ಪರಶುರಾಮ ಜಯಂತಿ

Upayuktha
0



ರಶುರಾಮ ದೇವರು ವಿಷ್ಣುವಿನ ಅವತಾರ ಆದರೆ ದಶಾವತಾರಗಳಲ್ಲಿ ಆರನೇ ಅವತಾರವಾಗಿರುವ ಪರಶುರಾಮ ಬ್ರಾಹ್ಮಣ್ಯ ಮತ್ತು ಕ್ಷಾತ್ರ ತೇಜದ ಮಿಶ್ರಣವಾಗಿದ್ದು ಬ್ರಾಹ್ಮಣರು ಕೇವಲ ಜಪತಪ ಹೋಮ ಧಾರ್ಮಿಕ ಕಾರ್ಯಗಳಿಗೆ ಸೀಮಿತವಲ್ಲ ಸಮಯ ಬಂದಾಗ ಶಸ್ತ್ರವನ್ನು ಹಿಡಿದು ಭೂಮಂಡಲವನ್ನು ಕೂಡ ರಕ್ಷಿಸಬಲ್ಲ ಎಂದು ತೋರಿದ ಅವತಾರವಾಗಿದೆ. ಪರಶುರಾಮ ದೇವರು ವಿಷ್ಣುವಿನ ಅವತಾರ , ಚಿರಂಜೀವಿ ಕೂಡ.  ಪರಶುರಾಮ ದೇವರ ಅವತಾರ ವೈಶಾಖ ಶುದ್ಧ ತೃತೀಯ ಅಂದರೆ ಅಕ್ಷಯ ತೃತೀಯದಂದು ಆಗುತ್ತದೆ. ಅವರ ಜನ್ಮದಾತರು ಜಮದಗ್ನಿ ಋಷಿಗಳು ಮತ್ತು ಅವರ ಪತ್ನಿ ರೇಣುಕಾ ಮಾತೆ.   ರಾಮ ಅವರ ಮೂಲ ಹೆಸರು ಸದಾ ಕೊಡಲಿಯನ್ನು ಹಿಡಿದೇ ಇರುತ್ತಿದ್ದ ಕಾರಣ ಪರಶುರಾಮ.  ಭೃಗು ಋಷಿಗಳ ವಂಶದಲ್ಲಿ ಜನಿಸಿದ ಕಾರಣ ಭಾರ್ಗವ ರಾಮ ಎಂದು ಕೂಡ ಪ್ರಸಿದ್ಧರು.

 


ಪರಶುರಾಮ ದೇವರ ಪೂಜೆ ಭೂಮಿಯ ಮೇಲೆ ನಡೆಯುವುದಿಲ್ಲ ಏಕೆಂದರೆ ಇನ್ನೂ ಕೂಡ ಪರಶುರಾಮ ದೇವರು ಭೂಮಿಯಲ್ಲಿದ್ದಾರೆ ಎಂಬ ನಂಬಿಕೆ ಹಿಂದು ಧಾರ್ಮಿಕರಲ್ಲಿದೆ. ಚಿರಂಜೀವಿಗಳಲ್ಲಿ  ಒಬ್ಬರಾಗಿರುವುದರಿಂದ ಅವರು ಇಂದಿಗೂ ಭೂ ಮಂಡಲದಲ್ಲಿ ಸಂಚರಿಸುತ್ತಾರೆ ಎಂಬ ನಂಬಿಕೆ ಇದೆ. ಪರಶುರಾಮ ದೇವರು  ಜನರಿಗೆ ಪಿತೃವಾಕ್ಯ ಪರಿಪಾಲನೆ ಹಾಗೂ ಮಾತೃ ಭಕ್ತಿಯನ್ನು ಸ್ವತಃ  ತೋರಿಸಿ  ಮಾರ್ಗದರ್ಶನ ಮಾಡಿದ್ದಾರೆ.  ವಿಷ್ಣುವಿನ ಅವತಾರಗಳಲ್ಲಿ ಮಾತಾ ಪಿತೃ ಭಕ್ತಿಯನ್ನು ತೋರಿಸುತ್ತಲೇ ಬಂದಿದ್ದಾರೆ.


