ಗೂಡಂಗಡಿಯ ನೆನಪುಗಳೇ ಸವಿನೆನಪಿನ ಸಿಹಿ ಮಿಠಾಯಿ

Upayuktha
0

  


ಚಿಕ್ಕ ವಯಸ್ಸಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದು ಬಂದ ಮಕ್ಕಳಿಗೆ ಅಜ್ಜನ ಗೂಡಂಗಡಿಗಳ ಒಡನಾಟ ಇದ್ದೇ ಇರುತ್ತದೆ. ಆ ಅಂಗಡಿಯ ದೃಶ್ಯವೇ ಕಣ್ಣ ಮುಂದೆ ಓಡಾಡಿಬಿಡುತ್ತದೆ. ಪ್ರತಿ ಊರಿನಲ್ಲೂ ಒಂದಾದರು ಇಂತಹಾ ಗೂಡಂಗಡಿ ಇದ್ದೇ ಇರುತ್ತಿತ್ತು.

 

ಬೆಳಗ್ಗಿನ ಸಮಯ ಶಾಲೆಗೆ ಹೋಗಬೇಕಾದರೆ ಗೂಡನಂಗಡಿಯ ಬಾಗಿಲು ತೇರೆದಿದೆಯಾ? ಇಲ್ಲವಾ? ಎಂದು ನೋಡಿಕೊಂಡು ಹೋಗುವುದು, ಸಂಜೆ ಶಾಲೆಯಿಂದ ಮನೆಗೆ ಹೋಗಬೇಕಾದರೆ ಗೆಳತಿಯರ ಜೊತೆ ಸೇರಿಕೊಂಡು ಯಾವ ತಿಂಡಿ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿ ಅಜ್ಜನ ಗೂಡಂಗಡಿಗೆ ಕಾಲಿಡುವುದು, ಇಲ್ಲದ್ದಿದ್ದರೆ ಅಂಗಡಿಗೆ ಹೋಗಿ ಅದು ಬೇಕು ಇದು ಬೇಕು ಅಂತ ಚರ್ಚೆ ಮಾಡಿ ಯಾವುದಾದರೊಂದು ಚಾಕೊಲೇಟ್, ಮಿಠಾಯಿ, ಕಡಲೆ, ಚಿಕ್ಕದೊಂದು ಸ್ವೀಟ್ ಅನ್ನು ತೆಗೆದುಕೊಂಡು ತಿನ್ನುತ್ತಾ ಹೋಗುವುದು. ಇವೆಲ್ಲಾ ನೆನಪಿನ ಬುತ್ತಿಯ ಸಿಹಿ ಕ್ಷಣಗಳು. ಸ್ನೇಹಿತರಲ್ಲಿ ಬಗೆ ಬಗೆಯ ತಿನಿಸುಗಳನ್ನು ತೆಗೆದುಕೊಂಡಿದ್ದರೆ, ಅದರಲ್ಲೂ ಸಮಪಾಲು ಮಾಡಿ ಹಂಚಿಕೊಂಡು ತಿನ್ನುತ್ತಿದ್ದೆವು. ಆದರೆ ಈಗ ನೆನಪುಗಳು ಮಾತ್ರ ಉಳಿದು ಬಿಟ್ಟಿದೆ

 

ಗೂಡಂಗಡಿಯಲ್ಲಿದ್ದ ಅಜ್ಜ ಮಾತ್ರ ದಿನಾಲೂ ಖುಷಿ ಖುಷಿಯಿಂದ ಶಾಲೆಯಲ್ಲಿ ಏನೇನು ನಡೆಯಿತು ಎಂದು ನಮ್ಮೆಲ್ಲಾ ಆಟ-ಪಾಠಗಳ ಕುರಿತು ವಿಚಾರಿಸುತ್ತಿದ್ದರು. ಹಾಗೆಯೇ ಮುಗುಳು ನಕ್ಕು ಮಾತನಾಡಿಸುತಿದ್ದರು. ಆದರೆ ಈಗ ಹಳ್ಳಿಗಳಲ್ಲಿ ಗೂಡಂಗಡಿಗಳು ಕಾಣಸಿಗುವುದು ಬಹಳಾ ಅಪರೂಪ. ಈಗ ಎಲ್ಲಾ ದೊಡ್ಡ ದೊಡ್ಡದಾದ ಅಂಗಡಿಗಳು, ಹಣಕೊಟ್ಟರೆ ಮಾತ್ರ ಸಿಗುವಂತಹ ವಸ್ತುಗಳು, ಪರಿಚಯವಿದ್ದರೂ ಇಲ್ಲದಂತೆ ಮಾಡುವ ವ್ಯಕ್ತಿಗಳು ಕಾಣುತ್ತಾರೆ. ಗೂಡಂಗಡಿ ಎಂಬುದು ನಮ್ಮ ಜೀವನದಲ್ಲಿ ಕೇವಲ ಒಂದು ಸ್ಥಳವಲ್ಲ; ಅದು ಒಂದು ಅನುಭವ, ಒಂದು ಭಾವನೆಯ ಸಂಕೇತವಾಗಿದೆ. ಅಲ್ಲಿ ಕಳೆದ ಕ್ಷಣಗಳು ನಮ್ಮ ಮನಸ್ಸಿನಲ್ಲಿ ಸದಾ ಉಳಿಯುವ ಅಮೂಲ್ಯ ದಿನಗಳು. ನೆನಪುಗಳು ಯಾವತ್ತೂ ಮರೆಯಾಗುವುದಿಲ್ಲ. ಅವು ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ಸವಿನೆನಪಿನಂತೆ ಮಿಡಿಯುತ್ತಲೇ ಇರುತ್ತವೆ.

 

ಹೀಗಾಗಿ, ಗೂಡಂಗಡಿಯ ನೆನಪುಗಳು ನಮ್ಮ ಜೀವನದ ಒಂದು ಸುಂದರ ನೆನಪು. ಅವು ನಮ್ಮ ಮನಸ್ಸಿನ ಆಳದಲ್ಲಿ ನೆಲೆಸಿರುವ ಸಂತೋಷದ ಕ್ಷಣಗಳು. ಯಾವಾಗಲೂ ಅವುಗಳನ್ನು ನೆನೆಸಿಕೊಂಡರೆ, ನಮ್ಮ ಮುಖದಲ್ಲಿ ನಗು ಮೂಡುತ್ತದೆ ಮತ್ತು ಮನಸ್ಸು ಸಂತೋಷದಿಂದ ತುಂಬಿಕೊಳ್ಳುತ್ತದೆ..

ಚೈತನ್ಯ ಇಂದಬೆಟ್ಟು
ಪತ್ರಿಕೋದ್ಯಮ ವಿಭಾಗ
ಎಸ್ ಡಿ ಎಂ ಕಾಲೇಜು ಉಜಿರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top