದರಂತಾಗದೇ ಉಳಿಯುವ ಶಕ್ತಿ ಪ್ರತಿಯೊಬ್ಬರಿಗೂ ಇರುತ್ತದೆ. ಈ ಸೂಕ್ಷ್ಮವನ್ನು ಅರಿತುಕೊಳ್ಳದೆಯೇ
ಡಿಜಿಟಲ್ ಮಾಧ್ಯಮದ ತಾಂತ್ರಿಕತೆಯ ರಂಜನೀಯ ಗುಂಗಿನಲ್ಲಿ ಬಂಧಿಯಾಗಿಬಿಟ್ಟರೆ ವ್ಯಕ್ತಿತ್ವದ ಬೆಳವಣಿಗೆಯ ಹಾದಿ ಕುಂಠಿತಗೊಳ್ಳುತ್ತದೆ. ಪಕ್ಕದಲ್ಲಿರುವವರೊಂದಿಗೆ ಮಾತನಾಡದೇ ಉಳಿದು
ಯಾವುದರಲ್ಲೂ ಆಸಕ್ತಿ ಇರಿಸಿಕೊಳ್ಳದೇ ಇರುವಂತಹ ಅಂತರ್ಮುಖಿತ್ವ ರೂಪುಗೊಂಡು ವ್ಯಕ್ತಿತ್ವವನ್ನು ಜಡಗೊಳಿಸಿಬಿಡುತ್ತದೆ ಎಂದರು.
ಹೊರಗೆ
ಏನು ನಡೆಯುತ್ತಿದೆ ಎನ್ನುವುದನ್ನೇ ಗಮನಿಸದಂತಹ, ಮೊಬೈಲ್ ಸ್ಕ್ರೀನ್ ಕಡೆಗಷ್ಟೇ ಗಮನವಿಟ್ಟು ಬಹುಹೊತ್ತು ಕುಳಿತುಕೊಳ್ಳುವ ಸ್ವಭಾವ ಇಡೀ ವ್ಯಕ್ತಿತ್ವವನ್ನೇ ಜಟಿಲವಾಗಿಸಿಬಿಡುತ್ತದೆ
ಎಂಬುದನ್ನು ಯುವ ಸಮೂಹ ಮಾತ್ರವಲ್ಲದೇ
ದೊಡ್ಡವರೂ ಅರ್ಥೈಸಿಕೊಳ್ಳಲೇಬೇಕು ಎಂದು ನುಡಿದರು.
ಸೋಷಿಯಲ್
ಮೀಡಿಯಾಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ ಎಂಬ ಕೊರಗುಗಳ ಬದಲು
ಹಾಗೆ ತಪ್ಪಿಸಿಕೊಳ್ಳಬೇಕಿಲ್ಲ ಎಂಬ ಧೋರಣೆಗಳೇ ಮಹತ್ವ
ಪಡೆದುಕೊಂಡಿರುವ ಕಾಲವಿದು. ಒಂದು ಮೆಸೇಜ್ ನೊಟಿಫಿಕೇಷನ್ನ ರಿಂಗಣ ಕೇಳಿದ
ತಕ್ಷಣವೇ ಮೊಬೈಲ್ ಕಡೆಗೆ ನೋಡುವ ಅತ್ಯುತ್ಸಾಹ, ಆ ನೋಟಿಫಿಕೇಷನ್ನ
ರಿಂಗಣ ಕೇಳಿಬರದಿದ್ದಾಗ ವಿಚಿತ್ರವಾದ ಚಡಪಡಿಕೆಗೆ ಈಡಾಗುವ ದುಃಸ್ಥಿತಿ, ಬೇರೊಬ್ಬರ ಮೆಸೇಜ್ ನೋಟಿಫಿಕೇಷನ್ನ ರಿಂಗಣದ ಟೋನ್
ಕೇಳಿಸಿದ ತಕ್ಷಣ ನನಗಾಗಿಯೇ ಅದ್ಯಾವುದೋ ನೋಟಿಫಿಕೇಷನ್ ಕಾದಿದೆ ಎಂದುಕೊಂಡು ಮೊಬೈಲ್ ನೋಡುವ ಪ್ರವೃತ್ತಿಗಳು ಆತಂಕ ಹುಟ್ಟುಹಾಕುತ್ತಿವೆ. ತಾಂತ್ರಿಕ ಅವಲಂಬನೆಯ
ಗುಂಗಿನಿಂದ ಹೊರಬರುವುದಕ್ಕೆ ಡಿಜಿಟಲ್ ಡಿಟಾಕ್ಸ್ ಪರಿಕಲ್ಪನೆಗೆ ಅನುಗುಣವಾದ ದಿನಚರಿಯನ್ನು ರೂಪಿಸಿಕೊಳ್ಳಲೇಬೇಕಿದೆ ಎಂದು ಹೇಳಿದರು.
ದಿನಕ್ಕೆ
ಇಂತಿಷ್ಟು ನಿಮಿಷವಷ್ಟೇ ಡಿಜಿಟಲ್ ತಾಂತ್ರಿಕತೆಯ ಸ್ಕ್ರೀನ್ಗಳೊಂದಿಗೆ ಸಮಯ ಮೀಸಲಿರಿಸಬೇಕು. ಇನ್ನುಳಿದ
ಬಹಳಷ್ಟು ಸಮಯವನ್ನು ಬೌದ್ಧಿಕವಾಗಿ ಸಶಕ್ತಗೊಳ್ಳುವುದಕ್ಕೆ ಬಳಸಿಕೊಳ್ಳಬೇಕು. ಓದುವಿಕೆ, ಯೋಚಿಸುವಿಕೆ, ಅಗತ್ಯವೆನ್ನಿಸಿದಾಗ ಮಾತ್ರ ರಂಜನೆ ಪಡೆದುಕೊಳ್ಳುವಿಕೆ, ತದನಂತರ ಮತ್ತೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆಯ ಆದ್ಯತೆಗಳ ಮೂಲಕ ಡಿಜಿಟಲ್ ಡಿಟಾಕ್ಸ್
ಅನ್ನು ಸಾಧ್ಯವಾಗಿಸಿಕೊಳ್ಳಬಹುದು ಎಂದರು.
ಎಸ್.ಡಿ.ಎಂ. ಕಾಲೇಜು
ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ,
ಎಸ್.ಡಿ.ಎಂ ಸ್ನಾತಕೋತ್ತರ
ಕೇಂದ್ರದ ಡೀನ್ ಡಾ. ಸೌಮ್ಯ
ಬಿ.ಪಿ. ಉಪಸ್ಥಿತರಿದ್ದರು. ಜ್ಞಾನ
ಮಂಟಪ ಘಟಕ ಸಂಯೋಜಕ ಡಾ.ರಾಜಶೇಖರ ಹಳೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


