ಕಥೆ: ಕೋಪದ ಅಲೆಯ ಮೇಲೆ ಪ್ರೀತಿಯ ದೋಣಿ (ಭಾಗ-1)

Upayuktha
0


​ಮದುವೆ ಮನೆಯ ಆ ವಿಶಾಲವಾದ ಹಜಾರದಲ್ಲಿ ಮಂಗಳವಾದ್ಯದ ನಾದ ತೇಲಿ ಬರುತ್ತಿತ್ತು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ರೇಷ್ಮೆ ಸೀರೆಗಳ ಸರಬರ ಸದ್ದು, ಮಲ್ಲಿಗೆಯ ಪರಿಮಳ ಮತ್ತು ಅಕ್ಕಪಕ್ಕದ ಜನರ ಹರಟೆಗಳ ಗದ್ದಲ.  


ತಾನು ಉಟ್ಟಿರುವ ರೇಷ್ಮೆಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತಾ ಅರ್ಜುನನ ಜೊತೆ ಹೊರಗೆ ಬರುತ್ತಿದ್ದಳು ಅನನ್ಯಾ. ಅರ್ಜುನ್ ಕೇಂದ್ರ ಸರ್ಕಾರಿ ಇಲಾಖೆಯ ಉನ್ನತ ಉದ್ಯೋಗಿಯಾಗಿದ್ದ., ಆ ದಿನ ಯಾವುದೋ ಪ್ರಮುಖ ಪ್ರಾಜೆಕ್ಟ್‌ನ ಯೋಚನೆಯಲ್ಲಿದ್ದ ಎಂಬುದು ಅವನ ಗಂಭೀರ ಮುಖವೇ ಸಾರುತ್ತಿತ್ತು. ಹಾಗಾಗಿ ಅವನ ಹೆಜ್ಜೆಗಳು ಸ್ವಲ್ಪ ವೇಗವಾಗಿಯೇ ಇದ್ದವು. ಅನನ್ಯಾಳ ಒತ್ತಾಯಕ್ಕೆ ಮಣಿದು ಒಲ್ಲದ ಮನದಿಂದ ಈ ಮದುವೆಗೆ ಬಂದಂತೆ ಕಾಣಿಸುತ್ತಿತ್ತು. ಹೊರನೋಟಕ್ಕೆ ಶಾಂತವಾಗಿಯೇ ಎಲ್ಲರ ಜೊತೆ ಮಾತನಾಡುತ್ತಿದ್ದರೂ ಅವನಿಗೆ ಹೇಳಿದ ಸಮಯಕ್ಕೆ ಸರಿಯಾಗಿ ಆಫೀಸ್ ತಲುಪಬೇಕಿತ್ತು, ಆ ಧಾವಂತ ಅವನ ನಡಿಗೆಯಲ್ಲಿ ವ್ಯಕ್ತವಾಗುತ್ತಿತ್ತು.


​ಪಾರ್ಕಿಂಗ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗಲೇ, ಹಿಂಬದಿಯಿಂದ ಗಾಳಿಯಲ್ಲಿ ತೇಲಿ ಬಂದ ಆ ಮಧುರವಾದ ಕರೆ ಅನನ್ಯಾಳನ್ನು ಸ್ಥಳದಲ್ಲೇ ನಿಲ್ಲಿಸಿತು.


​“ಅನನ್ಯಾ.......​ " ಆ ದನಿ... !

