ಕಾರಿನಲ್ಲಿ ಈಗ ಕೇವಲ ಎಸಿ ಸದ್ದು ಮತ್ತು ಅನನ್ಯಾಳ ಅಳುವಿನ ಶಬ್ದ ಮಾತ್ರ ಇತ್ತು. ಅನನ್ಯಾಳಿಗೆ ಆ ಕ್ಷಣದಲ್ಲಿ ಅರ್ಜುನನ ಮೇಲೆ ವಿಪರೀತ ಅಸಹನೆ ಉಂಟಾಯಿತು.
‘ಪ್ರತಿ ಬಾರಿಯೂ ಇವರು ಹೀಗೆಯೇ ಮಾಡುತ್ತಾರೆ; ತನ್ನ ಕೆಲಸ, ತನ್ನ ಸಮಯ ಎನ್ನುವ ಹಠದಲ್ಲಿ ತನ್ನ ಆಸೆಗಳನ್ನು, ಅವಳ ಸಂಬಂಧಗಳನ್ನು ತುಳಿದುಬಿಡುತ್ತಾರೆ’. ಅವಳು ಕಾರಿನ ಸೀಟಿಗೆ ಒರಗಿ ಕಣ್ಣು ಮುಚ್ಚಿಕೊಂಡಳು.
ಮನಸ್ಸಿನಲ್ಲಿ ಅರುಂಧತಿಯ ಆ ಮುಖವೇ ಬರುತ್ತಿತ್ತು. ಆ ಸಂಭ್ರಮದ ಕ್ಷಣವನ್ನು ಅರ್ಜುನ್ ಎಷ್ಟು ಸುಲಭವಾಗಿ ಸ್ಮಶಾನ ಮೌನವನ್ನಾಗಿ ಮಾಡಿಬಿಟ್ಟಿದ್ದ. ಕಾರು ವೇಗವಾಗಿ ಸಾಗುತ್ತಿತ್ತು, ಆದರೆ ಅನನ್ಯಾ ಮತ್ತು ಅರ್ಜುನನ ನಡುವಿನ ಅಂತರ ಮಾತ್ರ ಯೋಜನಗಟ್ಟಲೆ ಬೆಳೆಯುತ್ತಿತ್ತು.
‘ಜೀವನದಲ್ಲಿ ಕೆಲಸ ಮುಖ್ಯವಿರಬಹುದು, ಆದರೆ ಪ್ರೀತಿಪಾತ್ರರ ಆತ್ಮಗೌರವಕ್ಕಿಂತ ದೊಡ್ಡದಾದ ಮೀಟಿಂಗ್ ಯಾವುದಿದೆ ?’ ಈ ಪ್ರಶ್ನೆ ಅವಳನ್ನು ಕಾಡುತ್ತಿತ್ತು. ಅದೇ ಸಿಟ್ಟಿನಲ್ಲಿ, ಅದೇ ನೋವಿನಲ್ಲಿ ಅವಳು ಮನೆಯ ದಾರಿಯನ್ನು ನೋಡುತ್ತಾ ಕುಳಿತಿದ್ದಳು. ಅಂದಿನ ಆ ಸಂಜೆ ಪ್ರೀತಿಯ ಸಂಭ್ರಮಕ್ಕಿಂತ ಹೆಚ್ಚಾಗಿ, ಮುನಿಸಿನ ಕವಿತೆಯಾಗಿ ಮಾರ್ಪಟ್ಟಿತ್ತು.
ಕಾರಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅರ್ಜುನ್ ಗಾಡಿಯನ್ನು ವೇಗವಾಗಿ ಓಡಿಸುತ್ತಿದ್ದ. ಅವನ ಮುಖದಲ್ಲಿ ಕೆಲಸದ ಒತ್ತಡದ ಗೆರೆಗಳಿದ್ದವು.
“ನೋಡು ಅನನ್ಯಾ, ಆಫೀಸ್ ವಿಷಯದಲ್ಲಿ ನಾನು ತುಂಬಾ ಸ್ಟ್ರಿಕ್ಟ್ ಅಂತ ನಿನಗೆ ಗೊತ್ತು. ಸಮಯ ಮೀರಿದರೆ ಆ ಪ್ರಾಜೆಕ್ಟ್ ಕೈತಪ್ಪುತ್ತೆ,” ಎಂದ ಅರ್ಜುನ್, ದನಿ ಸ್ವಲ್ಪ ಮೆತ್ತಗಾಗಿತ್ತು. ಅನನ್ಯಾ ಕಿಟಕಿಯ ಹೊರಗೆ ನೋಡುತ್ತಾ ಮೌನವಾಗಿದ್ದಳು.
