ಸ್ಮೃತಿ ಚಂದ್ರಿಕಾ ಫೌಂಡೇಷನ್ ಉದ್ಘಾಟನೆ: ಗಣ್ಯರಿಗೆ ಪುರಸ್ಕಾರ

Upayuktha
0


ಬೆಂಗಳೂರು, ಏ.12: ಗುರು ಮತ್ತು ಹಿರಿಯರಿಗೆ ಗೌರವ ನೀಡುವ ವ್ಯಕ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಹಿರಿಯ ಸಂಗೀತ ವಿದುಷಿ ಡಾ. ಟಿ.ಎಸ್. ಸತ್ಯವತಿ ಅಭಿಪ್ರಾಯಪಟ್ಟರು.


ನಗರದ ವಾಡಿಯಾ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಾದವೈಭವ ಸಂಗೀತ ವಿದ್ಯಾಲಯ ಆಯೋಜಿಸಿದ್ದ ಶ್ರೀ ಪುರಂದರದಾಸರು ಹಾಗೂ ತ್ಯಾಗರಾಜ ಸ್ವಾಮಿಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ‘ಸ್ಮೃತಿ ಚಂದ್ರಿಕಾ ಫೌಂಡೇಷನ್’ ಉದ್ಘಾಟಿಸಿ ಅವರು ಮಾತನಾಡಿದರು.


ಮನುಷ್ಯತ್ವ, ಹಿರಿಯರೊಂದಿಗೆ ಸತ್ಸಂಗ ಹಾಗೂ ಮೋಕ್ಷ – ಈ ಮೂರೂ ಜೀವನದಲ್ಲಿ ದುರ್ಲಭವಾದವುಗಳಾಗಿವೆ. ಸಂಗೀತವು ಮೋಕ್ಷ ಸಾಧನೆಗೆ ಪೂರಕವಾದರೂ, ಸತ್ಸಂಗದ ಮೂಲಕವೇ ಅದು ಸುಲಭವಾಗುತ್ತದೆ. ಇಂತಹ ಮೌಲ್ಯಗಳನ್ನು ಕಲಾವಿದರಿಗೆ ನೀಡುತ್ತಿದ್ದ ಚಂದ್ರಿಕಾ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಸ್ಮರಣೆ ಸದಾ ಜೀವಂತವಾಗಿರುತ್ತದೆ ಎಂದು ಹೇಳಿದರು.


ಚಂದ್ರಿಕಾ ಅವರಲ್ಲಿ ವಿದ್ವತ್ತು ಜೊತೆಗೆ ವಿನಯ, ಹಿರಿಯರ ಬಗ್ಗೆ ಭಕ್ತಿ ಹಾಗೂ ಗೌರವ ಇತ್ತು. ವ್ಯಕ್ತಿ ಅಳಿಯಬಹುದಾದರೂ ಅವರ ಗುಣಸಂಪತ್ತು ಶಾಶ್ವತವಾಗಿರುತ್ತದೆ ಎಂದು ಸತ್ಯವತಿ ತಿಳಿಸಿದರು.


ಹಿರಿಯ ವಿದುಷಿ ಡಾ. ಮೈಸೂರು ನಾಗಮಣಿ ಶ್ರೀನಾಥ್ ಮಾತನಾಡಿ, ಶಿಷ್ಯರಿಗೆ ಪಾಠ ಮಾಡುವ ಪ್ರಕ್ರಿಯೆಯಲ್ಲಿ ತಾವು ಅನೇಕ ಹೊಸ ವಿಚಾರಗಳನ್ನು ಕಲಿತಿರುವುದಾಗಿ ಹೇಳಿದರು. ಚಂದ್ರಿಕಾ ತಮ್ಮ ಪ್ರಿಯ ಶಿಷ್ಯೆಯಾಗಿದ್ದು, ಸದ್ಗುಣಗಳ ಸಂಕಲನವಾಗಿದ್ದರು ಎಂದು ಸ್ಮರಿಸಿದರು. ಅವರ ಹೆಸರಿನಲ್ಲಿ ಕುಟುಂಬದವರು ಫೌಂಡೇಷನ್ ಮತ್ತು ಯೂಟ್ಯೂಬ್ ವಾಹಿನಿ ಆರಂಭಿಸಿರುವುದು ಶ್ಲಾಘನೀಯವಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂದರು.


ಪುರಸ್ಕಾರ ಪ್ರದಾನ

ಕಾರ್ಯಕ್ರಮದಲ್ಲಿ ‘ಸ್ಮೃತಿ ಚಂದ್ರಿಕಾ ಪುರಸ್ಕಾರ’ವನ್ನು ವಿವಿಧ ಗಣ್ಯರಿಗೆ ಪ್ರದಾನಿಸಲಾಯಿತು. ಪ್ರೊ. ಡಾ. ಜಿ.ಎನ್. ನಾಗಮಣಿ ಶ್ರೀನಾಥ್, ವಿದುಷಿ ಲಾಲ್ಗುಡಿ ರಾಜಲಕ್ಷ್ಮೀ, ವಿದ್ವಾನ್ ಟಿ.ಟಿ. ಶ್ರೀನಿವಾಸನ್, ವಿದುಷಿ ಗೀತಾ ರಮಾನಂದ್, ವಿದುಷಿ ವಸಂತಮಾಧವಿ, ವಿದುಷಿ ಪುಸ್ತಕಂ ರಮಾ, ವಿದ್ವಾನ್ ಬಿ.ಕೆ. ಅನಂತರಾಮ್ ಹಾಗೂ ವಿದ್ವಾನ್ ರವಿಶಂಕರ್ ಶರ್ಮ ಅವರನ್ನು ಗೌರವಿಸಲಾಯಿತು.


ವೇದಿಕೆಯಲ್ಲಿ ಮಾತನಾಡಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ, ಚಂದ್ರಿಕಾ ಅವರ ತಂಬೂರಿ ಶ್ರುತಿ ಹೊಂದಿಸುವ ನಿಪುಣತೆ, ಸಂಗೀತ ಕೃತಿಗಳ ಅಚ್ಚುಕಟ್ಟಾದ ಬರವಣಿಗೆ, ಸುಂದರ ಹಸ್ತಾಕ್ಷರ ಹಾಗೂ ಹಾಸ್ಯಪ್ರವೃತ್ತಿ ಕಲಾವಿದರಿಗೆ ಮಾದರಿಯಾಗಿವೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಉಮೇಶ್ ಡಿ.ಎಸ್ ಹಾಗೂ ಸಿ.ಆರ್. ರವಿಶಂಕರ್ ಉಪಸ್ಥಿತರಿದ್ದರು. ನಾಡಿನ ಹಿರಿಯ ವಿದ್ವಾಂಸರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಹಾಗೂ ಆಹ್ವಾನಿತ ಕಲಾವಿದರಿಂದ ಸಂಗೀತ ಸೇವೆ ನೆರವೇರಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top