ಅದು ಕೇವಲ ತನ್ನ ಹೆಸರಲ್ಲ, ಹತ್ತು ವರ್ಷಗಳ ಹಳೆಯ ನೆನಪುಗಳ ಅಲೆ ಎಂದೆನಿಸಿದಾಗ ಅನನ್ಯಾ ಥಟ್ಟನೆ ಅಚ್ಚರಿಯಿಂದ ತಿರುಗಿ ನೋಡಿದಳು. ತನ್ನ ಎದುರಿಗೆ ನಿಂತಿದ್ದವಳನ್ನು ಕಂಡೊಡನೆ ಅವಳ ಕಣ್ಣುಗಳು ಅಚ್ಚರಿಯಿಂದ ಅರಳಿದವು. ಹಸಿರು ಬಣ್ಣದ ಸೀರೆಯಲ್ಲಿ, ಕೈಯಲ್ಲೊಂದು ಮಗುವನ್ನು ಹಿಡಿದು ನಿಂತಿದ್ದವಳು ಅವಳ ಬಾಲ್ಯದ ಪ್ರಿಯಗೆಳತಿ ಅರುಂಧತಿ!


"ಅರು... ಅರುಂಧತಿ! ನೀನಾ ಇದು ?” ಅನನ್ಯಾಳ ದನಿಯಲ್ಲಿ ಗೆಳತಿಯನ್ನು ಅನಿರೀಕ್ಷಿತವಾಗಿ ಕಂಡ ದಿಗ್ಭ್ರಮೆಯಿತ್ತು. ಮುಂದಿನ ಕ್ಷಣವೇ ಇಬ್ಬರೂ ಗೆಳತಿಯರು ಪರಿಸರ ಮರೆತು ಪರಸ್ಪರ ತಬ್ಬಿಕೊಂಡರು. ಅದೆಷ್ಟು ವರ್ಷಗಳಿಂದ ಕಾಣದಿರುವ ಹಂಬಲಿಕೆ ಆ ಅಪ್ಪುಗೆಯಲ್ಲಿತ್ತು! 


ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಗೆಳೆತನ ಅವರದ್ದು. ಹೈಸ್ಕೂಲ್ ದಿನಗಳಲ್ಲಿ ಒಟ್ಟಿಗೆ ಬೆಂಚ್ ಹಂಚಿಕೊಂಡಿದ್ದು, ಶಿಕ್ಷಕರಿಗೆ ತಿಳಿಯದಂತೆ ತಿಂಡಿ ತಿಂದದ್ದು, ಮಳೆಯ ಹನಿಗಳಲ್ಲಿ ನೆನೆದದ್ದು, ಮನೆಯ ಹಿರಿಯರಿಗೆ ತಿಳಿಯದಂತೆ ಐಸ್ ಕ್ಯಾಂಡಿ ತಿಂದಿದ್ದು.... ಹೀಗೇ...ಎಲ್ಲವೂ ಒಂದು ಕ್ಷಣದಲ್ಲಿ ಕಣ್ಣಮುಂದೆ ಸಿನಿಮಾ ಸುರುಳಿಯಂತೆ ಓಡಿಹೋದವು.


"ಅನ್ವಿ, ಎಷ್ಟು ಬದಲಾಗಿಬಿಟ್ಟಿದ್ದೀಯಾ ನೀನು! ನಿನ್ನನ್ನು ಇಲ್ಲಿ ಕಾಣುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ " ಅರುಂಧತಿ ಸಂಭ್ರಮದಿಂದ ಹೇಳಿದಳು.


​ಅನನ್ಯಾ ಅವಳ ಕೈ ಹಿಡಿದು ಅಚ್ಚರಿಯಿಂದ ಅವಳನ್ನೇ ನೋಡುತ್ತಿದ್ದಳು. "ಅರು, ನಿನ್ನ ಮದುವೆ ಆಯಿತು ಅಂತ ಕೇಳಿದ್ದೆ, ಆದರೆ ಅಡ್ರೆಸ್ ಸಿಗಲಿಲ್ಲ. ನೋಡು, ಈಗ ನಿನ್ನ ಪಕ್ಕದಲ್ಲಿ ಇಬ್ಬರು ಮುದ್ದಾದ ಮಕ್ಕಳು! ಎಷ್ಟು ಚೆನ್ನಾಗಿದ್ದೀಯಾ ನೀನು” ಎಂದು ಅಕ್ಕರೆಯಿಂದ ಅರುಂಧತಿಯ ಮಕ್ಕಳ ಕೆನ್ನೆ ಸವರಿದಳು. ಅವಳಲ್ಲಿ ಮಾತನಾಡಲು ನೂರಾರು ಮಾತುಗಳು ತುಟಿಯ ಅಂಚಿಗೆ ಬಂದು ನಿಂತಿದ್ದವು.


