ಮಂಗಳೂರು: ವೇದ ಪುರಾಣಗಳ ಸಾರವನ್ನು ತಿಳಿದು ಪರಿಣಾಮಯಿಯಾಗಿ ಕರುಣಾಮಯಿಯಾಗಿ ಜಗತ್ತಿಗೆ ಶಾಂತಿ ಮತ್ತು ಒಳಿತನ್ನು ಬಯಸಿದವರು ಆದಿ ಗುರು ಶಂಕರಾಚಾರ್ಯರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರತಿನಿಧಿ ನ್ಯಾಯವಾದಿ ಮಹೇಶ್ ಕಜೆ ಅಭಿಪ್ರಾಯ ಪಟ್ಟರು.
ಅವರು ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ಶೃಂಗೇರಿ, ಸಂಗೀತ ಶಾರದಾ ಶೃಂಗೇರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ, ಭರತಾಂಜಲಿ (ರಿ) ಕೊಟ್ಟಾರ, ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಗರದ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಆದಿ ಗುರು ಶಂಕರಾಚಾರ್ಯ ಜಯಂತಿ ಉತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು.
"ಶಂಕರಂ ಲೋಕ ಶಂಕರಂ" ಎಂಬ ಮಾತಿನಂತೆ ನಾವುಗಳು ಲೋಕ ಮಿತಿಗಳಾಗಬೇಕು ಅಂತರ್ಮುಖಿಗಳಾಗಬಾರದು ನಮ್ಮ ಸುತ್ತ ನಾವೇ ಬಂದು ಗೆರೆಯನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ ಇದು ಸರಿಯಲ್ಲ. ಶಂಕರಾಚಾರ್ಯ ಎಂಬ ಮಹಾನ್ ಚೇತನ ಬರೇ ಒಂದು ಬ್ರಾಹ್ಮಣ ಸಮಾಜಕ್ಕೆ ಸೀಮಿತವಾಗಿಲ್ಲ ಅಸೇತು ಹಿಮಾಚಲವನ್ನು ಬೆಸೆದಂತಹ ಮಹಾನ್ ಶಕ್ತಿ ಇಂದಿನ ದಿನಗಳಲ್ಲಿ ಅವರ ಮೂಲ ಆಶಯವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಪ್ರಸ್ತಾವನೆ ಮಾತುಗಳನ್ನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಬ್ರಮಣ್ಯ ಕೋರ್ಯರ್ ಭಾರತೀಯ ಸಂಸ್ಕೃತಿಯ ಪುನರುತ್ಥಾನ ಮಾಡಿದ ಯತಿ ಶ್ರೇಷ್ಠರು ಶಂಕರ ಭಗವತ್ಪಾದರು. ಎಳವೆಯಲ್ಲೇ ಅಗಾಧ ಪಾಂಡಿತ್ಯವನ್ನು ಹೊಂದಿದ ಮಹಾನ್ ಮೇಧಾವಿ, ಇವರು ವಿದ್ವತ್ತಿನ ಮೇರು ಶಿಖರವಾಗಿದ್ದರು. ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶಂಕರಾಚಾರ್ಯರು ದಿವ್ಯ ಪ್ರಭೆ ಎಂದರು.
ಬೌದ್ಧ ಧರ್ಮದ ಬಿರುಗಾಳಿಯ ಎದುರಿಗೆ ತನ್ನ ಧೀಶಕ್ತಿಯಿಂದ ಹಿಂದೂ ಧರ್ಮವನ್ನು ಮತ್ತೆ ಎತ್ತಿದವರು ಶಂಕರಾಚಾರ್ಯರು ಎಂದು ಏ ಕೆ ಬಿಎಂ ಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರುರಾಜ್ ಮೊಲ್ಲಂಕಾಪು ನುಡಿದರು. ಭರತಾಂಜಲಿ (ರಿ) ಕೊಟ್ಟಾರ ನೃತ್ಯ ಸಂಸ್ಥೆಯ ವಿದುಷಿ ಪ್ರತಿಮಾ ಶ್ರೀಧರ್, ಶುಭ ಹಾರೈಸಿದರು. ಸುಬ್ರಹ್ಮಣ್ಯ ಸಭಾದ ಉದಯ ಕುಮಾರ್, ಉಪಾಧ್ಯಕ್ಷೆ ಸುಮಾನಗಳ ಪ್ರಭಾಕರ್, ಜೊತೆ ಕಾರ್ಯದರ್ಶಿ ಚೇತನ್ ಶರ್ಮಾ, ಶಿವಳ್ಳಿ ಸಭಾ ಸಂಘಟನೆಯ ಉದಯಶಂಕರ್ ಬಾಳ, ಅಲ್ಲದೆ ಬ್ರಾಹ್ಮಣ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಂಕರಾಚಾರ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಶಂಕರ ಸ್ತೋತ್ರ ರತ್ನ ಸಮರ್ಪಣಮ್ ಎಂಬ ವಿಶೇಷ ಸ್ತೋತ್ರ ಸಮರ್ಪಣ ಕಾರ್ಯಕ್ರಮ ಶ್ರದ್ಧೆಯಿಂದ ಸಂಪನ್ನಗೊಂಡಿತು. ಸಂಘಟಕ ಎ ಕೆ ಬಿ ಎಂ ಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ನೃತ್ಯ ಗುರು ಶ್ರೀಧರ ಹೊಳ್ಳ ಸ್ವಾಗತಿಸಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