“ಮಾತಾಡಬಾರದೇ? ಸಾರಿ… ಸ್ವಲ್ಪ ಗಟ್ಟಿಯಾಗಿ ಹೇಳಿದೆ ಅಷ್ಟೇ,” ಅಂದ ಅರ್ಜುನ್. ಅನನ್ಯಾ ಅವನ ಕಡೆ ತಿರುಗಿ ದನಿ ಏರಿಸಿದಳು, “ಅದು ಗಟ್ಟಿಯಾಗಿ ಹೇಳಿದ್ದಲ್ಲ ಅರ್ಜುನ್, ಅದು ಅಸಭ್ಯ ವರ್ತನೆ! ಹತ್ತು ವರ್ಷಗಳ ನಂತರ ಗೆಳತಿ ಸಿಕ್ಕಿದ್ದಾಳೆ. ಅವಳ ಮುಂದೆ ನನ್ನನ್ನು ಒಬ್ಬಳು ಸಣ್ಣ ಹುಡುಗಿಯಂತೆ ಬೈದಿರಲ್ಲ, ನನ್ನ ಮರ್ಯಾದೆ ಏನಾಗಬೇಕು? ನಿಮ್ಮ ಮೀಟಿಂಗ್‌ಗಿಂತ ನನ್ನ ಭಾವನೆಗಳು ನಿಮಗೆ ಯಾವತ್ತೂ ಮುಖ್ಯವೇ ಅಲ್ಲ ಅಲ್ಲವೇ ನನ್ನ ಭಾವನೆಗಳಿಗೆ ನೀವು ಯಾವುಗಳು ಆದ್ಯತೆಯೇ ಕೊಡುವುದಿಲ್ಲ ನಿಮ್ಮ ಕರ್ತವ್ಯವೇ ನಿಮಗೆ ಮುಖ್ಯ" ಅವಳು ರಣಚಂಡಿಯಂತೆ ನಿಂತಿದ್ದಳು.
ಅವನು ಅವಳನ್ನು ಮನೆಯಲ್ಲಿ ಬಿಟ್ಟು ಆಫೀಸಿಗೆ ಹೋದ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಅವನು ಮನೆಗೆ ಬಂದ ಮೇಲಂತೂ ಜಗಳ ತಾರಕಕ್ಕೇರಿತು. ಅನನ್ಯಳಿಗೆ ಗೆಳತಿಯ ಮುಂದೆ ತನಗಾದ ಅವಮಾನವನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ‘ಗಂಡನ ತಪ್ಪಿನಿಂದಾಗಿ ತಾನು ಗೆಳತಿಯ ಮುಂದೆ ಅವಮಾನಕ್ಕೊಳಗಾದೆ‘ ಎಂಬ ಕೀಳರಿಮೆ ಅವಳನ್ನು ವಿಪರೀತವಾಗಿ ಕಾಡುತ್ತಿತ್ತು.
ಅರ್ಜುನ್ ಎಷ್ಟೇ ಸಮಾಧಾನ ಮಾಡಲು ಬಂದರೂ ಅನನ್ಯಾ ಅವನ ಮುಖವನ್ನೂ ನೋಡಲಿಲ್ಲ. ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಇಡೀ ಮನೆ ಮೌನದ ಹೊದಿಕೆ ಹೊದ್ದುಕೊಂಡಂತಿತ್ತು., ಅನನ್ಯಾಳ ಮನಸ್ಸಿನೊಳಗೆ ಮಾತ್ರ ಆಕ್ರೋಶದ ಬಿರುಗಾಳಿ ಇನ್ನೂ ತಣ್ಣಗಾಗಿರಲಿಲ್ಲ. ಕಿಟಕಿಯ ಬಳಿ ನಿಂತು ಕತ್ತಲೆಯನ್ನು ದಿಟ್ಟಿಸುತ್ತಿದ್ದಳು. ಆಗಲೇ ಬಾಗಿಲು ತೆರೆದ ಮೆಲ್ಲನೆಯ ಸದ್ದು ಕೇಳಿಸಿತು.