“ನಿನ್ನ ಸಂಸಾರ ಹೇಗಿದೆ?”, “ಈಗ ಎಲ್ಲಿದ್ದೀಯಾ?”, “ನಮ್ಮ ಹಳೆಯ ಫ್ರೆಂಡ್ಸ್ ಯಾರಾದರೂ ಸಿಕ್ಕಿದ್ದಾರಾ?” ಪ್ರಶ್ನೆಗಳ ಮಹಾಪೂರವೇ ಅವಳ ಬಳಿ ಇತ್ತು. ಅರುಂಧತಿ ಕೂಡ ತನ್ನ ಗೆಳತಿಯನ್ನು ಕಂಡು ಮೈಮರೆತಿದ್ದಳು. ಆ ಸಂಭ್ರಮದ ನಡುವೆ ಅನನ್ಯಾಳಿಗೆ ಸಮಯದ ಪ್ರಜ್ಞೆಯೇ ಇರಲಿಲ್ಲ.

​ಅನನ್ಯಾ ಅರುಂಧತಿಯ ಕೈ ಹಿಡಿದು, “ಅರು, ಇಲ್ಲೇ ಇರು, ನನ್ನ ಪತಿ ಅರ್ಜುನ್ ಅಲ್ಲಿದ್ದಾನೆ, ಅವನಿಗೆ ನಿನ್ನ ಪರಿಚಯ ಮಾಡಿಸ್ತೀನಿ...” ಎಂದು ಅರ್ಜುನನ ಕಡೆಗೆ ತಿರುಗುವಷ್ಟರಲ್ಲೇ, ಪರಿಸ್ಥಿತಿ ತಲೆಕೆಳಗಾಯಿತು. ಪಾರ್ಕಿಂಗ್‌ನಿಂದ ಕಾರನ್ನು ವೇಗವಾಗಿ ತಂದು ನಿಲ್ಲಿಸಿದ ಅರ್ಜುನ್, ಕೆಳಗಿಳಿಯದೆಯೇ ಕಾರಿನ ಕಿಟಕಿಯಿಂದ ಅತ್ಯಂತ ಒರಟಾದ ಧ್ವನಿಯಲ್ಲಿ ಕೂಗಿದ.


​“ಅನನ್ಯಾ! ನಿನಗೆ ಬುದ್ಧಿ ಇದೆಯಾ ಇಲ್ವಾ? ನಾನು ನಿನಗೆ ಹತ್ತು ಬಾರಿ ಹೇಳಿದ್ದೇನೆ, ಮೂರು ಗಂಟೆಗೆ ಕ್ಲೈಂಟ್ ಮೀಟಿಂಗ್ ಇದೆ ಎಂದು. ಇನ್ನು ಕೇವಲ ಅರ್ಧ ಗಂಟೆ ಬಾಕಿ ಇದೆ. ಇಲ್ಲಿ ಯಾರ ಜೊತೆ ಹರಟೆ ಹೊಡೆಯುತ್ತಿದ್ದೀಯಾ? ಬೇಗ ಬಂದು ಕಾರು ಹತ್ತು!” ​ಆ ಧ್ವನಿ ಮದುವೆ ಮನೆಯ ಆ ಶಾಂತ ವಾತಾವರಣವನ್ನು ಸೀಳಿ ಹಾಕಿತ್ತು. ಅಕ್ಕಪಕ್ಕದ ಜನರೆಲ್ಲಾ ಒಮ್ಮೆಲೆ ಅನನ್ಯಾಳ ಕಡೆ ತಿರುಗಿ ನೋಡಿದರು. 


