ಓದುಗರಿಂದಲೇ ಸಾಹಿತ್ಯ ಉಳಿವು: ಡಾ. ಫಾ. ಪ್ರವೀಣ್ ಮಾರ್ಟಿಸ್

Upayuktha
0

‘ವಿಂಚ್ಣಾರ್ ಮೊತಿಯಾಂ’ ವಿಡಿಯೋ ಸರಣಿ ಆರಂಭ





ಮಂಗಳೂರು, ಮೇ 4: ಯಾವುದೇ ಭಾಷೆಯ ಸಾಹಿತ್ಯದ ಉಳಿವು ಓದುಗರ ಮೇಲೆಯೇ ಅವಲಂಬಿತವಾಗಿದೆ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಫಾ. ಪ್ರವೀಣ್ ಮಾರ್ಟಿಸ್ ಜೆ.ಸ. ಅಭಿಪ್ರಾಯಪಟ್ಟರು.


ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆಯೋಜಿಸಿದ ‘ವಿಂಚ್ಣಾರ್ ಮೊತಿಯಾಂ’ (ಆಯ್ದ ಮುತ್ತುಗಳು) ವಿಡಿಯೋ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಂಕಣಿ ಭಾಷೆಯಲ್ಲಿ ಕ್ಷೀಣಿಸುತ್ತಿರುವ ವಾಚನ ಹವ್ಯಾಸಕ್ಕೆ ಪುನರುಜ್ಜೀವನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದರು.


ಪ್ರತೀ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ವಿಶ್ವವಿದ್ಯಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಓದುಗರು ತಮ್ಮ ಇಷ್ಟದ ಸಾಹಿತ್ಯ ಕೃತಿಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಇದು ಅಧ್ಯಯನದ ದೃಷ್ಟಿಯಿಂದ ಸಹಾಯಕವಾಗಲಿದೆ ಎಂದರು.


ಕಳೆದ 46 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಸಂವರ್ಧನೆಗಾಗಿ ಕಾರ್ಯನಿರ್ವಹಿಸುತ್ತಿರುವ ಕೊಂಕಣಿ ಸಂಸ್ಥೆ, ‘ಬೊಲ್ಕಾಂವ್’ ಎಂಬ ವಿನೂತನ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದಿಂದ ನಡೆಸುತ್ತಿದೆ. ಇದೇ ವೇಳೆ, 44 ವರ್ಷಗಳಿಂದ ‘ಅಮರ್ ಕೊಂಕಣಿ’ ಸಂಶೋಧನಾ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದ್ದು, ಡಾ. ಫಾ. ವಿಜಯ್ ಡಿ’ಸೊಜಾ ಅವರ ನೇತೃತ್ವದಲ್ಲಿ ಶೀಘ್ರದಲ್ಲೇ ಹೊಸ ಸಂಶೋಧನಾ ಕಾರ್ಯಗಳು ಆರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದರು.


ಕಾರ್ಯಕ್ರಮದ ರೂಪುರೇಷೆ ಕುರಿತು ಸಂಸ್ಥೆಯ ಸಲಹೆಗಾರ ಡಾ. ಆಲ್ವಿನ್ ಡೆ’ಸಾ ವಿವರಿಸಿದರು. ಈ ಸರಣಿಯಿಂದ ವಾಚನ ಹವ್ಯಾಸ ವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಮಾದರಿಯಲ್ಲಿ ಸಾಹಿತ್ಯ ವಿಮರ್ಶಾ ಸಿದ್ಧಾಂತಗಳನ್ನು ಸರಳವಾಗಿ ಪರಿಚಯಿಸುವ ಮತ್ತೊಂದು ಸರಣಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.


ಸಾಹಿತಿ ಹಾಗೂ ಪತ್ರಕರ್ತ ಎಚ್.ಎಂ. ಪೆರ್ನಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಿಂಟೊ ವಾಮಂಜೂರು ವಂದಿಸಿದರು. ಕು. ವನಿತಾ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top