ಅರ್ಜುನ್ ಕೈಯಲ್ಲಿ ಎರಡು ತಟ್ಟೆಗಳನ್ನು ಹಿಡಿದು ಒಳಗೆ ಬಂದ. ಅವನ ಮುಖದಲ್ಲಿ ಅಸಹಾಯಕತೆ ಮತ್ತು ತಪ್ಪು ಮಾಡಿದ ಭಾವ ಎದ್ದು ಕಾಣುತ್ತಿತ್ತು. ಅವನು ಅನನ್ಯಾಳ ಹತ್ತಿರ ಬಂದು, ತಟ್ಟೆಯನ್ನು ಪಕ್ಕದ ಟೇಬಲ್ ಮೇಲಿಟ್ಟು, ಅವಳ ಭುಜದ ಮೇಲೆ ಕೈ ಇರಿಸಲು ಬಂದ. ಅನನ್ಯಾ ಸಿಟ್ಟಿನಿಂದಲೇ ಅವನ ಕೈಯನ್ನು ಕೊಡವಿಕೊಂಡಳು.
“ಅನ್ವಿ… ಪ್ಲೀಸ್ ಚಿನ್ನ, ಹಠ ಮಾಡಬೇಡ. ಮಧ್ಯಾಹ್ನದಿಂದ ನೀನು ಏನೂ ತಿಂದಿಲ್ಲ ಅಂತ ನನಗೆ ಗೊತ್ತು. ಮದುವೆ ಮನೆಯಲ್ಲಿ ಬೇಗನೆ ಹೊರಡಬೇಕು ಎಂದು ನಾನು ಹೇಳಿದ ಕಾರಣ ನೀನು ಸರಿಯಾಗಿ ಊಟವೂ ಮಾಡಲಿಲ್ಲ ಎನ್ನುವುದನ್ನು ನಾನು ಗಮನಿಸಿದ್ದೇನೆ. ಹೀಗೆ ಉಪವಾಸ ಇದ್ದರೆ ನಿನ್ನ ಆರೋಗ್ಯ ಏನಾಗಬೇಡ ?” ಎಂದು ಮೃದುವಾಗಿ ಹೇಳಿದ. ಅನನ್ಯಾ ತಿರುಗಿಯೂ ನೋಡದೆ, "ನನ್ನ ಆರೋಗ್ಯದ ಬಗ್ಗೆ ನನಗಿಂತ ಹೆಚ್ಚು ನಿಮಗೆ ಚಿಂತೆ ಬೇಡ. ನೀವು ಹೋಗಿ ಊಟ ಮಾಡಿ ಮಲಗಿ" ಎಂದಳು ಒರಟಾಗಿ.
ಅರ್ಜುನ್ ಸುಮ್ಮನಾಗಲಿಲ್ಲ. ತಟ್ಟೆಯಿಂದ ಒಂದು ತುತ್ತು ಅನ್ನವನ್ನು ಕೈಗೆತ್ತಿಕೊಂಡು ಅವಳ ತುಟಿಯ ಹತ್ತಿರ ತಂದ. “ನೋಡು, ನಾನೇ ಕೈಯಾರೆ ನಿನಗೆ ಇಷ್ಟ ಅಂತ ಪನ್ನೀರ್ ಮಸಾಲಾ ಮಾಡಿದ್ದೇನೆ. ಒಂದು ತುತ್ತು ತಿನ್ನು, ಆಮೇಲೆ ಬೇಕಿದ್ರೆ ಎಷ್ಟು ಬೇಕೋ ಅಷ್ಟು ಬೈದುಕೋ, ಆದರೆ ಈ ರೀತಿ ಉಪವಾಸವಿದ್ದು ನನ್ನನ್ನು ಕಂಗಡಿಸಬೇಡ" ಎಂದು ಅವನು ಅವಳನ್ನು ಕಾಡಿ ಬೇಡಿ ರಮಿಸಲು ಪ್ರಯತ್ನಿಸಿದ.