ಅನನ್ಯಾಳಿಗೆ ಭೂಮಿ ಕುಸಿದು ಹೋದಂತಾಯಿತು. ತನ್ನ ಪ್ರಾಣಗೆಳತಿಯ ಮುಂದೆ, ಇಷ್ಟು ಜನರ ನಡುವೆ ತನ್ನ ಪತಿ ತನ್ನನ್ನು ಒಬ್ಬಳು ಜವಾಬ್ದಾರಿಯಿಲ್ಲದ ಸಣ್ಣ ಹುಡುಗಿಯಂತೆ ಗದರಿಸಿದ್ದು ಅವಳ ಆತ್ಮಗೌರವಕ್ಕೆ ಬಿದ್ದ ದೊಡ್ಡ ಹೊಡೆತವಾಗಿತ್ತು. ಅವಳ ಕೈಯಲ್ಲಿದ್ದ ಅರುಂಧತಿಯ ಕೈ ನಡುಗಿತು. ಅರುಂಧತಿಯ ಮುಖದಲ್ಲಿದ್ದ ಆ ಸಂಭ್ರಮ ಕ್ಷಣಾರ್ಧದಲ್ಲಿ ಮಾಯವಾಗಿ ಸಂಕೋಚ ತುಂಬಿಕೊಂಡಿತು.


​“ಅರ್ಜುನ್... ಇವಳು ನನ್ನ ಫ್ರೆಂಡ್ ಅರುಂಧತಿ...” ಎಂದು ಅನನ್ಯಾ ನಡುಗುವ ದನಿಯಲ್ಲಿ ಹೇಳಲು ಪ್ರಯತ್ನಿಸಿದಳು. ಆದರೆ ಅರ್ಜುನ್ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. “ಯಾರೇ ಆಗಿರಲಿ ಅನನ್ಯಾ! ಈಗ ನನಗೆ ಮೀಟಿಂಗ್ ಮುಖ್ಯ. ಸಮಯ ಪ್ರಜ್ಞೆ ಇಲ್ಲದವರಿಗೆ ನಾನು ಏನು ಹೇಳಲಿ ? ತಮಾಷೆ ಮಾಡಬೇಡ, ಈಗಲೇ ಬಾ!” ಎಂದು ಗರ್ಜಿಸಿ ಕಾರಿನ ಹಾರ್ನ್ ಒತ್ತಿದ.


​ಅನನ್ಯಾಳ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಆ ಅನಿರೀಕ್ಷಿತ ಭೇಟಿಯ ಆನಂದವೆಲ್ಲಾ ಈಗ ವಿಷವಾಗಿ ಪರಿಣಮಿಸಿತ್ತು. ಗೆಳತಿಯ ಮುಂದೆ ಗಂಡ ಹೀಗೆ ಅಸಭ್ಯವಾಗಿ ವರ್ತಿಸಿದನಲ್ಲ ಎಂಬ ನೋವು ಅವಳನ್ನು ಸುಡಲಾರಂಭಿಸಿತು. ಅರುಂಧತಿ ಮೆಲ್ಲನೆ ಅನನ್ಯಾಳ ಕೈ ಸವರಿ ಹೇಳಿದಳು, 

“ಪರವಾಗಿಲ್ಲ ಅನ್ವಿ... ಅವರು ತುಂಬಾ ಗಡಿಬಿಡಿಯಲ್ಲಿದ್ದಾರೆಂದು ತೋರುತ್ತಿದೆ. ನೀನು ಹೋಗು, ನಾವು ಇನ್ನೊಮ್ಮೆ ಸಿಗೋಣ.” ಎಂದಳು.