ಜಮದಗ್ನಿ ಋಷಿ ಪತ್ನಿ ರೇಣುಕಾ ದೇವಿ ಒಮ್ಮೆ ನದೀ ತೀರಕ್ಕೆ ನೀರು ತರಲು ಹೋಗಿರುತ್ತಾರೆ ಆಗ ಅಲ್ಲಿ ವೈಭೋಗದ ಆನಂದ ಪಡೆಯುತ್ತಿದ್ದ ಗಂಧರ್ವ ಜೋಡಿಯನ್ನು ನೋಡಿ ತಾನೂ ಕೂಡ ಈ ರೀತಿಯ ವೈಭೋಗದ ಜೀವನ ಪಡೆದಿದ್ದರೆ ಎಷ್ಟು ಚೆನ್ನ ಎನ್ನುವ ಆಸೆ ಮೂಡಿ ಹೋಗುತ್ತದೆ.  ಈ ವಿಷಯವು ಜಮದಗ್ನಿ ಋಷಿಗಳಿಗೆ ತಿಳಿದು ರೇಣುಕಾ ದೇವಿಯ ತಲೆಯನ್ನು ಕತ್ತರಿಸುವ ಆಜ್ಞೆಯನ್ನು ತಮ್ಮ ಮಕ್ಕಳಿಗೆ ನೀಡುತ್ತಾರೆ.  ಹಿರಿಯ ಮಕ್ಕಳು ತಾಯಿಯ ವಧೆಯನ್ನು ಮಾಡಲು ಒಪ್ಪುವುದಿಲ್ಲ.  ಆಗ ಜಮದಗ್ನಿ ಋಷಿಗಳು ಮಗ ಪರಶುರಾಮನಿಗೆ ಆದೇಶ ನೀಡಿದಾಗ ಪರಶುರಾಮನು ತಾಯಿ ಮತ್ತು ಅಣ್ಣಂದಿರ ಶಿರಶ್ಛೇದನ ಮಾಡುತ್ತಾನೆ.  ಪಿತೃ ವಾಕ್ಯ ಪರಿಪಾಲನೆಗೆ ಪ್ರಸನ್ನರಾದ ಜಮದಗ್ನಿಯು ವರವನ್ನು ಕೇಳು ಎಂದಾಗ ಪರಶುರಾಮ ದೇವರು ತಾಯಿ ಮತ್ತು ಅಣ್ಣಂದಿರ ಜೀವವನ್ನು ಹಿಂದಿರುಗಿ ಕೇಳಿದುದು ಅಲ್ಲದೇ ಅವರಿಗೆ ತಾನು ತಲೆ ಕಡಿದ ವಿಷಯವು ನೆನಪು ಇರಬಾರದೆಂಬ ವರವನ್ನು ಕೇಳಿ ಪಿತೃವಾಕ್ಯ ಪರಿಪಾಲನೆಯ ಜೊತೆಗೆ ಮಾತೃ ಭಕ್ತಿ ಹಾಗೂ ಸಹೋದರರ ಸ್ನೇಹಕ್ಕೂ ಮಾದರಿಯಾಗುತ್ತಾರೆ.


ಕ್ಷತ್ರೀಯ ರಾಜನಾದ ಕಾರ್ತವೀರ್ಯಾಜುನನು ಜಮದಗ್ನಿ ಋಷಿಗಳ ಬಳಿ ಬಂಡಿರುತ್ತಾನೆ, ಆಗ ಅವರು ಆತಿಥ್ಯ ನೀಡಿದಾಗ ಕಾಮಧೇನುವಿನ ವಿಚಾರ ತಿಳಿಸಿದಾಗ ಋಷಿಗಳ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಕಾಮಧೇನುವನ್ನು ಕದ್ದು  ಕಾಮಧೇನು ತೆಗೆದುಕೊಂಡು ಹೋಗುತ್ತಾನೆ.  ಆ ಸಮಯಕ್ಕೆ ವಿಷಯ ತಿಳಿದ ಪರಶುರಾಮ ಕೋಪಾವೇಶದಿಂದ ಹೋರಾಡಿ  ರಾಜನನ್ನು ಕೊಂದು ಕಾಮಧೇನುವನ್ನು ಪನಃ ಆಶ್ರಮಕ್ಕೆ ತಂದಿರುತ್ತಾನೆ.  ಆಗ ತಂದೆಯ ಆದೇಶ "ಕ್ಷಮಾಗುಣ ಬ್ರಾಹ್ಮಣರ ಲಕ್ಷಣ ನಿನ್ನ ಕೋಪಕ್ಕೆ ತೀರ್ಥ ಯಾತ್ರೆ ಮಾಡಿ ಬಾ" ಎಂದು ಜಮದಗ್ನಿ ಋಷಿಗಳು ಕಳುಹಿಸಿದಾಗ ಕಾರ್ತವೀರ್ಯಾಜುನನ ಮಕ್ಕಳು ತಮ್ಮ ತಂದೆಯ ಸಾವಿನ ಪ್ರತೀಕಾರಕ್ಕಾಗಿ ಋಷಿಯ ಆಶ್ರಮಕ್ಕೆ ಬಂದು ಪರಶುರಾಮ ಇಲ್ಲದ ಸಮಯದಲ್ಲಿ  ಜಮದಗ್ನಿ ಋಷಿಗಳ ಶಿರಚ್ಛೇದನ ಮಾಡಿ ಶಿರವನ್ನು ಕೊಂಡೊಯ್ಯುತ್ತಾರೆ.  ಯಾತ್ರೆಯಿಂದ ಹಿಂದಿರುಗಿ ಬಂದ ಪರಶು ರಾಮದೇವರು ೨೧ ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿದ್ದಾರೆ.  ತಮ್ಮ ತಂದೆಯ ಶಿರ ತಂದು ಅದನ್ನು ಮಂತ್ರ ಪೂರ್ವಕ ಜೋಡಿಸಿದ ನಂತರ ಕೊಡಲಿಗೆ ಮೆತ್ತಿದ್ದ ರಕ್ತವು ಹೋಗದೇ ಇದ್ದಾಗ, ತುಂಗಾ ತೀರದ ತೀರ್ಥಹಳ್ಳಿಯಲ್ಲಿ ರಕ್ತದ ಕಲೆಯು ಹೋಗುತ್ತದೆ ಆ ಸ್ಥಳವು ಇಂದಿಗೂ ಪರಶುರಾಮ ತೀರ್ಥ ಎಂದೇ ಪ್ರಸಿದ್ದವಾಗಿದೆ.