ಅವನ ಕಣ್ಣುಗಳಲ್ಲಿ ಪ್ರೀತಿ ಇತ್ತು, ತಪ್ಪಿತಸ್ಥ ಭಾವವಿತ್ತು. ಆದರೆ ಆ ಮಧ್ಯಾಹ್ನ ಎಲ್ಲರ ಮುಂದೆ ಅವನು ಗದರಿಸಿದ ರೀತಿ ಅವಳ ಕಣ್ಣಮುಂದೆ ಬಂದು ನಿಂತಿತು. ಆ ಮರ್ಯಾದೆ ಹೋದ ನೋವಿನ ಮುಂದೆ ಈ ಪನ್ನೀರ್ ಮಸಾಲಾ ರುಚಿ ಅವಳಿಗೆ ಕಾಣಲಿಲ್ಲ. ಅವಳು ಅವನ ಕೈಯನ್ನು ಬಲವಾಗಿ ತಳ್ಳಿ,
“ಬೇಡ ಅಂತ ಹೇಳಿದೆನಲ್ಲ ಅರ್ಜುನ್! ಹಸಿವಿಲ್ಲ ಅಂದ್ರೆ ಅರ್ಥವಾಗುವುದಿಲ್ಲವೇ ನಿಮಗೆ? ನಿಮ್ಮ ಈ ‘ಸಾರಿ’ ಅನ್ನೋ ಪದದ ಮೇಲೆ ನನಗೆ ನಂಬಿಕೆಯೇ ಹೊರಟು ಹೋಗಿದೆ. ಪ್ರತಿ ಬಾರಿ ನೋಯಿಸೋದು, ಆಮೇಲೆ ಹೀಗೆ ನಾಟಕ ಮಾಡೋದು ನಿಮಗೆ ರೂಢಿಯಾಗಿಬಿಟ್ಟಿದೆ ಅಲ್ವಾ, ನಾನೊಬ್ಬಳು ಎಲ್ಲವನ್ನು ಮೌನವಾಗಿ ಸಹಿಸಬೇಕು. ನಿಮ್ಮ ಈ ನಾಟಕ ನನ್ನ ಬಳಿ ನಡೆಯದು" ಎಂದು ಕಿರುಚಿದಳು.
ಅರ್ಜುನ್ ಕೈಯಲ್ಲಿದ್ದ ತುತ್ತು ಕೆಳಗೆ ಬಿದ್ದಿತು. ಅವನ ಮುಖ ಒಮ್ಮೆಲೇ ಬಾಡಿ ಕಪ್ಪಗಾಯಿತು. ದೀರ್ಘವಾಗಿ ನಿಟ್ಟುಸಿರು ಬಿಟ್ಟ ಅವನು,
“ನಿನಗೆ ಪ್ರೀತಿ ನಾಟಕ ಅಂತ ಅನಿಸುತ್ತಿದೆಯೇ ಅನ್ವಿ? ಕೆಲಸದ ಒತ್ತಡದಲ್ಲಿ ಮನುಷ್ಯನಿಗೆ ಒಮ್ಮೊಮ್ಮೆ ತಾಳ್ಮೆ ತಪ್ಪುತ್ತೆ ಎನ್ನುವ ಸಣ್ಣ ಅರಿವು ನಿನಗಿಲ್ಲವೇ? ನಿನ್ನ ಗೆಳತಿಯ ಮುಂದೆ ಹಾಗೆ ಮಾಡಬಾರದಿತ್ತು ನಿಜ, ಅದಕ್ಕೆ ತಾನೇ ಇಷ್ಟೆಲ್ಲಾ ಬೇಡಿಕೊಳ್ಳುತ್ತಿರುವುದು?" ಎಂದ ಅವನ ದನಿಯಲ್ಲಿ ಈ ಬಾರಿ ನೋವಿತ್ತು.
"ಒತ್ತಡ ಎಲ್ಲರಿಗೂ ಇರುತ್ತೆ ಅರ್ಜುನ್, ಆದರೆ ಅದು ಪ್ರೀತಿಪಾತ್ರರ ಮೇಲೆ ತೋರುವ ಅಧಿಕಾರವಲ್ಲ. ಹೋಗಿ ಇಲ್ಲಿಂದ!” ಎಂದು ಅನನ್ಯಾ ಬೆಡ್‌ಶೀಟ್ ಎಳೆದುಕೊಂಡು ಮುಖ ಮುಚ್ಚಿ ಮಲಗಿದಳು. ಅವನು ಅಲ್ಲಿಯೇ ಕೆಲವು ನಿಮಿಷ ಸ್ತಬ್ಧನಾಗಿ ನಿಂತಿದ್ದ.