​ಅನನ್ಯಾ ಅರುಂಧತಿಯ ಕಣ್ಣುಗಳನ್ನು ನೋಡಲು ಸಾಧ್ಯವಾಗದೆ ತಲೆತಗ್ಗಿಸಿದಳು.


"ಸಾರಿ ಅರು..." ಎಂದು ಪಿಸುಗುಟ್ಟಿದಳು. ಅರುಂಧತಿ ಮೃದುವಾಗಿ ನಕ್ಕು ಅಲ್ಲಿಂದ ಸರಿದಳು. ಆ ನಗುವಿನ ಹಿಂದೆ ಅನನ್ಯಾಳಿಗೆ ಒಂದು ರೀತಿಯ ಕರುಣೆ ಕಂಡಿತು. ತನ್ನ ಗೆಳತಿ ಇಂತಹ ಒಬ್ಬ ಕಠೋರ ಮನುಷ್ಯನ ಜೊತೆ ಬದುಕುತ್ತಿದ್ದಾಳೆಯೇ ಎಂಬ ಪ್ರಶ್ನೆ ಅರುಂಧತಿಯ ಕಣ್ಣಲ್ಲಿದ್ದಂತೆ ಅನನ್ಯಾಳಿಗೆ ಭಾಸವಾಯಿತು. ಗೆಳತಿಯ ಮುಂದೆ ತುಂಬಾ ಅವಮಾನವಾಯಿತು ಅನನ್ಯಾಗೆ.


ಅವಳು ಸಿಟ್ಟಿನಿಂದಲೇ ಕಾಲನ್ನು ಎಳೆದುಕೊಳ್ಳುತ್ತಾ ಬಂದು ಕಾರಿನೊಳಗೆ ಕುಳಿತಳು. ಬಾಗಿಲನ್ನು ಜೋರಾಗಿ ಅಪ್ಪಳಿಸಿ ಮುಚ್ಚಿದಳು. ಅವಳ ಮನಸ್ಸಿನೊಳಗೆ ಜ್ವಾಲಾಮುಖಿ ಉರಿಯುತ್ತಿತ್ತು. ಅರ್ಜುನ್ ಗಾಡಿಯನ್ನು ರೇಸ್ ಮಾಡುತ್ತಾ ರಸ್ತೆಗೆ ಇಳಿಸಿದ.


 "ನೋಡು ಅನನ್ಯಾ, ನನ್ನ ವೃತ್ತಿಜೀವನದ ದೊಡ್ಡ ಪ್ರಾಜೆಕ್ಟ್ ಇದು. ನಿನಗೆ ಯಾಕೆ ಅರ್ಥವಾಗುವುದಿಲ್ಲ? ಬೆಳಗ್ಗೆ ಮನೆಯಿಂದ ಹೊರಡುವಾಗಲೇ ನಾನು ಹೇಳಿದ್ದೆನಲ್ಲ, ಇಂದು ಮದುವೆಗೆ ಬರುವುದಿದ್ದರೆ ನಾನು ಹೇಳಿದ ಹೊತ್ತಿಗೆ ನನ್ನ ಜೊತೆ ಹೊರಡಬೇಕು ಎಂದು. ಇಷ್ಟು ಬೇಗ ಅದು ಮರೆತು ಹೋಯಿತೇ ? ನಾನು ಆಫೀಸ್ ಗೆ ಸರಿಯಾದ ಸಮಯಕ್ಕೆ ತಲುಪದಿದ್ದರೆ ಉಳಿದವರು ನನ್ನನ್ನು ಕಾಯುವಂತಾಗುದಿಲ್ಲವೇ ? ಇಂದು ನಿಜಕ್ಕೂ ನಾನು ರಜೆ ಹಾಕುವ ದಿನವಲ್ಲ. ಆದರೂ ನಿನ್ನ ಒತ್ತಡಕ್ಕೆ ಮಣಿದು ಮದುವೆಗೆ ಬಂದಿದ್ದು. ಮೀಟಿಂಗ್ ಸಮಯಕ್ಕೆ ತಲುಪುವೆ ಇಂದು ಭರವಸೆ ಕೊಟ್ಟಿದ್ದೇನೆ. ಇನ್ನೂ ತಡ ಮಾಡಿದರೆ ನಾನು ಮಾತಿಗೆ ತಪ್ಪಿದಂತಾಗುತ್ತದೆ" ಎಂದ ಅರ್ಜುನ್, ಅವನ ದನಿಯಲ್ಲಿ ಇನ್ನೂ ಆ ಕಿರಿಕಿರಿ ಹಾಗೆಯೇ ಇತ್ತು. 


