ಮನಸ್ಸು ಅರಳಿಸುವುದು ಸಾಹಿತ್ಯ: ಪ್ರೊ. ವಿ. ಬಿ. ಅರ್ತಿಕಜೆ

Upayuktha
0

‘ಭಕ್ತಿಕುಸುಮಾಂಜಲಿ'- ಭಕ್ತಿಗೀತೆಗಳ ಸಂಕಲನ ಬಿಡುಗಡೆ





ವಿಟ್ಲ: ಸಾಹಿತ್ಯವು ಓದುಗರ ವಿಚಾರಗಳನ್ನು ಪ್ರಚೋದಿಸಿ ಮನಸ್ಸನ್ನು ಅರಳಿಸುತ್ತದೆ, ವ್ಯಕ್ತಿತ್ವವನ್ನು ಸುಸಂಸ್ಕೃತಗೊಳಿಸುತ್ತದೆ ಎಂದು ಪುತ್ತೂರಿನ ಅಂಕಣಕಾರ ಮತ್ತು ನಿವೃತ್ತ ಪ್ರೊಫೆಸರ್ ಪ್ರೊ. ವಿ. ಬಿ. ಅರ್ತಿಕಜೆ ಹೇಳಿದರು.


ವಿಟ್ಲ ಸಮೀಪದ ಮಂಗಲಪದವಿನಲ್ಲಿ ಕವಯಿತ್ರಿ ವೆಂಕಟೇಶ್ವರಿ ಕೃಷ್ಣಭಟ್ ಪುದುಕೋಳಿ ಅವರು ರಚಿಸಿದ ಭಕ್ತಿಗೀತೆಗಳ ಸಂಕಲನ 'ಭಕ್ತಿಕುಸುಮಾಂಜಲಿ' ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.


ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ಜಿ. ಪಿ. ವೆಂಕಟರಾವ್ ವಾದ್ಯಕೋಡಿ, ಕೃಷ್ಣಭಟ್ ಪುದುಕೋಳಿ ಮತ್ತು ರಾಮಚಂದ್ರ ಭಟ್ ಮಂಗಲಪದವು ಆಗಮಿಸಿದ್ದರು.


ಸಾಹಿತಿ ಮತ್ತು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಭಕ್ತಿ ಸಾಹಿತ್ಯ ಎಂಬುದು ಕಣ್ಮರೆಯಾಗುತ್ತಿದೆ. ಭಾರತದಲ್ಲಿ, ಅದರಲ್ಲೂ ಕನ್ನಡದಲ್ಲಿ ಭಕ್ತಿ ಸಾಹಿತ್ಯಕ್ಕೆ ಬಹು ದೊಡ್ಡ ಪರಂಪರೆ ಇದೆ. ಭಾಜನಾ ತಂಡಗಳಿಗೆ ಮತ್ತು ನೃತ್ಯಭಜನೆ ಮಾಡುವವರಿಗೆ ಇಂತಹ ಭಕ್ತಿಗೀತೆಗಳ ಅಗತ್ಯ ತುಂಬ ಇದೆ. ಆರುನೂರಕ್ಕಿಂತ ಹೆಚ್ಚು ಭಕ್ತಿಗೀತೆಗಳನ್ನು ರಚಿಸಿರುವ ಶ್ರೀಮತಿ ವೆಂಕಟೇಶ್ವರಿ ಕೃಷ್ಣಭಟ್ ಅವರ ಸಾಧನೆ ದೊಡ್ಡದು ಎಂದು ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.


ಎಲೆಮರೆಯ ಕಾಯಿಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಲೇಖಕರನ್ನು ಮತ್ತು ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ. ಇಂದಿನ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡು ಕಡಿಮೆಯಾಗುತ್ತಿದ್ದು ಅದಕ್ಕೆ ಉತ್ತೇಜನ ನೀಡಬೇಕಾಗಿದೆ ಎಂದು ಡಾ. ಪೆರ್ಲ ಅವರು ಹೇಳಿದರು.  


ಕವಯಿತ್ರಿ ವೆಂಕಟೇಶ್ವರಿ ಕೃಷ್ಣಭಟ್ ತನ್ನ ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತಾಡಿದರು. ಶ್ರೀಮತಿ ಅಶ್ವಿನಿ ಭರತ್ ಕೋಡ್ಲ ಪುಸ್ತಕದಿಂದ ಆಯ್ದ ಗೀತೆಗಳನ್ನು ಹಾಡಿದರು.


ಶ್ರೀಮತಿ ಸೀಮಾ ಗಣೇಶಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿಯರಾದ ಸಮೃದ್ಧಿ ಎಸ್. ಭಟ್ ಮತ್ತು ಶ್ರೀಸ್ಮೃತಿ ಎಲ್. ಪಿ. ಪ್ರಾರ್ಥನೆ ಹಾಡಿದರು. ಅಧ್ಯಾಪಕರಾದ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಶ ಪುದುಕೋಳಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top