ಅನನ್ಯಾ ಬೆಡ್‌ಶೀಟ್ ಒಳಗಿನಿಂದಲೇ ಅವನ ಉಸಿರಾಟದ ಸದ್ದನ್ನು ಕೇಳಿಸಿಕೊಳ್ಳುತ್ತಿದ್ದಳು. ಅವನು ಅವಳನ್ನು ಒಮ್ಮೆ ಮುಟ್ಟಿ ಎಬ್ಬಿಸಲು ಬಂದಂತೆ ತೋರಿತು, ಆದರೆ ಏನನ್ನೋ ಯೋಚಿಸಿ ಸುಮ್ಮನಾದ. ಕೊನೆಗೆ ತಟ್ಟೆಗಳನ್ನು ತೆಗೆದುಕೊಂಡು ಹೋದ ಸದ್ದಾಯಿತು.
ಸ್ವಲ್ಪ ಹೊತ್ತಿನ ನಂತರ ಕುತೂಹಲ ತಡೆಯಲಾರದೆ ಅನನ್ಯಾ ಕಣ್ಣು ತೆರೆದು ನೋಡಿದಳು. ಬೆಡ್‌ರೂಮ್‌ನ ಲೈಟ್ ಆಫ್ ಆಗಿತ್ತು. ಅವಳು ಅವನು ಪಕ್ಕದಲ್ಲಿ ಬಂದು ಮಲಗುತ್ತಾನೆ ಅಂದುಕೊಂಡಿದ್ದಳು. ಆದರೆ ಅವನು ಹಾಲ್‌ಗೆ ಹೋಗಿ ಸೋಫಾದ ಮೇಲೆ ಮಲಗಿದ್ದ. ಅನನ್ಯಾಳಿಗೆ ನಿದ್ರೆ ಬರಲಿಲ್ಲ. ಮನಸ್ಸು ಚುರುಕ್ ಅಂದಿತು.
'ಅವನು ಎಷ್ಟು ಹೊತ್ತಿನಿಂದ ಆ ಮೀಟಿಂಗ್, ಪ್ರಾಜೆಕ್ಟ್ ಅಂತ ಓಡಾಡುತ್ತಿದ್ದಾನೆ. ಮೀಟಿಂಗ್ ಮುಗಿಸಿ ಮನೆಗೆ ಬರುವಾಗ ಅವಳಿಗೆ ಇಷ್ಟದ ಸ್ವೀಟ್ ತಂದಿದ್ದ, ಅವಳು ಅದನ್ನೂ ಮುಟ್ಟಲಿಲ್ಲ. ಈಗ ಅವನೂ ಊಟ ಮಾಡದೆ ಆ ಸಣ್ಣ ಸೋಫಾದ ಮೇಲೆ ಮುದುರಿಕೊಂಡು ಮಲಗಿದ್ದಾನೆ.
ಅರ್ಜುನ್ ಒಳ್ಳೆಯ ಗಂಡ ಎಂಬುದರಲ್ಲಿ ಅವಳಿಗೆ ಯಾವತ್ತೂ ಸಂಶಯವಿರಲಿಲ್ಲ. ಅವಳ ಒಂದು ಸಣ್ಣ ಇಚ್ಛೆಯನ್ನೂ ಅವನು ಮನ್ನಿಸದೆ ಇದ್ದವನಲ್ಲ. ಆದರೆ ಇಂದಿನ ಅವಳ ಅತಿಯಾದ ಮುನಿಸು ಅವನನ್ನು ಎಷ್ಟು ನೋಯಿಸಿರಬಹುದು? ಹೋಗಿ ಅವನನ್ನು ಕರೆದುಕೊಂಡು ಬರಬೇಕೆನಿಸಿತು ಅವಳಿಗೆ. ಆದರೆ ಅವಳೊಳಗಿನ ಅಹಂ ಮತ್ತು ಆ ಮಧ್ಯಾಹ್ನದ ಮುನಿಸು ಅವಳನ್ನು ಮತ್ತೆ ತಡೆಯಿತು.
"ಇರಲಿ, ಅವರಿಗೂ ಗೊತ್ತಾಗಲಿ ನನ್ನ ನೋವು ಏನು ಎಂದು. ನನಗೂ ಮನಸ್ಸಿದೆ, ಅದರಲ್ಲಿಯೂ ಭಾವನೆಗಳಿವೆ ಆ ಭಾವನೆಗಳಿಗೆ ಪೆಟ್ಟು ಬಿದ್ದರೆ ನೋವಾಗುತ್ತದೆ" ಎಂದು ಅಂದುಕೊಂಡರೂ, ಕಿಟಕಿಯಿಂದ ಬೀರುತ್ತಿದ್ದ ತಂಗಾಳಿ ಅವನ ಮೇಲೆ ಬಿದ್ದಾಗ ಅವನಿಗೆ ಚಳಿಯಾಗುತ್ತಿರಬಹುದು ಎಂಬ ಆತಂಕ ಅವಳನ್ನು ಕಾಡತೊಡಗಿತು.