ಅನನ್ಯಾ ಅವನಿಗೆ ಉತ್ತರಿಸಲು ಹೋಗಲಿಲ್ಲ. ಕಿಟಕಿಯ ಹೊರಗೆ ದಿಟ್ಟಿಸುತ್ತಾ ಕುಳಿತಿದ್ದಳು. ಕಣ್ಣೀರಿನ ಹನಿಗಳು ಕೆನ್ನೆಯ ಮೇಲೆ ಜಾರುತ್ತಿದ್ದವು. ಅದನ್ನು ಕಂಡಾಗ ಅರ್ಜುನನ ಸಿಟ್ಟು ಜರ್ರನೆ ಇಳಿಯಿತು. ದನಿ ಮೃದುವಾಯಿತು.


​"ನಿನಗೆ ನನ್ನಲ್ಲಿ ಮಾತನಾಡಲು ಇಷ್ಟವಿಲ್ಲದಿದ್ದರೆ ಬಿಡು. ನಿನಗೆ ಈಗ ನನ್ನ ಮೇಲೆ ಸಿಟ್ಟಿದೆ ಎಂದು ನನಗೆ ಗೊತ್ತಿದೆ. ಯಾಕೋ ಇಂದು ಸಮಯ ಸರಿ ಇರಲಿಲ್ಲ ಅಷ್ಟೇ " ಎಂದ ಅರ್ಜುನ್ ಸ್ವಲ್ಪ ದನಿ ತಗ್ಗಿಸಿ.


​ಅನನ್ಯಾ ಒಮ್ಮೆಲೇ ಅವನ ಕಡೆ ತಿರುಗಿ ಕಿರುಚಿದಳು, "ಸಮಯ ಅಷ್ಟೇನಾ ಅರ್ಜುನ್ ನಿಮಗೆ ಮುಖ್ಯವಾಗಿದ್ದು? ಹತ್ತು ವರ್ಷಗಳ ನಂತರ ನನ್ನ ಗೆಳತಿ ಅಪರೂಪವಾಗಿ ಸಿಕ್ಕಿದ್ದಾಳೆ. ಅವಳ ಮುಂದೆ ನನ್ನನ್ನು ಅಷ್ಟು ಕೆಟ್ಟದಾಗಿ ಗದರಿಸಿದಿರಲ್ಲ, ನನ್ನ ಮರ್ಯಾದೆ ಏನಾಗಬೇಡ ? ಎಲ್ಲರ ಮುಂದೆ ನನ್ನನ್ನು ಒಬ್ಬಳು ಕೆಲಸದವಳಂತೆ ಟ್ರೀಟ್ ಮಾಡಿದ್ದೀರಾ! ನಿಮ್ಮ ಮೀಟಿಂಗ್ ನಿಮಗೆ ಮುಖ್ಯ. ನನ್ನ ಭಾವನೆಗಳಿಗೆ ಬೆಲೆಯೇ ಇಲ್ಲವೇ ಹಾಗಿದ್ದರೆ? “ಎಂದಾಗ ಅರ್ಜುನ್ ಗೆ ಅವಳನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ತಿಳಿಯಲಿಲ್ಲ.