ಬ್ರಾಹ್ಮಣರ  ಮೇಲೆ ಅತ್ಯಾಚಾರ ಮಾಡದ ರಾಜರನ್ನು ಬಿಟ್ಟು ದುಷ್ಟರಾದ ರಾಜರ ಸಂಹಾರವನ್ನು  ೨೧ ಬಾರಿ ಭೂ ಪ್ರದಕ್ಷಿಣೆ ಮಾಡುವುದರ ಮೂಲಕ ಮಾಡಿರುವ ಪರಶುರಾಮ ದೇವರು ಮಹಾನ್ ಜ್ಞಾನಿಗಳಾಗಿದ್ದು ಗಂಗಾ ಪುತ್ರ ಭೀಷ್ಮಾಚಾರ್ಯರ ಗುರುವಾಗಿದ್ದರು.  ದ್ರೋಣಾಚಾರ್ಯರು ದಾನ ಕೇಳಿದಾಗ ಕೊಡಲು ಏನೂ ಇಲ್ಲದೇ ತಮ್ಮ ಬಳಿಯ ಶಸ್ತ್ರಾಸ್ತ್ರಗಳನ್ನು ನೀಡುತ್ತಾರೆ.  ವಿದ್ಯಾರ್ಜನೆಗೆ ಬಂದ ಕರ್ಣನಿಗೆ ವಿದ್ಯಾದಾನ ಮಾಡಿದರೂ ಸುಳ್ಳು ಹೇಳಿದ್ದಕ್ಕೆ ಶಾಪವನ್ನೂ ನೀಡುತ್ತಾರೆ.


ಭಗವಂತನ ದಶಾವತಾರಗಳಲ್ಲಿ ಒಂದಾದ ಪರಶುರಾಮ ಅವತಾರ ವೈಶಾಖ ಮಾಸದಲ್ಲಿ ಆಗಿರುವುದರಿಂದ ಅಕ್ಷಯ ತೃತೀಯದಂದು ಆಚರಿಸಲಾಗುತ್ತದೆ. ಪರಶುರಾಮ ದೇವರ ಜನನ ಪುರ್ನವಸು ನಕ್ಷತದಲ್ಲಿ ಆಗಿದ್ದು ತೃತೀಯಾ ದಿನವು ಪ್ರದೋಷಯುಕ್ತವಾಗಿದ್ದು ಅಂದು ಉಪವಾಸವಿದ್ದು ಪರಶುರಾಮ ದೇವರಿಗೆ ಅರ್ಘ್ಯ ಕೊಟ್ಟು ಷೋಡಪೋಚಾರ ಪೂಜೆಯನ್ನು ಮಾಡಬೇಕು.


ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗಿದೆ. ಪರಶುರಾಮ ದೇವರು ಹತ್ಯೆಗಳನ್ನು ಮಾಡಿದ ಕಾರಣ ಭೂಮಿಯನ್ನು ಬ್ರಾಹ್ಮಣರಿಗೆ ದಾನವನ್ನಾಗಿ ಕೊಡುತ್ತಾರೆ. ಆ  ಬ್ರಾಹ್ಮಣರು ನೀವು ದಾನವನ್ನಾಗಿ ಕೊಟ್ಟ ಭೂಮಿಯಲ್ಲಿ ಹೇಗೆ ವಾಸಿಸುತ್ತಿರಿ ಎಂದು ಕೇಳಿದಾಗ ಪರಶುರಾಮ ದೇವರು ತಮ್ಮ ಕೊಡಲಿಯಿಂದ ಸಮುದ್ರದ  ನೀರನ್ನು ಹಿಮ್ಮೆಟ್ಟಿಸಿ ಆ ಪ್ರದೇಶದಲ್ಲಿ ನೆಲೆಸಿದ್ದರು ಎಂದು ಆ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದು ಹೇಳಲಾಗುತ್ತದೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top