ಆ ರಾತ್ರಿ ಅವರಿಬ್ಬರಿಗೂ ದೀರ್ಘವಾಗಿತ್ತು. ಅವಳ ಮೌನ ಅವನಿಗೆ ಶಿಕ್ಷೆಯಾಗಿದ್ದರೆ, ಅವನ ಆ ಮೌನವಾದ ತೊಳಲಾಟ ಅವಳಿಗೆ ಅದಕ್ಕಿಂತ ದೊಡ್ಡ ಶಿಕ್ಷೆಯಾಗಿತ್ತು.
ಪ್ರೀತಿ ಅಂದರೆ ಹೀಗೆಯೇ ಅಲ್ಲವೇ? ‘ನೋಯಿಸಿದವನಿಗಿಂತ ನೋವುಂಡವಳೇ ಹೆಚ್ಚು ಮರುಗುತ್ತಿದ್ದಳು. ರಾತ್ರಿಯೆಲ್ಲಾ ಕಣ್ಣಿಗೆ ನಿದ್ದೆ ಸುಳಿಯಲೇ ಇಲ್ಲ. ಹಾಲ್‌ನಲ್ಲಿ ಅರ್ಜುನ್ ಸೋಫಾದ ಮೇಲೆ ಹೊರಳಾಡುತ್ತಿದ್ದ ಸದ್ದು ಕೇಳುವಾಗಲೆಲ್ಲಾ ಅನನ್ಯಾಳ ಮನಸ್ಸು ಚುರುಕ್ ಅನ್ನುತ್ತಿತ್ತು.
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ ಅಡುಗೆಮನೆಗೆ ಹೋದಳು. ಮನಸ್ಸು ಭಾರವಾಗಿದ್ದರೂ, ಅವನು ಹಸಿದ ಹೊಟ್ಟೆಯಲ್ಲಿ ಆಫೀಸಿಗೆ ಹೋಗಬಾರದೆಂಬ ಕಾಳಜಿ ಅವಳನ್ನು ಕೆಲಸಕ್ಕೆ ಹಚ್ಚಿತು. ಪಾತ್ರೆಗಳ ಸದ್ದಾಗದಂತೆ ಜಾಗರೂಕತೆಯಿಂದ ಅವನ ಮೆಚ್ಚಿನ ತಿಂಡಿ ತಯಾರಿಸಿದಳು. ಆದರೆ ಅವಳ ಮುಖದ ಮೇಲೆ ಮಾತ್ರ ಇನ್ನೂ ಆ ಮುನಿಸಿನ ಮುಸುಕು ಹಾಗೆಯೇ ಇತ್ತು. ಅರ್ಜುನ್ ಎದ್ದು ಬಂದು ರೆಡಿಯಾಗಲು ಬೆಡ್‌ರೂಮ್‌ಗೆ ಹೋದ.