‘ಅವಳ ಮಾತು ನಿಜ‘ ಎಂದೆನಿಸಿದರು ಅವನಿಗೆ ತನ್ನ ಕರ್ತವ್ಯವೇ ಮುಖ್ಯವಾಗಿತ್ತು. ​“ನಾನು ಅವಮಾನ ಮಾಡಬೇಕು ಎಂದು ಹೇಳಿದಲ್ಲ ಅನ್ವಿ, ಸಮಯಕ್ಕೆ ಸರಿಯಾಗಿ ಆಫೀಸ್ ತಲುಪಬೇಕು ಎಂಬ ಯೋಚನೆ ಮಾತ್ರ ನನಗೆ ಇದ್ದಿದ್ದು. ಅದರ ಮುಂದೆ ಬೇರೇನೂ ಕಾಣಿಸಲಿಲ್ಲ " ಅರ್ಜುನ್ ದನಿಯಲ್ಲಿ ಸ್ವಲ್ಪ ತಾನು ಮಾಡಿದ್ದು ತಪ್ಪಾಯಿತು ಎಂಬ ಎಳೆಯು ಬೆರೆತು ಹೋಗಿತ್ತು.


​“ಅವಮಾನ ಮಾಡಲಿಲ್ಲವೇ? ಅವಳ ಮುಂದೆ ಇನ್ನು ನಾನು ಹೇಗೆ ನಿಲ್ಲಬೇಕು ಹೇಳಿ? ನೀವು ಕೇಂದ್ರ ಸರ್ಕಾರದ ದೊಡ್ಡ ಉದ್ಯೋಗಿ ಆಗಿರಬಹುದು ಅರ್ಜುನ್, ಆದರೆ ಸಂಸ್ಕಾರ ಎನ್ನುವುದು ಒಂದು ಇದೆಯಲ್ಲ, ನನ್ನ ಗೆಳತಿ ನನ್ನ ಬಗ್ಗೆ ಏನು ಅಂದುಕೊಂಡಿರಬಹುದು? ನೀವು ಅವಳ ಮುಂದೆ ಕೇವಲ ನನ್ನ ಗಂಡನಾಗಿ ಅಲ್ಲ, ಒಬ್ಬ ರಾಕ್ಷಸನಂತೆ ವರ್ತಿಸಿದ್ದೀರಿ. ಅವಳು ನಮ್ಮ ಬಗ್ಗೆ ಏನು ಭಾವಿಸಿರಬಹುದು ಎಂಬ ಯೋಚನೆಯಿದೆಯೇ ನಿಮಗೆ?"


​ಅನನ್ಯಾಳ ಆಕ್ರೋಶ ತಡೆಯಲಾರದೆ ಅರ್ಜುನ್ ಸುಮ್ಮನಾದ. 


ಅವಳ ಜೊತೆ ಮಾತಿಗೆ ಮಾತು ಬೆರೆತು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವುದು ಬೇಡ ಎಂಬುದು ಅವನ ತೀರ್ಮಾನವಾಗಿತ್ತು. ಮಾತು ಆಡಿ ಆಗಿದೆ ಇನ್ನು ಪುನಃ ಅದನ್ನು ಮರಳಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ‘ಅದಕ್ಕೆ ಮತ್ತೆ ಮಾತು ಜೋಡಿಸಿ ಜಗಳವನ್ನು ಮತ್ತಷ್ಟು ತಾರಕಕ್ಕೇರಿಸಿ ಬದುಕಿನ ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ಳುವುದು ಬೇಡ ಎಂದೆನಿಸಿ ‘ಅರ್ಜುನ್ ಮೌನವನ್ನೇ ಆಶ್ರಯಿಸಿಕೊಂಡ.

(..... ಮುಂದುವರಿಯುವುದು)


-ಪ್ರಸನ್ನಾ ವಿ. ಚೆಕ್ಕೆಮನೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top