ಕಥೆ: ಕೋಪದ ಅಲೆಯ ಮೇಲೆ ಪ್ರೀತಿಯ ದೋಣಿ ಭಾಗ-1
ಸಾಮಾನ್ಯವಾಗಿ ಪ್ರತಿದಿನ ಅವನ ಬೆಳಗಿನ ಅವತಾರವೇ ಬೇರೆ. ಸ್ನಾನ ಮುಗಿಸಿ ಬಂದವನೇ ಅವಳನ್ನು ಹಿಂದಿನಿಂದ ತಬ್ಬಿ, "ಅನ್ವಿ, ಇವತ್ತು ಯಾವ ಶರ್ಟ್ ಹಾಕಲಿ?" ಎಂದು ಕೇಳುವುದು ಅವನ ಹವ್ಯಾಸ. ನಂತರ ಅವನು ಶರ್ಟ್ ತೊಟ್ಟ ಮೇಲೆ, ಅನನ್ಯಾ ಅವನ ಎದುರು ನಿಂತು, ಕಾಲರ್ ಸರಿಪಡಿಸಿ, ಒಂದೊಂದೇ ಬಟನ್ ಹಾಕುತ್ತಾ ಆ ದಿನದ ಪ್ಲಾನ್ ಬಗ್ಗೆ ಹರಟೆ ಹೊಡೆಯುತ್ತಿದ್ದರು. ಕೊನೆಯ ಬಟನ್ ಹಾಕಿದ ಮೇಲೆ ಅರ್ಜುನ್ ಅವಳ ಹಣೆಗೆ ಮುತ್ತಿಟ್ಟು,
"ಈಗ ನನ್ನ ಶುಭ ದಿನ ಆರಂಭವಾಯಿತು" ಎನ್ನುತ್ತಿದ್ದ. ಆ ಒಂದು ಮುತ್ತು ಮತ್ತು ಬಟನ್ ಹಾಕುವ ಆ ಕ್ಷಣವೇ ಅವನಿಗೆ ದಿನವಿಡೀ ಕೆಲಸ ಮಾಡಲು ಶಕ್ತಿ ನೀಡುವ ಮಂತ್ರದಂತಿತ್ತು. ಆದರೆ ಇಂದು... ಪರಿಸ್ಥಿತಿ ಭಿನ್ನವಾಗಿತ್ತು.
ಅರ್ಜುನ್ ಶರ್ಟ್ ತೊಟ್ಟು ಕನ್ನಡಿಯ ಮುಂದೆ ನಿಂತ. ಅನನ್ಯಾ ಅಡುಗೆಮನೆಯಿಂದಲೇ ಅವನನ್ನು ಕಳ್ಳನೋಟದಲ್ಲಿ ಗಮನಿಸುತ್ತಿದ್ದಳು. ಅವನು ಕಾಲರ್ ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದ. ಒಂದು ಕ್ಷಣ ಅವಳತ್ತ ತಿರುಗಿ ನೋಡಿದ, ಅವನ ಕಣ್ಣುಗಳಲ್ಲಿ
"ಬಂದು ಬಟನ್ ಹಾಕಿಕೊಡು ಅನ್ವಿ" ಎಂಬ ಮೂಕ ಪ್ರಾರ್ಥನೆಯಿತ್ತು. ಅನನ್ಯಾ ಮಾತ್ರ ಯಾವುದೋ ಹಠಕ್ಕೆ ಬಿದ್ದು, ಕೇಳಿಸಿಕೊಳ್ಳದವಳಂತೆ ಅಡುಗೆಮನೆಯ ಸ್ಲ್ಯಾಬ್ ಒರೆಸುವುದರಲ್ಲಿ ತಲ್ಲೀನಳಾದಳು.
ಅವನು ಸುಮ್ಮನೆ ನಿಂತ. ಶರ್ಟ್‌ನ ಬಟನ್ ಹಾಕುವ ನೆಪದಲ್ಲಿ ಐದು ನಿಮಿಷ ಅಲ್ಲೇ ಕಳೆದ. ಅವಳು ಬರಬಹುದು ಎಂಬ ಕಾತರಿಕೆ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಅವಳ ಕೋಪದ ಅಲೆ ಇನ್ನೂ ಇಳಿದಿರಲಿಲ್ಲ. ಕೊನೆಗೆ ಅವನೇ ಒಲ್ಲದ ಮನಸ್ಸಿನಿಂದ, ಅರ್ಧಂಬರ್ಧ ಕಾಲರ್ ಸರಿಪಡಿಸಿಕೊಂಡು ಬ್ಯಾಗ್ ಎತ್ತಿಕೊಂಡ. ಬಾಗಿಲ ಹತ್ತಿರ ಹೋಗಿ ನಿಂತು, "ಅನನ್ಯಾ, ಹೊರಡುತ್ತಿದ್ದೇನೆ..." ಎಂದು ಮೆಲ್ಲನೆ ದನಿಯಲ್ಲಿ ಹೇಳಿದ.
ಅನನ್ಯಾ ಪ್ರತಿಕ್ರಿಯಿಸಲಿಲ್ಲ. ಅವನು ದೀರ್ಘವಾಗಿ ನಿಟ್ಟುಸಿರು ಬಿಟ್ಟು ಮನೆಯಿಂದ ಹೊರಬಿದ್ದ.
(........... ಮುಂದುವರಿಯುವುದು)
- ಪ್ರಸನ್ನಾ ವಿ. ಚೆಕ್ಕೆಮನೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


